ಕುಶಾಲನಗರದ ಐತಿಹಾಸಿಕ ಶ್ರೀ ಗಣಪತಿ ದೇವರ ವಾರ್ಷಿಕ ರಥೋತ್ಸವ ಶ್ರದ್ಧಾಭಕ್ತಿ ಮತ್ತು ಸಂಭ್ರಮದೊAದಿಗೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಶ್ರದ್ಧಾಭಕ್ತಿಯಿಂದ ನಡೆದ ರಥೋತ್ಸವ
ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭಾಗಿ
ರಥ ಎಳೆದು ಭಕ್ತಿ ಸಂಭ್ರಮಿಸಿದ ಬಕ್ತರು
ಕುಶಾಲನಗರ
ಕುಶಾಲನಗರದ ಐತಿಹಾಸಿಕ ಶ್ರೀ ಗಣಪತಿ ದೇವರ ವಾರ್ಷಿಕ ರಥೋತ್ಸವ ಶ್ರದ್ಧಾಭಕ್ತಿ ಮತ್ತು ಸಂಭ್ರಮದೊAದಿಗೆ ಶನಿವಾರ ಅದ್ದೂರಿಯಾಗಿ ನಡೆಯಿತು. ಕುಶಾಲನಗರ ಸುತ್ತಮುತ್ತಲಿನ ಊರುಗಳು ಮತ್ತು ಪಕ್ಕದ ಮೈಸೂರು ಹಾಗೂ ಹಾಸನ ಜಿಲ್ಲೆಗಳಿಂದಲೂ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ರಥೋತ್ಸವವನ್ನು ಕಣ್ತುಂಬಿಸಿಕೊAಡರು. ಶ್ರೀ ಗಣಪತಿ ದೇವರ ರಥವನ್ನು ಉತ್ಸಾಹದಿಂದ ಎಳೆದು ತಮ್ಮ ಭಕ್ತಿ ಪ್ರದರ್ಶಿಸಿದರು.
ಶ್ರೀ ಗಣಪತಿ ದೇವಾಲಯ ಸೇವಾ ಸಮಿತಿ ವತಿಯಿಂದ ಕಾರ್ತಿಕ ಮಾಸ ಕೃಷ್ಣ ಪಕ್ಷದಲ್ಲಿ ಸಲ್ಲುವ ಅಭಿಜಿನ್ ಶುಭ ಲಗ್ನದಲ್ಲಿ ಬೆಳಗ್ಗೆ ಶ್ರೀ ಗಣಪತಿ ವಿಗ್ರಹಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ರಥ ಬಲಿ, ಪೂಜೆ ಹಾಗೂ ಮಹಾಮಂಗಳಾರತಿ ಬಳಿಕ ಮಧ್ಯಾಹ್ನ 1 ಗಂಟೆಗೆ ಸರಿಯಾಗಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಮೊದಲಿಗೆ ದೇವಾಲಯದಲ್ಲಿ ಸಾಂಪ್ರದಾಯಿಕ ಆಚರಣೆಗಳನ್ನು ನೆರವೇರಿಸಿ ದೇವರ ಉತ್ಸವ ಮೂರ್ತಿಯನ್ನು ಮಂಗಳವಾದ್ಯಗಳ ಜತೆಗೆ ದೇವಾಲಯದಿಂದ ಹೊರತಂದು ಭಕ್ತರ ಜಯಘೋಷಗಳ ಮಧ್ಯೆ ರಥದಲ್ಲಿ ಕುಳ್ಳರಿಸಲಾಯಿತು. ನಂತರ ಸಹಸ್ರಾರು ಭಕ್ತರು ರಥವನ್ನು ಗಣಪತಿ ದೇವಾಲಯದಿಂದ ರಥ ಬೀದಿ ಮೂಲಕ ಆಂಜನೇಯ ದೇವಸ್ಥಾನದ ತನಕ ಎಳೆಯುವ ಮೂಲಕ ಭಕ್ತಿ ಸಮರ್ಪಿಸಿದರು.
ದೇವಾಲಯದ ಪ್ರಧಾನ ಅರ್ಚಕ ಆರ್.ಕೆ. ನಾಗೇಂದ್ರ ಬಾಬು ನೇತೃತ್ವದಲ್ಲಿ ವಿವಿಧ ಪೂಜಾ ವಿದಿ ವಿಧಾನಗಳನ್ನು ನೆರವೇರಿಸಲಾಯಿತು.
ದೇವಸ್ಥಾನ ಸಮಿತಿ ಅಧ್ಯಕ್ಷ ಎಂ.ಕೆ. ದಿನೇಶ್ ನೇತೃತ್ವದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ರಥೋತ್ಸವಕ್ಕೂ ಮೊದಲು ಪಕ್ಕದ ಊರುಗಳಿಂದ ಬಂದಿದ್ದ ಗೋವುಗಳಿಗೆ ಗೋಪೂಜೆ ನೆರವೇರಿಸಲಾಯಿತು.
ರಥೋತ್ಸವ ಸಂದರ್ಭದಲ್ಲಿ ಅಯ್ಯಪ್ಪ ಮಾಲಾಧಾರಿಗಳು ಗಣಪತಿ ದೇವಾಲಯದ ಎದುರು ರಸ್ತೆಯಲ್ಲಿ ಕರ್ಪೂರ ಹರಡಿ ಬೆಂಕಿ ಹಚ್ಚಿ ಪ್ರಾರ್ಥನೆ ಸಲ್ಲಿಸಿದರು. ಮಾಲಾಧಾರಿಗಳ ಲಯಬದ್ಧ ಭಜನೆ ಈ ಸಂದರ್ಭದಲ್ಲಿ ಗಮನ ಸೆಳೆಯಿತು. ಮತ್ತೊಂದು ಕಡೆ ಭಾರಿ ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ರಥದ ಮುಂದೆ ಹಣ್ಣುಕಾಯಿ ಮಾಡಿಸಲು ಮುಗಿಬಿದ್ದರು. ಅರ್ಚಕರು ತಾಳ್ಮೆಯಿಂದಲೇ ಭಕ್ತರು ತಂದಿದ್ದ ಹಣ್ಣುಕಾಯಿ ಸ್ವೀಕರಿಸಿ, ದೇವರಿಗೆ ಸಮರ್ಪಿಸಿ ಭಕ್ತರಿಗೆ ಹಿಂತಿರುಗಿಸಿದರು.
ಹರಕೆ ಹೊತ್ತಿದ್ದ ಭಕ್ತರು ರಥ ಹೊರಡುವ ವೇಳೆ ರಸ್ತೆಯಲ್ಲಿ ಸಾವಿರಾರು ಈಡುಕಾಯಿ ಒಡೆದು ಭಕ್ತಿ ಪ್ರದರ್ಶಿಸಿದರು. ನವದಂಪತಿ ಹಾಗೂ ಹರಕೆ ಹೊತ್ತ ಅವಿವಾಹಿತರು ರಥಕ್ಕೆ ಹಣ್ಣು ಜವನ ಎಸೆದು ತಮ್ಮ ಇಷ್ಟಾರ್ಥ ನೆರವೇರಿಸು ದೇವ ಎಂದು ಪ್ರಾರ್ಥನೆ ಸಲ್ಲಿಸುತ್ತಿದ್ದ ದೃಶ್ಯ ಕಂಡುಬAತು. ದೇವಾಲಯ ವ್ಯಾಪ್ತಿಯಲ್ಲಿ ಬಾಳೆಹಣ್ಣು, ಜವನ ಮಾರಾಟ, ಪೈಪೋಟಿಗೆ ಬಿದ್ದಂತೆ ರಥಕ್ಕೆ ಜವನ ಎಸೆಯುತ್ತಿದ್ದ ನೋಟ ಸಾಮಾನ್ಯವಾಗಿತ್ತು.
ರಥೋತ್ಸವಕ್ಕೂ ಮುನ್ನ ದೇವಾಲಯದಲ್ಲಿ ಪಂಚಾಮೃತ ಅಭಿಷೇಕ, ಏಕವಾರ, ರುದ್ರಾಭಿಷೇಕ, ಪುಷ್ಪಾಲಂಕಾರ, ರಥಪೂಜೆ ಹಾಗೂ ರಥ ಬಲಿ ಕಾರ್ಯಕ್ರಮಗಳು ನಡೆದವು.
ಶ್ರೀ ಗಣಪತಿ ದೇವಾಲಯ ಸೇವಾ ಸಮಿತಿ ಉಪಾಧ್ಯಕ್ಷ ಆರ್. ಬಾಬು, ಕಾರ್ಯದರ್ಶಿ ಬಿ.ಕೆ. ಮುತ್ತಣ್ಣ, ಖಜಾಂಚಿ ಎಸ್.ಕೆ. ಸತೀಶ್, ಸಹ ಕಾರ್ಯದರ್ಶಿ ಕೆ.ಎನ್. ದೇವರಾಜ್, ನಿರ್ದೇಶಕರಾದ ವಿ.ಡಿ. ಪುಂಡಾರೀಕಾಕ್ಷ, ವಿ.ಪಿ. ಶಶಿಧರ್, ಟಿ.ಆರ್. ಶರವಣಕುಮಾರ್, ಎಚ್.ಎಂ. ಚಂದ್ರು,
ವಿಶೇಷ ಆಹ್ವಾನಿತರಾದ ಎಚ್.ಎನ್. ರಾಮಚಂದ್ರ, ಡಿ. ಅಪ್ಪಣ, ಡಿ.ಸಿ. ಜಗದೀಶ್, ಕೆ.ಎನ್. ಸುರೇಶ್, ಕೆ.ಸಿ. ನಂಜುoಡ ಸ್ಚಾಮಿ, ಎಂ. ಮುನಿರಾಜು, ವ್ಯವಸ್ಥಾಪಕ ಎಸ್.ಕೆ. ಶ್ರೀನಿವಾಸ್ ರಾವ್ ಈ ಸಂದರ್ಭ ಇದ್ದರು.
ರಥೋತ್ಸವದ ಅಂಗವಾಗಿ ಗಣಪತಿ ದೇವಸ್ಥಾನ ಹಾಗೂ ಪಟ್ಟಣದ ಬೀದಿಗಳನ್ನು ವಿದ್ಯುತ್ ದೀಪಗಳಿಂದ ಶೃಂಗಾರ ಮಾಡಲಾಗಿದೆ. ರಥ ಮುಂದಕ್ಕೆ ಸಾಗುತ್ತಿದ್ದಂತೆಯೇ ಪುರಸಭೆ ವತಿಯಿಂದ ಪಟ್ಟಣ ಮತ್ತು ರಥ ಬೀದಿಯನ್ನು ಶುಚಿಗೊಳಿಸಲಾಯಿತು. ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ಜನಜಂಗುಳಿ ಮಧ್ಯೆ ಯುವಕರು ಸೆಲ್ಫಿ ಕ್ಲಿಕ್ಕಿಸುವ ದೃಶ್ಯ ಸಾಮಾನ್ಯವಾಗಿತ್ತು. ಭಕ್ತರಿಗೆ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಅನ್ನದಾನದ ವ್ಯವಸ್ಥೆ ಮಾಡಲಾಗಿತ್ತು. ರಥೋತ್ಸವಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಜಾತ್ರೋತ್ಸವ ಅಂಗವಾಗಿ ಇನ್ನು ಒಂದು ವಾರಗಳ ಕಾಲ ಇಲ್ಲಿನ ಗುಂಡೂರಾವ್ ಬಡಾವಣೆಯ ಜಾತ್ರಾ ಮೈದಾನದಲ್ಲಿ ವಿವಿಧ ಮನೋರಂಜನಾ ಕಾರ್ಯಕ್ರಮಗಳು ನಡೆಯಲಿವೆ. ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಗಣಪತಿ ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದರು. ಆರತಿ ಮತ್ತು ಪ್ರಸಾದ ಸ್ವೀಕರಿಸಿದರು. ಮಾಜಿ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಕೂಡ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.