ನಿಖರ, ನಿರ್ದಿಷ್ಟವಾಗಿ ಭೂಮಾಪನ ಸರ್ವೆ ನಡೆಸಿ

ರಾಷ್ಟ್ರೀಯ ಭೂಮಾಪನ ದಿನಾಚರಣೆಯನ್ನು ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಚರಿಸಲಾಯಿತು. ಎಸ್.ಜೆ.ಸೋಮಶೇಖರ್, ಎಂ.ಎನ್.ನಿರಂಜನ, ಆರ್.ಐಶ್ವರ್ಯ ಇತರರಿದ್ದರು.
ರಾಷ್ಟ್ರೀಯ ಭೂಮಾಪನ ದಿನಾಚರಣೆಯನ್ನು ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಚರಿಸಲಾಯಿತು. ಎಸ್.ಜೆ.ಸೋಮಶೇಖರ್, ಎಂ.ಎನ್.ನಿರಂಜನ, ಆರ್.ಐಶ್ವರ್ಯ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನಿಖರ, ನಿರ್ದಿಷ್ಟವಾಗಿ ಭೂಮಾಪನ ಸರ್ವೆ ನಡೆಸಿ
  • ರಾಷ್ಟ್ರೀಯ ೩೭ನೇ ಭೂಮಾಪನ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ಸೋಮಶೇಖರ್
ಮಡಿಕೇರಿ: ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ನಿಖರ ಹಾಗೂ ನಿರ್ದಿಷ್ಟವಾಗಿ ಭೂ ಮಾಪನ (ಸರ್ವೆ) ಕಾರ್ಯ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಸೂಚಿಸಿದರು.
ಜಿಲ್ಲಾಡಳಿತ ಸಹಕಾರದಲ್ಲಿ ರಾಷ್ಟ್ರೀಯ ಭೂ ಮಾಪನ ಕಂದಾಯ ವ್ಯವಸ್ಥೆ ಹಾಗೂ ಭೂ ದಾಖಲೆಗಳ ಇಲಾಖೆ ವತಿಯಿಂದ ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ೩೭ನೇ ರಾಷ್ಟ್ರೀಯ ಭೂಮಾಪನ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಹಿಂದೆ ಸರಪಳಿ ಮೂಲಕ ಭೂ ಸಮೀಕ್ಷೆ ಅಥವಾ ಸರ್ವೆ ಮಾಡಲಾಗುತ್ತಿದ್ದು, ಈಗ ತಂತ್ರಜ್ಞಾನ ಸಾಕಷ್ಟು ಅಭಿವೃದ್ಧಿ ಹೊಂದಿದ್ದು, ಅವುಗಳನ್ನು ಬಳಸಿಕೊಂಡು ತ್ವರಿತವಾಗಿ ಭೂಮಾಪನ ಸರ್ವೆ ಕಾರ್ಯ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಪೋಡಿ ಸರ್ವೆ ಕಾರ್ಯ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ ಎಂಬ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬರುತ್ತಿದ್ದು, ಆದ್ದರಿಂದ ಆದ್ಯತೆ ಮೇಲೆ ಕೆಲಸ ಮಾಡಬೇಕು. ಜತೆಗೆ ಇಂದಿನ ತಂತ್ರಜ್ಞಾನ ಹಾಗೂ ಸರ್ಕಾರದ ಸೌಲಭ್ಯವನ್ನು ಬಳಸಿಕೊಂಡು ಕಾಲ ಮಿತಿಯಲ್ಲಿ ಸರ್ವೆ ಕಾರ್ಯವನ್ನು ಪೂರ್ಣಗೊಳಿಸುವಂತಾಗಬೇಕು ಎಂದು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ತಿಳಿಸಿದರು.
ಸರ್ಕಾರ ನೌಕರರಿಗೆ ಹಲವು ರೀತಿಯ ಸೌಲಭ್ಯಗಳನ್ನು ನೀಡಿದ್ದು, ಆತ್ಮವಿಮರ್ಶೆ ಹಾಗೂ ಆತ್ಮವಲೋಕನ ಮಾಡಿಕೊಂಡು ಭೂಮಾಪಕ ಸರ್ವೇ ಕಾರ್ಯ ಮೂಲಕ ಪ್ರಗತಿ ಸಾಧಿಸಬೇಕು. ಆ ನಿಟ್ಟಿನಲ್ಲಿ ಸ್ವಯಂ ಪ್ರೇರಣೆಯಿಂದ ಕೆಲಸ ಮಾಡಬೇಕು ಎಂದು ಹೇಳಿದರು.
ಭೂಮಿಯ ಮೇಲಿನ ಅಳತೆಯನ್ನು ನಿಖರವಾಗಿ ಮತ್ತು ನಿರ್ಧಿಷ್ಟವಾಗಿ ದಾಖಲಿಸಲು ಸರ್ವೇ ಕಾರ್ಯ ಅತೀ ಮುಖ್ಯವಾಗಿದೆ. ಕಂದಾಯ, ತೆರಿಗೆ ವಸೂಲಾತಿಗಾಗಿ ಜಮೀನು ಒಡೆತನವನ್ನು ನಿರ್ಧರಿಸಲಾಗುತ್ತದೆ. ಹಾಗೆಯೇ ಗಡಿ ಗುರುತುಗಳನ್ನು ಸ್ಥಾಪಿಸಲು ಸರ್ವೇ ಕಾರ್ಯ ಸಹಕಾರಿಯಾಗಿದೆ ಎಂದರು.
ಹಿಂದೆ ಸರಪಳಿ ಮತ್ತು ಥಿಯೋಡೋಲೈಟ್ ಮೂಲಕ ಸರ್ವೇ ಮಾಡಲಾಗುತ್ತಿತ್ತು, ಇತ್ತೀಚೆಗೆ ಜಿಪಿಎಸ್, ರಿಮೋಟ್ ಸೆನ್ಸಿಂಗ್ ಮತ್ತು ಡ್ರೋನ್ ತಂತ್ರಜ್ಞಾನಗಳನ್ನು ಬಳಸಿ ಡಿಜಿಟಲ್ ಭೂ ದಾಖಲೆಗಳನ್ನು ನಿರ್ವಹಿಸಲಾಗುತ್ತಿದೆ ಎಂದು ತಿಳಿಸಿದರು.
ಭೂ ದಾಖಲೆಗಳ ಇಲಾಖೆಯ ಉಪ ನಿರ್ದೇಶಕ ಎಂ.ಎನ್.ನಿರಂಜನ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ೩.೭೮ ಲಕ್ಷ ಆಕಾರ್ ಬಂಧಿಯನ್ನು ಡಿಜಿಟಲೀಕರಣ ಮಾಡಿ ಅಪ್‌ಲೋಡ್ ಮಾಡಲಾಗಿದೆ. ಜಿಲ್ಲೆಯಲ್ಲಿ ದರ್ಖಾಸು ಪೋಡಿ ಸರ್ವೇಯಲ್ಲಿ ಸರ್ಕಾರಿ ಭೂಮಿಗಳಲ್ಲಿ ಭೂ ಮಂಜೂರಾತಿಯಾಗಿ ಹಲವು ವರ್ಷಗಳಿಂದ ದುರಸ್ತಿಯಾಗದೆ ಬಾಕಿ ಇದ್ದ ಪ್ರಕರಣಗಳನ್ನು ಸರ್ವೇ ಮಾಡಿ ೨ ಸಾವಿರಕ್ಕೂ ಹೆಚ್ಚು ಪಹಣಿಗಳನ್ನು ಸೃಜಿಸಲಾಗಿದೆ. ೨೦೦೯ ರಿಂದ ಭೂ ದಾಖಲೆಗಳ ಇಲಾಖೆಯಲ್ಲಿ ಮೋಜಿನಿ ತಂತ್ರಾಂಶದ ಮೂಲಕ ಕ್ರಯ, ದಾನ ಮತ್ತಿತರ ಪಿಪೋ ವ್ಯವಸ್ಥೆಯಡಿ ನಿರ್ವಹಿಸಲಾಗುತ್ತಿದೆ ಎಂದು ವಿವರಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಮಾತನಾಡಿ, ಭಾರತದ ಭೂ ಸಮೀಕ್ಷೆಯ ಇತಿಹಾಸವು ೧೮ನೇ ಶತಮಾನದಷ್ಟು ಹಳೆಯದಾಗಿದೆ. ಬ್ರಿಟೀಷ್ ಆಡಳಿತದ ಅವಧಿಯಲ್ಲಿ ಸಮೀಕ್ಷೆ ಕಾರ್ಯವು ವೈಜ್ಞಾನಿಕವಾಗಿ ಆರಂಭವಾಯಿತು. ಭಾರತೀಯ ಸರ್ವೆ ವಿಭಾಗವು ೧೭೬೭ ರಲ್ಲಿ ಸ್ಥಾಪಿತವಾಗಿದ್ದು, ೧೮೦೨ ರಲ್ಲಿ ಸರ್ ವಿಲಿಯಮ್ ಲ್ಯಾಂಬ್ಟನ್ ನೇತೃತ್ವದ ಗ್ರೇಟ್ ಟ್ರಿಗೊನೋಮೆಟ್ರಿಕಲ್ ಸರ್ವೆಯಲ್ಲಿ ಆಧುನಿಕ ಮ್ಯಾಪಿಂಗ್ ಕಾರ್ಯ ಆರಂಭವಾಯಿತು ಎಂದು ಮಾಹಿತಿ ನೀಡಿದರು.
ಜಾನ್‌ಮಾಥರ್ ಅವರು ೧೭೯೩ ರಿಂದ ೯೬ ರವರೆಗೆ ಸೇಲಂ-ಭಾರಾಮಹಲ್ ಪ್ರದೇಶದಲ್ಲಿ ಮೊದಲ ಆಧುನಿಕ ವೈಜ್ಞಾನಿಕ ಸಮೀಕ್ಷೆಯನ್ನು ನಡೆಸಿದರು. ಹಾಗೆಯೇ ೧೮೦೨ ರಿಂದ ೧೮೫೨ ರವರೆಗೆ ಚೆನ್ನೈನ ಸೆಂಟ್ ಥಾಮಸ್ ಮೌಂಟ್‌ನಿಂದ ಹಿಮಾಲಯದವರೆಗೆ ಬೃಹತ್ ಸರ್ವೆ ಕಾರ್ಯವನ್ನು ಕೈಗೊಳ್ಳಲಾಯಿತು. ರಾಜ್ಯದಲ್ಲಿ ಮೈಸೂರು ವಿಭಾಗದಲ್ಲಿ ಆಂಡರ್ಸನ್ ಸರ್ವೆ ಕಾರ್ಯವನ್ನು ಪೂರ್ಣಗೊಳಿಸಿ ಮೊದಲ ಕಮಿಷನರ್ ಆಗಿದ್ದರು. ೧೮೭೫ ರಲ್ಲಿ ಕಂದಾಯ ಇಲಾಖೆಯ ನಿಯಂತ್ರಣದಲ್ಲಿ ಭೂ ಅಳತೆ ಖಾತೆ ಬದಲಾವಣೆಗಾಗಿ ಸುವ್ಯವಸ್ಥಿತ ಸರ್ವೆ ವ್ಯವಸ್ಥೆಯನ್ನು ರೂಪಿಸಲಾಯಿತು ಎಂದರು.
ಭೂ ದಾಖಲೆಗಳ ಇಲಾಖೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ಸರ್ ವಿಲಿಯಮ್ ಲ್ಯಾಂಬ್ಟನ್ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ, ಭೂ ದಾಖಲೆಗಳ ಸಹಾಯಕ ನಿರ್ದೇಶಕರಾದ ಮಹೇಶ್ ಕುಮಾರ್, ಪರಮೇಶ್, ನಾಗೇಶ್, ಸರ್ವೇ ಮೇಲ್ವಿಚಾರಕರು, ಭೂ ಮಾಪಕರು ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net