ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಅರಣ್ಯ ಹಕ್ಕು ಕಾಯ್ದೆ- ೨೦೦೬ ಕಾನೂನು ಗಾಳಿಗೆ ತೂರಿ ಅರಣ್ಯ ಪ್ರದೇಶವನ್ನು ಅನರ್ಹರಿಗೆ ಹಂಚಿಕೆ ಮಾಡಲಾಗುತ್ತಿದೆ ಎಂದು ಕೊಡಗು ಏಕೀಕರಣ ರಂಗ ಆಕ್ಷೇಪ ವ್ಯಕ್ತ ಪಡಿಸಿದೆ. ಈ ಬಗ್ಗೆ ಜಿಲ್ಲಾಧಿಕಾರಿ, ಕೊಡಗು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿಗೆ ಲಿಖಿತ ಆಕ್ಷೇಪ ಸಲ್ಲಿಸಲಾಗಿದೆ.
ಕಾಜೂರು, ಬೆಳ್ಳೂರು, ಎಡಪಾರೆ, ನಂಜರಾಯಪಟ್ಟಣ, ಎಡವನಾಡು, ವಿರೂಪಾಕ್ಷಪುರ, ಮಸ್ಕೋಡು, ಹೊಸಪಟ್ಟಣ, ತಣ್ಣೀರಳ್ಳ, ಗೊಂದಿಬಸವನಹಳ್ಳಿ ಗ್ರಾಮಗಳಲ್ಲಿ ಸಾಂಪ್ರಾದಾಯಿಕ ಅರಣ್ಯವಾಸಿಗಳಿಗೆ ವೈಯುಕ್ತಿಕ ಹಕ್ಕು ಗುರುತಿಸಿ ನೀಡುವ ಪ್ರಕ್ರಿಯೆ ಜಾರಿ ಯಲ್ಲಿದೆ. ಸದ್ಯದಲ್ಲಿಯೇ ಎದುರಾಗುತ್ತಿರುವ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಸಂಪೂರ್ಣ ಆಡಳಿತಾತ್ಮಕ ಹಾಗೂ ಅರೆ ನ್ಯಾಯಾಂಗ ಪ್ರಕ್ರಿಯೆಗೆ ರಾಜಕೀಯ ಹಸ್ತಕ್ಷೇಪವಾಗುತ್ತಿದೆ ಎಂದು ದೂರಲಾಗಿದೆ.
ಅರಣ್ಯ ಹಕ್ಕು ಕಾಯ್ದೆ- ೨೦೦೬ ರಲ್ಲಿ ನಿಗದಿ ಪಡಿಸಿರುವ ಮಾನದಂಡ ಉಲ್ಲಂಘಿಸಿ, ಅನರ್ಹರಿಗೆ ಹಕ್ಕು ಮಂಜೂರು ಮಾಡುವ ವ್ಯವಸ್ಥಿತ ಕೆಲಸ ನಡೆಯುತ್ತಿದೆ. ಜಿಲ್ಲೆಗೆ ಆಗಮಿಸಲಿರುವ ಮುಖ್ಯಮಂತ್ರಿಗಳಿಂದ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲು ತರಾತುರಿಯಲ್ಲಿ ಪ್ರಕ್ರಿಯೆ ನಡೆಸಲಾಗುತ್ತಿದೆ.
ಈ ಕಾಯ್ದೆ ಪ್ರಕಾರ ೨೦೦೫ರ ಡಿಸೆಂಬರ್ ೧೩ ರಂದು ಅರ್ಜಿದಾರರ ವಶದಲ್ಲಿದ್ದ ಅರಣ್ಯ ಪ್ರದೇಶಕ್ಕೆ ಮಾತ್ರ ಹಕ್ಕು ನೀಡಲು ಸಾಧ್ಯ. ಆದರೆ, ಇದೀಗ ೨೦೦೫ರ ನಂತರ ಒತ್ತುವರಿಯಾದ ಪ್ರದೇಶಕ್ಕೂ ಹಕ್ಕು ನೀಡುವ ಯತ್ನ ನಡೆಯುತ್ತಿದೆ. ಅರಣ್ಯ ಹಕ್ಕು ಕಾಯ್ದೆ- ೨೦೦೬ ಯಡಿ ಹಕ್ಕು ಪಡೆಯಬಹುದೆಂದು ಅರಣ್ಯ ಒತ್ತುವರಿ ನಡೆಸಿದವರಿಗೂ ಸೌಲಭ್ಯ ನಡೆಸುವುದು ಕಾನೂನು ಬಾಹಿರವಾಗುತ್ತದೆ.
ಸಾಂಪ್ರಾದಾಯಿಕ ಅರಣ್ಯ ವಾಸಿಗಳಿಗೆ ವೈಯುಕ್ತಿಕ ಹಕ್ಕು ಗುರುತಿಸಿ ನೀಡುವ ಪ್ರಕ್ರಿಯೆಯಲ್ಲಿ ಅರ್ಜಿದಾರರು ೩ ತಲೆಮಾರು ಅಥವಾ ೭೮ ವರ್ಷ ನಿರ್ದಿಷ್ಟ ಜಮೀನು ತಮ್ಮ ವಶದಲ್ಲಿದೆ ಎಂಬುದನ್ನು ಸಾಬೀತು ಪಡಿಸಬೇಕಿದೆ. ಈ ಅಂಶವನ್ನು ಖಾತ್ರಿ ಪಡಿಸಲು ೧೯೩೦ಕ್ಕೆ ಮುನ್ನ ಜನಿಸಿದ ವ್ಯಕ್ತಿಯ ಹೇಳಿಕೆ ಬಳಸಬಹುದೆಂಬ ಅಂಶ ಆಧಾರವಾಗಿಟ್ಟುಕೊಂಡು ಇತ್ತೀಚೆಗೆ ಒತ್ತುವರಿಯಾದ ಜಮೀನನ್ನು ಮಂಜೂರು ಮಾಡುವ ಪರಿಪಾಠ ಪ್ರಾರಂಭವಾಗಿದೆ.
ಕಂದಾಯ, ಸಮಾಜ ಕಲ್ಯಾಣ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ತಮ್ಮ ಹೊಣೆಗಾರಿಕೆ ಮರೆತು ರಾಜೀ ಮನೋಭಾವ ತೋರಿ ಅರಣ್ಯವನ್ನು ಎಲ್ಲೆಂದರಲ್ಲಿ ಪ್ರಭಾವಿಗಳಿಗೆ , ಅನರ್ಹರಿಗೆ ಹಕ್ಕು ನೀಡುತ್ತಿದ್ದಾರೆ. ಅರಣ್ಯ ಹಕ್ಕು ಕಾಯ್ದೆ- ೨೦೦೬ ಅನುಷ್ಟಾನಕ್ಕೆ ಸ್ಷಪ್ಟವಾದ ಆಡಳಿತಾತ್ಮಕ ವ್ಯವಸ್ಥೆ ರೂಪಿಸಲಾಗಿದೆ. ಇದನ್ನು ರಾಜಕೀಯ ಒತ್ತಡಕ್ಕೆ ಮಣಿದ ಬದಲಾಯಿಸುವ ಅಗತ್ಯವಿಲ್ಲ. ಆ ರೀತಿ ಕಾನೂನು ಬಾಹಿರ ಒತ್ತುವರಿಗೆ ಅರಣ್ಯ ಹಕ್ಕು ಕಾಯಿದೆಯಡಿ ಮಾನ್ಯತೇ ನೀಡಿದ ಅಧಿಕಾರಿಗಳ ವಿರುದ್ಧ ಸರ್ಕಾರ ಶಿಸ್ತು ಕ್ರಮ ಕೈಗೊಂಡ ಉದಾಹರಣೆ ಕೂಡ ಇದೆ. ಇದನ್ನು ಪರಿಗಣಿಸಿ ಅರಣ್ಯ ಹಕ್ಕು ಕಾಯ್ದೆ- ೨೦೦೬ ಮಾನದಂಡಗಳನ್ನು ಸಂಪೂರ್ಣವಾಗಿ ಪರಿಶೀಲಿಸಿದ ನಂತರವೇ ಜಿಲ್ಲಾ ಸಮಿತಿಯ ಮುಂದಿಡುವಂತೆ ಕಂದಾಯ, ಸಮಾಜ ಕಲ್ಯಾಣ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸ ಬೇಕೆಂದು ಮನವಿ ಮಾಡಲಾಗಿದೆ.
ಅರಣ್ಯ ಪ್ರದೇಶ ಒತ್ತುವರಿ ಗುರುತಿಸಲು ತಂತ್ರಜ್ಞಾನ ಲಭ್ಯವಿದೆ. ನಿರ್ದಿಷ್ಟ ಅರಣ್ಯ ಪ್ರದೇಶದಲ್ಲಿ ಹಕ್ಕು ನೀಡಿಕೆಗೂ ಮುನ್ನ ಉಪಗ್ರಹ ಆಧಾರಿತ ಗೂಗಲ್ ನಕಾಶೆಗಳನ್ನು ಸಾಕ್ಷಿಯಾಗಿ ಜಿಲ್ಲಾಧಿಕಾರಿ ಪರಿಗಣಿಸಬೇಕು. ಆ ರೀತಿಯ ನಕಾಶೆಗಳನ್ನು ಇಲಾಖೆಯಲ್ಲಿರುವ ಸಂಪನ್ಮೂಲ ಬಳಸಿ ಒದಗಿಸುವಂತೆ ಕೊಡಗು ಅರಣ್ಯ ವೃತ್ತದ ಅರಣ್ಯ ಸಂರಕ್ಷಾಣಾಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.