

ಮಡಿಕೇರಿ:
ಬೆಂಗಳೂರಿನ ಭಾರತೀಯ ತರಬೇತಿ ಮತ್ತು ಅಭಿವೃದ್ಧಿ ಸಂಘ ವತಿಯಿಂದ ಉದಯೋನ್ಮುಖ ಸಾಮಾಜಿಕ ಆತ್ಮಸಾಕ್ಷಿಯ ವಿಶ್ವವಿದ್ಯಾಲಯ ಮತ್ತು ಶಿಕ್ಷಕರ ದಿನಾಚರಣೆಯ ಶ್ರೇಷ್ಠತಾ ಪ್ರಶಸ್ತಿ - 2025 ಕಾರ್ಯಕ್ರಮದಲ್ಲಿ ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಶೋಕ ಸಂಗಪ್ಪ ಆಲೂರರವರ ದೂರದೃಷ್ಟಿಯ ನಾಯಕತ್ವ ಗುರುತಿಸಿ ಡಾ. ಎಸ್. ರಾಧಾಕೃಷ್ಣನ್ ಪ್ರಶಸ್ತಿ ಮತ್ತು ಶ್ರೇಷ್ಠತಾ ಪ್ರಮಾಣ ಪತ್ರವನ್ನು ಬೆಂಗಳೂರಿನಲ್ಲಿ ಈಚೆಗೆ ಪ್ರದಾನ ಮಾಡಲಾಯಿತು.
ಕೊಡಗು ವಿಶ್ವವಿದ್ಯಾಲಯ ಉನ್ನತ ಶ್ರೇಣಿಯ ಅತ್ಯಂತ ಪ್ರಗತಿಪರ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿ ತನ್ನ ಅತ್ಯುತ್ತಮ ಕೊಡುಗೆಯನ್ನು ಗುರುತಿಸಿಕೊಂಡಿದ್ದು, ಕಳೆದೆರಡು ವರ್ಷಗಳಿಂದ, ಜ್ಞಾನ, ನಾವೀನ್ಯತೆ ಮತ್ತು ಸಕ್ರಿಯವಾಗಿ ವಿನೂತನ ಯೋಜನೆಗಳಲ್ಲಿ ಪಾಲ್ಗೊಳ್ಳುವಿಕೆಯ ಮೂಲಕ ಗ್ರಾಮೀಣ ಸಮುದಾಯವನ್ನು ಸಬಲೀಕರಣಗೊಳಿಸುತ್ತಾ ಉನ್ನತ ಶಿಕ್ಷಣದ ನಿಜವಾದ ಚೈತನ್ಯವನ್ನು ಪ್ರದರ್ಶಿಸಿದೆ.
ಔದ್ಯೋಗಿಕ ಮತ್ತು ಕೌಶಲ್ಯಾಧಾರಿತ ಕಾರ್ಯಕ್ರಮಗಳನ್ನು ರೂಪಿಸುವುದು, ಉನ್ನತ ಶಿಕ್ಷಣದ ವ್ಯಾಪ್ತಿಯನ್ನು ವಿಸ್ತರಿಸುವುದು ಮತ್ತು ಸುಸ್ಥಿರತೆ ಮತ್ತು ಹಸಿರು ಅಭ್ಯಾಸಗಳು ಸೇರಿದಂತೆ ಭವಿಷ್ಯದ ಉಪಕ್ರಮಗಳನ್ನು ಅಳವಡಿಸಿಕೊಳ್ಳುವಲ್ಲಿ ವಿಶ್ವವಿದ್ಯಾಲಯವು ಗಮನಾರ್ಹ ಪ್ರಗತಿ ಸಾಧಿಸಿದೆ ಎಂದು ಭಾರತೀಯ ತರಬೇತಿ ಮತ್ತು ಅಭಿವೃದ್ಧಿ ಸಂಘವು ಕೊಡಗು ವಿಶ್ವವಿದ್ಯಾಲಯ ಮತ್ತು ಕುಲಪತಿ ಪ್ರೊ. ಅಶೋಕ ಸಂಗಪ್ಪ ಆಲೂರ ಅವರನ್ನು ಶ್ಲಾಘಿಸಿ ಅಭಿನಂದಿಸಿದೆ.