ದೂರದೃಷ್ಟಿಯ ನಾಯಕ ಡಿ.ದೇವರಾಜ ಅರಸು

ನಗರದ ಗಾಂಧಿ ಭವನದಲ್ಲಿ ಗುರುವಾರ ನಡೆದ ಮಾಜಿ ಮುಖ್ಯಮಂತ್ರಿ ದಿ.ಡಿ.ದೇವರಾಜ ಅರಸು ಅವರ ೧೧೧ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಎಸ್.ಜೆ.ಸೋಮಶೇಖರ್, ಆರ್.ಎನ್.ಬಿಂದುಮಣಿ, ಶೇಖರ್ ಇತರರಿದ್ದರು.
ನಗರದ ಗಾಂಧಿ ಭವನದಲ್ಲಿ ಗುರುವಾರ ನಡೆದ ಮಾಜಿ ಮುಖ್ಯಮಂತ್ರಿ ದಿ.ಡಿ.ದೇವರಾಜ ಅರಸು ಅವರ ೧೧೧ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಎಸ್.ಜೆ.ಸೋಮಶೇಖರ್, ಆರ್.ಎನ್.ಬಿಂದುಮಣಿ, ಶೇಖರ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ದೂರದೃಷ್ಟಿಯ ನಾಯಕ ಡಿ.ದೇವರಾಜ ಅರಸು
  • ಡಿ.ದೇವರಾಜ ಅರಸು ಅವರ ೧೧೧ನೇ ಜನ್ಮ ದಿನಾಚರಣೆಯಲ್ಲಿ ಸೋಮಶೇಖರ್

ಮಡಿಕೇರಿ: ಡಿ.ದೇವರಾಜ ಅರಸು ಅವರು ರಾಜ್ಯದಲ್ಲಿ ಹೊಸ ಕ್ರಾಂತಿಯನ್ನು ಉಂಟುಮಾಡಿ ರಾಜ್ಯದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ತಿಳಿಸಿದರು.

ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಗಾಂಧಿ ಭವನದಲ್ಲಿ ಗುರುವಾರ ನಡೆದ ಮಾಜಿ ಮುಖ್ಯಮಂತ್ರಿ ದಿ.ಡಿ.ದೇವರಾಜ ಅರಸು ಅವರ ೧೧೧ನೇ ಜನ್ಮ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಡಿ.ದೇವರಾಜ ಅರಸು ಅವರು ಉಳುವವನೆ ಭೂಮಿಯ ಒಡೆಯ ಕಾಯ್ದೆ ಜಾರಿಗೊಳಿಸುವ ಮೂಲಕ ಭೂಮಿಯ ಹಕ್ಕನ್ನು ಕೊಡಿಸಿ ಬಡವರಿಗೆ ಬೆಳಕಾಗಿ ಕಂಡರು. ಹಾವನೂರು ಆಯೋಗ ರಚಿಸುವ ಮೂಲಕ ಸಣ್ಣ ಸಣ್ಣ ಸಮಾಜಗಳು ಶಿಕ್ಷಣ ಮತ್ತು ಉದ್ಯೋಗ ಪಡೆಯಲು ಸಾಮಾಜಿಕ ಕ್ರಾಂತಿಗೆ ಚಾಲನೆ ನೀಡಿದರು ಎಂದು ತಿಳಿಸಿದರು.
ಧ್ವನಿ ಇಲ್ಲದವರಿಗೆ ಉಸಿರಾಡುವಂತೆ ಮಾಡಿದ ಡಿ.ದೇವರಾಜ ಅರಸು ಅವರನ್ನು ಸದಾ ಸ್ಮರಿಸುವಂತಾಗಬೇಕು. ಹಲವು ಕ್ರಾಂತಿಕಾರಕ ಕಾರ್ಯಕ್ರಮ ಜಾರಿಗೊಳಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಇತಿಹಾಸವನ್ನು ತಿಳಿದುಕೊಳ್ಳುವಂತಾಗಬೇಕು ಎಂದರು.
ಮೈಸೂರು ಉತ್ತರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ.ಸುರೇಶ್ ಮಾತನಾಡಿ, ದೇವರಾಜ ಅರಸು ಅವರ ಜೀವನ ಚರಿತ್ರೆಯನ್ನು ಅಧ್ಯಯನ ಮಾಡಿದಾಗ ಡಾ.ರಾಜ್ ಕುಮಾರ್ ಅವರ ಬದುಕು ನೆನಪಿಗೆ ಬರುತ್ತದೆ. ಡಿ.ದೇವರಾಜ ಅರಸು ಅವರು ಸಾಮಾಜಿಕ ಕ್ರಾಂತೀಯ ಹರಿಕಾರರಾಗಿದ್ದು, ಅವರು ಮುಖ್ಯಮಂತ್ರಿ ಆಗಿದ್ದ ಅಧಿಕಾರ ಅವಧಿಯಲ್ಲಿ ಸಮಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಿದ್ದಾರೆ. ಸಮಾಜದ ಕಟ್ಟ ಕಡೆಯವರು ಸಹ ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂಬ ಉದ್ದೇಶವನ್ನು ಹೊಂದಿದ್ದ ಅಪರೂಪದ ಮಹಾನ್ ಚೇತನ ಎಂದು ನುಡಿದರು.
ರಾಜ್ಯದ ಸಾಮಾಜಿಕ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿದ ಡಿ.ದೇವರಾಜ ಅರಸು ಅವರ ವ್ಯಕ್ತಿತ್ವ ಬಹು ಅಪರೂಪ. ಸಾಹಿತ್ಯ ಪ್ರೇಮಿಯಾಗಿದ್ದ ಡಿ.ದೇವರಾಜ ಅರಸು ಅವರು ಅಧ್ಯಯನಕ್ಕೆ ಹೆಚ್ಚಿನ ಒತ್ತು ನೀಡಿದ್ದರು ಎಂದು ಮೈಸೂರು ಉತ್ತರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಆರ್.ಎನ್.ಬಿಂದುಮಣಿ ಮಾತನಾಡಿ, ವಿದ್ಯಾರ್ಥಿಗಳು ಇತರರನ್ನು ಅನುಕರಿಸುವ ಬದಲು, ತಮ್ಮ ಆಸಕ್ತಿ ಹಾಗೂ ಸಾಮರ್ಥ್ಯವನ್ನು ಅರಿತುಕೊಂಡು ಜೀವನದಲ್ಲಿ ಮುಂದುವರಿಯಬೇಕು. ಕೇವಲ ಪರೀಕ್ಷೆಯ ಫಲಿತಾಂಶವನ್ನೇ ಆಧರಿಸಿ ಜೀವನದ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಓದಿನ ಜೊತೆಗೆ ಉತ್ತಮ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದು ಅತ್ಯಂತ ಮುಖ್ಯ. ಪ್ರತಿಯೊಬ್ಬರೂ ತಮ್ಮ ಆಸಕ್ತಿಯ ಕ್ಷೇತ್ರವನ್ನು ಗುರುತಿಸಿಕೊಂಡು, ಅದರತ್ತ ಧೈರ್ಯದಿಂದ ಹೆಜ್ಜೆ ಇಡಬೇಕು ಎಂದರು.
ತಮ್ಮ ಭವಿಷ್ಯದ ಬಗ್ಗೆ ಸ್ಪಷ್ಟತೆ ಮೂಡಿಸಿಕೊಳ್ಳುವುದೇ ಸಾಧನೆಯ ಮೊದಲ ಹೆಜ್ಜೆ. ತಮಗೆ ಏನು ಬೇಕು ಎಂಬುದನ್ನು ಅರಿತುಕೊಂಡರೆ ಸಾಧನೆಯ ಅರ್ಧದಷ್ಟು ಕೆಲಸ ಪೂರ್ಣಗೊಂಡಂತೆ. ಗುರಿ ಸ್ಪಷ್ಟವಾದ ಬಳಿಕ ಅದನ್ನು ಸಾಧಿಸುವುದು ಸುಲಭವಾಗುತ್ತದೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಕೇಶವ ಕಾಮತ್ ಮಾತನಾಡಿ, ಡಿ.ದೇವರಾಜ ಅರಸು ಅವರು ರಾಜಕೀಯ ಲಾಭ ಅಥವಾ ಮತಬ್ಯಾಂಕ್ ದೃಷ್ಟಿಯಿಂದ ನಿರ್ಧಾರ ಕೈಗೊಳ್ಳದೆ, ಜನಹಿತವನ್ನು ಪ್ರಧಾನವಾಗಿ ಇಟ್ಟುಕೊಂಡು ಆಡಳಿತ ನಡೆಸಿದರು. ವಿಶೇಷವಾಗಿ ಭೂ ಸುಧಾರಣಾ ಕಾಯ್ದೆಯ ಮೂಲಕ ಉಳುವವನೇ ಹೊಲದೊಡೆಯ ಂಬ ತತ್ವವನ್ನು ಜಾರಿಗೆ ತಂದು, ಭೂಮಾಲೀಕರ ಕೈಯಲ್ಲಿದ್ದ ಭೂಮಿಯನ್ನು ಗೇಣಿದಾರರಿಗೆ ದೊರಕಿಸುವಲ್ಲಿ ಧೈರ್ಯಶಾಲಿ ಹೆಜ್ಜೆ ಇಟ್ಟರು ಎಂದು ಹೇಳಿದರು.
ಡಿ.ದೇವರಾಜ ಅರಸು ಅವರ ಸಾಮಾಜಿಕ ಸುಧಾರಣೆಗಳ ಫಲವಾಗಿ ಲಕ್ಷಾಂತರ ಜನರು ಪ್ರಯೋಜನ ಪಡೆದಿದ್ದು, ಹಿಂದುಳಿದ ವರ್ಗಗಳ ಜನರು ಸಮಾಜದ ಮುಖ್ಯವಾಹಿನಿಗೆ ಬಂದು ಸರ್ಕಾರದ ವಿವಿಧ ವ್ಯವಸ್ಥೆಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿದೆ. ಇಂತಹ ಮಹತ್ವದ ಸುಧಾರಣೆ ಕೈಗೊಂಡ ನಾಯಕರನ್ನು ಸಮಾಜ ಸದಾ ಸ್ಮರಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಪ್ರಮುಖರಾದ ಮೇದಪ್ಪ, ತಹಶೀಲ್ದಾರ್ ಶ್ರೀಧರ, ಜಿಲ್ಲಾ ಖಜಾನಾಧಿಕಾರಿ ರಘುನಾಥ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಗಣಪತಿ, ಡಿಎಸ್‌ಎಸ್ ಜಿಲ್ಲಾ ಸಂಚಾಲಕರಾದ ದಿವಾಕರ, ಲೋಕೋಪಯೋಗಿ ಇಲಾಖೆ ಇಇ ಪ್ರಭು, ಜಿಲ್ಲಾ ಕಾರ್ಮಿಕ ಅಧಿಕಾರಿ ಎಂ.ಎಂ.ಯತ್ನಟ್ಟಿ, ಜಿ.ಪಂ.ಎಂಜಿನಿಯರ್ ನಾಯಕ್, ಜಯಣ್ಣ, ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾದ ಲೋಕೇಶ್, ಪ್ರಕಾಶ್, ಭಾರತಿ, ಚಂದ್ರು, ಬಿಸಿಎಂ ಇಲಾಖೆ ವ್ಯವಸ್ಥಾಪಕರಾದ ಶಿವಶಂಕರ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಶೇಖರ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net