ಚೇರಂಬಾಣೆ ಗೌಡ ಮಹಿಳಾ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಕೆಡ್ಡಸ ಹಬ್ಬದ ಕಾರ್ಯಕ್ರಮವನ್ನು ಶಾಸ್ತ್ರೋಕ್ತವಾಗಿ ಹಾಗೂ ಸಾಂಪ್ರದಾಯಕವಾಗಿ ಆಚರಿಸಲಾಯಿತು. ಕಡ್ಲೇರ ತುಳಸಿ ಮೋಹನ್, ಕೂರನ ಸುಶೀಲ ಅಪ್ಪಾಜಿ, ಕೇಕಡ ಪೂಜಾ ನಾಗೇಂದ್ರ ಇತರರಿದ್ದರು.
ಚೇರಂಬಾಣೆ ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ಅಭಿಪ್ರಾಯ
ನಾಪೋಕ್ಲು: ಕೆಡ್ಡಸ ಹಬ್ಬವು ಪ್ರಕೃತಿ ಹಾಗೂ ಭೂಮಿ ತಾಯಿಗೆ ಗೌರವ ಸೂಚಿಸುವ ಹಬ್ಬವಾಗಿದೆ ಎಂದು ಚೇರಂಬಾಣೆ ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ಹೇಳಿದರು.
ಇಲ್ಲಿಗೆ ಸಮೀಪದ ಚೇರಂಬಾಣೆ ಗೌಡ ಮಹಿಳಾ ಒಕ್ಕೂಟದ ವತಿಯಿಂದ ಚೇರಂಬಾಣೆ ಗೌಡ ಮಹಿಳಾ ಸಮಾಜದ ಸಭಾಂಗಣದಲ್ಲಿ ಆಯೋಜಿಸಿದ್ದ ಕೆಡ್ಡಸ ಹಬ್ಬದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರೈತರು ಕೃಷಿ ಕಾರ್ಯದಿಂದ ಕೊಂಚ ವಿರಾಮ ಪಡೆಯುವ ಹಬ್ಬವೂ ಆಗಿದೆ. ಈ ಸಂದರ್ಭ ಗಿಡ ಮರಗಳಲ್ಲಿ ಚಿಗುರು ಹೂ ಮೊಗ್ಗು ಬಿಡುವ ಮೂಲಕ ಪ್ರಕೃತಿಯ ಸೌಂದರ್ಯವೂ ಹೆಚ್ಚಾಗುತ್ತದೆ ಎಂದು ಹೇಳಿದರು.
ಒಕ್ಕೂಟದ ಉಪಾಧ್ಯಕ್ಷೆ ಹೊಸೊಕ್ಲು ಲತಾ ಮೊಣ್ಣಪ್ಪ ಮಾತನಾಡಿ ಕೆಡ್ಡಸ ಹಬ್ಬವನ್ನು ಕೊಡಗು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರ ಆಚರಣೆ ಮಾಡುತ್ತಾರೆ. ಅದರಲ್ಲೂ ಪಾಂತ್ಯವಾರು ಆಚರಣೆಯಲ್ಲಿ ವ್ಯತ್ಯಾಸಗಳಿರುತ್ತವೆ. ಪೂರ್ವ ಪದ್ಧತಿಯಂತೆ ನಮಗೆ ತಿಳಿದಷ್ಟು ಮಟ್ಟಿಗೆ ಇಂತಹ ಅಪರೂಪದ ಹಬ್ಬಗಳನ್ನು ಆಚರಿಸುವುದರಿಂದ ಮುಂದಿನ ಪೀಳಿಗೆಗೆ ನಮ್ಮ ಸಾಂಪ್ರದಾಯದ ಆಚರಣೆಗಳು ತಿಳಿಯುವುದಲ್ಲದೆ ಅದರ ಪೋಷಣೆಯೂ ಆಗುತ್ತದೆ ಎಂದರು.
ಒಕ್ಕೂಟದ ಉಪಾಧ್ಯಕ್ಷೆ ಕೂರನ ಸುಶೀಲ ಅಪ್ಪಾಜಿ, ಕಾರ್ಯದರ್ಶಿ ಕೇಕಡ ಪೂಜಾ ನಾಗೇಂದ್ರ , ಕೋಶಾಧಿಕಾರಿ ಕೊಡಪಾಲು ತೀರ್ಥ ಗಣಪತಿ, ಸಂಘಟನಾ ಕಾರ್ಯದರ್ಶಿ ಬೈಮನ ಜ್ಯೋತಿ ತಿಮ್ಮಯ್ಯ ಇತರರಿದ್ದರು.