ಕಾಡುಪ್ರಾಣಿ ಬಂದರೆ ಎಚ್ಚರಿಸುತ್ತೆ ಸೈರನ್

ತಾನು ರೂಪಿಸಿದ ವಿಜ್ಞಾನ ಮಾದರಿ ಜತೆ ವಿದ್ಯಾರ್ಥಿನಿ ವಿ. ಹರಿಣಿ
ತಾನು ರೂಪಿಸಿದ ವಿಜ್ಞಾನ ಮಾದರಿ ಜತೆ ವಿದ್ಯಾರ್ಥಿನಿ ವಿ. ಹರಿಣಿ
Published on
ಮಡಿಕೇರಿ:
ಅರಣ್ಯದಂಚಿನ ಪ್ರದೇಶ ಮತ್ತು ಅಭಯಾರಣ್ಯಗಳ ವ್ಯಾಪ್ತಿಯಲ್ಲಿ ಕಾಡುಪ್ರಾಣಿ-ಮಾನವ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಅರಣ್ಯದೊಳಗೆಯೇ ಬದುಕು ಕಟ್ಟಿಕೊಂಡಿರುವ ಆದಿವಾಸಿಗಳೂ ಇಂಥ ಸಮಸ್ಯೆಯಿಂದ ಹೊರತಾಗಿಲ್ಲ. ಪ್ರಾಣಿಗಳ ದಾಳಿಯಿಂದ ಪ್ರಾಣಹಾನಿ, ಅಂಗವೈಕಲ್ಯದ ನೋವುಗಳನ್ನು ಹತ್ತಿರದಿಂದ ಗಮನಿಸಿಕೊಂಡು ಬಂದಿದ್ದ ಪುಟ್ಟ ಬಾಲೆಯೊಬ್ಬಳು ಇದಕ್ಕೆ ತನ್ನದೇ ಪರಿಕಲ್ಪನೆಯಲ್ಲಿ ಪರಿಹಾರ ಸೂಚಿಸುವ ಮೂಲಕ ಗಮನ ಸೆಳೆದಿದ್ದಾಳೆ.
ಹಾರಂಗಿ ಸಾಕಾನೆ ಶಿಬಿರದಲ್ಲಿ ಆನೆ ಮಾವುತರಾಗಿ ಕರ್ತವ್ಯ ನಿರ್ವಹಿಸುತ್ತಿರುವ ವೆಂಟೇಶ್ ಪುತ್ರಿ ವಿ. ಹರಿಣಿ ಹುಣಸೂರು ತಾಲೂಕು ರತ್ನಾಪುರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ. ತಂದೆಯ ಕೆಲಸವನ್ನು ಹತ್ತಿರದಿಂದ ಗಮನಿಸುತ್ತಾ ಕಾಡು, ಕಾಡುಪ್ರಾಣಿಗಳ ಮೇಲೆ ಪ್ರೀತಿ ಬೆಳೆಸಿಕೊಂಡವಳು. ನಮ್ಮಿಂದ ಪ್ರಾಣಿಗಳಿಗೆ ಯಾವುದೇ ತೊಂದರೆ ಆಗಬಾರದು. ನಮಗೂ ಪ್ರಾಣಿಗಳಿಂದ ಸಮಸ್ಯೆ ಆಗಬಾರದು ಎನ್ನುವ ವಿಷಯದಲ್ಲಿ ನಂಬಿಕೆ ಇಟ್ಟುಕೊಂಡಿರುವ ಈಕೆ ರೂಪಿಸಿರುವ ವಿಜ್ಞಾನ ಮಾದರಿಯೊಂದು ಈಗ ಗಮನ ಸೆಳೆಯುತ್ತಿದೆ.
ನಾಗರಹೊಳೆ ಮೀಸಲು ಅರಣ್ಯ ಸಮೀಪದ ಗಿರಿಜನ ಹಾಡಿಗಳಲ್ಲಿ ಇತ್ತೀಚಿನ ದಿನಗಳಲ್ಲಿ ಆನೆ, ಹುಲಿ, ಕರಡಿ ಸೇರಿದಂತೆ ಕಾಡುಪ್ರಾಣಿಗಳ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದೆ. ಈ ಸಮಸ್ಯೆಗೆ ತಾವಿರುವ ಪರಿಸರದಲ್ಲೇ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಯೋಚಿಸಿದ ಗಿರಿಜನ ಹಾಡಿಯ ವಿದ್ಯಾರ್ಥಿನಿ ಹರಿಣಿ ಕಾಡುಪ್ರಾಣಿಗಳ ಆಗಮನವನ್ನು ಸೈರನ್ ಮೂಲಕ ಗ್ರಾಮಸ್ಥರಿಗೆ ಮುಂಚಿತವಾಗಿ ತಿಳಿಸುವ ವಿನೂತನ ವಿಜ್ಞಾನ ಮಾದರಿಯನ್ನು ರೂಪಿಸಿದ್ದಾಳೆ.
ಹಾರಂಗಿ ಆನೆ ಶಿಬಿರದ ಮಾವುತ ವೆಂಕಟೇಶ್ ಮಗಳಾಗಿರುವುದರಿಂದ ಕಾಡಿನ ಒಡನಾಟ ಹಾಗೂ ವನ್ಯಜೀವಿಗಳ ವರ್ತನೆಯನ್ನು ಸಮೀಪದಿಂದ ಗಮನಿಸುತ್ತಾ ಬಂದಿದ್ದಾಳೆ. ಹಾಗಾಗಿ ಇದೇ ವಿಷಯವನ್ನು ತನ್ನ ಪ್ರಾಜೆಕ್ಟ್ಗೆ ಅಳವಡಿಸಿಕೊಂಡು ಶಾಲೆಯ ವಿಜ್ಞಾನ ಪ್ರಾಜೆಕ್ಟ್ನಲ್ಲಿ ಕಾಡುಪ್ರಾಣಿಗಳ ಆಗಮನವನ್ನು ಮುಂಚಿತವಾಗಿ ಪತ್ತೆ ಹಚ್ಚಿ ಸೈರನ್ ಮೊಳಗಿಸುವ ಅದ್ಭುತ ಮಾದರಿಯನ್ನು ಪ್ರದರ್ಶಿಸಿ ಸೈ ಅನಿಸಿಕೊಂಡಿದ್ದಾಳೆ.
ನಾಗರಹೊಳೆ ಮೀಸಲು ಅರಣ್ಯವನ್ನು ಮಾದರಿಯಾಗಿ ತೆಗೆದುಕೊಂಡು ಹರಿಣಿ ಈಕೆ ತನ್ನ ವಿಜ್ಞಾನ ಪ್ರಾಜೆಕ್ಟ್ ರೂಪಿಸಿದ್ದಾಳೆ. ಕಾಡಿನ ಆಸುಪಾಸಿನ ಗಿರಿಜನ ಹಾಡಿಗಳಿಗೆ ಕಾಡುಪ್ರಾಣಿಗಳು ಪ್ರವೇಶಿಸಿದ ತಕ್ಷಣ ಈ ತಂತ್ರಜ್ಞಾನ ಆಧಾರಿತ ವ್ಯವಸ್ಥೆ ಸೈರನ್ ಮೊಳಗಿಸುತ್ತದೆ. ಸೈರನ್ ಸದ್ದಿನಿಂದಾಗಿ ಗ್ರಾಮಸ್ಥರು ಪ್ರಾಣಿಗಳು ಬರುವ ಮುನ್ನವೇ ಎಚ್ಚೆತ್ತುಕೊಳ್ಳಬಹುದು. ಪ್ರಾಣಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಸೂಕ್ತ ಸಮಯ ಸಿಗುವುದರಿಂದ ಅಮೂಲ್ಯ ಜೀವಗಳನ್ನು ರಕ್ಷಿಸಬಹುದು. ಇತ್ತೀಚಿನ ವರ್ಷಗಳಲ್ಲಿ ತೀವ್ರವಾಗಿ ಕಾಡುತ್ತಿರುವ ಮಾನವ-ವನ್ಯಜೀವಿ ಸಂಘರ್ಷವನ್ನು ತಡೆಗಟ್ಟಲು ಈ ಪ್ರಾಜೆಕ್ಟ್ ಸಹಕಾರಿ ಎನ್ನುತ್ತಾಳೆ ಹರಿಣಿ.
ಕೇವಲ ಪ್ರಾಣಿಗಳಿಂದ ರಕ್ಷಣೆ ಪಡೆಯುವುದಷ್ಟೇ ಅಲ್ಲದೆ, ಈ ಯೋಜನೆಯ ಮೂಲಕ ಹರಿಣಿ ಮತ್ತೊಂದು ಮಹತ್ವದ ಸಂದೇಶವನ್ನು ಸಾರಿದ್ದಾಳೆ. ಕಾಡು ಬೆಳೆಸಿ, ಮರಗಳನ್ನು ಕಡಿಯಬೇಡಿ ಎಂಬ ಪರಿಸರ ಜಾಗೃತಿಯನ್ನು ತನ್ನ ಪ್ರಾಜೆಕ್ಟ್ನ ಭಾಗವಾಗಿ ಆಕೆ ಜನರಿಗೆ ತಲುಪಿಸುವ ಪ್ರಯತ್ನ ಮಾಡಿದ್ದಾಳೆ. ಕಾಡನ್ನು ನಾಶಪಡಿಸದಿದ್ದರೆ ಪ್ರಾಣಿಗಳು ನಾಡಿಗೆ ಬರುವುದಿಲ್ಲ ಎಂಬ ನಗ್ನಸತ್ಯವನ್ನು ಬಾಲಕಿ ನೆನಪಿಸಿದ್ದಾಳೆ.
ಹರಿಣಿಯ ಈ ಸಮಯೋಚಿತ ಹಾಗೂ ವಿನೂತನ ವಿಜ್ಞಾನ ಪ್ರಾಜೆಕ್ಟ್ಗೆ ಇತ್ತೀಚೆಗೆ ನಡೆದ ಶಾಲಾ ವಿಜ್ಞಾನ ಪ್ರದರ್ಶನದಲ್ಲಿ ಪ್ರಥಮ ಬಹುಮಾನ ಲಭಿಸಿದೆ. ಗ್ರಾಮೀಣ ಭಾಗದ, ಅದರಲ್ಲೂ ಮಾವುತನ ಮಗಳೊಬ್ಬಳ ಈ ಅದ್ಭುತ ಪ್ರತಿಭೆ ಹಾಗೂ ಸಾಮಾಜಿಕ ಕಳಕಳಿಗೆ ಶಾಲೆಯ ಶಿಕ್ಷಕರು, ಪೋಷಕರು, ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಾರ್ವಜನಿಕ ವಲಯದಿಂದ ವ್ಯಾಪಕ ಮೆಚ್ಚುಗೆ ಮತ್ತು ಪ್ರಶಂಸೆಗಳು ವ್ಯಕ್ತವಾಗುತ್ತಿವೆ. ಬಾಲಕಿಯ ಈ ಮಾದರಿಯನ್ನು ಸರ್ಕಾರಿ ಮಟ್ಟದಲ್ಲಿ ದೊಡ್ಡ ಮಟ್ಟಕ್ಕೆ ಅಳವಡಿಸಿಕೊಂಡರೆ ಕಾಡಂಚಿನ ಜನರಿಗೆ ವರದಾನವಾಗಲಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯ.
"

ನಾನೊಮ್ಮೆ ಮಗಳನ್ನು ಆನೆ ಮೇಲೆ ಕೂರಿಸಿಕೊಂಡು ಸುತ್ತು ಹಾಕಿಸಿಕೊಂಡು ಬರುವಾಗ ಆನೆ ಸೋಲಾರ್ ತಂತಿ ದಾಟಲು ಹಿಂಜರಿಯುತ್ತಿದ್ದುದ್ದನ್ನು ಗಮನಿಸಿ ಇದು ಯಾಕೆ ಹೀಗೆ ಅಂತ ಆಸಕ್ತಿಯಿಂದ ನನ್ನ ಪ್ರಶ್ನೆಮಾಡಿದ್ದಳು. ನಾನು ಕೊಟ್ಟ ಉತ್ತರ ಅವಳಿಗೆ ತೃಪ್ತಿ ತರಲಿಲ್ಲ. ಆಕೆಯೇ ಬೇರೆ ಕಡೆಗಳಿಂದ ಮಾಹಿತಿ ಕಲೆ ಹಾಕಿ ಕೊನೆಗೆ ಇಂಥದ್ದೊAದು ವಿಜ್ಞಾನ ಮಾದರಿ ರೂಪಿಸಿದ್ದಾಳೆ. ಆಕೆಯ ಆಸಕ್ತಿಯ ಕ್ಷೇತ್ರದಲ್ಲೇ ಮುಂದುವರಿಯಲು ಎಲ್ಲಾ ರೀತಿಯ ಪ್ರೋತ್ಸಾಹ ಕೊಡುತ್ತೇವೆ.

— ವೆಂಕಟೇಶ್, ಆನೆ ಮಾವುತ, ಹಾರಂಗಿ ಸಾಕಾನೆ ಶಿಬಿರ
"

ನನಗೆ ಪ್ರಾಣಿಗಳೆಂದರೆ ತುಂಬಾ ಇಷ್ಟ. ನಮ್ಮಿಂದ ಅವುಗಳಿಗೆ ಯಾವುದೇ ತೊಂದರೆ ಆಗಬಾರದು. ಹಾಗೆಯೇ ಅವುಗಳಿಂದಲೂ ನಮಗೆ ತೊಂದರೆ ಬರಬಾರದು. ಹಾಗಾಗಿ ಈ ಪ್ರಾಜೆಕ್ಟ್ ಮಾಡಿದೆ. ಮರಗಳನ್ನು ಕಡಿಯಬಾರದು. ಕಾಡು ಕೂಡ ಉಳಿಯಬೇಕು. ನಾನು ದೊಡ್ಡವಳಾದ ಮೇಲೆ ಅರಣ್ಯ ಇಲಾಖೆಯಲ್ಲಿ ಹಿರಿಯ ಅಧಿಕಾರಿ ಆಗುವ ಆಸೆ ಇದೆ.

— ವಿ. ಹರಿಣಿ, 6ನೇ ತರಗತಿ ವಿದ್ಯಾರ್ಥಿನಿ

ಈ ವ್ಯವಸ್ಥೆ ಸೆನ್ಸಾರ್‌ಗಳನ್ನು ಅವಲಂಬಿಸಿ ಕೆಲಸ ಮಾಡಲಿದೆ. ನಿರ್ದಿಷ್ಟ ಜಾಗದಲ್ಲಿ ಅಲ್ಲಲ್ಲಿ ಅಳವಡಿಸಿರುವ ಸೆನ್ಸಾರ್‌ಗಳು ಕಾಡುಪ್ರಾಣಿಗಳ ಆಗಮನ ಗುರುತಿಸಿ ಎಚ್ಚರಿಕೆಯ ಸೈರನ್ ಮೊಳಗಿಸುತ್ತದೆ. ಅಥವಾ ವಿದ್ಯುತ್ ದೀಪ ಉರಿದು ಜಾಗೃತಗೊಳಿಸುತ್ತದೆ. ಇದರಿಂದ ಜನರು ಮುನ್ನೆಚ್ಚರಿಕೆ ವಹಿಸಿ ಜೀವಹಾನಿ ಹಾಗೂ ಮಾನವ-ವನ್ಯಜೀವಿ ಸಂಘರ್ಷ ಕಡಿಮೆ ಮಾಡಬಹುದು ಎಂಬ ಪರಿಕಲ್ಪನೆಯಲ್ಲಿ ಹರಿಣಿ ಈ ವಿಜ್ಞಾನ ಮಾದರಿ ರೂಪಿಸಿದ್ದಾಳೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net