

ಕುಶಾಲನಗರ:
ಸಾಮಾಜಿಕ ಜಾಲತಾಣಗಳಿಂದ ಪ್ರಿಂಟ್ ಮೀಡಿಯಾ ಕಳೆಗುಂದುವAತಾಗಬಾರದು ಎಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಹೇಳಿದರು. ಕೊಡಗು ವಿಶ್ವವಿದ್ಯಾಲಯ ಮತ್ತು ಕೊಡಗು ವಿವಿ ಹಿತರಕ್ಷಣಾ ಸಮಿತಿ ವತಿಯಿಂದ ವಿವಿಯ ಹಾರಂಗಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಾಧ್ಯಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಾಧ್ಯಮ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಮಾಧ್ಯಮ ರಾಜಕಾರಣಿಗಳನ್ನು ಟೀಕಿಸಿದಷ್ಟು ಎಚ್ಚೆತ್ತುಕೊಳ್ಳಲು ಅನುಕೂಲವಾಗುತ್ತದೆ. ಸಾಮಾಜಿಕ ವ್ಯವಸ್ಥೆಯ ಮೇಲಿನ ಕೆಲವು ಏರು ಪೇರುಗಳಿಗೆ ಆರೋಗ್ಯಕಾರಿ ಟೀಕೆ - ಟಿಪ್ಪಣಿಗಳು ಮಾಧ್ಯಮದಲ್ಲಿರಬೇಕು. ಕಾಲೇಜು ವಿದ್ಯಾರ್ಥಿಗಳು ಮುಕ್ತವಾಗಿ ಮಾಧ್ಯಮಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಹೇಳಿಕೊಳ್ಳಲು ಮಾಧ್ಯಮ ವೇದಿಕೆಯಾಗಬೇಕಿದೆ. ವಿದ್ಯಾರ್ಥಿಗಳು ದಿನಪತ್ರಿಕೆಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್, ಕೊಡಗು ವಿವಿ ಹೋರಾಟದ ವಿಚಾರದಲ್ಲಿ ಕೊಡಗಿನ ಮಾಧ್ಯಮಗಳ ರಚನಾತ್ಮಕವಾದ ಹಾಗೂ ಸಾಮಾಜಿಕ ಜವಾಬ್ದಾರಿ ಅವಿಸ್ಮರಣೀಯ. ಮಾಧ್ಯಮ ರಂಗ ಇಂದು ಪ್ರಾಮಾಣಿಕವಾಗಿ ತನ್ನ ಕೆಲಸ ಮಾಡಿದರೆ ಸಮಾಜದ ಬದಲಾವಣೆ ಸಾಧ್ಯವಿದೆ.
ಶಾಸಕಾಂಗ, ಕಾರ್ಯಾಂಗ ಒಂದಷ್ಟು ಏರು ಪೇರುಗಳಿಂದ ಕೂಡಿದ್ದು ಮಾಧ್ಯಮ ರಂಗ ಆಶಾಕಿರಣವಾಗಿ ಉಳಿದಿದೆ. ರಾಜಕಾರಣಿ ಹಾಗೂ ಜನಪ್ರತಿನಿಧಿಗಳನ್ನು ಎಚ್ಚರಿಸುವ ಹೊಣೆಗಾರಿಕೆಯ ಪ್ರಾಮುಖ್ಯತೆ ಪತ್ರಿಕೆಗಳದ್ದಾಗಿದೆ.ಅಭಿಪ್ರಾಯ ಮೂಡಿಸುವಷ್ಟರಮಟ್ಟಿಗೆ ಮುದ್ರಣ ಮಾಧ್ಯಮ ಅಂತಃಪ್ರಜ್ಞೆ ಹಾಗೂ ಆತ್ಮಸಾಕ್ಷಿಗೆ ಬದ್ಧವಾಗಿದೆ ಎಂದರು.
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ ಮಾತನಾಡಿ ವಿದ್ಯಾರ್ಥಿಗಳು ಪತ್ರಿಕೆಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳುವ ಮೂಲಕ ಸಾಮಾನ್ಯ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕಿದೆ ಎಂದು ಹೇಳಿದರು.
ಹಿರಿಯ ಪತ್ರಕರ್ತ ಜಿ. ಚಿದ್ವಿಲಾಸ್ ಮಾತನಾಡಿ ಪತ್ರಕರ್ತರು ಸಮಾಜದ ಆಗುಹೋಗುಗಳ ಮೇಲೆ ಹೆಚ್ಚಿನ ಗಮನ ಹರಿಸುವ ಮೂಲಕ ಸಮಾಜದ ಕಣ್ಗಾವಲಾಗಿ ಕಾರ್ಯನಿರ್ವಹಿಸಬೇಕು. ಸಾಮಾಜಿಕ ಜಾಲತಾಣಗಳು ಯಾವುದೇ ವ್ಯಕ್ತಿಯನ್ನು ಕಠಿಣ ಶಬ್ಧಗಳಿಂದ ತೇಜೋವಧೆ ಮಾಡುವ ಮೂಲಕ ಸಾಮಾಜಿಕ ಸ್ವಾಸ್ಥ್ಯ ಕದಡುವ ಕೆಲಸ ಆಗಬಾರದು. ಮಾಧ್ಯಮಗಳಿಂದಾಗಿ ಹೊಸ ಪ್ರತಿಭೆಗಳು ಹೊಸ ಚಿಂತನೆಗಳ ಉಗಮವಾಗುತ್ತಿದೆ ಎಂದರು.
ಕೊಡಗು ವಿವಿ ಕುಲಪತಿ ಪ್ರೊ. ಅಶೋಕ ಸಂಗಪ್ಪ ಆಲೂರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವ ಎಂ. ಸುರೇಶ್, ಕೊಡಗು ವಿವಿ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಕೆ.ಎಸ್. ಕೃಷ್ಣೇಗೌಡ, ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ, ಉಪನ್ಯಾಸಕ ಡಾ. ಜಮೀರ್ ಅಹಮದ್, ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್, ಮುರಳೀಧರ್, ಶರಣ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಕೆ.ಎಸ್.ಮೂರ್ತಿ ಇದ್ದರು.