ಅನ್ಯೋನ್ಯತೆಗೆ ಹೊನ್ನೇಕೊಪ್ಪಲು ಮಾದರಿ

ಹೊನ್ನೇಕೊಪ್ಪಲು ಗ್ರಾಮದ ರಸ್ತೆ ಹಾಳಾಗಿರುವುದು.
ಹೊನ್ನೇಕೊಪ್ಪಲು ಗ್ರಾಮದ ರಸ್ತೆ ಹಾಳಾಗಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಎಲ್ಲ ಸಮುದಾಯದ ಜನರು ನೆಲೆಸಿರುವ ಗ್ರಾಮ
  • ಅಭಿವೃದ್ಧಿಯಲ್ಲಿ ಹಿಂದುಳಿದ ಕಾಡಂಚಿನ ಹಳ್ಳಿ
ಶನಿವಾರಸಂತೆ: ಎತ್ತಿನ ಗಾಡಿ ಚಕ್ರ ಸೇರಿದಂತೆ ಇನ್ನಿತರ ಪೀಠೋಪಕರಣ ತಯಾರಿಕೆಗೆ ಬೇಕಾದ ಕಾಡು ಜಾತಿಯ ಹೊನ್ನೇ ಮರ ಈ ಗ್ರಾಮದಲ್ಲಿ ಯಥೇಚ್ಛವಾಗಿ ಸಿಗುತ್ತಿದ್ದರಿಂದ ಈ ಹಳ್ಳಿ ನಂತರ ಹೊನ್ನೇಕೊಪ್ಪಲು ಗ್ರಾಮವಾಗಿ ಮರ್ಪಟ್ಟಿದೆ.
ಎಲ್ಲ ಸಮುದಾಯದ ಜನರು ನೆಲೆಸಿರುವ ಹಳ್ಳಿಯಲ್ಲಿ ಇಂದಿಗೂ ಅನ್ಯೋನ್ಯತೆಯಿಂದ ಜೀವನ ಸಾಗಿಸುತ್ತಿರುವುದು ಇಲ್ಲಿನ ವಿಶೇಷವಾಗಿದೆ. ಹೆಚ್ಚು ಕೂಲಿ ಕಾರ್ಮಿಕರೇ ವಾಸವಾಗಿದ್ದು, ಹಲವು ಮೂಲಸೌಕರ್ಯಗಳಿಂದ ವಂಚಿತವಾಗಿದೆ.
ಹೊಸಗುತ್ತಿ, ಮುಳ್ಳೂರು ಸಂಪರ್ಕ ಕಲ್ಪಿಸುವ ಒಳ ರಸ್ತೆ ಇನ್ನೂ ಅಭಿವೃದ್ಧಿಯಾಗಿಲ್ಲ. ಜನಪ್ರತಿನಿಧಿಗಳು ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಇಂದಿಗೂ ಗ್ರಾಮ ಹಿಂದುಳಿದಿದೆ.
ಚರಂಡಿ, ರಸ್ತೆ ಯಾವುದು ಸರಿಯಾಗಿ ಇಲ್ಲ. ಸಮಸ್ಯೆಗಳನ್ನು ಹೊತ್ತು ಮಲಗಿರುವ ಗ್ರಾಮದಲ್ಲಿ ಗ್ರಾಮ ಪಂಚಾಯಿತಿಗೆ ಆಯ್ಕೆಯಾಗಿರುವ ಜನಪ್ರತಿನಿಧಿಗಳೂ ಕನಿಷ್ಠ ಸೌಲಭ್ಯ ದೊರಕಿಸಿಕೊಡಲು ಸಾಧ್ಯವಾಗುತ್ತಿಲ್ಲ, ಮನೆ ನಿರ್ಮಾಣಕ್ಕೆ ಗ್ರಾಮದ ಅನೇಕರಿಗೆ ಹಕ್ಕುಪತ್ರ ಇಲ್ಲ. ಹೀಗಾಗಿ ಸರ್ಕಾರದ ಮನೆ ಪಡೆಯಲು ಸಾಧ್ಯವಾಗುತ್ತಿಲ್ಲ.
ಕಾಡಂಚಿನಲ್ಲಿರುವ ಗ್ರಾಮವಾಗಿರುವುದರಿಂದ ಪ್ರತಿವರ್ಷ ಕಾಡು ಪ್ರಾಣಿಗಳ ಹಾವಳಿ ತಪ್ಪಿದ್ದಲ್ಲ. ಮಳೆಗಾಲದಲ್ಲಿ ರಸ್ತೆ ಕೆರೆಯಂತಾಗಿರುತ್ತದೆ. 40ಕ್ಕೂ ಹೆಚ್ಚು ಮನೆಗಳು ಇದೆ. ಗ್ರಾಮದ ಒಂದು ಬದಿ ನಿಡ್ತ ಹಾಗೂ ಇನ್ನೊಂದು ಬದಿ ಆಲೂರು ಸಿದ್ದಾಪುರ ಗ್ರಾಮ ಪಂಚಾಯಿತಿಗೆ ಸೇರಿದೆ. ಗ್ರಾಮದ ಕೆಲವರು ಕೃಷಿ ಚಟುವಟಿಕೆ ಮಾಡುತ್ತಾರೆ. ಬಸ್ ಸೌಲಭ್ಯ ಇಲ್ಲದಿರುವುದರಿಂದ ಬಾಡಿಗೆ ವಾಹನಗಳನ್ನೇ ಅವಲಂಬಿಸಿದ್ದಾರೆ. ಕೃಷಿ ಸಲಕರಣೆಯನ್ನು ಪಟ್ಟಣದಿಂದ ತರಲು ನಿಗದಿಗಿಂತ ಹೆಚ್ಚು ಬಾಡಿಗೆ ನೀಡಬೇಕಾದ ಪರಿಸ್ಥಿತಿಯೂ ಇದೆ. ಅಂಗನವಾಡಿ ಕೇಂದ್ರ ಮಾತ್ರ ಇಲ್ಲಿದೆ. ಪ್ರಾಥಮಿಕ ಶಾಲೆ ಶಿಕ್ಷಣಕ್ಕೆ ಮುಳ್ಳೂರು, ಪ್ರೌಢಶಾಲೆ ಶಿಕ್ಷಣಕ್ಕೆ ನಿಡ್ತ, ಪದವಿ ಪೂರ್ವ ಕಾಲೇಜು ಶಿಕ್ಷಣಕ್ಕೆ ಸೋಮವಾರಪೇಟೆ, ಶನಿವಾರಸಂತೆ, ಕುಶಾಲನಗರಕ್ಕೆ ತೆರಳಬೇಕಾಗಿದೆ.
ಕಾಫಿ ತೋಟ, ಗಾರೆ ಕೆಲಸ, ಕೃಷಿ ಸೇರಿದಂತೆ ಖಾಸಗಿ ಕೆಲಸಗಳನ್ನು ಮಾಡುವ ಕೂಲಿ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.
ಬಸವೇಶ್ವರ ದೇಗುಲದಲ್ಲಿ ಕಾರ್ತಿಕ ಪೂಜೆ
ನಿತ್ಯಪೂಜೆ ಸಲ್ಲಿಸಲು ಗ್ರಾಮಸ್ಥರು ಸೇರಿ ಶ್ರೀ ಬಸವೇಶ್ವರ ದೇವಾಲಯ ನಿರ್ಮಿಸಿಕೊಂಡಿದ್ದಾರೆ. ಎಲ್ಲ ಜಾತಿಯವರು ಸೇರಿ ಹಬ್ಬಗಳನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಕಾರ್ತಿಕ ಪೂಜೆ ಅದ್ದೂರಿಯಾಗಿ ಜರುಗಲಿದೆ. ದೇವರ ಉತ್ಸವಗಳನ್ನು ಗ್ರಾಮಸ್ಥರು ಸೇರಿ ಆಚರಿಸುತ್ತಾರೆ.
ಅಭಿವೃದ್ಧಿ ಮರೀಚಿಕೆ
ಗ್ರಾಮ ಹೆಚ್ಚಿನ ಅಭಿವೃದ್ಧಿ ಕಂಡಿಲ್ಲ. ಕೆಲ ರಸ್ತೆಗಳು ಇನ್ನೂ ಡಾಂಬರನ್ನೇ ಕಂಡಿಲ್ಲ. ಗ್ರಾಮದಲ್ಲಿ ಸಮುದಾಯ ಭವನ ಇಲ್ಲ. ಈ ಗ್ರಾಮ ಹೊಸಗುತ್ತಿ, ಮುಳ್ಳೂರು ಸಂಪರ್ಕ ಕಲ್ಪಿಸುವ ರಸ್ತೆಯಾಗಿರುವುದರಿಂದ ಸರ್ಕಾರಿ ಬಸ್ ಈ ರಸ್ತೆಯಲ್ಲಿ ಸಂಚರಿಸುವ ವ್ಯವಸ್ತೆ ಮಾಡಬೇಕಾಗಿದೆ. ಅನೇಕರಿಗೆ ಮನೆಗಳ ಹಕ್ಕುಪತ್ರ ನೀಡಿಲ್ಲ.
ಒಳಚರಂಡಿ ಇಲ್ಲದೆ ಮಳೆ ನೀರು ರಸ್ತೆಯಲ್ಲೇ ಹರಿಯುತ್ತದೆ. ಶಾಲಾ ಮಕ್ಕಳ ಪರಿಸ್ಥಿತಿ ಹೇಳತೀರದು. ಮಳೆಗಾಲದಲ್ಲಿ ಶಾಲಾ, ಕಾಲೇಜುಗಳಿಗೆ ಮಕ್ಕಳು ಬಸ್‌ಗಾಗಿ ನಿತ್ಯ 2 ಕಿ.ಮೀ. ಕಾಲ್ನಡಿಗೆಯಲ್ಲಿ ನಡೆದುಕೊಂಡು ಮುಳ್ಳೂರು ಗ್ರಾಮಕ್ಕೆ ತೆರಳಬೇಕಿದೆ.
ಕಾಡಂಚಿನ ಗ್ರಾಮವಾಗಿರುವುದರಿಂದ ಕಾಡು ಪ್ರಾಣಿಗಳು ಹಾವಳಿಯೂ ಇದೆ. ಮೃಗಗಳ ತಡೆಗೆ ಕ್ರಮ ಕೈಗೊಳ್ಳಬೇಕಾಗಿದೆ. ಈ ಹಿಂದೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಗ್ರಾಮಸ್ಥರು.
ಹೊನ್ನೇಕೊಪ್ಪಲು ಗ್ರಾಮ ನಿಡ್ತ ಹಾಗೂ ಆಲೂರು ಸಿದ್ದಾಪುರ ಗ್ರಾಮ ಪಂಚಾಯಿತಿಗೆ ಒಳಪಟ್ಟಿದ್ದರೂ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ. ರಸ್ತೆ, ಚರಂಡಿ ಇನ್ನೂ ಆಗಿಲ್ಲ. ನಿತ್ಯ ಅನೇಕ ವಿದ್ಯಾರ್ಥಿಗಳು ಶನಿವಾರಸಂತೆ, ಸೋಮವಾರಪೇಟೆ ಸೇರಿದಂತೆ ಇನ್ನಿತರ ಭಾಗಕ್ಕೆ ಶಿಕ್ಷಣ ಪಡೆಯಲು ತೆರಳುತ್ತಾರೆ. ಆದರೆ ರಸ್ತೆ ಗುಂಡಿಮಯವಾಗಿರುವುದರಿಂದ ಕಾಲ್ನಡಿಗೆಯಲ್ಲಿ ತೆರಳಲು ತೊಂದರೆ ಎದುರಿಸುವಂತಾಗಿದೆ. ಸಂಬಂಧಿಸಿದವರಿಗೆ ಅನೇಕ ಬಾರಿ ಮನವಿ ನೀಡಲಾಗಿದೆ. ಆದರೆ ಪ್ರಯೋಜನವಾಗಿಲ್ಲ. ಬಸ್ ವ್ಯವಸ್ಥೆ ಹಾಗೂ ರಸ್ತೆ ಸರಿ ಇಲ್ಲದೆ ಅನೇಕರು ವಿದ್ಯಾಭ್ಯಾಸ ಮಾಡಲು ಸಾಧ್ಯವಾಗಿಲ್ಲ.
ವಿಜಯ್ ಕುಮಾರ್ ಗ್ರಾಮಸ್ಥ, ಹೊನ್ನೇಕೊಪ್ಪಲು
ಕಾಡಂಚಿನಲ್ಲಿರುವ ಗ್ರಾಮದಲ್ಲಿ ಕಾಡು ಪ್ರಾಣಿಗಳ ಹಾವಳಿ ನಿರಂತರವಾಗಿದೆ. ಬೆಳೆದ ಬೆಳೆಗಳನ್ನು ರಕ್ಷಿಸುವುದೇ ಸಾಹಸದ ಕೆಲಸ, ಶಾಲಾ, ಕಾಲೇಜಿಗೆ ವಿದ್ಯಾರ್ಥಿಗಳು ಬಸ್‌ಗಾಗಿ ಎರಡು ಕಿ.ಮೀ. ಕಾಲ್ನಡಿಗೆಯಲ್ಲಿ ಸಾಗಿ ಬಸ್ ಹತ್ತಬೇಕು. ಗ್ರಾಮದ ರಸ್ತೆಯನ್ನು ಅಭಿವೃದ್ಧಿಪಡಿಸಿ ಸರ್ಕಾರಿ ಬಸ್ ವ್ಯವಸ್ಥೆ ಮಾಡಬೇಕು.
ವೆಂಕಟೇಶ್‌ಶೆಟ್ಟಿ ಹೊನ್ನೇಕೊಪ್ಪಲು
ಗ್ರಾಮದಲ್ಲಿ ಎಲ್ಲ ಜಾತಿಯ ಜನರು ಅನ್ಯೋನ್ಯತೆಯಿಂದ ಬದುಕುತ್ತಿದ್ದಾರೆ. ಗ್ರಾಮಸ್ಥರು ಸೇರಿ ಬಸವೇಶ್ವರ ದೇವಾಲಯ ನಿರ್ಮಾಣ ಮಾಡಿದ್ದಾರೆ. ಗ್ರಾಮ ಪಂಚಾಯಿತಿಯಿಂದ ಅಭಿವೃದ್ಧಿ ಕೆಲಸಗಳು ಆಗುತ್ತಿವೆ. ಕೆಲ ಕೆಲಸಗಳಿಗೆ ಹೆಚ್ಚು ಅನುದಾನ ಬೇಕಾಗಿರುವುದರಿಂದ ಆಗುತ್ತಿಲ್ಲ. ಈ ಕುರಿತು ಈಗಾಗಲೇ ಶಾಸಕರ ಗಮನಕ್ಕೆ ತರಲಾಗಿದೆ.
ತೀರ್ಥನಂದ ಹೊನ್ನೇಕೊಪ್ಪಲು ಮಾಜಿ ಸದಸ್ಯ, ನಿಡ್ತ ಗ್ರಾಮ ಪಂಚಾಯಿತಿ
ಗ್ರಾಮದಲ್ಲಿ ಕೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಅನೇಕರು ಸ್ವ-ಉದ್ಯೋಗ ಮಾಡಿಕೊಂಡು ಜೀವನ ನಡೆಸಿದರೆ, ಕೆಲವರು ಅಲ್ಪಸ್ವಲ್ಪ ಜಮೀನಿನಲ್ಲೇ ವ್ಯವಸಾಯ ಮಾಡಿಕೊಂಡಿದ್ದಾರೆ. ರಸ್ತೆ ತೀರಾ ಹದಗೆಟ್ಟಿರುವುದರಿಂದ ಪಟ್ಟಣದಿಂದ ಸರಕು ಸಾಮಗ್ರಿಗಳನ್ನು ತರಲು ನಿಗದಿಗಿಂತ ಹೆಚ್ಚು ಬಾಡಿಗೆ ನೀಡಬೇಕಾಗಿದೆ, ಹೀಗಾಗಿ ಗ್ರಾಮದ ರಸ್ತೆಯನ್ನು ಅಭಿವೃದ್ಧಿಪಡಿಸಬೇಕು.
ಶೇಷಣ್ಣ ಹೊನ್ನೇಕೊಪ್ಪಲು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net