ಅರೆಸೇನಾ ಪಡೆ ನಿವೃತ್ತ ಯೋಧರ ಒಕ್ಕೂಟದ 14ನೇ ವಾರ್ಷಿಕ ಮಹಾಸಭೆ
ಕೊಡಗು ಜಿಲ್ಲೆಯ ಅರೆಸೇನಾ ಪಡೆ ನಿವೃತ್ತ ಯೋಧರ ಒಕ್ಕೂಟದ 14ನೇ ವಾರ್ಷಿಕ ಮಹಾಸಭೆಯಲ್ಲಿ ಮಾಜಿ ಯೋಧ ಮರ್ವಿನ್ ಕೊರಿಯಾ 60 ಸಾವಿರ ರೂ. ಮೌಲ್ಯದ ಗಣಕ ಯಂತ್ರವನ್ನು ಉಚಿತವಾಗಿ ಒಕ್ಕೂಟಕ್ಕೆ ನೀಡಿದರು. ಎಂ.ಜಿ. ಯತೀಶ್, ಪುಲಿಯಂಡ ಎಂ. ಚೆಂಗಪ್ಪ, ಬಿ.ಎನ್. ರಾಜಶೇಖರ್, ಎಸ್.ಎಸ್. ಲೀಲಾವೇಣಿ ಮತ್ತಿತರರು ಇದ್ದರು.
Published on:
Copied
Follow Us
ಮಡಿಕೇರಿ:
ಕೊಡಗು ಜಿಲ್ಲೆಯ ಅರೆಸೇನಾ ಪಡೆ ನಿವೃತ್ತ ಯೋಧರ ಒಕ್ಕೂಟದ 14ನೇ ವಾರ್ಷಿಕ ಮಹಾಸಭೆ ಒಕ್ಕೂಟದ ಅಧ್ಯಕ್ಷ ಎಂ.ಜಿ. ಯತೀಶ್ ಅಧ್ಯಕ್ಷತೆಯಲ್ಲಿ ಮಡಿಕೇರಿಯ ಕೊಡವ ಸಮಾಜದಲ್ಲಿ ಸೋಮವಾರ ನಡೆಯಿತು. ಈ ಸಂದರ್ಭ ಮಾತನಾಡಿದ ಎಂ.ಜಿ. ಯತೀಶ್, ಕೊಡಗು ಜಿಲ್ಲೆಯಲ್ಲಿ 4 ಸಾವಿರಕ್ಕೂ ಹೆಚ್ಚು ಅರೆಸೇನಾಪಡೆಯ ಹಾಲೀ ಹಾಗೂ ಮಾಜಿ ಯೋಧರಿದ್ದಾರೆ. ಈ ಪೈಕಿ 850 ಮಂದಿ ಸದಸ್ಯತ್ವ ಪಡೆದುಕೊಂಡಿದ್ದಾರೆ. ಒಕ್ಕೂಟ ಆರಂಭವಾಗಿ 13 ವರ್ಷಗಳು ಕಳೆದಿವೆ. ಮಡಿಕೇರಿಯ ಮಹದೇವಪೇಟೆಯ ಬಾಡಿಗೆ ಕಟ್ಟಡದಲ್ಲಿ ಸಂಘದ ಕಚೇರಿ ತೆರೆಯಲಾಗಿದೆ. ಆದರೂ ಪ್ರತ್ಯೇಕವಾಗಿ ಅರೆಸೇನಾಪಡೆಯ ಯೋಧರ ಸ್ಮಾರಕ ಭವನ, ಕ್ಯಾಂಟೀನ್ ವ್ಯವಸ್ಥೆ ಹಾಗೂ ಕಚೇರಿಯ ಅವಶ್ಯವಿದ್ದು, ಕುಶಾಲನಗರದ ಮುಳ್ಳುಸೋಗೆಯ ಸರ್ವೆ ನಂಬರ್ 11/1 ರಲ್ಲಿ 55 ಸೆಂಟು ಸರ್ಕಾರದ ಜಾಗವನ್ನು ಗುರುತಿಸಲಾಗಿದೆ. ಈ ಸಂಬAಧ ಅರೆಸೇನಾಪಡೆ ಯೋಧರ ಒಕ್ಕೂಟದಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೆ ಈ ಜಾಗದ ಒತ್ತುವರಿದಾರರು ನಮ್ಮ ಯೋಧರ ಸಂಘದ ಪದಾಧಿಕಾರಿ ಜಿ.ಕೆ. ದಿನೇಶ್ ಕುಮಾರ್ ಸೇರಿದಂತೆ ಯೋಧರ ಒಕ್ಕೂಟಕ್ಕೆ ಸಹಕರಿಸಿದ ಅಧಿಕಾರಿಗಳ ಮೇಲೂ ದಾವೆ ಹೂಡಿರುವುದು ಸರಿಯಲ್ಲ. ದೇಶ ಸೇವೆ ಮಾಡಿ ತವರಿಗೆ ಮರಳಿದ ಅರೆಸೇನಾಪಡೆ ಯೋಧರಿಗೆ ನ್ಯಾಯ ಯುತವಾಗಿ ಸಿಗಬೇಕಾದ ಭೂಮಿ ನೀಡದೇ ತೊಂದರೆ ಕೊಡುತ್ತಿರುವುದು ವಿಪರ್ಯಾಸ ಎಂದರು.
ಕೇಂದ್ರ ಸರ್ಕಾರದ ಆರೋಗ್ಯ ಸೇವೆಗಳ ಪ್ರಯೋಜನ ಹಾಗೂ ಬಳಕೆಯ ಕುರಿತು ಯತೀಶ್ ಮಾಹಿತಿ ನೀಡಿದರು. ದಶಕಗಳ ಕಾಲ ದೇಶದ ಗಡಿಗಳಲ್ಲಿ ಜೀವದ ಹಂಗು ತೊರೆದು ಸೇವೆ ಮಾಡಿ ಬಂದ ಯೋಧರಿಗೆ ಸರ್ಕಾರದ ನಿವೇಶನವನ್ನು ಪಡೆಯಲು ಹೋದರೆ ಒತ್ತುವರಿದಾರರು ಅನಗತ್ಯ ದೂರು ದಾಖಲಿಸಿರುವುದು ಸಮಂಜಸವಲ್ಲ ಎಂದು ಯೋಧರ ಒಕ್ಕೂಟದ ಜಿ.ಕೆ. ದಿನೇಶ್ ಕುಮಾರ್ ಹಾಗೂ ನೂರೇರಾ ಎಂ. ಭೀಮಯ್ಯ ಬೇಸರ ವ್ಯಕ್ತಪಡಿಸಿದರು.
ಉಪಾಧ್ಯಕ್ಷ ಪುಲಿಯಂಡ ಎಂ. ಚೆಂಗಪ್ಪ ಮಾತನಾಡಿದರು.
ಅರೆಸೇನಾಪಡೆಯ ಮಾಜಿ ಯೋಧರಾದ 80ರ ಹರೆಯದ ಬಿ.ಡಿ. ಗೋಪಾಲ, ಎಂ.ಎ. ಪೂಣಚ್ಚ, ಸಿ.ಜೆ. ಬೋಪಯ್ಯ, ಪಿ.ಎಂ. ಪೂವಯ್ಯ, ಎಂ.ಕೆ. ಅಪ್ಪಯ್ಯ ಅವರನ್ನು ಮಹಾಸಭೆಯಲ್ಲಿ ಸನ್ಮಾನಿಸಲಾಯಿತು. ಇದೇ ಸಂದರ್ಭ ಮಾಜಿ ಯೋಧ ಮರ್ವಿನ್ ಕೊರಿಯಾ ಅವರು 60 ಸಾವಿರ ರೂ. ಮೌಲ್ಯದ ಗಣಕ ಯಂತ್ರವನ್ನು ಉಚಿತವಾಗಿ ಒಕ್ಕೂಟಕ್ಕೆ ನೀಡಿದರು. ಇದೇ ವೇಳೆ ಯೋಧರ ಒಕ್ಕೂಟದ ನೂತನ ಉಪಾಧ್ಯಕ್ಷರಾಗಿ ಹರೀಶ್ ಕುಮಾರ್ ಗೌಡ ಅವಿರೋಧವಾಗಿ ಆಯ್ಕೆಯಾದರು.
ಕಾರ್ಯದರ್ಶಿ ಬಿ.ಎಂ. ರವೀಂದ್ರ, ಒಕ್ಕೂಟದ ನಿರ್ದೇಶಕ ಬಿ.ಎನ್. ರಾಜಶೇಖರ್, ಎಸ್.ಎಸ್. ಲೀಲಾವೇಣಿ, ಪುಟ್ಟೇಗೌಡ, ಮನೋಹರ, ಲೋಕೇಶ್, ತಿಮ್ಮಯ್ಯ, ಹರೀಶ್ ಕುಮಾರ್ ಗೌಡ, ನಳಿನಿ, ಗೋಪಾಲಕೃಷ್ಣ, ಅಶೋಕ್, ಕಾರ್ಯಪ್ಪ, ಪಿ.ಎಂ.ಲೋಕೇಶ್, ಕುದುಪಜೆ ಚಂದ್ರೇಶ್ ಇದ್ದರು.
ಮೃತ ಪಟ್ಟ ಒಕ್ಕೂಟದ ಸದಸ್ಯರಿಗೆ ಸಭೆಯ ಆರಂಭದಲ್ಲಿ ಸಂತಾಪ ಕೋರಲಾಯಿತು.