ಗುಂಡೂರಾವ್ ನೆನಪಿಗೆ ಶಾಶ್ವತ ರೂಪ

ಕುಶಾಲನಗರ ಪುರಸಭೆ ಕಚೇರಿ
ಕುಶಾಲನಗರ ಪುರಸಭೆ ಕಚೇರಿ
Published on
ಮಡಿಕೇರಿ
ಮಾಜಿ ಮುಖ್ಯಮಂತ್ರಿ ಆರ್. ಗುಂಡೂರಾವ್ ಹುಟ್ಟೂರು ಕುಶಾಲನಗರದಲ್ಲಿ ಅವರ ಪ್ರತಿಮೆ ಸ್ಥಾಪನೆಗೆ ಕೊನೆಗೂ ಕಾಲ ಕೂಡಿ ಬಂದಿದೆ. 4 ದಶಕಗಳ ಹಿಂದೆಯೇ ತವರು ನೆಲಕ್ಕೆ ದೂರದೃಷ್ಟಿಯ ಅನೇಕ ಯೋಜನೆಗಳನ್ನು ಕೊಟ್ಟಿರುವ ಹೆಗ್ಗಳಿಕೆ ಗುಂಡೂರಾಯರದ್ದು. ಆದರೆ ಅವರನ್ನು ಸ್ಮರಣೀಯವಾಗಿಸುವ ಯಾವುದೇ ಮಹತ್ವದ ಹೆಗ್ಗುರುತು ಇಲ್ಲಿ ಇಲ್ಲದೇ ಇರುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿತ್ತು. ಇದೀಗ ಆ ಕೊರತೆ ತುಂಬಲು ಎನ್ನುವಂತೆ ರಾಯರ ಪುಣ್ಯಸ್ಮರಣೆ ದಿನದಂದು ಪ್ರತಿಮೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲು ಸಿದ್ಧತೆ ನಡೆದಿದೆ.
ಕೊಡಗಿನ ಕುಶಾಲನಗರದವರಾದ ಮಾಜಿ ಮುಖ್ಯಮಂತ್ರಿ ಆರ್. ಗುಂಡೂರಾವ್ ತಳಮಟ್ಟದ ರಾಜಕೀಯದಿಂದ ಬೆಳೆದು ಬಂದವರು. ರಾಜಕೀಯಕ್ಕೆ ಬರುವ ಮೊದಲು ಪತ್ರಿಕಾ ವಿತರಕ, ಪತ್ರಕರ್ತರೂ ಆಗಿದ್ದರು. ಹುಟ್ಟೂರು ಕುಶಾಲನಗರದ ಪಂಚಾಯಿತಿ ಅಧ್ಯಕ್ಷರಾಗುವ ಮೂಲಕ ರಾಜಕೀಯ ಜೀವನ ಆರಂಭಿಸಿದ ಅವರು ಅಂದಿನ ಸೋಮವಾರಪೇಟೆ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ ಆಗಿ ವಿಧಾನಸಭೆಯನ್ನೂ ಪ್ರವೇಶಿಸಿದರು. 1980ರಲ್ಲಿ ತಮ್ಮ 43ನೇ ವಯಸ್ಸಿನಲ್ಲಿ ಮುಖ್ಯಮಂತ್ರಿ ಆಗುವ ಮೂಲಕ ರಾಜ್ಯದ ಅತ್ಯಂತ ಕಿರಿಯ ವಯಸ್ಸಿನ ಮುಖ್ಯಮಂತ್ರಿ ಎನ್ನುವ ದಾಖಲೆ ಬರೆದರು.
ಆಗಿನ ಪುಟ್ಟ ಗ್ರಾಮ ಕುಶಾಲನಗರದ ಪಂಚಾಯಿತಿ ಅಧ್ಯಕ್ಷ ಹುದ್ದೆಯಿಂದ ಮುಖ್ಯಮಂತ್ರಿ ಹುದ್ದೆ ತನಕ ತಲುಪಿದ ಗುಂಡೂರಾಯರಿಗೆ ತಮ್ಮ ಹುಟ್ಟೂರಿನ ಅಭಿವೃದ್ಧಿ ಬಗ್ಗೆ ಸ್ಪಷ್ಟ ಪರಿಕಲ್ಪನೆ ಇತ್ತು. ಹಾಗಾಗಿ ಅಂದು ಹೋಬಳಿ ಕೇಂದ್ರವಾಗಿದ್ದ ಕುಶಾಲನಗರಕ್ಕೆ ತಾಲೂಕು ಕೇಂದ್ರದಲ್ಲಿ ಇರಬೇಕಾಗಿದ್ದ ಯೋಜನೆಗಳನ್ನೆಲ್ಲಾ ಕೊಡುಗೆಯಾಗಿ ನೀಡಿದರು. ಆಡಳಿತಾತ್ಮಕವಾಗಿ ಕೊಡಗು ಜಿಲ್ಲೆಯಲ್ಲಿರುವ ಕುಶಾಲನಗರ ಭೌಗೋಳಿಕವಾಗಿ ಪಕ್ಕದ ಹಾಸನ ಮತ್ತು ಮೈಸೂರು ಜಿಲ್ಲೆಗಳ ವಾತಾವರಣ ಹೊಂದಿರುವುದರಿAದ ಬೆಳವಣಿಗೆಗೆ ಉತ್ತಮ ಅವಕಾಶ ಇದೆ ಎನ್ನುವ ದೂರದೃಷ್ಟಿ ಅವರಲ್ಲಿತ್ತು.
ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಕಷ್ಟಸಾಧ್ಯ ಎನ್ನುವ ಕೈಗಾರಿಕಾ ಪ್ರದೇಶವನ್ನು ಕೂಡ್ಲೂರುವಿನಲ್ಲಿ ಸ್ಥಾಪಿಸುವ ಮೂಲಕ ಕುಶಾಲನಗರದ ಅಭಿವೃದ್ಧಿಗೆ ಅಡಿಪಾಯ ಹಾಕಿದ ಗುಂಡೂರಾಯರು ತಮ್ಮ ಹುಟ್ಟೂರಿನಲ್ಲಿ ಡಿವೈಎಸ್‌ಪಿ ಕಚೇರಿ, ಪಾಲಿಟೆಕ್ನಿಕ್ ಕಾಲೇಜು, ಪ್ರಥಮ ದರ್ಜೆ ಕಾಲೇಜು, ಕೃಷಿ, ರೇಷ್ಮೆ ಇಲಾಖೆ, ಡಯಟ್ ಸಂಸ್ಥೆ, ಕೂಡಿಗೆ ಕ್ರೀಡಾ ವಸತಿ ಶಾಲೆ, ಅಗ್ನಿಶಾಮಕ ಠಾಣೆ ಸೇರಿದಂತೆ ವಿವಿಧ ಇಲಾಖೆಗಳನ್ನು ಸ್ಥಾಪಿಸುವುದರ ಜತೆಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿದರು. ಕುಶಾಲನಗರಕ್ಕೆ ಕುಡಿಯುವ ನೀರಿನ ಸರಬರಾಜು ಜವಾಬ್ದಾರಿ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಒಪ್ಪಿಸಲಾಯಿತು.
ಹೀಗೆ ತಮ್ಮ ಹುಟ್ಟೂರಿನ ಬೆಳವಣಿಗೆಯ ಸ್ಪಷ್ಟ ದೂರದೃಷ್ಟಿ ಹೊಂದಿದ್ದ ಗುಂಡೂರಾಯರು ಅದಕ್ಕೆ ಬೇಕಿರುವ ಸೂಕ್ತ ಅಡಿಪಾಯವನ್ನು ಅವರ ಅಧಿಕಾರಾವಧಿಯಲ್ಲಿ ಹಾಕಿಕೊಟ್ಟಿದ್ದರ ಫಲವಾಗಿ ಕುಶಾಲನಗರ ಇಂದು ಕೊಡಗಿನಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾಗುವುದರ ಜತೆಗೆ ಪ್ರಮುಖ ವಾಣಿಜ್ಯ ಕೇಂದ್ರವಾಗಿಯೂ ಪ್ರವರ್ಧಮಾನಕ್ಕೆ ಬರುವಂತಾಯಿತು. ಸೋಮವಾರಪೇಟೆಯಿಂದ ಪ್ರತ್ಯೇಕಗೊಂಡು ಕುಶಾಲನಗರ ಕಾವೇರಿ ತಾಲೂಕು ರಚನೆ ಅವರ ಕನಸಾಗಿತ್ತು. ಅದು ಕೂಡ ಈಗ ಈಡೇರಿದ್ದು ಕುಶಾಲನಗರ ಜಿಲ್ಲೆಯ 5ನೇ ತಾಲೂಕಾಗಿ ಗುರುತಿಸಿಕೊಂಡಿದೆ.
ಕುಶಾಲನಗರ ಮತ್ತು ಕೊಡಗಿಗೆ ತಮ್ಮದೇ ಆದ ಸಾಕಷ್ಟು ಕೊಡುಗೆಗಳನ್ನು ನೀಡುವ ಮೂಲಕ ನಿಜಾರ್ಥದಲ್ಲಿ ಅಭಿವೃದ್ಧಿಯ ಹರಿಕಾರನಾಗಿ ಗುರುತಿಸಿಕೊಂಡಿದ್ದ ಆರ್. ಗುಂಡೂರಾವ್ ಅವರನ್ನು ಸ್ಮರಣೀಯವಾಗಿಸುವ ಯಾವುದೇ ಯೋಜನೆಗಳು ಇಲ್ಲದಿರುವ ಕೊರತೆ ಅವರ ಅಭಿಮಾನಿಗಳನ್ನು ಕಾಡುತ್ತಿತ್ತು. ಕುಶಾಲನಗರದ ಪ್ರಮುಖ ಭಾಗದಲ್ಲಿ ಗುಂಡೂರಾಯರ ಪ್ರತಿಮೆ ಸ್ಥಾಪಿಸುವಂತೆ ಬಹಳ ಹಿಂದಿನಿAದಲೂ ಒತ್ತಾಯ ಕೇಳಿಬರುತ್ತಿತ್ತು. ಅವರ ಜನ್ಮದಿನಾಚರಣೆ, ಪುಣ್ಯಸ್ಮರಣೆ ಕಾರ್ಯಕ್ರಮದ ಸಂದರ್ಭ ಇದೇ ವಿಷಯ ಪ್ರಮುಖವಾಗಿ ಚರ್ಚೆ ಆಗುತ್ತಿತ್ತು.
ಗುಂಡೂರಾವ್ ಅಭಿಮಾನಿಗಳ ಆಸೆ ಈಡೇರಿಕೆಗೆ ಇದೀಗ ಕೊನೆಗೂ ಕಾಲ ಕೂಡಿ ಬಂದಿದೆ. ನಗರದ ಸಂಘ ಸಂಸ್ಥೆಗಳು, ವಿವಿಧ ಸಂಘಟನೆಗಳು, ರಾಜಕೀಯ ಪ್ರಮುಖರ ಜತೆಗೆ ಕೆಲವು ಸುತ್ತಿನ ಚರ್ಚೆ, ಅಭಿಪ್ರಾಯ ಸಂಗ್ರಹದ ನಂತರ ಕುಶಾಲನಗರ ಪುರಸಭೆ ಆವರಣದಲ್ಲೇ ಆರ್. ಗುಂಡೂರಾವ್ ಅವರ ಪ್ರತಿಮೆ ಸ್ಥಾಪಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಪ್ರತಿಮೆ ನಿರ್ಮಾಣ ಕಾರ್ಯಕ್ಕೆ ರಾಯರ ಪುಣ್ಯಸ್ಮರಣೆ ದಿನವಾದ ಆ.22ರಂದೇ ಭೂಮಿ ಪೂಜೆ ನೆರವೇರಿಸಲು ತೀರ್ಮಾನಿಸಲಾಗಿದೆ. ಸುಮಾರು 17.60 ಲಕ್ಷ ರೂ. ವೆಚ್ಚದಲ್ಲಿ 6.5 ಅಡಿ ಎತ್ತರ ಕಂಚಿನ ಪ್ರತಿಮೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ.
"

ಆರ್. ಗುಂಡೂರಾವ್ 1960ರಲ್ಲಿ ಕುಶಾಲನಗರ ಪಂಚಾಯಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ನಂತರ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು. ಡಿವೈಎಸ್‌ಪಿ ಕಚೇರಿ, ಪಾಲಿಟೆಕ್ನಿಕ್ ಕಾಲೇಜು, ಪ್ರಥಮ ದರ್ಜೆ ಕಾಲೇಜು, ಕೃಷಿ, ರೇಷ್ಮೆ ಇಲಾಖೆ, ಡಯಟ್ ಸಂಸ್ಥೆ, ಕೂಡ್ಲೂರು ಕೈಗಾರಿಕಾ ಬಡಾವಣೆ ಆರಂಭ, ಕೂಡಿಗೆ ಕ್ರೀಡಾ ವಸತಿ ಶಾಲೆ, ಸೇರಿದಂತೆ ವಿವಿಧ ಇಲಾಖೆಗಳ ಸ್ಥಾಪನೆ ಮೂಲಕ ಅಭಿವೃದ್ಧಿ ಹರಿಕಾರ ಎನಿಸಿಕೊಂಡರು. ಕುಶಾಲನಗರದಲ್ಲಿ ಅವರ ಪ್ರತಿಮೆ ನಿರ್ಮಾಣ ಕಾರ್ಯ ಶ್ಲಾಘನೀಯ.

— ಎಂ.ಎಚ್. ಫಜಲುಲ್ಲಾ, ಗುಂಡೂರಾವ್ ಅವರ ಆಪ್ತ ಸಹಾಯಕ ಆಗಿದ್ದವರು
"

ರಾಜ್ಯದ ಮುಖ್ಯಮಂತ್ರಿಯಾಗಿದ್ದ ಆರ್. ಗುಂಡೂರಾಯರು ಕುಶಾಲನಗರ ಮಾತ್ರವಲ್ಲದೆ ಇಡೀ ರಾಜ್ಯಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಕುಶಾಲನಗರದ ಬೆಳವಣಿಗೆ ಹಿಂದೆ ಅವರ ಶ್ರಮನ್ನು ಗುರುತಿಸಬೇಕಾಗುತ್ತದೆ. ಹಾಗಾಗಿ ಗುಂಡೂರಾಯರ ಸ್ಮರಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಅವರ ಸ್ಮರಣೆಗಾಗಿ ಪುರಸಭೆಯ ಆವರಣದಲ್ಲಿ ಪ್ರತಿಮೆ ನಿರ್ಮಿಸಲು ಉದ್ದೇಶಿಸಿರುವುದು ಒಳ್ಳೆಯ ವಿಚಾರ. ಆಗಸ್ಟ್ ತಿಂಗಳಲ್ಲಿ ಪುತ್ಥಳಿ ನಿರ್ಮಾಣಕ್ಕೆ ಭೂಮಿಪೂಜೆ ಹಮ್ಮಿಕೊಳ್ಳಲಾಗುವುದು.

— ಡಾ. ಮಂತರ್ ಗೌಡ, ಮಡಿಕೇರಿ ಶಾಸಕ
"

ಮಾಜಿ ಮುಖ್ಯಮಂತ್ರಿ ಆರ್. ಗುಂಡೂರಾವ್ ಪರಿಶ್ರಮದ ಫಲವಾಗಿ ಕುಶಾಲನಗರ ಅಭಿವೃದ್ಧಿಯ ನಾಗಾಲೋಟದಲ್ಲಿ ಬೆಳೆಯಲು ಸಾಧ್ಯವಾಯಿತು. ಕಳೆದ 4 ದಶಕಗಳ ಹಿಂದೆಯೇ ಮುಂದಿನ 40 ವರ್ಷಗಳ ದೂರದೃಷ್ಟಿ ಹೊಂದುವ ಮೂಲಕ ಸಾಕಷ್ಟು ಅಭಿವೃದ್ಧಿ ಕಾರ್ಯ ಆರಂಭಿಸಿದ ಗುಂಡೂರಾವ್ ಅವರನ್ನು ಊರು ನಿತ್ಯವೂ ಸ್ಮರಿಸುವಂತಾಗಬೇಕು. ಪ್ರತಿಮೆ ನಿರ್ಮಾಣ ಕಾರ್ಯಕ್ಕೆ ಈಗ ಉನ್ನತ ಸ್ಥಾನಮಾನ ಹೊಂದಿರುವ ಅವರ ಶಿಷ್ಯರೂ ಅಗತ್ಯ ಸಹಕಾರ ನೀಡುವುದರಲ್ಲಿ ಸಂಶಯವಿಲ್ಲ.

— ವಿ.ಪಿ. ಶಶಿಧರ್, ಅಧ್ಯಕ್ಷ, ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net