ಆಭರಣ ಹಿಂದುರಿಸಿ ಪ್ರಾಮಾಣಿಕತೆ ಮೆರೆದ ಅರ್ಚಕ

ವರ್ಷದ ಹಿಂದೆ ಸಿಕ್ಕಿದ ಆಭರಣವನ್ನು ಹಿಂದುರುಗಿಸಿದ ಪೊನ್ನಂಪೇಟೆ ಬಸವೇಶ್ವರ ದೇವಸ್ಥಾನದ ಅರ್ಚಕ ಪಂಚಾಕ್ಷರಿ.
ವರ್ಷದ ಹಿಂದೆ ಸಿಕ್ಕಿದ ಆಭರಣವನ್ನು ಹಿಂದುರುಗಿಸಿದ ಪೊನ್ನಂಪೇಟೆ ಬಸವೇಶ್ವರ ದೇವಸ್ಥಾನದ ಅರ್ಚಕ ಪಂಚಾಕ್ಷರಿ.
Published on
ಪೊನ್ನಂಪೇಟೆ: ಕಳೆದ ವರ್ಷದ ಮಹಾಶಿವರಾತ್ರಿ ದಿನ ತಮಗೆ ಸಿಕ್ಕಿದ ಚಿನ್ನದ ಬ್ರಾಸ್‌ಲೆಟ್ ಅನ್ನು ಪೊನ್ನಂಪೇಟೆ ಶ್ರೀ ಬಸವೇಶ್ವರ ದೇವಸ್ಥಾನದ ಅರ್ಚಕ ಪಂಚಾಕ್ಷರಿ ಅವರು ಈ ವರ್ಷ ಶಿವರಾತ್ರಿಯ ಮಾರನೇ ದಿನ ಸೋಮವಾರ ಅದರ ಮಾಲೀಕರಿಗೆ ಹಿಂತಿರುಗಿಸಿದ್ದಾರೆ.
ಪೊನ್ನಂಪೇಟೆ ಸಮೀಪದ ಜೋಡುಬೀಟಿ ಗ್ರಾಮದ ಎಚ್.ಬಿ.ಕಮಲಾ ಅವರು ಕಳೆದ ವರ್ಷ ಪೂಜೆಗೆಂದು ದೇವಸ್ಥಾನಕ್ಕೆ ಬಂದಿದ್ದರು. ಆ ಸಂದರ್ಭ ಮಹಿಳೆಯ ಮೊಮ್ಮಗಳ ಕೈಯಲ್ಲಿದ್ದ ಚಿನ್ನದ ಬ್ರಾಸ್‌ಲೆಟ್ ದೇವಸ್ಥಾನದ ಮುಂಭಾಗ ಚಪ್ಪಲಿ ಬಿಡುವ ಸ್ಥಳದಲ್ಲಿ ಕಳೆದುಹೋಗಿತ್ತು.
ಮಹಿಳೆ ದೇವಸ್ಥಾನದಿಂದ ತೆರಳಿ ಸ್ವಲ್ಪ ಸಮಯದ ನಂತರ ಅರ್ಚಕರು ಹೊರಬಂದು ನೋಡಿದಾಗ ಚಪ್ಪಲಿ ಸ್ಟಾಂಡ್ ಬಳಿ ಚಿನ್ನದ ಬ್ರಾಸ್‌ಲೆಟ್ ಕಂಡು, ಅದನ್ನು ತೆಗೆದುಕೊಂಡು ಈ ವಿಷಯವನ್ನು ವಾಟ್ಸ್ ಆ್ಯಪ್ ಗ್ರೂಪ್‌ನಲ್ಲಿ ಹಾಕಿಸಿದ್ದರು. ಆದರೆ ಕಳೆದುಕೊಂಡವರಿಗೆ ಮಾಹಿತಿ ತಿಳಿಯದ ಕಾರಣ ಅದನ್ನು ಪಡೆದುಕೊಂಡಿರಲಿಲ್ಲ.
ಒಂದು ವರ್ಷದ ನಂತರ ಅದೇ ಕಮಲಾ ಅವರು ಮಹಾಶಿವರಾತ್ರಿ ಮಾರನೇ ದಿನ ತಾ. 16 ರಂದು ತನ್ನ ಮೊಮ್ಮಗಳ ಜತೆಗೆ ದೇವಸ್ಥಾನಕ್ಕೆ ಬಂದ ಸಂದರ್ಭ, ಆ ಮಗುವನ್ನು ಗುರುತು ಹಿಡಿದ ಅರ್ಚಕ ಪಂಚಾಕ್ಷರಿ ಅವರು, ಕಳೆದ ವರ್ಷದ ಘಟನೆ ಬಗ್ಗೆ ವಿಚಾರಿಸಿ, ಬ್ರಾಸ್‌ಲೈಟ್ ಬಗ್ಗೆ ವಿವರ ಪಡೆದು, ಅದು ಅವರದೇ ಎಂದು ಖಾತ್ರಿಪಡಿಸಿಕೊಂಡ ನಂತರ ಕಮಲಾ ಅವರಿಗೆ ಹಿಂತಿರುಗಿಸಿದ್ದಾರೆ.
ಕಮಲಾ ಅವರು ಅರ್ಚಕರಿಗೆ ಕೃತಜ್ಞತೆ ಸಲ್ಲಿಸಿ, ದೇವರಿಗೆ ಪೂಜೆ ಸಲ್ಲಿಸಿ ಖುಷಿಯಿಂದ ತನ್ನ ಮೊಮ್ಮಗಳೊಡನೆ ಮನೆಗೆ ತೆರಳಿದ್ದಾರೆ. ಅರ್ಚಕ ಪಂಚಾಕ್ಷರಿ ಅವರ ಪ್ರಾಮಾಣಿಕತೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net