

ಮಡಿಕೇರಿ: ಗ್ರಾಮೀಣ ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ಗ್ರಾಮ ಚದುರಂಗ ಆಟ ಆಡೋಣ ಅಭಿಯಾನ ಸಾಕಷ್ಟು ಸಹಕಾರಿಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಭನ್ವರ್ ಸಿಂಗ್ ಮೀನಾ ಹೇಳಿದರು.
ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ಓದುವ ಬೆಳಕು ಅಭಿಯಾನದಡಿ ಗ್ರಾಮ ಚದುರಂಗ ಆಟ ಆಡೋಣ ಅಭಿಯಾನ ಕಾರ್ಯಕ್ರಮದ ಭಾಗವಾಗಿ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಚದುರಂಗ ಆಟ ಸ್ಪರ್ಧೆಗೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.
ಈ ಹಿಂದೆ ಕ್ರೀಡೆಯಲ್ಲಿ ಹೆಚ್ಚು ತೊಡಗಿಸಿಕೊಂಡರೆ, ಓದಿನಲ್ಲಿ ಆಸಕ್ತಿ ಕಡಿಮೆಯಾಗುತ್ತದೆ ಎಂಬ ಅಭಿಪ್ರಾಯಿವಿತ್ತು. ಆದರೆ, ಇತ್ತೀಚಿನ ದಿನ ಗಳಲ್ಲಿ ಕ್ರೀಡೆಯೂ ಸಹ ಒಂದು ಅಧ್ಯಯನ ವಿಷಯವಾಗಿದೆ. ಮಕ್ಕಳ ಸಮಗ್ರ ಅಭಿವೃದ್ಧಿಗೆ ಕ್ರೀಡೆ ಅತೀ ಅವಶ್ಯಕ. ಗ್ರಾಮೀಣ ಭಾಗದ ಮಕ್ಕಳ ಅಧ್ಯಯನಕ್ಕೆ ಕೆಲವು ಮನೆಗಳಲ್ಲಿ ಸೂಕ್ತ ವ್ಯವಸ್ಥೆ ಇರುವುದಿಲ್ಲ. ಇಂತಹ ಸಮಸ್ಯೆ ಮನಗಂಡು ಸರ್ಕಾರ ಪ್ರತೀ ಗ್ರಾಮ ಪಂಚಾಯಿತಿ ಗಳಲ್ಲಿನ ಗ್ರಂಥಾಲಯಗಳನ್ನು ಉನ್ನತ್ತೀಕರಿಸಿ ಸಂಪೂರ್ಣ ಡಿಜಿಟಲೀಕರಣಗೊಳಿಸಿದೆ ಎಂದರು.
೧೦೪ ಗ್ರಾಪಂ ಗ್ರಂಥಾಲಯ ಡಿಜಿಟಲೀಕರಣಗೊಳಿಸಿ, ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಇದರೊಂದಿಗೆ ಓದುವ ಬೆಳಕು ಅಭಿಯಾನದಡಿ ಗ್ರಾಪಂ ವ್ಯಾಪ್ತಿಯ ಮಕ್ಕಳನ್ನು ಉಚಿತವಾಗಿ ನೋಂದಣಿ ಮಾಡಲಾಗಿದೆ ಎಂದು ತಿಳಿಸಿದರು.
ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮ ಪಂಚಾಯಿತಿ ಗ್ರಂಥಾಲಯಗಳಿಗೆ ಭೇಟಿ ನೀಡಬೇಕು. ಈ ಹಿನ್ನೆಲೆಯಲ್ಲಿ ಪ್ರತಿ ಗ್ರಾಪಂಗಳಲ್ಲಿಯೂ ಮಕ್ಕಳಿಗಾಗಿ ಚದುರಂಗ, ಕೇರಂ ಮತ್ತು ಗ್ರಾಮೀಣ ಆಟಿಕೆಗಳ ವ್ಯವಸ್ಥೆ ಮಾಡಲಾಗಿದೆ. ಇದರ ಭಾಗವಾಗಿ ಗ್ರಾಮ ಚದುರಂಗ ಆಟ ಆಡೋಣ ಅಭಿಯಾನವೂ ಯಶಸ್ವಿಯಾಗಿದೆ. ರಾಜ್ಯದಲ್ಲಿಯೇ ಕೊಡಗು ಮೊದಲ ಜಿಲ್ಲೆಯಾಗಿ ಜಿಲ್ಲಾ ಮಟ್ಟದ ಚದುರಂಗ ಆಟವನ್ನು ಹಮ್ಮಿಕೊಂಡಿದೆ ಎಂದರು.
ಜಿಪಂ ಮುಖ್ಯ ಯೋಜನಾಧಿಕಾರಿ ರಾಜ್ ಗೋಪಾಲ್, ಮುಖ್ಯ ಲೆಕ್ಕಾಧಿಕಾರಿ ಝೀವಲ್ ಖಾನ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ವೇದಮೂರ್ತಿ, ಸಹಾಯಕ ಕಾರ್ಯದರ್ಶಿ ಜೀವನ್ ಕುಮಾರ್, ಮಡಿಕೇರಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶೇಖರ್, ಡಿಜಿಟಲ್ ಲೈಬ್ರರಿ ನೋಡಲ್ ಅಧಿಕಾರಿಗಳಾದ ಅಬ್ದುಲ್ಲಾ, ಸುಮೇಶ್, ಪುಟ್ಟರಾಜು ಮತ್ತಿತರರು ಇದ್ದರು.