ಕುಶಾಲನಗರಕ್ಕೆ ಸುಸಜ್ಜಿತ ಕ್ರೀಡಾಂಗಣ ಅತ್ಯಗತ್ಯ

ಕುಶಾಲನಗರದಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ದಿ.ಆರ್.ಗುಂಡೂರಾವ್ ಕ್ರೀಡಾಂಗಣ ಸಮಿತಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಕುಶಾಲನಗರದಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ದಿ.ಆರ್.ಗುಂಡೂರಾವ್ ಕ್ರೀಡಾಂಗಣ ಸಮಿತಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಗುಂಡೂರಾವ್ ಬಡಾಣೆಯಲ್ಲಿರುವ 13 ಎಕರೆ ಪ್ರದೇಶ
  • ಸುಸಜ್ಜಿತ ಕ್ರೀಡಾಂಗಣ ನಿರ್ಮಿಸುವ
ಕುಶಾಲನಗರ: ನಗರದ ಗುಂಡೂರಾವ್ ಬಡಾಣೆಯಲ್ಲಿರುವ 13 ಎಕರೆ ಪ್ರದೇಶದಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸುವ ಮೂಲಕ ಅದಕ್ಕೆ ಗುಂಡೂರಾವ್ ಕ್ರೀಡಾಂಗಣ ಎಂದು ನಾಮಕರಣ ಮಾಡುವಂತೆ ದಿ.ಆರ್.ಗುಂಡೂರಾವ್ ಕ್ರೀಡಾಂಗಣ ಸಮಿತಿ ಚಾರಿಟಬಲ್ ಟ್ರಸ್ಟ್ ಒತ್ತಾಯಿಸಿದೆ.
ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ವತಿಯಿಂದ ಗುರುವಾರ ಪಟ್ಟಣದಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಟ್ರಸ್ಟ್‌ನ ಸದಸ್ಯರು, ಶೀಘ್ರ ಅಭಿವೃದ್ಧಿ ಹೊಂದುತ್ತಿರುವ ಕುಶಾಲನಗರದಲ್ಲಿ ಸುಸಜ್ಜಿತ ಕ್ರೀಡಾಂಗಣವಿರಬೇಕೆಂಬ ನಿಟ್ಟಿನಲ್ಲಿ ಸಂಸ್ಥೆ ಹೋರಾಟ ಮಾಡುತ್ತಿದ್ದು, ಇದಕ್ಕಾಗಿಯೇ ಸಂಸ್ಥೆಯನ್ನು ಹುಟ್ಟುಹಾಕಲಾಯಿತು ಎಂದರು.
ಟ್ರಸ್ಟ್ ಅಧ್ಯಕ್ಷ ಲಕ್ಷ್ಮೀನಾರಾಯಣ, ಉಪಾಧ್ಯಕ್ಷರಾದ ಫಯಾಜ್ ಅಹಮದ್ ಮತ್ತು ಮಣಿ, ಪ್ರಧಾನ ಕಾರ್ಯದರ್ಶಿ ಎಸ್.ಆದಮ್, ಕಾರ್ಯದರ್ಶಿ ಎಸ್.ದೇವೇಂದ್ರ, ನಿರ್ದೇಶಕ ಇಲಿಯಾಸ್ ಅಹಮದ್ ಸೇರಿದಂತೆ ಹಲವು ಪದಾಧಿಕಾರಿಗಳು ಈ ವಿಚಾರಕ್ಕೆ ದನಿಯಾದರು.
ಕೊಡಗು ಜಿಲ್ಲೆಯಲ್ಲಿ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಏಕೈಕ ಪಟ್ಟಣವೆಂದರೆ ಕುಶಾಲನಗರ. ಆಡಳಿತಾತ್ಮಕವಾಗಿ ಸಾಕಷ್ಟು ವ್ಯವಸ್ಥೆ ಇದೆ. ತಹಸೀಲ್ದಾರ್ ಕಚೇರಿ, ಆರಕ್ಷಕ ಉಪ ಅಧೀಕ್ಷಕ ಕಚೇರಿ, ನ್ಯಾಯಾಲಯ ಹೀಗೆ ಇನ್ನೂ ಹಲವು ಕಚೇರಿಗಳಿವೆ. ಸಾಂಸ್ಕೃತಿಕವಾಗಿಯೂ ಈ ಪ್ರದೇಶ ಉತ್ತಮ ರೀತಿಯಲ್ಲಿದ್ದು, 3 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ನಿರ್ಮಾಣಗೊಂಡ ಕಲಾಭವನ ಇಲ್ಲಿದೆ. ಆದರೆ ಕ್ರೀಡಾಂಗಣದ ಕೊರತೆ ಮಾತ್ರ ಎದ್ದು ಕಾಣುತ್ತಿದೆ ಎಂದು ಟ್ರಸ್ಟ್‌ನ ಸದಸ್ಯರು ಬೇಸರವ್ಯಕ್ತಪಡಿಸಿದರು.
ಗುಂಡೂರಾವ್ ಬಡಾವಣೆಯಲ್ಲಿರುವ 13 ಎಕರೆ ಜಾಗವನ್ನು ಗುಂಡೂರಾವ್ ಕ್ರೀಡಾಂಗಣ ಎಂದು ಘೋಷಿಸಬೇಕೆಂಬುದು ಕ್ರೀಡಾಂಗಣ ಸಮಿತಿ ಆಗ್ರಹ. ಗುಂಡಿಮಯವಾಗಿದ್ದ ಜಾಗವನ್ನು ಸಮತಟ್ಟುಗೊಳಿಸಿ ಸುತ್ತಲೂ ಸುಮಾರು 40 ಸಿಮೆಂಟ್ ಬೆಂಚುಗಳನ್ನು ಅಳವಡಿಸಲಾಗಿದೆ. ವಯಸ್ಸಾದವರು ಹಾಗೂ ಇತರ ವಾಯುವಿಹಾರಿಗಳಿಗೆ ಇದು ಅನುಕೂಲವಾಗಲಿದೆ. ನಮ್ಮ ಉದ್ದೇಶಿತ ಕ್ರೀಡಾಂಗಣದಲ್ಲಿ ಹಾಕಿ, ಕ್ರಿಕೆಟ್ ಮೈದಾನ, ಆಟೋಟಗಳ ವಿಭಾಗ ಇತ್ಯಾದಿಗಳಿದ್ದು ಒಂದು ಸುಸಜ್ಜಿತ ಕ್ರೀಡಾಂಗಣವನ್ನು ರೂಪುಗೊಳಿಸಿ ಕಾರ್ಯರೂಪಕ್ಕೆ ತರಲು ಪೂರ್ಣ ಪ್ರಯತ್ನ ಮಾಡಲಾಗುತ್ತಿದೆ. ಈ ಬಗ್ಗೆ ತಹಸೀಲ್ದಾರ್ ಹಾಗೂ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಮಡಿಕೇರಿ ಶಾಸಕ ಡಾ.ಮಂತರ್‌ಗೌಡ ಅವರನ್ನು ಈ ಬಗ್ಗೆ ಸಂಪರ್ಕಿಸಿದಾಗ ಅವರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಈ ಕುರಿತು ನಿರ್ಧಾರ ಕೈಗೊಳ್ಳಲು ಸಮಯ ಕೇಳಿದ್ದಾರೆ ಎಂದು ವಿವರಿಸಿದರು.
ಈ ಸಂಬಂಧ ಪೂರ್ವಭಾವಿ ಕೆಲಸಗಳನ್ನು ಕಾರ್ಯರೂಪದಲ್ಲಿ ಮಾಡುವುದು ಅಸಾಧ್ಯ. ಸರಿಯಾದ ದಾಖಲಾತಿಗಳಿಲ್ಲದೆ ಈ ಬಗ್ಗೆ ಮುಂದುವರಿಯುವುದೂ ಸೂಕ್ತವಲ್ಲ. ಈ ಹಿಂದೆ ನಡೆದುಕೊಂಡು ಬಂದಿರುವ ಜಾತ್ರಾ ಉತ್ಸವ ಪ್ರಕ್ರಿಯೆ, ಗೋ ಪ್ರದರ್ಶನ ಇತ್ಯಾದಿಗಳೆಲ್ಲವೂ ಅಬಾಧಿತವಾಗಿ ನಡೆಯಲಿದೆ. ಇಂತಹ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಇತರ ಚಟುವಟಿಕೆಗಳಿಗೆ ಸೂಕ್ತ ಸ್ಥಳಗಳನ್ನು ಟ್ರಸ್ಟ್ ಗುರುತಿಸಲಿದೆ. ಇದರ ಸಾಲಿಗೆ ಸುಸಜ್ಜಿತ ಕ್ರೀಡಾಂಗಣವೂ ಸೇರಿದ್ದು, ನಗರಕ್ಕೆ ಅಗತ್ಯವೆಂದರೆ ಸುಸಜ್ಜಿತ ಕ್ರೀಡಾಂಗಣ. ಸುತ್ತಲೂ ಕನಿಷ್ಠ 5000 ಪ್ರೇಕ್ಷಕರು ಕುಳಿತುಕೊಳ್ಳಬಹುದಾದ ಗ್ಯಾಲರಿಯೊಂದಿಗೆ ಮುಂದಿನ ದಿನಗಳಲ್ಲಿ ಟರ್ಫ್ ಗ್ರೌಂಡ್ ಆಗಿ ಪರಿವರ್ತಿಸುವ ಯೋಜನೆ ಕೂಡ ಇದೆ. ಇದರಿಂದ ಸುತ್ತ ಮುತ್ತಲಿನ ವಿದ್ಯಾಸಂಸ್ಥೆಗಳು, ಕ್ರೀಡಾ ಪ್ರೇಮಿಗಳು, ಸಂಘ-ಸಂಸ್ಥೆಗಳಿಗೆ ಹೆಚ್ಚಿನ ಉಪಯೋಗವಾಗಲಿದೆ ಎಂದು ಸದಸ್ಯರು ಪ್ರತಿಪಾದಿಸಿದರು.
ದಿ.ಆರ್.ಗುಂಡೂರಾವ್ ಕ್ರೀಡಾಂಗಣ ಸಮಿತಿ ಚಾರಿಟಬಲ್ ಟ್ರಸ್ಟ್ ವತಿಯಿಂದ ನೀಡಲಾದ ಮನವಿಯನ್ನು ಜಿಲ್ಲಾಧಿಕಾರಿ ನಡೆಸುವ ಐಡಿಎಸ್ ಸಭೆಯಲ್ಲಿ ಮಂಡಿಸಲು ಕಳುಹಿಸಲಾಗುತ್ತದೆ. ಗಿರೀಶ್ ಮುಖ್ಯಾಧಿಕಾರಿ, ಕುಶಾಲನಗರ ಪುರಸಭೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net