ದೇವನೆಲೆಗಳು ಸಾಂಸ್ಕೃತಿಕವಾಗಿ ಬೆಳೆಯಬೇಕಿದೆ

ಕಕ್ಕಬೆಯಲ್ಲಿರುವ ಪಾಡಿ ಶ್ರೀ ಇಗ್ಗುತಪ್ಪ ದೇವಸ್ಥಾನದಲ್ಲಿ ಕುಶಭಟ್ ಅವರು ಅಕಾಡೆಮಿಯ ೨೦ನೇ ಕೊಡವ ಪುಸ್ತಕ ಪತ್ತಾಯ ಕಾರ್ಯಕ್ರಮವನ್ನು ಪುಸ್ತಕ ಅನಾವರಣ ಮೂಲಕ ಚಾಲನೆ ನೀಡಿದರು. ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ, ರಾಜ ಪೂವಣ್ಣ ಇತರರಿದ್ದರು.
ಕಕ್ಕಬೆಯಲ್ಲಿರುವ ಪಾಡಿ ಶ್ರೀ ಇಗ್ಗುತಪ್ಪ ದೇವಸ್ಥಾನದಲ್ಲಿ ಕುಶಭಟ್ ಅವರು ಅಕಾಡೆಮಿಯ ೨೦ನೇ ಕೊಡವ ಪುಸ್ತಕ ಪತ್ತಾಯ ಕಾರ್ಯಕ್ರಮವನ್ನು ಪುಸ್ತಕ ಅನಾವರಣ ಮೂಲಕ ಚಾಲನೆ ನೀಡಿದರು. ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ, ರಾಜ ಪೂವಣ್ಣ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ದೇವನೆಲೆಗಳು ಸಾಂಸ್ಕೃತಿಕವಾಗಿ ಬೆಳೆಯಬೇಕಿದೆ
  • ಪುಸ್ತಕ ಪತ್ತಾಯ ಅನಾವರಣ ಕಾರ್ಯಕ್ರಮದಲ್ಲಿ ಮಹೇಶ್ ನಾಚಯ್ಯ
ಮಡಿಕೇರಿ:ಕೊಡಗಿನ ದೇವನೆಲೆಗಳು, ಐನ್‌ಮನೆಗಳು, ಸಮಾಜಗಳು, ವಿದ್ಯಾಸಂಸ್ಥೆಗಳು ಸಾಂಸ್ಕೃತಿಕವಾಗಿ ಬೆಳೆಯಬೇಕು ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ಕಕ್ಕಬೆಯಲ್ಲಿರುವ ಪಾಡಿ ಶ್ರೀ ಇಗ್ಗುತಪ್ಪ ದೇವಸ್ಥಾನದಲ್ಲಿ ನಡೆದ ಅಕಾಡೆಮಿಯ ೨೦ನೇ ಕೊಡವ ಪುಸ್ತಕ ಪತ್ತಾಯ ಅನಾವರಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾಂಸ್ಕೃತಿಕವಾದ ಬೆಳೆವಣಿಗೆಯು ಸಾಹಿತ್ಯಕ್ಕೆ ಒತ್ತು ನೀಡುತ್ತವೆ. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಕೊಡವ ಪುಸ್ತಕ ಪತ್ತಾಯ ಇದಕ್ಕೆ ಪೂರಕವಾಗಿ ಕೆಲಸ ಮಾಡುತ್ತಿದೆ. ಇದರಿಂದ ಆಯಾಯ ದೇವನೆಲೆಗಳ ಪೌರಾಣಿಕ ಹಿನ್ನೆಲೆ, ಚಾರಿತ್ರಿಕ ಘಟನಾವಳಿಗಳು, ಮಹತ್ವ-ಮಹಿಮೆಯನ್ನು ತಿಳಿದುಕೊಳ್ಳಲು ಅನುಕೂಲವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕೊಡಗಿನ ಊರೂರುನಲ್ಲಿರುವ ಪುರಾತನ ದೇವನೆಲೆಗಳಲ್ಲಿ ಪುಸ್ತಕ ಪತ್ತಾಯ ಸ್ಥಾಪಿಸುವುದರಿಂದ ಅಲ್ಲಿಗೆ ಬರುವ ಭಕ್ತರಿಗೆ ಆಯಾಯ ದೇವಸ್ಥಾನಗಳು, ಆ ಭಾಗದ ಊರು-ನಾಡುಗಳ ವಿಚಾರವಾಗಿ ಪುಸ್ತಕಗಳ ಓದಿ ಅರಿತುಕೊಳ್ಳಲು ಅನುಕೂಲವಾಗುತ್ತದೆ. ದೇವಸ್ಥಾನಕ್ಕೆ ಬರುವ ಭಕ್ತರು ಬಿಡುವಿನ ವೇಳೆ ಇನ್ನಿತರೆ ಮಾತನಾಡುವುದರ ಬದಲು ಆಯಾಯ ಕ್ಷೇತ್ರದ ಮಹತ್ವ-ಮಹಿಮೆಯ ಬಗ್ಗೆ ಓದಿ ತಿಳಿದುಕೊಳ್ಳುವುದರಿಂದ ಸಾಹಿತ್ಯ ಹಾಗೂ ಸಂಸ್ಕೃತಿಯ ಬೆಳವಣಿಗೆಗೆ ಅನುಕೂಲವಾಗುತ್ತದೆ. ದೇವನೆಲೆಗಳು ಸಾಂಸ್ಕೃತಿಕವಾಗಿ ಬೆಳೆಯಬೇಕಾದರೆ ಸಾಹಿತ್ಯ ಪ್ರಕಾರಗಳ ಲಭ್ಯತೆ ಹಾಗೂ ಓದುವಿಕೆಗೆ ಸೂಕ್ತ ಸ್ಥಳ ಇದಾಗಿದ್ದು, ಪುಸ್ತಕ ಪತ್ತಾಯವನ್ನು ಸ್ಥಾಪಿಸುವಲ್ಲಿ ದೇವಸ್ಥಾನ ಸಮಿತಿಯವರು ಮುಂದೆ ಬರಬೇಕೆಂದು ಕರೆ ನೀಡಿದರು.
ಕೊಡವ ಪುಸ್ತಕ ಪತ್ತಾಯ ಕಾರ್ಯಕ್ರಮವನ್ನು ವಿಶೇಷ ರೀತಿ ಪೂಜಾ-ಕೈಂಕರ್ಯದೊಂದಿಗೆ ಉದ್ಘಾಟಿಸಿದ ಇಗ್ಗುತಪ್ಪ ದೇವಸ್ಥಾನದ ಪ್ರಧಾನ ಅರ್ಚಕ ಕುಶಭಟ್ ಮಾತನಾಡಿ, ಇಗ್ಗುತಪ್ಪನ ನೆಲೆಯಲ್ಲಿ ಪುಸ್ತಕ ಪತ್ತಾಯ ಸ್ಥಾಪಿಸಿರುವುದು ವಿದ್ಯಾದಾನದ ಮತ್ತೊಂದು ಸ್ವರೂಪ. ಇಂತಹ ಮಹತ್ಕಾರ್ಯವನ್ನು ಮಾಡುತ್ತಿರುವ ಕೊಡವ ಅಕಾಡೆಮಿಯನ್ನು ಎಲ್ಲರೂ ಎಲ್ಲಾ ಕಾಲದಲ್ಲಿ ನೆನಪಿಸಿಕೊಳ್ಳುತ್ತಾರೆ. ಮನೆಮನೆಗಳಲ್ಲಿ ಒಂದೆಡೆ ಇಟ್ಟಿರುವ ಪುಸ್ತಕಗಳನ್ನೆಲ್ಲ ಇಂತಹ ಪುಸ್ತಕ ಪತ್ತಾಯದಲ್ಲಿ ಸಂಗ್ರಹಿಸಿ ಇಟ್ಟರೆ ಓದುಗರ ಅನುಕೂಲಕ್ಕೆ ಪ್ರಯೋಜನವಾಗುತ್ತದೆ. ಈ ಮಣ್ಣಿನಲ್ಲಿ ಕೊಡವ ಸಾಹಿತ್ಯ, ಸಂಸ್ಕೃತಿ ಬೆಳೆಯಬೇಕು, ಚಿರಕಾಲ ಉಳಿಯಬೇಕು ಎಂದು ಆಶಿಸಿದರು.
ಇಗ್ಗುತಪ್ಪ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಚಮಂಡ ರಾಜ ಪೂವಣ್ಣ ಅವರು ಪಾಡಿ ಶ್ರೀ ಇಗ್ಗುತಪ್ಪ ದೇವಸ್ಥಾನದಲ್ಲಿ ಸ್ಥಾಪಿಸಿರುವ ೨೦ನೇ ಕೊಡವ ಪುಸ್ತಕ ಪತ್ತಾಯದ ನೋಂದಣಿ ಬಾಪ್ತು ರೂ. ಹತ್ತು ಸಾವಿರದ ಚೆಕ್ಕನ್ನು ಅಕಾಡೆಮಿ ಅಧ್ಯಕ್ಷರಿಗೆ ಹಸ್ತಾಂತರಿಸಿದರು.
ಅಕಾಡೆಮಿ ವತಿಯಿಂದ ನೋಂದಣಿ ಪತ್ರವನ್ನು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಿಗೆ ನೀಡಲಾಯಿತು. ತದನಂತರ ಇಗ್ತುತಪ್ಪ ದೇವನೆಲೆಗೆ ಅಕಾಡೆಮಿ ವತಿಯಿಂದ ದುಡಿ ನೀಡಲಾಯಿತು.
ಸಮಾರಂಭದಲ್ಲಿ ಅಸಂಖ್ಯ ಭಕ್ತರು, ಅಕಾಡೆಮಿ ಸದಸ್ಯರಾದ ನಾಪಂಡ ಸಿ.ಗಣೇಶ, ಕುಡಿಯರ ಎಂ.ಕಾವೇರಪ್ಪ, ಪಾರುಪತ್ಯೆಗಾರ ಪರದಂಡ ಪ್ರಿನ್ಸ್, ದೇವತಕ್ಕರಾದ ಪರದಂಡ ವಿಠಲ ಭೀಮಯ್ಯ, ಪಂಚಾಯತ್ ಮಾಜಿ ಅಧ್ಯಕ್ಷ ಬಾಚಮಂಡ ಲವ ಚಿಣ್ಣಪ್ಪ, ಕಲಿಯಂಡ ಸಂಪನ್, ದೇವಸ್ಥಾನದ ಜ್ಯೋತಿಷಿ ಕಣಿಯಂಡ ನಾಣಯ್ಯ, ಮುಜರಾಯಿ ಇಲಾಖೆಯ ಹಿಂದಿನ ಅಧ್ಯಕ್ಷರಾಗಿದ್ದ ಕೂತಂಡ ಉತ್ತಪ್ಪರ ಪತ್ನಿ ವಾಣಿ ಉತ್ತಪ್ಪ ಸಂಸಾರ, ಉದಿಯಂಡ ಸುಬಾಶ್, ಸಮಾಜ ಸೇವಕ ಪಾಲಂದಿರ ಜಗ ಜೋಯಪ್ಪ, ಕೋಲತಂಡ ವಿಠಲ್ ಸುಬ್ರಮಣಿ, ಪರದಂಡ ಲಾಲ ಸುಬ್ಬಯ್ಯ, ಕುಡಿಯರ ಮುತ್ತಪ್ಪ ಇನ್ನಿತರರು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net