

ಮಡಿಕೇರಿ: ಬೆಳಕಿನ ಹಬ್ಬ ದೀಪಾವಳಿಯ ಸಂದರ್ಭ ಮಾಲಿನ್ಯಕಾರಿ ಪಟಾಕಿ ಸಿಡಿತದಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಮಕ್ಕಳು ಹಾಗೂ ಸಾರ್ವಜನಿಕರು ಪರಿಸರ ಸ್ನೇಹಿ ಹಸಿರು ಹಾಗೂ ಸುರಕ್ಷಿತ ರೀತಿಯಲ್ಲಿ ಹಬ್ಬವನ್ನು ಆಚರಿಸುವ ಕುರಿತು ಶಾಲಾ-ಕಾಲೇಜು ಹಾಗೂ ಸಮುದಾಯದಲ್ಲಿ ಜನಜಾಗೃತಿ ಮೂಡಿಸಲಾಗುತ್ತಿದೆ.
ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಹೆಬ್ಬಾಲೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ, ರಾಜ್ಯ ವಿಜ್ಞಾನ ಪರಿಷತ್ತು, ರಾಷ್ಟ್ರೀಯ ಹಸಿರು ಪಡೆ ಬನಶಂಕರಿ ಇಕೋ ಕ್ಲಬ್, ಭಾರತ್ ಸ್ಕೌಟ್ಸ್, ಗೈಡ್ಸ್ ಸಂಸ್ಥೆ ಹಾಗೂ ಜಿಲ್ಲಾ ಪರಿಸರ ಜಾಗೃತಿ ಸಮಿತಿಯ ಆಶ್ರಯದಲ್ಲಿ ಸ್ವಸ್ಥ ಹಾಗೂ ಸ್ವಚ್ಛ ಹಸಿರು ದೀಪಾವಳಿ ೨೦೨೬ ಆಚರಣೆ ಅಂಗವಾಗಿ ಶುಕ್ರವಾರ ಏರ್ಪಡಿಸಿದ್ದ ಹಸಿರು ದೀಪಾವಳಿ ಆಚರಣೆ ಜನಜಾಗೃತಿ ಕಾರ್ಯಕ್ರಮದಲ್ಲಿ ಜಿಲ್ಲಾ ಪರಿಸರ ಜಾಗೃತಿ ಆಂದೋಲನದ ಜಿಲ್ಲಾ ಸಂಚಾಲಕರಾದ ಪ್ರೌಢಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್, ಪಟಾಕಿ ಸಿಡಿಸುವುದರಿಂದ ಆಗುವ ದುಷ್ಪರಿಣಾಮಗಳು ಹಾಗೂ ಹಸಿರು ದೀಪಾವಳಿ ಆಚರಣೆಯ ಮಹತ್ವ ಕುರಿತು ಮಾಹಿತಿ ನೀಡಿದರು.
ಬೆಳಕಿನ ಹಬ್ಬ ದೀಪಾವಳಿ ಹಬ್ಬ ಸಂದರ್ಭದಲ್ಲಿ ಮಕ್ಕಳು ಹಾಗೂ ಸಾರ್ವಜನಿಕರು ಇಂದು ಸ್ವಚ್ಛ, ಸ್ವಸ್ಥ, ಸುರಕ್ಷಿತ ಮತ್ತು ಪರಿಸರ ಸ್ನೇಹಿ ಹಸಿರು ದೀಪಾವಳಿ ಆಚರಿಸುವ ಕುರಿತು ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ. ಅತಿಯಾದ ಮತ್ತು ವಿಷಾನಿಲ ಹೊರಸೂಸುವ ಮಾಲಿನ್ಯಕಾರಿ ಪಟಾಕಿಗಳ ಬಳಕೆಯು ಮಕ್ಕಳು, ಹಿರಿಯ ನಾಗರಿಕರು, ಉಸಿರಾಟದ ಸೂಕ್ಷ್ಮತೆ ಹೊಂದಿರುವ ವ್ಯಕ್ತಿಗಳು, ಪ್ರಾಣಿಗಳು ಮತ್ತು ಪಕ್ಷಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಮತ್ತು ವಾಯು ಮತ್ತು ಶಬ್ದ ಮಾಲಿನ್ಯಕ್ಕೆ ಕಾರಣವಾಗುತ್ತದೆ. ಬೆಳಕಿನ ಹಬ್ಬ ದೀಪಾವಳಿ ಹಬ್ಬ ಸಂದರ್ಭದಲ್ಲಿ ಮಕ್ಕಳು ಹಾಗೂ ಸಾರ್ವಜನಿಕರು ಪರಿಸರ ಸ್ನೇಹಿ ಹಸಿರು ಹಾಗೂ ಸುರಕ್ಷಿತ ರೀತಿಯಲ್ಲಿ ಹಬ್ಬವನ್ನು ಆಚರಿಸಬೇಕಿದೆ ಎಂದು ಹೇಳಿದರು.
ಶಾಲಾ ಮುಖ್ಯೋಪಾಧ್ಯಾಯ ಎಚ್.ಎಂ.ವೆಂಕಟೇಶ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಮನೆಯಲ್ಕಿ ಮಾಲಿನ್ಯಕಾರಿ ಪಟಾಕಿ ತ್ಯಜಿಸಿ ಹಣತೆ ಬೆಳೆಗಿಸುವ ಮೂಲಕ ದೀಪಾವಳಿ ಆಚರಿಸಬೇಕು. ಪೋಷಕರು ಮತ್ತು ಜನರಿಗೆ ಹಸಿರು ದೀಪಾವಳಿ ಆಚರಣೆ ಕುರಿತು ಜಾಗೃತಿ ಮೂಡಿಸಬೇಕು ಎಂದರು.
ಪರಿಸರಕ್ಕೆ ಹಾನಿಯಾಗದಂತೆ ಹಣತೆ ಬೆಳಗಿಸುವ ಮೂಲಕ ಪರಿಸರ ಸ್ನೇಹಿ ದೀಪಾವಳಿ ಆಚರಣೆಯ ಮಹತ್ವ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲಾ ಇಕೋ ಕ್ಲಬ್ನ ಉಸ್ತುವಾರಿ ಶಿಕ್ಷಕಿ ಕೆ.ಎಸ್.ರಮ್ಯ, ಪಟಾಕಿಗಳಿಂದ ಅತಿಯಾದ ವಾಯು ಮಾಲಿನ್ಯ ಮತ್ತು ಶಬ್ದ ಮಾಲಿನ್ಯ ಉಂಟಾಗುತ್ತದೆ. ಆದ್ದರಿಂದ ಪಟಾಕಿಗಳನ್ನು ಸಂಪೂರ್ಣವಾಗಿ ತ್ಯಜಿಸಿ. ಹಸಿರು ಪಟಾಕಿಗಳನ್ನು ಮಾತ್ರ ಬಳಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರಾದ ಎಸ್.ಕೆ.ಶಿವಾನಂದ, ಸಿ.ಎಂ.ಬಬಿತ, ಜಿ.ವನಜ, ಸುಜಾತ, ಎಚ್.ಪಿ.ಪ್ರತಿಮ ಇದ್ದರು.
ವಿದ್ಯಾರ್ಥಿಗಳಿಂದ ಜಾಗೃತಿ: ವಿದ್ಯಾರ್ಥಿಗಳು ಹಸಿರು ದೀಪಾವಳಿ ಆಚರಣೆ ಕುರಿತಾದ ವಿವಿಧ ಘೋಷಣಾ ಫಲಕಗಳನ್ನು ಹಿಡಿದು ಪರಿಸರ ಜಾಗೃತಿ ಮೂಡಿಸಿದರು. ಹಣತೆ ಬೆಳಗಿಸಿ-ದೀಪಾವಳಿ ಆಚರಿಸಿ, ಮಾಲಿನ್ಯಕಾರಿ ಪಟಾಕಿ ತ್ಯಜಿಸಿ ಪರಿಸರ ಉಳಿಸಿ, ಹಸಿರು ದೀಪಾವಳಿ ಆಚರಿಸಿ, ಸ್ವಸ್ಥ, ಸ್ವಚ್ಛ ದೀಪಾವಳಿ ಆಚರಣೆ ನಮ್ಮೆಲ್ಲರ ಹೊಣೆ ಎಂಬಿತ್ಯಾದಿ ಘೋಷಣೆಗಳನ್ನು ಪ್ರಚುರಪಡಿಸಲಾಯಿತು.
ಪರಿಸರ ಸ್ನೇಹಿಯಾಗಿ ಆಚರಿಸಿ
ಮಡಿಕೇರಿ: ದೀಪಾವಳಿ ಹಬ್ಬವನ್ನು ಪರಿಸರ ಸ್ನೇಹಿಯಾಗಿ, ಮಾಲಿನ್ಯ ರಹಿತವಾಗಿ ಆಚರಿಸುವಂತೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಪ್ರಕಟಣೆ ನೀಡಿರುವ ಅವರು, ಪಟಾಕಿಗಳಿಂದ ವಾಯು ಮತ್ತು ಶಬ್ದ ಮಾಲಿನ್ಯ ಹೆಚ್ಚಾಗಿ ಜನರ ಆರೋಗ್ಯ, ಪ್ರಾಣಿ-ಪಕ್ಷಿಗಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಹಸಿರು ಪಟಾಕಿಗಳನ್ನು ಮಾತ್ರ ಬಳಸಬೇಕು. ಹಸಿರು ಪಟಾಕಿಗಳ ಪ್ಯಾಕೆಟ್ ಮೇಲೆ ಹಸಿರು ಚಿಹ್ನೆ ಮತ್ತು ಕ್ಯೂ.ಆರ್. ಕೋಡ್ ಇರಬೇಕು. ೧೨೫ ಡೆಸಿಬಲ್ಗಿಂತ ಹೆಚ್ಚು ಶಬ್ದ ಮಾಡುವ ಪಟಾಕಿಗಳ ದಾಸ್ತಾನು, ಮಾರಾಟ ಮತ್ತು ಬಳಕೆ ನಿಷೇಧಿಸಲಾಗಿದೆ. ರಾತ್ರಿ ೮ ರಿಂದ ೧೦ ಗಂಟೆಯವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶವಿದೆ ಎಂದು ತಿಳಿಸಿದ್ದಾರೆ.
ಆಸ್ಪತ್ರೆ, ಶಾಲೆ, ಪ್ರಾರ್ಥನಾ ಮಂದಿರ, ವೃದ್ಧಾಶ್ರಮಗಳಂತಹ ನಿಶಬ್ದ ವಲಯಗಳಲ್ಲಿ ಪಟಾಕಿ ಬಳಕೆ ನಿಷೇಧಿಸಲಾಗಿದೆ. ಅಲ್ಲದೇ, ಪಟಾಕಿ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಬಳಸುವಂತಿಲ್ಲ. ಮಾರಾಟಗಾರರು ಎಲ್ಲಾ ಇಲಾಖೆಗಳ ಅನುಮತಿ ಪಡೆಯಬೇಕು. ನಿಯಮ ಉಲ್ಲಂಘಿಸಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು. ಹಸಿರು ದೀಪಾವಳಿ-ಸ್ವಸ್ಥ ದೀಪಾವಳಿ ಆಚರಿಸಲು ಸಹಕರಿಸುವಂತೆ ಅವರು ಮನವಿ ಮಾಡಿದ್ದಾರೆ.
ಪರಿಸರ ಜಾಗೃತಿ ಸಮಿತಿ ಮನವಿ
ಮಡಿಕೇರಿ: ನ.೮ ರಿಂದ ೧೦ರವರೆಗೆ ನಡೆಯಲಿರುವ ದೀಪಾವಳಿ ಹಬ್ಬವನ್ನು ಮಾಲಿನ್ಯಮುಕ್ತವಾಗಿ, ಸುರಕ್ಷಿತವಾಗಿ ಆಚರಿಸಬೇಕು. ವಿಷಪೂರಿತ ಹೊಗೆ ಸೂಸುವ ಪಟಾಕಿ ಬದಲು ಸರ್ಕಾರದ ನಿಯಮಗಳಿಗೆ ಅನುಗುಣವಾದ ಹಸಿರು ಪಟಾಕಿ ಮಾತ್ರ ಬಳಸಬೇಕು ಎಂದು ಕೊಡಗು ಜಿಲ್ಲಾ ಪರಿಸರ ಜಾಗೃತಿ ಸಮಿತಿ ಜಿಲ್ಲಾ ಸಂಯೋಜಕ ಟಿ.ಜಿ.ಪ್ರೇಮಕುಮಾರ್ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ವತಿಯಿಂದ ಅ.೨೦ರಿಂದ ನ.೮ರವರೆಗೆ ದೇಶಾದ್ಯಂತ ಹಸಿರು ದೀಪಾವಳಿ ಅಭಿಯಾನ-೨೦೨೬ ನಡೆಯುತ್ತಿದೆ. ರಾಜ್ಯದಲ್ಲೂ ಜಿಲ್ಲಾಡಳಿತ ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮೂಲಕ ಜನಜಾಗೃತಿ ಮೂಡಿಸಲಾಗುತ್ತಿದೆ. ನಾಗರಿಕರು ಪಟಾಕಿ ಖರೀದಿಸುವಾಗ ಅಧಿಕೃತ ಪರವಾನಗಿ ಪಡೆದ ಅಂಗಡಿಗಳಿಂದಲೇ ಖರೀದಿಸಬೇಕು. ಪ್ಯಾಕೆಟ್ ಮೇಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹಸಿರು ಪಟಾಕಿ ಹೌದೇ ಎಂದು ಖಚಿತಪಡಿಸಿಕೊಳ್ಳಬೇಕು. ಮಾಲಿನ್ಯಕಾರಿ ಪಟಾಕಿ ತ್ಯಜಿಸಿ ಸಾಂಪ್ರದಾಯಿಕ ಮಣ್ಣಿನ ಹಣತೆ ಬಳಸಿ ಮನೆ ಬೆಳಗಿಸಬೇಕು. ಪಟಾಕಿ ಸಿಡಿಸಲು ನಿಗದಿಪಡಿಸಿದ ರಾತ್ರಿ ೮ರಿಂದ ೧೦ ಗಂಟೆಯವರೆಗಿನ ಸಮಯವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಹಾಗೂ ನಾಗರಿಕರಲ್ಲಿ ಹಸಿರು ದೀಪಾವಳಿ ಹಾಗೂ ಪಟಾಕಿಯಿಂದ ಆಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಇದರಿಂದ ಜಿಲ್ಲೆಯಲ್ಲಿ ಪಟಾಕಿ ಸಿಡಿತ ಕ್ಷೀಣಿಸಿದೆ ಎಂದು ಟಿ.ಜಿ.ಪ್ರೇಮಕುಮಾರ್ ತಿಳಿಸಿದ್ದಾರೆ.
ಅತಿಯಾದ ಮತ್ತು ವಿಷಾನಿಲ ಹೊರಸೂಸುವ ಪಟಾಕಿಗಳು ಮಕ್ಕಳು, ಹಿರಿಯ ನಾಗರಿಕರು, ಉಸಿರಾಟದ ಸಮಸ್ಯೆ ಇರುವವರು, ಪ್ರಾಣಿ-ಪಕ್ಷಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ. ವಾಯು ಮತ್ತು ಶಬ್ದ ಮಾಲಿನ್ಯಕ್ಕೆ ಕಾರಣವಾಗುತ್ತವೆ. ಆದ್ದರಿಂದ ಮಾಲಿನ್ಯಕಾರಿ ಪಟಾಕಿ ಕಡಿಮೆ ಮಾಡಿ, ಪರಿಸರ ಸ್ನೇಹಿ ಅಭ್ಯಾಸಗಳನ್ನು ಅಳವಡಿಸಿಕೊಂಡು ಹಸಿರು ದೀಪಾವಳಿ ಆಚರಿಸಬೇಕು. ಸ್ವಚ್ಛ, ಆರೋಗ್ಯಕರ ಮತ್ತು ಹಸಿರು ಭಾರತಕ್ಕೆ ಕೊಡುಗೆ ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ತಿಳಿಸಿದ್ದಾರೆ.