ಕೊಡಗು ವಿವಿಯಲ್ಲಿ ವಿಶ್ವ ಪ್ರಾಣಿ-ಜನ್ಯರೋಗಗಳ ದಿನ

kodagu vv
Published on

ಕುಶಾಲನಗರ:

ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸಂಬAಧ ಸಂವೇದನಾಶೀಲವಾದುದು. ಮನುಷ್ಯನಿಗಿರುವಷ್ಟೇ ಸ್ವಾತಂತ್ರ‍್ಯ ಮತ್ತು ಸಮಾನ ಹಕ್ಕುಗಳು ಈ ಭೂಮಿಯಲ್ಲಿ ಜೀವಿಸುತ್ತಿರುವ ಪ್ರಾಣಿ ಸಂಕುಲಕ್ಕೂ ಇದೆ ಎಂದು ಕೊಡಗು ವಿಶ್ವವಿದ್ಯಾಲಯ ಕುಲಪತಿ ಪ್ರೊ. ಅಶೋಕ ಸಂಗಪ್ಪ ಆಲೂರ ಹೇಳಿದರು.

ಬೀದರ್‌ನ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕೊಡಗು ವನ್ಯಜೀವಿ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆ ಮತ್ತು ಕೊಡಗು ವಿಶ್ವವಿದ್ಯಾಲಯದ ವತಿಯಿಂದ ಕೊಡಗು ವಿಶ್ವವಿದ್ಯಾಲಯದ ಜ್ಞಾನ ಕಾವೇರಿ ಕೇಂದ್ರ ಆವರಣದಲ್ಲಿ ವಿಶ್ವ ಪ್ರಾಣಿ-ಜನ್ಯರೋಗಗಳ ದಿನದ ಅಂಗವಾಗಿ ಶುಕ್ರವಾರ ಏರ್ಪಡಿಸಿದ್ದ ವನ್ಯಜೀವಿ: ಪ್ರಾಣಿಜನ್ಯರೋಗಗಳು ವಿಷಯದ ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಪ್ರಾಣಿಗಳು ಮತ್ತು ಮನುಷ್ಯರ ನಡುವೆ ಹರಡುವ ಪ್ರಾಣಿಜನ್ಯ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರತೀ ವರ್ಷ ಪ್ರಾಣಿಜನ್ಯ ರೋಗಗಳ ದಿನ ಆಚರಣೆ ಮಾಡಲಾಗುತ್ತದೆ. ಪಶುವೈದ್ಯಕೀಯ ವೃತ್ತಿಯು ಪ್ರಾಣಿಗಳ ಆರೋಗ್ಯ ಮತ್ತು ಯೋಗಕ್ಷೇಮ ಹಾಗೂ ಸಾರ್ವಜನಿಕ ಆರೋಗ್ಯದ ರಕ್ಷಣೆಗೆ ಮೀಸಲಾಗಿರುವ ಒಂದು ಉದಾತ್ತ ಮತ್ತು ಅತ್ಯಗತ್ಯ ಕ್ಷೇತ್ರವಾಗಿದೆ. ಪಶು ವೈದ್ಯರು ಅನಾರೋಗ್ಯ ಪೀಡಿತ ಪ್ರಾಣಿಗಳಿಗೆ ಚಿಕಿತ್ಸೆ ನೀಡುವುದಷ್ಟೇ ಅಲ್ಲದೇ ವನ್ಯ ಜೀವಿಗಳಿಂದ ಮನುಷ್ಯನಿಗೆ ಹರಡಬಹುದಾದ ಪ್ರಾಣಿ ಜನ್ಯರೋಗಗಳನ್ನು ತಡೆಗಟ್ಟುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ. ಪರಿಸರದ ಸಮತೋಲನ ಮತ್ತು ಸಾಮರಸ್ಯದ ಭವಿಷ್ಯಕ್ಕಾಗಿ ಪ್ರಾಣಿಗಳೊಂದಿಗೆ ಸಹಾನುಭೂತಿಯ ಸಂಬAಧವನ್ನು ಮನುಷ್ಯ ಕಾಪಾಡಿಕೊಳ್ಳಬೇಕು. ಮನುಷ್ಯ ತನ್ನ ಸುತ್ತಣ ಪರಿಸರದಲ್ಲಿರುವ ವನ್ಯ ಜೀವಿಗಳ ಆರೈಕೆ ಮತ್ತು ರಕ್ಷಣೆ, ಅವುಗಳ ಸಂರಕ್ಷಣೆಯ ಜವಾಬ್ದಾರಿಯನ್ನು ಹೊಂದಿರುತ್ತಾರೆ ಎಂದರು.

ವನ್ಯಜೀವಿ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ. ಎಂ.ಸಿ. ಶಿವಕುಮಾರ್ ಮಾತನಾಡಿ ಏಕ ಆರೋಗ್ಯ ಎನ್ನುವುದು ಮಾನವನ ಆರೋಗ್ಯ, ಪ್ರಾಣಿಗಳ ಆರೋಗ್ಯ ಮತ್ತು ಪರಿಸರ ಆರೋಗ್ಯದ ಪರಸ್ಪರ ಸಂಬAಧವನ್ನು ಗುರುತಿಸುವ ಸಹಯೋಗಿ ಮತ್ತು ಸಂಯೋಜಿತ ಪರಿಕಲ್ಪನೆಯಾಗಿದೆ. ಜನರ ಯೋಗ ಕ್ಷೇಮವು ಪ್ರಾಣಿಗಳ ಆರೋಗ್ಯ ಮತ್ತು ಅವುಗಳು ಹಂಚಿಕೊಳ್ಳುವ ಪರಿಸರ ವ್ಯವಸ್ಥೆಗಳೊಂದಿಗೆ ನಿಕಟ ಸಂಬAಧವನ್ನು ಹೊಂದಿದೆ ಎಂದು ಹೇಳಿದರು.

ಕೊಡಗು ವಿಶ್ವವಿದ್ಯಾಲಯದ ಕುಲಸಚಿವ(ಮೌಲ್ಯಮಾಪನ) ಡಾ. ಎಂ. ಸುರೇಶ ಮಾತನಾಡಿದರು. ಇದೇ ಸಂದರ್ಭದಲ್ಲಿ ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಹಾಸನದ ಪಶುವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ನಾಗಪ್ಪ, ಸಹ ಪ್ರಾಧ್ಯಾಪಕರುಗಳಾದ ಡಾ. ಪ್ರಲ್ಹಾದ್, ಡಾ. ಬಿ.ಸಿ. ಗಿರೀಶ್ ವಿಷಯ ಮಂಡಿಸಿದರು.

ಶ್ರಮಿತಾ ಐಮುಡಿಯಂಡ, ಡಾ. ಜಮೀರ್ ಅಹಮದ್, ಎನ್.ಟಿ. ಪ್ರಶಾಂತ್, ಕೊಡಗು ವಿಶ್ವವಿದ್ಯಾಲಯದ ಜ್ಞಾನ ಕಾವೇರಿ ಆವರಣದಲ್ಲಿನ ವಿವಿಧ ವಿಭಾಗದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು, ಕೊಡಗಿನ ವನ್ಯಜೀವಿ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಯ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net