ಕಾವೇರಿ ಯಾತ್ರೆ ಪೂಂಪ್‌ಹಾರ್‌ನಲ್ಲಿ ಸಮಾಪ್ತಿ

 18ಆದರ್ಶ್‌ಕೆಡಿಜಿಎ4: ಸ್ವಚ್ಛ ಕಾವೇರಿಗಾಗಿ 15ನೇ ವರ್ಷದ ಕಾವೇರಿ ಜಾಗೃತಿ ರಥಯಾತ್ರೆ ಪೂಂಪ್ ಹಾರ್‌ನಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜತೆಗೆ ಪವಿತ್ರ ಕಾವೇರಿಯನ್ನು ಸಮುದ್ರ ಸಂಗಮದಲ್ಲಿ ವಿಸರ್ಜನೆಗೊಳಿಸುವ ಮೂಲಕ ಸೋಮವಾರ ಸಮಾಪ್ತಿಗೊಂಡಿತು. ರಮಾನಂದ ಸ್ವಾಮೀಜಿ, ಬಾಲ ರಘುನಾಥಾನಂದ ಸ್ವಾಮೀಜಿ, ಶಿವರಾಮನಂದ ಸ್ವಾಮೀಜಿ ಇತರರಿದ್ದರು.
18ಆದರ್ಶ್‌ಕೆಡಿಜಿಎ4: ಸ್ವಚ್ಛ ಕಾವೇರಿಗಾಗಿ 15ನೇ ವರ್ಷದ ಕಾವೇರಿ ಜಾಗೃತಿ ರಥಯಾತ್ರೆ ಪೂಂಪ್ ಹಾರ್‌ನಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜತೆಗೆ ಪವಿತ್ರ ಕಾವೇರಿಯನ್ನು ಸಮುದ್ರ ಸಂಗಮದಲ್ಲಿ ವಿಸರ್ಜನೆಗೊಳಿಸುವ ಮೂಲಕ ಸೋಮವಾರ ಸಮಾಪ್ತಿಗೊಂಡಿತು. ರಮಾನಂದ ಸ್ವಾಮೀಜಿ, ಬಾಲ ರಘುನಾಥಾನಂದ ಸ್ವಾಮೀಜಿ, ಶಿವರಾಮನಂದ ಸ್ವಾಮೀಜಿ ಇತರರಿದ್ದರು.
Published on
ಕುಶಾಲನಗರ: ಸ್ವಚ್ಛ ಕಾವೇರಿಗಾಗಿ 15ನೇ ವರ್ಷದ ಕಾವೇರಿ ಜಾಗೃತಿ ರಥಯಾತ್ರೆಯು ಪೂಂಪ್ ಹಾರ್‌ನಲ್ಲಿ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಪವಿತ್ರ ಕಾವೇರಿಯನ್ನು ಸಮುದ್ರ ಸಂಗಮದಲ್ಲಿ ವಿಸರ್ಜನೆಗೊಳಿಸುವ ಮೂಲಕ ಸೋಮವಾರ ಸಮಾಪ್ತಿಗೊಂಡಿತು.

ಅಖಿಲ ಭಾರತ ಸನ್ಯಾಸಿ ಸಂಘ ಕಾವೇರಿ ನದಿ ಸ್ವಚ್ಛತಾ ಆಂದೋಲನ, ಕಾವೇರಿ ರಿವರ್ ವಾಟರ್ ಪ್ರೊಟೆಕ್ಷನ್ ಟ್ರಸ್ಟ್, ನಮಾಮಿ ಕಾವೇರಿ ಸಹಯೋಗದೊಂದಿಗೆ ತಲಕಾವೇರಿ ಕ್ಷೇತ್ರದಿಂದ ಆರಂಭಗೊಂಡ ರಥಯಾತ್ರೆಯು ಪವಿತ್ರ ಕಾವೇರಿ ತೀರ್ಥಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಕಾವೇರಿ ನದಿ ಮತ್ತು ಬಂಗಾಳ ಕೊಲ್ಲಿ ಸಮುದ್ರ ಸಂಗಮದಲ್ಲಿ ವಿಶೇಷ ಪೂಜೆ ಸಲ್ಲಿಸಿ ದಕ್ಷಿಣ ಭಾರತದ ಸಾಧುಸಂತರ ಸಮ್ಮುಖದಲ್ಲಿ ಯಾತ್ರೆಯು ಸಮಾಪ್ತಿಗೊಂಡಿತು.

ಅ.24ರಂದು ಶ್ರೀ ಕ್ಷೇತ್ರ ತಲಕಾವೇರಿಯಲ್ಲಿ ಚಾಲನೆಗೊಂಡ ರಥಯಾತ್ರೆಯು ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನದಿ ತಟಗಳಲ್ಲಿ ಕಾವೇರಿ ಮಾತೆಯನ್ನು ಹೊತ್ತ ರಥದ ಮೂಲಕ ಸಾಗಿ ಜನರಿಗೆ ಕಾವೇರಿ ನದಿ ಸಂರಕ್ಷಣೆ ಬಗ್ಗೆ ಅರಿವು ಜಾಗೃತಿ ಮೂಡಿಸುವ ಕಾರ್ಯ ಮೂರು ವಾರಗಳಿಂದ ನಡೆಯಿತು.

ಅಖಿಲ ಭಾರತ ಸನ್ಯಾಸಿ ಸಂಘದ ಸಂಸ್ಥಾಪಕ ರಮಾನಂದ ಸ್ವಾಮೀಜಿ ನೇತೃತ್ವದಲ್ಲಿ ಸಾಗಿದ ಕಾವೇರಿ ರಥಯಾತ್ರೆಯಲ್ಲಿ ದಕ್ಷಿಣ ಭಾರತದ ಸುಮಾರು 50ಕ್ಕೂ ಅಧಿಕ ಸಾಧು, ಸಂತರು ಪಾಲ್ಗೊಂಡಿದ್ದರು. ನ.16ರಂದು ತಮಿಳುನಾಡಿನ ಪೂಂಪ್ ಹಾರ್ ತಲುಪಿದ ಯಾತ್ರೆ ತಂಡ ಪವಿತ್ರ ಕಾವೇರಿ ತೀರ್ಥವನ್ನು ಬಂಗಾಳ ಕೊಲ್ಲಿ ಸಮುದ್ರ ಸಂಗಮದಲ್ಲಿ ವಿಸರ್ಜಿಸಿ ಸ್ವಚ್ಛ ಕಾವೇರಿಗಾಗಿ ಮತ್ತು ನಾಡಿನ ಶಾಂತಿಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿತು. ಇದಕ್ಕೂ ಮುನ್ನ ಕಾವೇರಿ ಪಟ್ಟಣಂ ಬಳಿ ರತ್ನ ಪೂರ್ಣೇಶ್ವರಿ ದೇವಾಲಯದಲ್ಲಿ ತಲಕಾವೇರಿಯಿಂದ ರಥದ ಮೂಲಕ ಒಯ್ದು ಪವಿತ್ರ ತೀರ್ಥಕ್ಕೆ ಪೂಜೆ ಸಲ್ಲಿಸಲಾಯಿತು.

ಈ ಸಂದರ್ಭ ಮಾತನಾಡಿದ ಜಾಗೃತಿ ಯಾತ್ರೆ ಪ್ರಮುಖರಾದ ಶ್ರೀ ಬಾಲ ರಘುನಾಥಾನಂದ ಸ್ವಾಮೀಜಿ, 15ನೇ ವರ್ಷದ ಯಾತ್ರೆ ಎರಡೂ ರಾಜ್ಯಗಳಲ್ಲಿ ಸಾಗಿ ಬಂದಿದ್ದು, ಜನರಲ್ಲಿ ಜೀವನದಿ ಕಾವೇರಿ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಬಹುತೇಕ ಯಶಸ್ಸು ಕಂಡಿದೆ. ಕಾವೇರಿ ಹಲವು ರೀತಿಯಲ್ಲಿ ಕಲುಷಿತಗೊಳ್ಳುತ್ತಿದ್ದು, ನದಿಯ ಸಂರಕ್ಷಣೆಗಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಯೋಜನೆಗಳನ್ನು ರೂಪಿಸಬೇಕಾಗಿದೆ. ಈ ಸಂಬಂಧ ತಮಿಳುನಾಡು, ಕರ್ನಾಟಕ ರಾಜ್ಯಗಳ ಕಾವೇರಿ ನದಿ ಸ್ವಚ್ಛತಾ ಆಂದೋಲನದ ಪ್ರತಿನಿಧಿಗಳು ಸರ್ಕಾರದ ಬಳಿ ನಿಯೋಗ ತೆರಳಿ ನಮಾಮಿ ಕಾವೇರಿ ಯೋಜನೆ ರೂಪಿಸುವ ಸಂಬಂಧ ಮನವಿ ಸಲ್ಲಿಸಲು ಚಿಂತನೆ ನಡೆಸಲಾಗಿದೆ ಎಂದರು.

ದಕ್ಷಿಣ ಭಾರತದಲ್ಲಿ ನದಿ ಸಂರಕ್ಷಣೆಗಾಗಿ ಕಟ್ಟುನಿಟ್ಟಿನ ಕಾನೂನು ರೂಪುಗೊಳ್ಳಬೇಕಾಗಿದೆ. ಆ ಮೂಲಕ ನದಿ ಜಲಮೂಲಗಳ ಸಂರಕ್ಷಣೆ ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಅವರು, ರಾಜ್ಯಗಳ ನಡುವೆ ನೀರಿನ ಪಾಲಿಗಾಗಿ ಮಾತ್ರ ಹೋರಾಟ ಸೀಮಿತವಾಗಬಾರದು. ನದಿಗಳ ಸಂರಕ್ಷಣೆಗೆ ಕೂಡ ಸರಕಾರಗಳ ಮೂಲಕ ಯೋಜನೆಗಳು ರೂಪುಗೊಳ್ಳಬೇಕಾಗಿದೆ ಎಂದರು. ಈ ಸಂದರ್ಭ ಅಖಿಲ ಭಾರತ ಸನ್ಯಾಸಿಗಳ ಸಂಘದ ಶಿವರಾಮನಂದ ಸ್ವಾಮೀಜಿ, ಕಾವೇರಿ ರಿವರ್ ವಾಟರ್ ಪ್ರೊಟೆಕ್ಷನ್ ಟ್ರಸ್ಟ್‌ನ ಸಂಚಾಲಕ ವಾಸು ರಾಮಚಂದ್ರನ್, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ರಾಜ್ಯ ಅಧ್ಯಕ್ಷ ಎಂ.ಎನ್.ಚಂದ್ರಮೋಹನ್, ನಮಾಮಿ ಕಾವೇರಿ ಅಧ್ಯಕ್ಷ ವನಿತಾ ಚಂದ್ರಮೋಹನ್, ಗೌರವ ಸಲಹೆಗಾರರಾದ ಸುಮನ ಮಳಲಗದ್ದೆ, ದೀಪಕ್ ಕುಮಾರ್, ಅಖಿಲ ಭಾರತ ಸನ್ಯಾಸಿ ಸಂಘದ ಸದಸ್ಯರು, ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net