ಕಾವೇರಿಗೆ ಕಾವಲುಗಾರನ ಕಣ್ಗಾವಲು

 ಕುಶಾಲನಗರದಲ್ಲಿ ಕಾವೇರಿ ನದಿಯ ರಕ್ಷಣೆಗಾಗಿ ನೇಮಕವಾಗಿರುವ ವಿಶೇಷ ಕಾವಲುಗಾರ
ಕುಶಾಲನಗರದಲ್ಲಿ ಕಾವೇರಿ ನದಿಯ ರಕ್ಷಣೆಗಾಗಿ ನೇಮಕವಾಗಿರುವ ವಿಶೇಷ ಕಾವಲುಗಾರ
Published on
ಮಡಿಕೇರಿ:
ಕಾವೇರಿ ನದಿ ಸಂರಕ್ಷಣೆಗೆ ಕಾವಲುಗಾರ ಬಂದಿದ್ದಾರೆ. ಹೌದು, ಕುಶಾಲನಗರ ಪುರಸಭೆ ಇಂಥದ್ದೊAದು ಕ್ರಮ ತೆಗೆದುಕೊಂಡಿದೆ. ಪಟ್ಟಣವನ್ನು ಸುತ್ತುವರಿದು ಹರಿಯುವ ಜೀವನದಿ ಮಾಲಿನ್ಯಕ್ಕೆ ಒಳಗಾಗದಂತೆ ತಡೆಯುವುದು ಈ ಕಾವಲುಗಾರನ ಪ್ರಮುಖ ಕೆಲಸ. ಈಗಾಲೇ ಕೊಪ್ಪ ಸೇತುವೆಗೆ ಜಾಲರಿ ಅಳವಡಿಸುವ ಮೂಲಕ ನದಿಗೆ ಕಸ ಎಸೆಯುವವರ ಕುಕೃತ್ಯಕ್ಕೆ ಯಶಸ್ವಿಯಾಗಿ ಕಡಿವಾಣ ಹಾಕಿರುವ ಸ್ಥಳೀಯ ಆಡಳಿತ ಈಗ ಮತ್ತೊಂದು ಮಾದರಿ ಕೆಲಸ ಮಾಡಿರುವ ಬಗ್ಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಕೊಡಗಿನಲ್ಲಿ ಉಗಮವಾಗಿ ದಕ್ಷಿಣ ಭಾರತವನ್ನು ಸಂಪದ್ಭರಿತವಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿರುವುದಲ್ಲದೇ ಹಲವು ನಗರಗಳ ಪಾಲಿನ ಜೀವನದಿಯೂ ಆಗಿರುವ ಕಾವೇರಿ ತ್ಯಾಜ್ಯ ಕಂಟಕದಿAದ ತವರಿನಲ್ಲೇ ಮಲೀನವಾಗಿ ಮುಂದಕ್ಕೆ ಹರಿಯುತ್ತಿದ್ದಾಳೆ. ಕಾವೇರಿ ಜನ್ಮತಾಳುವ ತಲಕಾವೇರಿಯಿಂದ ಕೊಡಗಿನ ಗಡಿಭಾಗ ಶಿರಂಗಾಲದ ತನಕ ಒಟ್ಟು 23 ಗ್ರಾಮ ಪಂಚಾಯಿತಿಗಳು ಮತ್ತು ಒಂದು ಪುರಸಭೆ ಕಾವೇರಿ ನದಿ ದಂಡೆಯಲ್ಲಿದೆ. ನಾಪೋಕ್ಲು, ಸಿದ್ದಾಪುರ, ಕುಶಾಲನಗರ, ಕೂಡಿಗೆ ಸೇರಿದಂತೆ ದೊಡ್ಡ ದೊಡ್ಡ ಊರುಗಳು ಕಾವೇರಿ ಮತ್ತು ಅದರ ಉಪನದಿಗಳ ದಡದಲ್ಲಿದ್ದು, ನದಿ ಮಾಲೀನ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿವೆ.
ಕಾವೇರಿಯನ್ನು ಮಲೀನ ಮಾಡುವಲ್ಲಿ ಜಿಲ್ಲೆಯ ವಾಣಿಜ್ಯ ನಗರಿ ಕುಶಾಲನಗರದ ಪಾತ್ರ ದೊಡ್ಡದಿದೆ. 2011ರ ಜನಗಣತಿ ಪ್ರಕಾರ 15,326 ಜನಸಂಖ್ಯೆ ಇಲ್ಲಿದೆ. ಆದರೆ ನಗರ ವೇಗವಾಗಿ ಬೆಳೆಯುತ್ತಿರುವುದರಿಂದ ಈಗ ಇಲ್ಲಿಯ ಜನಸಂಖ್ಯೆ 2ರಿಂದ 3 ಪಟ್ಟು ಹೆಚ್ಚಾಗಿರುವ ಸಾಧ್ಯತೆ ಇದೆ. ಇಲ್ಲಿಯ ಶೇ. 90ಕ್ಕೂ ಅಧಿಕ ಕುಡಿಯುವ ನೀರಿನ ಬೇಡಿಕೆಯನ್ನು ಪೂರೈಸುತ್ತಿರುವದು ಕಾವೇರಿ ನದಿ. ವಿಪರ್ಯಾಸ ಎಂದರೆ ಕುಶಾಲನಗರದ ಸಂಪೂರ್ಣ ತ್ಯಾಜ್ಯ ನೀರು ಹೋಗಿ ಸೇರುವುದು ಇದೇ ಕಾವೇರಿ ನದಿಗೆ.
ನಗರದೊಳಗೆ ಸಾರ್ವಜನಿಕ ಶೌಚಗೃಹಗಳ ಸಂಖ್ಯೆ ಕಡಿಮೆ ಇರುವುದರಿಂದ ಕಾವೇರಿ ನದಿಯೇ ಪ್ರಾಕೃತಿಕ ಕರೆಯನ್ನು ಪೂರೈಸಿಕೊಳ್ಳುವ ಸ್ಥಳವಾಗಿ ಪರಿವರ್ತನೆ ಆಗಿದೆ. ದೂರದ ಸ್ಥಳಗಳಿಂದ ಗುಂಪುಗಳಲ್ಲಿ ಬರುವ ಪ್ರವಾಸಿಗರು, ಪ್ರವಾಸಕ್ಕೆ ಬರುವ ಶಾಲಾ ಮಕ್ಕಳು, ವಲಸೆ ಕಾರ್ಮಿಕರು ಹೀಗೆ ಬಹುತೇಕರು ಜೀವನದಿಯನ್ನು ಶೌಚ ಸ್ಥಳವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ತ್ಯಾಜ್ಯ ಎಸೆಯದಂತೆ ಕೊಪ್ಪ ಸೇತುವೆಗೆ ಜಾಲರಿ ಅಳವಡಿಸಿರುವ ಕಾರಣ ಈಗ ಬೇರೆ ದಾರಿಯಲ್ಲಿ ಬಂದು ಕಸ ಹಾಕುವವರ ಸಂಖ್ಯೆಯೂ ಹೆಚ್ಚಿದೆ.
ಕೆಲವು ಮನೆ, ಹೊಟೇಲ್, ವಸತಿಗೃಹಗಳು ತಮ್ಮಲ್ಲಿನ ಶೌಚಗೃಹದ ತ್ಯಾಜ್ಯ ನೀರನ್ನು ನೇರವಾಗಿ ಚರಂಡಿಗೆ ಬಿಟ್ಟು ಅಲ್ಲಿಂದ ಅದು ಕಾವೇರಿ ನದಿ ಸೇರುವಂತಾಗುತ್ತಿದೆ. ಇಂತ ದುಷ್ಕೃತ್ಯಗಳಿಂದ ನಗರದ ಹೃದಯ ಭಾಗ ಫೀಲ್ಡ್ ಮಾರ್ಷಲ್ ವೃತ್ತದ ಆಸುಪಾಸು, ಶ್ರೀ ಗಣಪತಿ ದೇವಾಲಯದ ಸುತ್ತಲಿನ ಪ್ರದೇಶಗಳಲ್ಲಿ ಮುಂಜಾನೆ ಮತ್ತು ಇಳಿ ಸಂಜೆಯ ಹೊತ್ತು ಒಮ್ಮೊಮ್ಮೆ ಅಸಾಧ್ಯ ದುರ್ವಾಸನೆ ಬರುತ್ತಿರುತ್ತದೆ. ಇಲ್ಲಿ ಓಡಾಡಲು ಸಾಧ್ಯವಾಗದಂಥ ಸ್ಥಿತಿ ನಿರ್ಮಾಣ ಆಗಿರುತ್ತದೆ.
ದಿನದಿಂದ ದಿನಕ್ಕೆ ಕುಶಾಲನಗರದಲ್ಲೇ ಕಾವೇರಿ ನದಿ ಮಾಲಿನ್ಯ ಹೆಚ್ಚಳ ಆಗುತ್ತಿರುವುದರಿಂದ ಆತಂಕಕ್ಕೆ ಒಳಗಾದ ಸ್ಥಳೀಯ ಪರಿಸರ ಪ್ರೇಮಿಗಳು, ವಿವಿಧ ಸಂಘಟನೆಗಳ ಪ್ರಮುಖರು ಶುಕ್ರವಾರವಷ್ಟೇ (ಜೂ.19) ಪುರಸಭೆ ಕಚೇರಿಗೆ ತೆರಳಿಗೆ ಮುಖ್ಯಾಧಿಕಾರಿ ಟಿ.ಜಿ. ಗಿರೀಶ್ ಅವರನ್ನು ಭೇಟಿ ಮಾಡಿ ಪರಿಸ್ಥಿತಿಯ ಗಂಭೀರತೆಯನ್ನು ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಸಕಾಲದಲ್ಲಿ ಮಳೆ ಆಗದೆ ನದಿಯಲ್ಲಿ ನೀರಿನ ಹರಿವು ಕಡಿಮೆ ಆಗಿದ್ದು, ಮಾಲಿನ್ಯ ತಡೆಗಟ್ಟಲು ತಕ್ಷಣ ಕ್ರಮ ತೆಗೆದುಕೊಳ್ಳದಿದ್ದರೆ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಬಗ್ಗೆ ಗಮನ ಸೆಳೆಯಲಾಗಿದೆ.
ಪರಿಸರ ಪ್ರೇಮಿಗಳು ಮತ್ತು ಸಂಘಟನೆಗಳ ಪ್ರಮುಖರ ಕಾಳಜಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದ ಗಿರೀಶ್ ಕಾವೇರಿ ನದಿಗೆ ವಿಶೇಷ ಕಾವಲುಗಾರನನ್ನು ನೇಮಿಸುವ ಭರವಸೆ ನೀಡಿದ್ದರು. ಅದರಂತೆ ಕೂಡಲೇ ಕಾರ್ಯೋನ್ಮುಖರಾದ ಅವರು ಶನಿವಾರ ಬೆಳಗ್ಗೆಯಿಂದಲೇ ಕಾವೇರಿನ ನದಿಗೆ ಕಾವಲುಗಾರನ್ನು ನೇಮಿಸುವ ಮೂಲಕ ನದಿ ರಕ್ಷಣೆಗೆ ಮಾದರಿ ಕ್ರಮ ತೆಗೆದುಕೊಂಡಿದ್ದಾರೆ. ಪುರಸಭೆಯ ಹಿರಿಯ ಪೌರಕಾರ್ಮಿಕನಿಗೆ ಈ ಜವಾಬ್ದಾರಿ ನೀಡಲಾಗಿದ್ದು, ನದಿ ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಕೆಲಸ ಆರಂಭಿಸಿದ್ದಾರೆ.
ಪ್ರಥಮ ಹಂತದಲ್ಲಿ ಒಬ್ಬರನ್ನು ಕಾವೇರಿ ನದಿಯ ಕಾವಲುಗಾರರನ್ನಾಗಿ ನಿಯೋಜಿಸಲಾಗಿದೆ. ಇವರು ಬೆಳಗ್ಗೆ 6-8 ಗಂಟೆ ತನಕ ಮತ್ತು ಸಂಜೆಯ ವೇಳೆ ಈಗಾಗಲೇ ಗುರುತಿಸಲಾಗಿರುವ ಪ್ರಮುಖ 5-6 ಸ್ಥಳಗಳಲ್ಲಿ ನದಿಯ ಮೇಲ್ವಿಚಾರಣೆ ನೋಡಿಕೊಳ್ಳಲಿದ್ದಾರೆ. ತ್ಯಾಜ್ಯ ಎಸೆಯುವುದು ಕಂಡು ಬಂದರೆ ವಿಷಲ್ ಹೊಡೆದು ಎಚ್ಚರಿಕೆ ಕೊಡುತ್ತಾರೆ. ನದಿ ಮಲೀನ ಮಾಡದಂತೆ ಮನವರಿಕೆ ಮಾಡುತ್ತಾರೆ. ಇದೇ ಕೃತ್ಯ ಮುಂದುವರಿದರೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ.
ನದಿಯಲ್ಲಿ ಸ್ನಾನ ಮಾಡುವುದನ್ನೂ ಪುರಸಭೆ ವತಿಯಿಂದ ನಿರ್ಬಂಧಿಸಲಾಗಿದೆ. ಕಳೆದ ವಾರ ಕೊಪ್ಪ ಗೇಟ್ ಬಳಿ ಸ್ನಾನಕ್ಕೆ ತೆರಳಿದ್ದ ಇಬ್ಬರು ಯುವಕರು ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದರು. ನೀರಿನ ಹರಿವು ಕಡಿಮೆ ಇರುವ ಸಂದರ್ಭದಲ್ಲೇ ಈ ದುರ್ಘಟನೆ ನಡೆದಿದೆ. ಈ ಹಿಂದೆಯೂ ಹಲವರು ಸ್ನಾನಕ್ಕೆ ತೆರಳಿ ಕಾವೇರಿಯಲ್ಲಿ ಮುಳುಗಿ ಮೃತಪಟ್ಟ ಪ್ರಕರಣಗಳು ನಡೆದಿದ್ದವು. ಹಾಗಾಗಿ ನದಿಯಲ್ಲಿ ಯಾರು ಕೂಡ ಸ್ನಾನ ಮಾಡದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಕಾವೇರಿಯ ಕಾವಲುಗಾರನಿಗೆ ಕೊಡಲಾಗಿದೆ.
ಈ ಕ್ರಮದ ಫಲಾಫಲಗಳನ್ನು ಗಮನಿಸಿ ಮುಂದೆ ಹೆಚ್ಚುವರಿ ಕಾವಲುಗಾರರ ನೇಮಕ ಸೇರಿದಂತೆ ನದಿ ಮಾಲಿನ್ಯಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲು ಪುರಸಭೆ ಅಧಿಕಾರಿಗಳು ನಿರ್ಧರಿಸಿದ್ದಾರೆ. ನದಿಗೆ ಶೌಚಗೃಹದ ತ್ಯಾಜ್ಯನೀರು ಬಿಡುವವರನ್ನು ಗುರುತಿಸಿ ನೊಟೀಸ್ ಕೊಡುವ ಕೆಲಸ ಮಾಡಲಾಗುತ್ತಿದೆ. ಈ ರೀತಿ ಮಾಡದಂತೆ ಎಚ್ಚರಿಕೆ ನೀಡಲಾಗಿದ್ದು ಅಗತ್ಯ ಬಿದ್ದರೆ ಕಠಿಣ ಕಾನೂನು ಕ್ರಮಗಳನ್ನು ಪ್ರಯೋಗಿಸಲು ಕೂಡ ಚಿಂತನೆ ನಡೆದಿದೆ.
ಕೊಡಗನ್ನು ಮೈಸೂರು ಜಿಲ್ಲೆ ಜತೆ ಸಂಪರ್ಕಿಸುವ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಎರಡೂ ಬದಿಗಳಲ್ಲಿ ಕಬ್ಬಿಣದ ಜಾಲರಿಗಳನ್ನು ನಿರ್ಮಿಸಲಾಗಿದ್ದು, ಸೇತುವೆ ಮೇಲಿನಿಂದ ನದಿಗೆ ಕಸ ಎಸೆಯುವುದನ್ನು ನಿಯಂತ್ರಿಸಲಾಗಿದೆ. ಈ ಮೊದಲು ಸೇತುವೆ ಕೆಳಭಾಗದಲ್ಲಿ ಸ್ವಚ್ಛತಾ ಕಾರ್ಯ ನಡೆಸುವ ಸಂದರ್ಭ ಲೋಡ್‌ಗಟ್ಟಲೆ ಕಸ ಇಲ್ಲಿ ಸಂಗ್ರಹವಾಗುತ್ತಿತ್ತು. ಜಾಲರಿ ಅಳವಡಿಸಿದ ನಂತರ ಸೇತುವೆಯ ಕೆಳಭಾಗ ಈಗ ಸ್ವಚ್ಛವಾಗಿದೆ. ಇದೀಗ ಸ್ಥಳೀಯ ರೋಟರಿ ಸಂಸ್ಥೆ ವತಿಯಿಂದ ಪಕ್ಕದಲ್ಲಿ ಇರುವ ಹಳೆಯ ಸೇತುವೆಯ ಎರಡೂ ಬದಿಗಳಿಗೆ ಕಬ್ಬಿಣದ ಜಾಲರಿ ಅಳವಡಿಸಲಾಗಿದೆ. ಹಾಗಾಗಿ ಇಲ್ಲಿ ಕೂಡ ನದಿಗೆ ಕಸ ಎಸೆಯುವುದು ನಿಯಂತ್ರಣಕ್ಕೆ ಬಂದಿದೆ. ರೋಟರಿ ಸಂಸ್ಥೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು, ಹಳೆಯ ಸೇತುವೆ ಮೇಲೆ ಆಕರ್ಷಕ ಉದ್ಯಾನ ನಿರ್ಮಿಸಲಾಗಿದೆ. ಸುಮಾರು 2 ಶತಮಾನದಷ್ಟು ಹಳೆಯ ಸೇತುವೆ ಮೇಲಿನ ಉದ್ಯಾನ ಸ್ಥಳೀಯರ ಗಮನ ಸೆಳೆಯುತ್ತಿದೆ.
"

ಕಾವೇರಿ ನದಿಯ ಮಾಲಿನ್ಯ ತಪ್ಪಿಸುವ ನಿಟ್ಟಿನಲ್ಲಿ ಪರಿಸರ ಪ್ರೇಮಿಗಳು ಮತ್ತು ವಿವಿಧ ಸಂಘ ಸಂಸ್ಥೆಗಳ ಕಾಳಜಿಗೆ ಪೂರಕವಾಗಿ ನದಿ ರಕ್ಷಣೆಗೆ ವಿಶೇಷ ಕಾವಲುಗಾರರನ್ನು ನೇಮಿಸಲಾಗಿದೆ. ಬೆಳಗ್ಗೆ ಮತ್ತು ಸಂಜೆ ನಿಗದಿತ ಸ್ಥಳದಲ್ಲಿ ಇದ್ದುಕೊಂಡು ಅವರು ನದಿಯನ್ನು ಕಾವಲು ಕಾಯಲಿದ್ದಾರೆ. ಕಾವೇರಿಗೆ ತ್ಯಾಜ್ಯ ಎಸೆಯದಂತೆ ನೋಡಿಕೊಳ್ಳಲಿದ್ದಾರೆ. ಕಸ ಹಾಕಲು ಬರುವವರಿಗೆ ಜಾಗೃತಿ ಮೂಡಿಸಲಿದ್ದಾರೆ. ನದಿಯಲ್ಲಿ ಯಾರು ಕೂಡ ಸ್ನಾನ ಮಾಡದಂತೆ ನೋಡಿಕೊಳ್ಳಲಿದ್ದಾರೆ.

— ಟಿ.ಜಿ. ಗಿರೀಶ್, ಮುಖ್ಯಾಧಿಕಾರಿ, ಪುರಸಭೆ, ಕುಶಾಲನಗರ

"

ಕುಶಾಲನಗರ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು ಇಲ್ಲಿ ಕಾವೇರಿ ನದಿ ಮಾಲಿನ್ಯ ಹೆಚ್ಚಾಗುತ್ತಿದೆ. ಈ ಸಂಬAಧ ಪುರಸಭೆ ಮುಖ್ಯಾಧಿಕಾರಿ ಗಮನ ಸೆಳೆದಾಗ ಕಾವೇರಿ ನದಿಗೆ ವಿಶೇಷ ಕಾವಲುಗಾರನ ನೇಮಕದ ಬಗ್ಗೆ ಭರವಸೆ ನೀಡಿದ್ದರು. ಕೂಡಲೇ ಅದನ್ನು ಈಡೇರಿಸುವ ಮೂಲಕ ಕಾವೇರಿ ಬಗ್ಗೆ ಕಾಳಜಿ ತೋರಿಸಿದ್ದಾರೆ. ಇಂಥ ವ್ಯವಸ್ಥೆ ನದಿ ಬದಿಯ ಎಲ್ಲಾ ಊರುಗಳಲ್ಲಿ ಆದರೆ ಕಾವೇರಿಯ ಮಾಲಿನ್ಯ ಪ್ರಮಾಣ ಕಡಿಮೆ ಮಾಡಬಹುದು.

— ಎಂ.ಎನ್. ಚಂದ್ರಮೋಹನ್, ಸಂಚಾಲಕ, ಕಾವೇರಿ ನದಿ ಸ್ವಚ್ಛತಾ ಆಂದೋಲನ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net