ಮತಾಂತರದ ವಿರುದ್ಧ ಹೋರಾಡಿದ ವೀರ

ಕಾರ್ಯಕ್ರಮ ಉದ್ಘಾಟಿಸಿದ ಅತಿಥಿಗಳು.
ಕಾರ್ಯಕ್ರಮ ಉದ್ಘಾಟಿಸಿದ ಅತಿಥಿಗಳು.
Published on
ಗೋಣಿಕೊಪ್ಪಲು: ಭಗವಾನ್ ಬಿರ್ಸಾ ಮುಂಡಾ ಅವರ 151ನೇ ಜಯಂತಿಯನ್ನು ಸೋಮವಾರ ತಿತಿಮತಿ ಸಮುದಾಯ ಭವನದಲ್ಲಿ ಆಚರಿಸಲಾಯಿತು.

ಆದಿವಾಸಿಗಳು ಮರೂರು ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆ ಮುಂಭಾಗದಿಂದ ತಿತಿಮತಿ ಶಾಲೆವರೆಗೆ ಮೆರವಣಿಗೆ ನಡೆಸಿ ಬಿರ್ಸಾಮುಂಡಾ ಜಯಂತಿಯ ಬಗ್ಗೆ ಜನರಿಗೆ ಅರಿವು ಮೂಡಿಸಲಾಯಿತು.
ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ತಾಲೂಕು ಪಂಚಾಯಿತಿ ವಿವಿಧ ಆದಿವಾಸಿ ಬುಡಕಟ್ಟು ಸಂಘಗಳ ಸಹಯೋಗದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ನಂತರ ಬುಡಕಟ್ಟು ಸಮುದಾಯದ ಸಂಸ್ಕೃತಿಗಳನ್ನು ಅನಾವರಣಗೊಳಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿರಾಜಪೇಟೆ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಜಾನ್ಸನ್, ತನ್ನ ಸಣ್ಣ ಪ್ರಾಯದಲ್ಲೇ ಬಿರ್ಸಾಮುಂಡಾ ಬ್ರಿಟಿಷರ ವಿರುದ್ಧ ಹೋರಾಡಿ ತನ್ನ ಸಮುದಾಯದ ಉಳಿವಿಗಾಗಿ ಶ್ರಮಿಸಿದ ಹೋರಾಟಗಾರ. ಆತನ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ಅಗತ್ಯತೆ ಇದೆ. ಬುಡಕಟ್ಟು ಸಮುದಾಯವನ್ನು ಮತಾಂತರ ಮಾಡುವ ಹುನ್ನಾರದ ವಿರುದ್ಧ ಹೋರಾಡಿದ ವೀರ. ಅವರ ಸಾಹಸ, ಧೈರ್ಯಗಳನ್ನು ಯುವ ಸಮುದಾಯ ಮೈಗೂಡಿಸಿಕೊಳ್ಳಬೇಕಿದೆ ಎಂದರು.

ಬಿರ್ಸಾಮುಂಡಾ ಅವರ ಹೋರಾಟವನ್ನು ಯುವಪೀಳಿಗೆಗೆ ತಿಳಿಸಿಕೊಡುವ ಹೊಣೆಗಾರಿಕೆ ಇಲಾಖೆ ಮತ್ತು ಸಂಘ ಸಂಸ್ಥೆಗಳದ್ದಾಗಿದೆ. ಹೀಗಾಗಿ ವೀರನ ಜೀವನ ಚರಿತ್ರೆ ಪಠ್ಯಪುಸ್ತಕಗಳಲ್ಲಿ ಅಳವಡಿಕೆಯಾಗಬೇಕು ಎಂದು ಒತ್ತಾಯಿಸಿದರು.

ಅತಿ ಹೆಚ್ಚು ಆದಿವಾಸಿಗಳಿರುವ ತಿತಿಮತಿ ಭಾಗದಲ್ಲಿ ಅವರ ಪುತ್ಥಳಿ ನಿರ್ಮಾಣ ಮಾಡುವ ಮೂಲಕ ಬಿರ್ಸಾಮುಂಡಾ ಅವರನ್ನು ನೆನೆಯುವ ಕಾರ್ಯ ನಡೆಯಬೇಕಿದೆ ಎಂದರು.

ಜಿಲ್ಲಾ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಪಿ.ಆರ್.ಪಂಕಜಾ ಮಾತನಾಡಿ, ನಮ್ಮ ಹಕ್ಕು ಮತ್ತು ಸವಲತ್ತುಗಳಿಗಾಗಿ ಹೋರಾಡುವ ಮನೋಭಾವ ಬೆಳೆಸಿಕೊಳ್ಳಲು ಬಿರ್ಸಾಮುಂಡಾ ಅವರ ಜೀವನಗಾಥೆ ನಮಗೆ ದಾರಿದೀಪವಾಗಲಿವೆ. ಅಲ್ಲದೆ ನಮ್ಮ ಸಂಸ್ಕೃತಿ, ಪರಂಪರೆ, ಪದ್ಧತಿಗಳನ್ನು ಬಿಟ್ಟು ಇತರ ವಿಚಾರಗಳನ್ನು ಅನುಸರಿಸುತ್ತಾ ಹೋದಾಗ ನಮ್ಮ ಸಮುದಾಯವು ಈ ಸಮಾಜದಿಂದ ಕರಗಿ ಹೋಗುವ ಅಪಾಯ ಎದುರಾಗಲಿದೆ ಎಂದರು.

ಜಿಲ್ಲಾ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಸಮನ್ವಯ ಅಧಿಕಾರಿ ಹೊನ್ನೇಗೌಡ ಎಸ್.ಮಾತನಾಡಿ, ಆದಿವಾಸಿಗಳ ಶೈಕ್ಷಣಿಕ ಪ್ರಗತಿಗೆ ಇಲಾಖೆ ಹಲವು ಕ್ರಮ ಕೈಗೊಂಡಿದೆ. ಅದರಂತೆ ಸಮುದಾಯದ ಬೆಳವಣಿಗೆಗೆ ಪೂರಕವಾಗಿ ಭವನಗಳ ನಿರ್ಮಾಣ ಯೋಜನೆ ರೂಪಿಸಲಾಗಿದೆ. ತಿತಿಮತಿಯಲ್ಲಿ ಜಾಗ ಗುರುತಿಸಲಾಗಿದ್ದು, ಬಿರ್ಸಾಮುಂಡಾ ಆದಿವಾಸಿ ಭವನ ನಿರ್ಮಾಣವಾಗುವ ಕನಸು ನನಸಾಗಲಿದೆ. ಜತೆಗೆ ಮಡಿಕೇರಿಯಲ್ಲೂ ಇದು ಸಾಕಾರಗೊಳ್ಳಲಿದೆ ಎಂದರು.
ಮಣಿ ಕುಂಞ, ಜೆ.ಕೆ.ತಿಮ್ಮ, ಪಿ.ಎಸ್.ಮುತ್ತಾ, ವೈ.ಎಂ.ಕಾಳ, ದಿನೇಶ್, ಪಿ.ಟಿ.ರಾಜು, ಸುಬ್ರು, ಪಿ.ಜೆ.ಮಣಿ, ರಾಮಕೃಷ್ಣ, ರಮೇಶ್, ಜೆ.ಕೆ.ತಿಮ್ಮ, ಪಿ.ಕೆ.ಚಂದಾ, ಸರೋಜ, ಶಾಂತಿ, ಪಿ.ಆರ್. ಪಂಕಜಾ, ಜೆ.ಎಂ.ಸೋಮಯ್ಯ, ಪಿ.ಎಸ್. ಶಾಂತ, ಗೌರಿ, ಪಿ.ಎಸ್.ಕರ್ಪ, ಜೆ.ಕೆ.ರಾಜು, ಪಿ.ಎಸ್.ರಾಜೇಂದ್ರ, ರಾಣಿ, ಪ್ರತಿಮಾ, ಮಂಜುಳಾ, ಪಿ.ಎಸ್.ದಿವ್ಯಾ, ಲಕ್ಷ್ಮೀ ಸಂದೇಶ, ಜೆ.ಕೆ ಮುತ್ತಮ್ಮ, ಬಿ.ಮಕೆ ಮಣಿ ಅವರನ್ನು ಸನ್ಮಾನಿಸಲಾಯಿತು. ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ತೇಜರಾಜ ಬಿ.ಅಲಸಬಾಳ ಮತ್ತು ಪ್ರಶಾಂತ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net