ಸಂಕಷ್ಟದಲ್ಲಿರುವವರಿಗೆ ನೆರವಾಗಲು ಸಲಹೆ

ಲಯನ್ಸ್ ಕ್ಲಬ್‌ನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸಿದ ಹಿರಿಯರು, ಗಣ್ಯರು ಹಾಗೂ ದಾನಿಗಳನ್ನು ಸನ್ಮಾನಿಸಲಾಯಿತು. ಡಾ.ಕೆ.ಪಿ.ಪುತ್ತೂರಾಯ, ವಾಸು ತೋಟತ್ತಿಲ್, ಬಿ.ಮದನ್ ಮಾದಯ್ಯ, ಬಿ.ಸದಾ ಕುಶಾಲಪ್ಪ,  ಡಾ.ಭವಿಷ್ಯ ಕುಮಾರ್, ಎಂ.ಎಸ್.ಟವಿ ಇತರರು ಇದ್ದರು.
ಲಯನ್ಸ್ ಕ್ಲಬ್‌ನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸಿದ ಹಿರಿಯರು, ಗಣ್ಯರು ಹಾಗೂ ದಾನಿಗಳನ್ನು ಸನ್ಮಾನಿಸಲಾಯಿತು. ಡಾ.ಕೆ.ಪಿ.ಪುತ್ತೂರಾಯ, ವಾಸು ತೋಟತ್ತಿಲ್, ಬಿ.ಮದನ್ ಮಾದಯ್ಯ, ಬಿ.ಸದಾ ಕುಶಾಲಪ್ಪ, ಡಾ.ಭವಿಷ್ಯ ಕುಮಾರ್, ಎಂ.ಎಸ್.ಟವಿ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಾ.ಕೆ.ಪಿ.ಪುತ್ತೂರಾಯ ಕಿವಿ ಮಾತು
  • ಪಾಲಿಬೆಟ್ಟ ಲಯನ್ಸ್ ಕ್ಲಬ್‌ನ 50ನೇ ವರ್ಷದ ಸುವರ್ಣ ಸಂಭ್ರಮ
ಸಿದ್ದಾಪುರ: ಸಂಕಷ್ಟದಲ್ಲಿರುವವರಿಗೆ ನೆರವಾಗುವ ಮೂಲಕ ಸೇವಾ ಮನೋಭಾವದ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಮಾಜಿ ನಿರ್ದೇಶಕ ಡಾ.ಕೆ.ಪಿ.ಪುತ್ತೂರಾಯ ಹೇಳಿದರು.
ಪಾಲಿಬೆಟ್ಟ ಲಯನ್ಸ್ ಕ್ಲಬ್‌ನ 50ನೇ ವರ್ಷದ ಸುವರ್ಣ ಸಂಭ್ರಮ ಕಾರ್ಯಕ್ರಮವನ್ನು ಇತೀಚೆಗೆ ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಭಾಗದಲ್ಲಿ ಯಾವುದೇ ಫಲಾಪೇಕ್ಷೆ ಇಲ್ಲದೆ ಪ್ರಾಮಾಣಿಕತೆ ಹಾಗೂ ಸೇವಾ ಮನೋಭಾವದೊಂದಿಗೆ ನಿರಂತರ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ವಿವಿಧ ಶಿಬಿರಗಳು ಮತ್ತು ಜನಪರ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಲಯನ್ಸ್ ಸಂಸ್ಥೆ ಮಾದರಿ ಸಂಘಟನೆಯಾಗಿ ಬೆಳೆದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಸ್ಥೆಯ ಪದಾಧಿಕಾರಿಗಳ ನಿರಂತರ ಪರಿಶ್ರಮದಿಂದಲೇ ಲಯನ್ಸ್ ಕ್ಲಬ್ 50 ವರ್ಷಗಳನ್ನು ಪೂರೈಸಿ ಸುವರ್ಣ ಸಂಭ್ರಮಕ್ಕೆ ಕಾಲಿಟ್ಟಿರುವುದು ಹೆಮ್ಮೆಯ ವಿಷಯವಾಗಿದೆ. ಮನುಷ್ಯನಾಗಿ ಜನಿಸಿದ ಮೇಲೆ ಸಮಾಜಕ್ಕೆ ಬೇಕಾದ ರೀತಿಯಲ್ಲಿ ಕೊಡುಗೆ ನೀಡಬೇಕು. ಜಾತಿ-ಮತ ಭೇದವಿಲ್ಲದೆ ಸಂಕಷ್ಟದಲ್ಲಿರುವವರಿಗೆ ನೆರವಾಗಿ, ಶಿಕ್ಷಣ, ಪರಿಸರ ಸಂರಕ್ಷಣೆ ಹಾಗೂ ಆರೋಗ್ಯ ಕಾಳಜಿ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಮುಂದಾಗಬೇಕೆಂದು ಸಲಹೆ ನೀಡಿದರು.
ಕೇರಳದ ಮಟ್ಟನೂರು ಲಯನ್ಸ್ ಕ್ಲಬ್ ಅಧ್ಯಕ್ಷ ವಾಸು ತೋಟತ್ತಿಲ್ ಮಾತನಾಡಿ, ಪಾಲಿಬೆಟ್ಟ ಲಯನ್ಸ್ ಸಂಸ್ಥೆ ಕಳೆದ 50 ವರ್ಷಗಳಿಂದ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತ ಸಮಾಜಕ್ಕೆ ನಮ್ಮ ಕೊಡುಗೆ ಎಂಬ ಸಂದೇಶದೊಂದಿಗೆ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ. ಮುಂದಿನ ದಿನಗಳಲ್ಲಿಯೂ ಮತ್ತಷ್ಟು ಸೇವಾ ಕಾರ್ಯಗಳೊಂದಿಗೆ ಸಂಸ್ಥೆ ಮುನ್ನಡೆಯಲಿ ಎಂದು ಹಾರೈಸಿದರು.
ಮಡಿಕೇರಿ ಲಯನ್ಸ್ ಕ್ಲಬ್ ಅಧ್ಯಕ್ಷ ಬಿ.ಮದನ್ ಮಾದಯ್ಯ ಮಾತನಾಡಿ, ಗ್ರಾಮೀಣ ಭಾಗದ ಸಂಸ್ಥೆಯಾಗಿದ್ದರೂ ಒಗ್ಗಟ್ಟಿನ ಮೂಲಕ ವಿವಿಧ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸುತ್ತಿರುವ ಪದಾಧಿಕಾರಿಗಳ ಸೇವಾ ಕಾಳಜಿ ಶ್ಲಾಘನೀಯ ಎಂದು ಹೇಳಿದರು.
ಪಾಲಿಬೆಟ್ಟ ಲಯನ್ಸ್ ಕ್ಲಬ್ ಅಧ್ಯಕ್ಷ ಪಿ.ಎಸ್. ಸುಬ್ರಮಣಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಸ್ಥೆಯ ಸಹಕಾರದೊಂದಿಗೆ ಆರೋಗ್ಯ ಶಿಬಿರಗಳು, ಶಿಕ್ಷಣ ಪ್ರೋತ್ಸಾಹ ಕಾರ್ಯಕ್ರಮಗಳು, ರೈತರಿಗಾಗಿ ಜಾಗೃತಿ ಶಿಬಿರಗಳು ಹಾಗೂ ಪರಿಸರ ಸಂರಕ್ಷಣಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ನೆರವು ನೀಡಲಾಗುತ್ತಿದ್ದು, ಜನಪರ ಯೋಜನೆಗಳ ಸದುಪಯೋಗವನ್ನು ಸ್ಥಳೀಯರು ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಮಡಿಕೇರಿ ಲಯನ್ಸ್ ಕ್ಲಬ್ ವತಿಯಿಂದ ಪಾಲಿಬೆಟ್ಟ ಲಯನ್ಸ್ ಕ್ಲಬ್ ಅಧ್ಯಕ್ಷ ಪಿ.ಎಸ್.ಸುಬ್ರಮಣಿ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಲಯನ್ಸ್ ಕ್ಲಬ್‌ನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸಿದ ಹಿರಿಯರು, ಗಣ್ಯರು ಹಾಗೂ ದಾನಿಗಳನ್ನು ಗೌರವಿಸಲಾಯಿತು. ವಿವಿಧ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮಗಳು ಗಮನ ಸೆಳೆಯಿತು.
ಪಾಲಿಬೆಟ್ಟ ಲಯನ್ಸ್ ಕ್ಲಬ್ ಕಾರ್ಯದರ್ಶಿ ಬಿ.ಸದಾ ಕುಶಾಲಪ್ಪ, ಖಜಾಂಚಿ ಡಾ.ಭವಿಷ್ಯ ಕುಮಾರ್, ಲಯನ್ಸ್ ಮಲ್ಟಿಪಲ್ ಟ್ರಸ್ಟ್ ಅಧ್ಯಕ್ಷ ಎಂ.ಎಸ್.ಟವಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net