ಕೊಡಗಿನಲ್ಲಿ ಪ್ರೇಮಿಗಳ ದಿನಕ್ಕೆ ಜೋಡಿ ಹಕ್ಕಿಗಳ ಕಲರವ

ಹಾರಂಗಿ ಜಲಾಶಯ ಉದ್ಯಾನದ ಸಂಗೀತ ಕಾರಂಜಿ
ಹಾರಂಗಿ ಜಲಾಶಯ ಉದ್ಯಾನದ ಸಂಗೀತ ಕಾರಂಜಿ
Published on

ಪ್ರಮುಖ ಮುಖ್ಯಾಂಶಗಳು

  • 11 ಪಟ್ಟು ಅಧಿಕ ಪ್ರಮಣದಲ್ಲಿ ಕೊಠಡಿಗಳ ಬುಕ್ಕಿಂಗ್
  • ಆಗ್ರಾ ಮತ್ತು ಜೈಸಲ್ಮೇರ್ ನಂತರದ ಸ್ಥಾನದಲ್ಲಿ ಕೊಡಗು
  • ರಮಣೀಯ ತಾಣಗಳ ಕೊಡಗು ಪ್ರೇಮಿಗಳಿಗೆ ಅಚ್ಚುಮೆಚ್ಚು
ಮಡಿಕೇರಿ:
ಪ್ರೇಮಿಗಳ ದಿನದ ಸಂಭ್ರಮಕ್ಕೆ ಸಾಕ್ಷಿಯಾಗಲು ಗಿರಿಮಲೆಗಳ ನಾಡು ಕೊಡಗು ಸಜ್ಜಾಗಿದೆ. ಫೆ.14 ಈ ಬಾರಿ ವಾರಾಂತ್ಯ ಮತ್ತು 2ನೇ ಶನಿವಾರ ಆಗಿರುವುದರಿಂದ ವೆಲೆಂಟೈನ್ ಡೇ ಆಚರಿಸಲು ಹೆಚ್ಚಿನ ಸಂಖ್ಯೆಯಲ್ಲಿ ಯುವ ಜೋಡಿಗಳು ಜಿಲ್ಲೆಯತ್ತ ಆಗಮಿಸುವ ನಿರೀಕ್ಷೆ ಇದೆ. ಖಾಸಗಿ ಸಂಸ್ಥೆಯೊAದರ ವರದಿ ಪ್ರಕಾರ ಈ ವರ್ಷ ಮಾಮೂಲಿಗಿಂತ ಸುಮಾರು 11 ಪಟ್ಟು ಅಧಿಕ ಪ್ರಮಾಣದಲ್ಲಿ ಕೊಠಡಿಗಳ ಬುಕ್ಕಿಂಗ್ ಇಲ್ಲಿ ಆಗಿದೆ. ಈ ವಿಷಯದಲ್ಲಿ ಆಗ್ರಾ ಮತ್ತು ಜೈಸಲ್ಮೇರ್ ನಂತರದ ಸ್ಥಾನದಲ್ಲಿ ಕೊಡಗು ಇದೆ.
ವರ್ಷಾಂತ್ಯದ ರಜಾ ದಿನಗಳು, ಹೊಸ ವರ್ಷದ ಸ್ವಾಗತದ ನಂತರ ಕೇವಲ ಒಂದು ತಿಂಗಳ ಅವಧಿಯಲ್ಲೇ ಮತ್ತೊಂದು ಪ್ರವಾಸಿ ಸೀಸನ್‌ಗೆ ಕೊಡಗು ಸಿದ್ಧವಾಗುತ್ತಿದೆ. ಪ್ರೇಮಿಗಳ ದಿನವನ್ನು ಸಂಭ್ರಮಿಸಲು ಕರ್ನಾಟಕದ ಕಾಶ್ಮೀರ ಹೆಗ್ಗಳಿಕೆಯ ಕೊಡಗಿನಲ್ಲಿ ದೊಡ್ಡ ಸಂಖ್ಯೆಯಲ್ಲಿ ಪ್ರಣಯ ಪಕ್ಷಿಗಳು ಸೇರಲಿರುವ ಬಗ್ಗೆ ಖಾಸಗಿ ಸಂಸ್ಥೆಯೊAದರ ವರದಿ ಬೆಳಕು ಚೆಲ್ಲಿದೆ. ಫೆ.13ರಿಂದ ಫೆ. 16ತನಕದ ವೆಲೆಂಟೈನ್ ವೀಕೆಂಡ್‌ಗಾಗಿ ಜಿಲ್ಲೆಯಲ್ಲಿ ಸಾಮಾನ್ಯ ದಿನಗಳಿಂದ ದೊಡ್ಡ ಪ್ರಮಾಣದಲ್ಲಿ ಅಂದರೆ ಶೇ.1100ರಷ್ಟು ಹೆಚ್ಚಿಗೆ ರೆಸಾರ್ಟ್, ಹೋಮ್‌ಸ್ಟೇ, ಲಾಡ್ಜ್, ಹೊಟೇಲ್‌ಗಳಲ್ಲಿ ಕೊಠಡಿಗಳ ಬುಕ್ಕಿಂಗ್ ಆಗಿದೆ.
ಪ್ರೇಮದ ಸಂಕೇತ ತಾಜ್‌ಮಹಲ್ ಇರುವ ಆಗ್ರಾದಲ್ಲಿ ಕೊಠಡಿಗಳ ಬುಕ್ಕಿಂಗ್ ಪ್ರಮಾಣ ಶೇ.2000ದಷ್ಟು ಹೆಚ್ಚಳ ಕಂಡು ಬಂದಿದ್ದರೆ ನಂತರದ ಸ್ಥಾನವನ್ನು ಮರುಭೂಮಿಯ ಪ್ರಮುಖ ಪ್ರವಾಸಿ ತಾಣ ಜೈಸಲ್ಮೇರ್ ಪಡೆದುಕೊಂಡಿದ್ದು, ಇಲ್ಲಿ ಶೇ.1400ರಷ್ಟು ಹೆಚ್ಚಿನ ಪ್ರಮಾಣದಷ್ಟು ಕೊಠಡಿಗಳ ಬುಕ್ಕಿಂಗ್‌ನಲ್ಲಿ ಹೆಚ್ಚಳ ಕಂಡುಬAದಿದೆ. ಮೂರನೇ ಸ್ಥಾನದಲ್ಲಿ ಕೊಡಗು ಇದೆ. ನಂತರದ ಸ್ಥಾನಗಳನ್ನು ಪುದುಚೇರಿ, ಗೋವಾ, ಉದಯಪುರ, ಗುಜರಾತ್‌ನ ಕೇವಾಡಿಯಾ, ಬೆಂಗಳೂರು, ಊಟಿ ಪಡೆದುಕೊಂಡಿವೆ.
ವರ್ಷದಿಂದ ವರ್ಷಕ್ಕೆ ಕೊಡಗಿನತ್ತ ಆಗಮಿಸುವ ಪ್ರವಾಸಿಗರ ಸಂಖ್ಯೆ ಏರುತ್ತಲೇ ಇದೆ. ಭಾರತೀಯರು ಇಂಟರ್‌ನೆಟ್‌ನಲ್ಲಿ ಹುಡುಕಾಡುವ ಜಗತ್ತಿನ ಪ್ರಮುಖ ಪ್ರವಾಸಿತಾಣಗಳ ಪೈಕಿ ಕೊಡಗು 7ನೇ ಸ್ಥಾನ ಪಡೆದುಕೊಂಡಿದ್ದು, ಇದೀಗ ಪ್ರೇಮಿಗಳ ದಿನದ ಸಂದರ್ಭದಲ್ಲೂ ಆಕರ್ಷಣೆ ಹೆಚ್ಚಿಸಿಕೊಂಡಿದೆ. ಯುವ ಜೋಡಿಗಳ ಏಕಾಂತಕ್ಕೆ ಅವಕಾಶ ಮಾಡಿ ಕೊಡುವುದರ ಜತೆಗೆ ಸವಿನೆನಪುಗಳೊಂದಿಗೆ ಮರಳುವಂತೆ ಮಾಡುವ ಸಾಕಷ್ಟು ರಮಣೀಯ ತಾಣಗಳು ಇಲ್ಲಿದ್ದು, ಮೈ-ಮನಕ್ಕೆ ಮುದ ನೀಡುವ ತಣ್ಣನೆಯ ವಾತಾವರಣ, ಹಸಿರು ಹೊದ್ದ ಬೆಟ್ಟಗುಡ್ಡಗಳು, ಕಚಗುಳಿ ಇಡುವ ಮಂಜು ಜೋಡಿ ಹಕ್ಕಿಗಳಿಗೆ ರೋಮ್ಯಾಂಟಿಕ್ ಸನ್ನಿವೇಶ ಸೃಷ್ಟಿಸುವುದರಿಂದ ಇತ್ತ ಕಡೆ ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿತರಾಗುತ್ತಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಪ್ರೇಮಿಗಳ ಪಾಲಿಗೆ ಮಡಿಕೇರಿಯ ರಾಜಾಸೀಟ್ ಹಾಟ್‌ಸ್ಪಾಟ್ ಅನ್ನಿಸಿಕೊಂಡಿದ್ದು ಸಂಜೆಯ ಸೂರ್ಯೋದಯದ ವೇಳೆ ಆಕಾಶ ನಸುಗೆಂಪುಬಣ್ಣಕ್ಕೆ ತಿರುಗುತ್ತಿದ್ದಂತೆಯೇ ಬದಲಾಗುವ ಪ್ರಕÊತಿ ಚಿತ್ರಣ, ಚುಮುಚುಮು ಚಳಿ, ಗೂಡು ಸೇರುವ ತವಕದಲ್ಲಿ ಪಕ್ಷಿಗಳ ಚಿಲಿಪಿಲಿ ಕಲರವ ಪ್ರೇಮಿಗಳ ಮನಸ್ಸಿಗೆ ಮುದ ನೀಡುವ ವಾತಾವರಣ ಕಲ್ಪಿಸಿಕೊಡುತ್ತದೆ.
ಕುಶಾಲನಗರದ ಕಾವೇರಿ ನಿಸರ್ಗಧಾಮ ನೆಲಕ್ಕೆ ಬಿಸಿಲು ಮುಟ್ಟದಷ್ಟು ದಟ್ಟವಾಗಿರುವ ಇಲ್ಲಿನ ನೈಸರ್ಗಿಕ ಬಿದಿರು ಮೆಳೆಗಳು, ದ್ವೀಪದ ಸುತ್ತಲೂ ಝುಳು, ಝುಳು ಸದ್ದು ಮಾಡುತ್ತಾ ಗಂಭೀರವಾಗಿ ಹರಿಯುವ ಕಾವೇರಿ ನದಿ, ಕೈಚಾಚಿದರೆ ಬಂದು ಮುತ್ತಿಟ್ಟು ಕಚಗುಳಿ ನೀಡುವ ಜಿಂಕೆವನದ ಜಿಂಕೆಗಳು, ತೂಗು ಸೇತುವೆ ಕೆಳಗೆ ಸ್ವಚ್ಛಂದವಾಗಿ ಈಜಾಡುತ್ತಾ ತುಂಟಾಟದ ಮೂಲಕ ಗಮನ ಸೆಳೆಯುವ ಮಹಿಷೀರ್ ಮೀನುಗಳು ಪ್ರೇಮಿಗಳ ದಿನದ ನೆನಪನ್ನು ಹಚ್ಚಹಸಿರಾಗಿಸುತ್ತದೆ. ಇಬ್ಬಿಬ್ಬರೇ ಪೆಡಲ್ ದೋಣಿಯಲ್ಲಿ ಕುಳಿತು ಮನದ ಮಾತುಗಳನ್ನಾಡುತ್ತಾ ನದಿ ತುಂಬಾ ದೋಣಿ ಪೆಡಲ್ ಮಾಡುತ್ತಾ ಇಷ್ಟಬಂದಷ್ಟು ಕಾಲ ನದಿ ಮಧ್ಯೆ ಕಳೆಯುವ ಅವಕಾಶವೂ ಇಲ್ಲಿದೆ.
ನಾಪೋಕ್ಲು ಬಳಿಯ ಚೇಲಾವರ ಫಾಲ್ಸ್, ಮಡಿಕೇರಿಯ ಅಬ್ಬಿಫಾಲ್ಸ್, ಸೋಮವಾರಪೇಟೆ ಬಳಿಯ ಮಲ್ಲಳ್ಳಿ ಫಾಲ್ಸ್, ಕೋಟೆ ಅಬ್ಬಿ, ಬೈಕ್‌ನಲ್ಲಿ ಸುತ್ತಾಡುತ್ತಾಲೇ ಎಂಜಾಯ್ ಮಾಡಬೇಕು ಅಂತಿರುವವರು ಇಷ್ಟ ಪಟ್ಟು ತೆರಳುವ ಮಾಂದಲಪಟ್ಟಿ, ಕುಶಾಲನಗರ ಸಮೀಪದ ಹಾರಂಗಿ ಜಲಾಶಯದ ಉದ್ಯಾನ, ದುಬಾರೆಯ ಆನೆ ಕ್ಯಾಂಪ್, ಚಿಕ್ಲಿಹೊಳೆ ಜಲಾಶಯದ ಸುಂದರ ಏಕಾಂತ ಪ್ರದೇಶ, ಹಾರಂಗಿ ಹಿನ್ನೀರಿನ ಹೇರೂರು... ಹೀಗೆ ಸಾಕಷ್ಟು ಸ್ಥಳಗಳು ಪ್ರೇಮಿಗಳನ್ನು ಆಕರ್ಷಿಸುವುದರಿಂದ ಪ್ರೇಮಿಗಳ ದಿನಕ್ಕೆ ಕೊಡಗು ರಂಗೇರುವAತಾಗಿದೆ.
"

ಪರೀಕ್ಷೆ ಮತ್ತಿತರ ಕಾರಣಗಳಿಂದ ಫೆಬ್ರವರಿ, ಮಾಚ್ ಹಾಗೂ ಏಪ್ರಿಲ್ 15ರ ತನಕ ಪ್ರವಾಸೋದ್ಯಮದ ಆಫ್‌ಸೀಸನ್ ಆಗಿರುತ್ತದೆ. ಮಳೆಗಾಲದಲ್ಲೂ ಸಾಧಾರಣ ವ್ಯವಹಾರ ಇರುತ್ತದೆ. ಶಾಲಾ ಮಕ್ಕಳ ಪ್ರವಾಸ, ಕಂಪೆನಿಗಳ ಗ್ರೂಪ್ ಪ್ರವಾಸ ಇರುತ್ತದೆ. ಆದರೆ ಈ ಬಾರಿ ವೆಲಂಟೈನ್ ಡೇ ಆಗಿರುವ ಫೆ. 14 ಕಾಕತಾಳಿಯ ಎಂಬAತೆ ಎರಡನೇ ಶನಿವಾರ ಮತ್ತು ವೀಕೆಂಡ್ ಆಗಿರುವುದರಿಂದ ಸ್ವಲ್ಪ ಹೆಚ್ಚಿನ ಹೈಪ್ ನಿರ್ಮಾಣ ಆದಂತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net