ಹಿರಿಯ ಜೀವಗಳು, ಹಳೇ ಆಚರಣೆಗಳನ್ನು ನಿರ್ಲಕ್ಷಿಸದಿರಿ

ಆಟಿ ಸಡಗರ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಬಿ.ಆರ್.ಜೋಯಪ್ಪ ಮಾತನಾಡಿದರು. ಸತೀಶ್ ಬೊಳಾರ್, .ವಸಂತ್ ಕುಮಾರ್, ಮಧುಸೂದನ್ ಇತರರಿದ್ದರು.
ಆಟಿ ಸಡಗರ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಬಿ.ಆರ್.ಜೋಯಪ್ಪ ಮಾತನಾಡಿದರು. ಸತೀಶ್ ಬೊಳಾರ್, .ವಸಂತ್ ಕುಮಾರ್, ಮಧುಸೂದನ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಹಿರಿಯ ಜೀವಗಳು, ಹಳೇ ಆಚರಣೆಗಳನ್ನು ನಿರ್ಲಕ್ಷಿಸದಿರಿ
  • ಆಟಿ ಸಡಗರ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಬಿ.ಆರ್.ಜೋಯಪ್ಪ ಕರೆ

ಮಡಿಕೇರಿ: ಹಳೇ ಆಚರಣೆಗಳು, ಸಂಪ್ರದಾಯಗಳು ಕೂಡ ಹಳೇ ತಲೆಮಾರಿನ ಜನರಂತೆ ಆಧುನಿಕ ಸಮಾಜದಲ್ಲಿ ನಿರ್ಲಕ್ಷಿಸಲ್ಪಡುತ್ತಿದೆ. ಈ ನಿಟ್ಟಿನಲ್ಲಿ ಹಿರಿಯ ಜೀವಿಗಳ ಪ್ರಾಮುಖ್ಯತೆ ಬಗ್ಗೆ ಕಿರಿಯರಲ್ಲಿ ತಿಳುವಳಿಕೆ ಮೂಡಿಸುವ ಪ್ರಯತ್ನಗಳು ಆಗಬೇಕೆಂದು ಹಿರಿಯ ಸಾಹಿತಿ ಬಿ.ಆರ್.ಜೋಯಪ್ಪ ಕರೆ ನೀಡಿದರು.

ನಗರದ ರೋಟರಿ ಸಭಾಂಗಣದಲ್ಲಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಕಕ್ಕಡ ಹಬ್ಬದ ಹಿನ್ನಲೆಯಲ್ಲಿ ಆಯೋಜಿಸಲಾಗಿದ್ದ ಆಟಿ ಸಡಗರ ಕಾರ್ಯಕ್ರಮದಲ್ಲಿ ಕಕ್ಕಡದ ಮಹತ್ವ ವಿಚಾರವಾಗಿ ಮಾತನಾಡಿದ ಜೋಯಪ್ಪ ಅವರು, ಪ್ರತೀ ಹಬ್ಬ ಮತ್ತು ಆಚರಣೆಗೂ ಮಹತ್ವವಿದೆ. ಹಿರಿಯರು ಅಂದಿನ ಕಾಲದಲ್ಲಿ ಸುಮ್ಮನೆ ಇಂಥ ಆಚರಣೆಗಳನ್ನು ಜಾರಿಗೆ ತರಲಿಲ್ಲ. ಬದಲಿಗೆ, ಆರೋಗ್ಯವರ್ಧಕವಾದ ಅಂಶಗಳನ್ನೂ ಆಚರಣೆಗಳಲ್ಲಿ ಸೇರ್ಪಡೆ ಮಾಡಿಕೊಳ್ಳಲಾಗಿತ್ತು ಎಂದರು.
ಕಕ್ಕಡ ತಿಂಗಳಿನಲ್ಲಿ ಯಾವುದೇ ಸಮಾರಂಭಗಳು ನಡೆಯುವುದಿಲ್ಲ. ಕಕ್ಕಡ ಮಾಸವು ಅಶುಭ ಎಂಬ ನಂಬಿಕೆಯಿದೆ. ಆದರೆ, ಕಕ್ಕಡ ಮಾಸವು ಮಳೆ ತೀವ್ರ ಹೆಚ್ಚಾಗಿರುವ ದಿನಗಳಲ್ಲಿಯೇ ಬರುವ ಕಾರಣ, ಹಿಂದಿನ ಕಾಲದಲ್ಲಿ ಇಂಥ ದಿನಗಳಲ್ಲಿ ಸಮಾರಂಭಗಳನ್ನು ಆಯೋಜಿಸಲು ಕಷ್ಟ ಎಂಬ ಕಾರಣದಿಂದ ಮಾತ್ರವೇ ಕಕ್ಕಡ ಮಾಸದಲ್ಲಿ ಸಮಾರಂಭಗಳನ್ನು ಮಾಡುತ್ತಿರಲಿಲ್ಲ. ವೈಜ್ಞಾನಿಕ ಕಾರಣವೂ ಇದರ ಹಿಂದಿತ್ತು ಎಂದೂ ಜೋಯಪ್ಪ ವಿಶ್ಲೇಷಿಸಿದರು.
೫೦ ವರ್ಷಗಳ ಹಿಂದಿನ ಪರಿಸರದಂತೆಯೇ ಅಂದಿನ ಆಚರಣೆಗಳೂ ಇಂದಿನ ಕಾಲದಲ್ಲಿ ಮರೆಯಾಗುತ್ತಿದೆ. ಆಗಿದ್ದ ಭತ್ತದ ಗದ್ದೆಗಳ ವೈಭವ ಕೂಡ ಕಂಡುಬರದಾಗಿದೆ. ಫಸಲು ಕೂಡ ಆಗಿನಂತೆ ಇಲ್ಲ. ಏಲಕ್ಕಿ, ಕರಿಮೆಣಸು, ಕಿತ್ತಳೆ, ಭತ್ತ ಸೇರಿದಂತೆ ದೈನಂದಿನ ಜೀವನಕ್ಕೆ ಯಾವುದು ಅಗತ್ಯವೋ ಅಂಥ ಕಷಿಯಿಂದ ವಿಮುಖರಾಗುತ್ತಿರುವುದು ಭವಿಷ್ಯದ ದಷ್ಟಿಯಿಂದ ಉತ್ತಮ ಬೆಳವಣಿಗೆಯಲ್ಲ ಎಂದೂ ಬಿ.ಆರ್.ಜೋಯಪ್ಪ ಎಚ್ಚರಿಸಿದರು.
ರೋಟರಿ ಜಿಲ್ಲೆ ೩೧೮೧ ನ ಗವರ್ನರ್ ಸತೀಶ್ ಬೊಳಾರ್ ಆಟಿ ಸಡಗರಕ್ಕೆ ಆಟಿ ಸೊಪ್ಪಿನ ಪಾಸ ಸೇವಿಸಿ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಸತೀಶ್ ಬೊಳಾರ್, ಪ್ರಾಚೀನ ದಿನಗಳ ಪ್ರತೀಯೊಂದು ಆಚರಣೆಗೂ ವೈಜ್ಞಾನಿಕ ಕಾರಣಗಳಿದ್ದವು. ಮನೆ ಮುಂದೆ ತುಳಸಿ ಕಟ್ಟೆ ನಿರ್ಮಾಣ, ಸಗಣೆ ಸಾರಿಸುವಿಕೆಯಿಂದ ನೈಮ್ಯಲ್ಯ ಕಾಪಾಡುವಿಕೆ, ದೀಪ ಬೆಳಗಿಸುವ ಮೂಲಕ ಉತ್ತಮ ಎನರ್ಜಿಯ ಸಂಪಾದನೆ, ಶಂಖನಾದದ ಮಹತ್ವ ಮುಂತಾದ ಕಾರಣಗಳು ಇದ್ದವು. ಈಗ ನಗರೀಕರಣ ಹೆಚ್ಚಾಗುತ್ತಿರುವಂತೆಯೇ ಹಲವಷ್ಟು ಆಚರಣೆಗಳನ್ನು ಮರೆಯುತ್ತಿದ್ದೇವೆ. ಹಳೇ ಕಾಲದ ಊಟ, ಖಾದ್ಯಗಳು ಕೂಡ ಮರೆಯಾಗುತ್ತಿದೆ. ಇಂಥ ಸಂದರ್ಭ ಆಟಿಯಂಥ ಪ್ರಾಚೀನ ಆಚರಣೆಗಳು ನಮಗೆ ಸಂಪ್ರದಾಯಗಳಲ್ಲಿನ ಮಹತ್ವವನ್ನು ತಿಳಿಸುವಲ್ಲಿ ಪ್ರಮುಖವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪಿ.ಆರ್.ರಾಜೇಶ್, ಕಾರ್ಯದರ್ಶಿ ಡಾ.ಜಿ.ಡಿ.ಚೇತನ್, ವಲಯ ೬ರ ಸಹಯಕ ಗವರ್ನರ್ ಹೆಚ್.ಎಸ್.ವಸಂತ್ ಕುಮಾರ್, ವಲಯ ಸೇನಾನಿಗಳಾದ ಪೊನ್ನಚ್ಚನ ಮಧುಸೂದನ್, ವಸಂತ್ ಕುಮಾರ್, ರೋಟರಿ ಜಿಲ್ಲೆಯ ಪಬ್ಲಿಕ್ ಇಮೇಜ್ ಸಮಿತಿ ಅಧ್ಯಕ್ಷ ರಿತೇಶ್ ಬಾಳಿಗ ಉಪಸ್ತಿತರಿದ್ದರು. ಮಂಗಳೂರಿನ ಗಾಯಕಿ ಅನುಷ ಬೊಳಾರ್ ಅವರಿಂದ ಜಾನಪದ ಹಾಡು ಕೇಳುಗರ ಮನಸೆಳೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net