ಹೇರೂರು ಗಿರಿಜನ ಹಾಡಿಯಲ್ಲಿ ಅಕ್ರಮವಾಗಿ ನಿರ್ಮಾಣವಾಗಿದೆ ಎನ್ನಲಾದ ಚರ್ಚ್ ಉದ್ಘಾಟನೆಗೆ ತಮಿಳುನಾಡಿನಿಂದ ಆಗಮಿಸಿದ ವ್ಯಕ್ತಿಗಳನ್ನು ಸ್ಥಳೀಯರು ತಡೆದಿರುವುದು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಹೇರೂರು ಗಿರಿಜನ ಹಾಡಿಯಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಚರ್ಚ್ ಉದ್ಘಾಟನೆಗೆ ಆಗಮನ
ಸ್ಥಳೀಯರು, ಹಾಡಿ ನಿವಾಸಿಗಳ ನಡುವೆ ವಾಗ್ವಾದ
ಸುಂಟಿಕೊಪ್ಪ: ನಾಕೂರು ಶಿರಂಗಾಲ ಗ್ರಾಪಂಗೆ ಒಳಪಡುವ ಹೇರೂರು ಗಿರಿಜನ ಹಾಡಿಯಲ್ಲಿ ಅಕ್ರಮವಾಗಿ ನಿರ್ಮಾಣವಾಗಿದೆ ಎನ್ನಲಾದ ಚರ್ಚ್ ಉದ್ಘಾಟನೆಗೆ ತಮಿಳುನಾಡಿನಿಂದ ಶನಿವಾರ ಆಗಮಿಸಿದ ವ್ಯಕ್ತಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಚರ್ಚ್ ಉದ್ಘಾಟನೆ ಸಂದರ್ಭ ಸ್ಥಳೀಯ ನಿವಾಸಿಗಳು ಆಗಮಿಸಿ ಕಾರ್ಯಕ್ರಮಕ್ಕೆ ತಡೆಯೊಡ್ಡಿ ತಮಿಳುನಾಡಿನಿಂದ ಐದಾರು ವಾಹನಗಳಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದವರನ್ನು ತಡೆ ಹಿಡಿದು ಪೊಲೀಸರಿಗೆ ಮತ್ತು ಗ್ರಾಪಂ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಕುಶಾಲನಗರ ವೃತ್ತ ನಿರೀಕ್ಷಕ ಪ್ರದೀಪ್, ಕುಶಾಲನಗರ ಮತ್ತು ಸುಂಟಿಕೊಪ್ಪ ಠಾಣಾಧಿಕಾರಿಗಳಾದ ಮೋಹನ್‌ರಾಜ್, ರಾಮಚಂದ್ರ, ನಾಕೂರು ಶಿರಂಗಾಲ ಗ್ರಾಪಂ ಆಡಳಿತಾಧಿಕಾರಿ ಶ್ರೀಕಾಂತ್, ಪಿಡಿಒ ಅಸ್ಮಾ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು. ಇದೇ ಸಂದರ್ಭ ಸ್ಥಳೀಯರು ಮತ್ತು ಹಾಡಿ ನಿವಾಸಿಗಳ ನಡುವೆ ವಾಗ್ವಾದ ನಡೆಯಿತು. ನಮ್ಮಿಷ್ಟದಂತೆ ನಾವು ಪ್ರಾರ್ಥನೆಯಲ್ಲಿ ತೊಡಗಿರುವುದಾಗಿ ಹಾಡಿ ವಾಸಿಗಳು ವಾದಿಸಿದರು.
ಗ್ರಾ.ಪಂ. ಮೂಲಕ ಯಾವುದೇ ಅನುಮತಿ ಪಡೆಯದೇ ಕಟ್ಟಡ ನಿರ್ಮಿಸಿರುವುದು ಕಂಡುಬಂತು. ಬಳಿಕ ಪೊಲೀಸರು ತಮಿಳುನಾಡು ಮೂಲದ ವ್ಯಕ್ತಿಗಳನ್ನು ವಾಹನ ಸಹಿತ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಬಿಜೆಪಿ ಮುಖಂಡ ಹೇರೂರು ಚಂದ್ರಶೇಖರ್, ಹೇರೂರು ಗಿರಿಜನ ಹಾಡಿಯಲ್ಲಿ ಮತಾಂತರ ಚಟುವಟಿಕೆ ನಡೆಯುತ್ತಿದೆ, ಮತಾಂತರಗೊಂಡ ಆದಿವಾಸಿಗಳು ಸಮಾಜ ಕಲ್ಯಾಣ ಇಲಾಖೆ ಜಾಗದಲ್ಲಿ ಅನಧಿಕೃತವಾಗಿ ಚರ್ಚ್ ನಿರ್ಮಿಸಿದ್ದಾರೆ. ಇದರ ಉದ್ಘಾಟನೆಗೆಂದು ತಮಿಳುನಾಡಿನ ವ್ಯಕ್ತಿಗಳು ಆಗಮಿಸಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಆರೋಪಿಸಿದರು.
ಗ್ರಾ.ಪಂ. ಮಾಜಿ ಅಧ್ಯಕ್ಷ ಜಗನ್ನಾಥ್ ಮಾತನಾಡಿ, ಪರಿಶಿಷ್ಟ ಪಂಗಡಕ್ಕೆ ದೊರೆಯುವ ಎಲ್ಲ ಸವಲತ್ತುಗಳನ್ನು ಪಡೆದುಕೊಂಡು ಮತ್ತೊಂದು ಧರ್ಮದ ಪರಿಪಾಲನೆ ನಡೆಯುತ್ತಿದೆ. ಇಂತಹವರ ವಿರುದ್ಧ ಸಮಾಜ ಕಲ್ಯಾಣ ಇಲಾಖೆ ಕಟ್ಟುನಿಟ್ಟಿನ ಕ್ರಮವಹಿಸಬೇಕಿದೆ ಎಂದು ಆಗ್ರಹಿಸಿದರು.