ಅರಣ್ಯ ಇಲಾಖೆಯ ಡಿಆರ್‌ಎಫ್‌ಒ ಪುನೀತ್ ಮಾತನಾಡಿ, ಹೆಚ್ಚುತ್ತಿರುವ ಅರಣ್ಯ ನಾಶ, ಒತ್ತುವರಿಯಿಂದ ಕಾಡಿನಿಂದ ವನ್ಯಪ್ರಾಣಿಗಳು ನಾಡಿಗೆ ಬರುತ್ತಿವೆ. ಜಾಗತಿಕ ತಾಪಮಾನವು ಹೆಚ್ಚಾಗುತ್ತಿದೆ. ಹವಾಮಾನ ವೈಪರೀತ್ಯಗಳು ಸಂಭವಿಸುತ್ತಿದೆ. ಪ್ಲಾಸ್ಟಿಕ್ ಬಳಕೆ ಅರಣ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಆದ್ದರಿಂದ ಪ್ಲಾಸ್ಟಿಕ್ ಬಳಸದಂತೆ ಕರೆ ನೀಡಿದರು. ವನ್ಯಜೀವಿ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಮಕ್ಕಳಲ್ಲಿ ಪರಿಸರ ಪ್ರೇಮ ಹೆಚ್ಚಾಗಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಲಿದೆ ಎಂದರು.
ಶಿಕ್ಷಣ ಇಲಾಖೆಯ ಸಿಆರ್‌ಪಿ ದಿನೇಶ್ ಮಾತನಾಡಿ, ಮಕ್ಕಳಲ್ಲಿ ಇಂತಹ ಚಟುಚಟಿಕೆ ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ. ಪರಿಸರವನ್ನು ನಾವು ಕಾಪಾಡಿದರೆ ಅದು ನಮ್ಮನ್ನು ರಕ್ಷಿಸುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸುಪ್ರಜ ಗುರುಕುಲ ಸಂಸ್ಥೆ ಪ್ರಾಂಶುಪಾಲೆ ಡಿ. ಸುಜಲಾದೇವಿ, ಅರಣ್ಯದ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಅನಿವಾರ್ಯವಾಗಿವೆ. ಮಕ್ಕಳು ಇಂತಹ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬೇಕು. ಈ ಹಿಂದೆ ಮಕ್ಕಳಿಗೆ ಅವಕಾಶ ಕಡಿಮೆ ಇತ್ತು. ಇಂದು ಮಕ್ಕಳಿಗೆ ಅನೇಕ ಉತ್ತಮ ಅವಕಾಶಗಳಿದ್ದು, ಅದನ್ನು ಬಳಸಿಕೊಳ್ಳಬೇಕು. ಪಾಲಕರು ತಮ್ಮ ಮಕ್ಕಳಿಗೆ ಯಾವುದರ ಮೇಲೆ ಆಶಕ್ತಿ ಇದೆ ಎಂಬುದನ್ನು ನೋಡಿ ಅದಕ್ಕೆ ಪ್ರೋತ್ಸಾಹ ನೀಡಬೇಕಿದೆ. ಅನೇಕ ಮಕ್ಕಳಲ್ಲಿ ಉತ್ತಮ ಪ್ರತಿಭೆಗಳಿದ್ದು, ಅವುಗಳಿಗೆ ಪ್ರೋತ್ಸಾಹ ಸಿಗದೆ ನುಚ್ಚು ನೂರು ಆಗುತ್ತಿದೆ ಎಂದರು.