ಮಕ್ಕಳಿಂದ ಪ್ರಶ್ನೆಗಳ ಸುರಿಮಳೆ

ಸಮೀಪದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಆಯೋಜಿಸಿದ್ದ ಮಕ್ಕಳ ಗ್ರಾಮಸಭೆಯನ್ನು ದೀಕ್ಷಾ ಶೆಟ್ಟಿ, ಶೇಖರ್ ಉದ್ಘಾಟಿಸಿದರು.ಸಾವಿತ್ರಮ್ಮ, ಗೌತಮ್ ಕಿರಗಂದೂರು, ಗ್ರಾ.ಪಂ.ಸದಸ್ಯರು ಇದ್ದರು.
ಸಮೀಪದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಆಯೋಜಿಸಿದ್ದ ಮಕ್ಕಳ ಗ್ರಾಮಸಭೆಯನ್ನು ದೀಕ್ಷಾ ಶೆಟ್ಟಿ, ಶೇಖರ್ ಉದ್ಘಾಟಿಸಿದರು.ಸಾವಿತ್ರಮ್ಮ, ಗೌತಮ್ ಕಿರಗಂದೂರು, ಗ್ರಾ.ಪಂ.ಸದಸ್ಯರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿವಿಧ ಸೌಕರ್ಯ ಕಲ್ಪಿಸುವಂತೆ ಮಕ್ಕಳ ಗ್ರಾಮ ಸಭೆಯಲ್ಲಿ ಆಗ್ರಹ
ಶನಿವಾರಸಂತೆ: ಶಾಲೆಯಲ್ಲಿ ಮಕ್ಕಳಿಗೆ ಶೌಚಗೃಹ ಸಮಸ್ಯೆ, ಶಾಲೆ ಸುತ್ತಮುತ್ತ ಗಿಡಗಂಟಿಗಳನ್ನು ಕಡಿದು ಸ್ವಚ್ಛಗೊಳಿಸಬೇಕು, ಶಾಲೆಗೆ ಬರಲು ವಾಹನದ ವ್ಯವಸ್ಥೆ ಕಲ್ಪಿಸಬೇಕು....
ಇವು ಸಮೀಪದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ನಾವು ಪ್ರತಿಷ್ಠಾನ ಟ್ರಸ್ಟ್ ವತಿಯಿಂದ ಶನಿವಾರ ಆಯೋಜಿಸಿದ್ದ ಕೊಡ್ಲಿಪೇಟೆ ಗ್ರಾಪಂ ಮಕ್ಕಳ ಗ್ರಾಮಸಭೆಯಲ್ಲಿ ಮಕ್ಕಳು ಇಟ್ಟ ಬೇಡಿಕೆಗಳ ಪಟ್ಟಿ.
ವಿದ್ಯಾರ್ಥಿನಿ ದೀಕ್ಷಾ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಡೆಸಲಾದ ಮಕ್ಕಳ ಗ್ರಾಮಸಭೆಯಲ್ಲಿ ಕೊಡ್ಲಿಪೇಟೆ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಶೌಚಗೃಹ ಅವ್ಯವಸ್ಥೆಯಿಂದ ಕೂಡಿದೆ. ಶಾಲೆ ಸುತ್ತಮುತ್ತ ಗಿಡಗಂಟಿಗಳು ಬೆಳೆದಿದ್ದು ಈ ಸಂಬಂಧ ಗ್ರಾ.ಪಂ.ನವರು ಅವನ್ನು ಕಡಿದು ಸ್ವಚ್ಛಗೊಳಿಸುವಂತೆ ವಿದ್ಯಾರ್ಥಿನಿ ಪ್ರತೀಕ್ಷ್ಷಾ ಮನವಿ ಮನವಿ ಮಾಡಿದರು.
ಕೊಡ್ಲಿಪೇಟೆ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗುತ್ತಿದ್ದು ಇದರಿಂದ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ವಿದ್ಯಾರ್ಥಿ ಜಿನಾಥ್ ಸಭೆಯಲ್ಲಿ ಗಮನ ಸೆಳೆದ. ಕೆಳಕೊಡ್ಲಿ ಗ್ರಾಮದಿಂದ ಶಾಲೆಗೆ ಬರಲು ದೂರವಾಗುತ್ತಿದ್ದು ಈ ನಿಟ್ಟಿನಲ್ಲಿ ನಮಗೆ ಶಾಲೆಗೆ ಬರಲು ವಾಹನದ ವ್ಯವಸ್ಥೆಯನ್ನು ಕಲ್ಪಿಸಿಕೊಡುವಂತೆ ವಿದ್ಯಾರ್ಥಿನಿ ಲಕ್ಷ್ಮೀ ಆಗ್ರಹಿಸಿದಳು.
ಶಾಲಾ ಮುಂಭಾಗ ಸಂತೆ ನಡೆಯುವುದರಿಂದ ತ್ಯಾಜ್ಯಗಳು ಶಾಲಾ ಆವರಣಕ್ಕೆ ಬಂದು ಬೀಳುತ್ತಿದೆ. ಇದರಿಂದ ನಮಗೆ ತೊಂದರೆಯಾಗುತ್ತಿದೆ. ಮರುದಿನ ತ್ಯಾಜ್ಯವನ್ನು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸೇರಿ ಸ್ವಚ್ಛಗೊಳಿಸಬೇಕಾಗುತ್ತದೆ. ಗ್ರಾ.ಪಂ. ಇದನ್ನು ಗಂಭೀರವಾಗಿ ತೆಗೆದುಕೊಂಡು ಇತ್ತ ಗಮನ ಹರಿಸುವಂತೆ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯ ಮಕ್ಕಳು ಸಭೆಯಲ್ಲಿ ಪ್ರಸ್ತಾಪಿಸಿದರು.
ಮಕ್ಕಳ ಗ್ರಾಮ ಸಭೆಗೆ ಸಂಬಂಧಿಸಿದ ಅಧಿಕಾರಿಗಳು ಬಂದಿಲ್ಲ ಎಂದು ಸಭೆಯ ನಡೆಯುವ ಮೊದಲು ಎಸ್‌ಡಿಎಂಸಿ ಅಧ್ಯಕ್ಷ ದಿನೇಶ್ ಆಕ್ಷೇಪ ವ್ಯಕ್ತ ಪಡಿಸಿದಾಗ ಗ್ರಾ.ಪಂ. ಅಧ್ಯಕ್ಷ ಶೇಖರ್ ಅವರು ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಸಭೆಗೆ ಬರುವಂತೆ ಕರೆ ಮಾಡಿದರು. ನಂತರ ಸಭೆಗೆ ಹಾಜರಾದ ಆರೋಗ್ಯ ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಸಾವಿತ್ರಮ್ಮ ಸಭೆಯಲ್ಲಿ ಮಾಹಿತಿ ನೀಡುತ್ತಿದ್ದ ಸಂದರ್ಭ ಕೆಳಕೊಡ್ಲಿ ಗ್ರಾಮದ ಅಂಗನವಾಡಿ ಶಿಕ್ಷಕಿ ನಮ್ಮ ಅಂಗನವಾಡಿ ಕಟ್ಟಡ ತೀರಾ ಹಾಳಾಗಿದ್ದು ಇದರಲ್ಲಿ ಹಾವು ಚೇಳು ವಾಸ ಮಾಡುವಂತಿದೆ. ಇಲ್ಲಿ ಅಂಗನವಾಡಿ ನಡೆಸಲು ಸಾಧ್ಯವಾಗುತ್ತಿಲ್ಲ. ಇದನ್ನು ತೆರವುಗೊಳಿಸಿ ಹೊಸದಾಗಿ ಅಂಗನವಾಡಿ ಕಟ್ಟಡವನ್ನು ನಿರ್ಮಿಸಿಕೊಡುವಂತೆ ಅವರು ಮನವಿ ಮಾಡಿದರು.
ಸಭೆಯಲ್ಲಿ ನಾವು ಪ್ರತಿಷ್ಠಾನ ಟ್ರಷ್ಟಿನ ಗೌತಮ್ ಕಿರಗಂದೂರು ಮಾಹಿತಿ ನೀಡಿದರು. ಸಭೆಯಲ್ಲಿ ಗ್ರಾ.ಪಂ.ಸದಸ್ಯರು, ವಿವಿಧ ಶಾಲಾ ಶಿಕ್ಷಕರು, ಗ್ರಾ.ಪಂ.ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net