

ಮಡಿಕೇರಿ:
ಕೊಡಗು ವಿವಿ ಉಳಿಸುವಂತೆ ಕೊಡಗು ವಿವಿ ಹಿತರಕ್ಷಣಾ ಸಮಿತಿ ವತಿಯಿಂದ ಶಾಸಕ ಡಾ.ಮಂತರಗೌಡ ನೇತೃತ್ವದಲ್ಲಿ ಸೋಮವಾರ ಬೆಂಗಳೂರಿನ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಿವಾಸಕ್ಕೆ ತೆರಳಿ ಕೊಡಗು ವಿವಿ ಯನ್ನು ಯಾವ ಕಾರಣಕ್ಕೂ ಮುಚ್ಚದಂತೆ ಮನವಿ ಸಲ್ಲಿಸಿತು. ನಿಯೋಗಕ್ಕೆ ಈ ಸಂಬಂಧ ಮಾಹಿತಿ ನೀಡಿದ ಡಿಸಿಎಂ ಶಿವಕುಮಾರ್, ಕೊಡಗು ಜಿಲ್ಲೆಯಲ್ಲಿ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಜೊತೆಗೆ ಗುಣಮಟ್ಟದ ಶಿಕ್ಷಣ ಸಿಗಬೇಕು. ಹಾಗೂ ದೇಶ ವಿದೇಶಗಳ ವಿವಿಗಳ ವಿದ್ಯಾರ್ಥಿಗಳೊಂದಿಗೆ ಸ್ಪರ್ಧೆಗೆ ಇಳಿಯಬೇಕೆಂಬುದು ನಮ್ಮ ಒತ್ತಾಸೆಯಾಗಿದೆ.
ಕೊಡಗಿನ ಮಂದಿಗೆ ಮಂಗಳೂರು ವಿವಿ ಬೇಕೇ ? ಕೊಡಗು ವಿವಿ ಬೇಕೇ ? ಎಂದು ಪ್ರಶ್ನಿಸಿದ ಡಿಸಿಎಂ,
ಈ ಹಿಂದೆ ನಮಗೆ ಬಂದ ಮಾಹಿತಿಗಳ ಆಧಾರದ ಮೇಲೆ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ ಅಷ್ಟೆ.
ಇದೀಗ ಮತ್ತೊಮ್ಮೆ ಪೂರ್ಣ ಮಾಹಿತಿ ತರಿಸಿಕೊಂಡು ಚರ್ಚಿಸಲಾಗುವುದು. ಕೊಡಗಿನ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಅನಾನುಕೂಲವಾಗದಂತೆ ಎಚ್ಚರ ವಹಿಸಲಾಗುವುದು.
ಮಂಗಳೂರು ವಿವಿ ಗೆ ಸಂಯೋಜಿತಗೊಂಡ ಕೆಲವು ಬೋಧಕ ವರ್ಗದವರು ಮಂಗಳೂರು ವಿವಿಯಲ್ಲೇ ಕೊಡಗು ವಿವಿ ವಿಲೀನ ಮಾಡುವಂತೆ ಪತ್ರ ಬರೆದು ಸರ್ಕಾರಕ್ಕೆ ಒತ್ತಾಯಿಸಿದ್ದರು. ಹಾಗಾಗಿ ಮತ್ತಷ್ಟು ಮಾಹಿತಿಯನ್ನಾಧರಿಸಿ ಸಂಪುಟ ಉಪಸಮಿತಿಯಲ್ಲಿ ಚರ್ಚಿಸಲಾಗಿದೆ ಅಷ್ಟೆ. ಮಡಿಕೇರಿ ಶಾಸಕರಾದ ಡಾ.ಮಂತರಗೌಡರ ವಿಶೇಷ ಕಾಳಜಿ ಹಾಗೂ ಕೊಡಗಿನ ಮಂದಿಯ ಕೋರಿಕೆಯನ್ನು ಸರ್ಕಾರ ಅಲ್ಲಗಳೆಯಲ್ಲ. ಆದರೆ ಯಾವುದೇ ರಾಜಕೀಯಕ್ಕೂ ಬಗ್ಗಲ್ಲ.
ಈ ಬಗ್ಗೆ ಮತ್ತೊಮ್ಮೆ ಸಂಪುಟ ಸಮಿತಿಯಲ್ಲಿ ಪರಾಮರ್ಶಿಸಿ ಕ್ಯಾಬಿನೆಟ್ ನಲ್ಲಿ ಚರ್ಚಿಸಿ ಪೂರಕವಾಗಿ ಸ್ಪಂದಿಸುವುದಾಗಿ ಡಿಕೆಶಿ ಹೇಳಿದರು.
ಕೊಡಗು ವಿವಿ ಗೆ ಯಾವುದೇ ಧಕ್ಕೆಯಾಗದಂತೆ ಸರ್ಕಾರ ಕ್ರಮ ವಹಿಸಬೇಕು ಎಂದು ಶಾಸಕ ಡಾ.ಮಂತರಗೌಡ ಡಿಕೆಶಿ ಯವರಲ್ಲಿ ಅರಿಕೆ ಮಾಡಿದರು. ಈ ಸಂದರ್ಭ ಕೊಡಗಿನ ಪ್ರಾಕೃತಿಕ ಸನ್ನಿವೇಶಗಳನ್ನು ಮನಗಂಡು ಕೊಡಗಿ ನಲ್ಲಿ ಇರುವ ವಿವಿಗೆ ಯಾವುದೇ ಸಮಸ್ಯೆಯಾಗದಂತೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಬೇಕೆಂದು ವಿವಿ ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷ ವಿ.ಪಿ.ಶಶಿಧರ್, ಹೈಕೋರ್ಟ್ ವಕೀಲ ಹೆಚ್.ಎಸ್. ಚಂದ್ರಮೌಳಿ ಕೆ.ಪಿ.ಚಂದ್ರಕಲಾ ಡಿಕೆಶಿ ಯವರಿಗೆ ಮನವರಿಕೆ ಮಾಡಿದರು.
ನಿಯೋಗದಲ್ಲಿ ಕೊಡಗು ವಿವಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಕೆ.ಎಸ್.ಕೃಷ್ಣೇಗೌಡ, ಉದ್ಯಮಿ ನಾಪಂಡ ಮುತ್ತಪ್ಪ, ಶಿಕ್ಷಣ ಪ್ರೇಮಿ ಎನ್.ಎನ್.ಶಂಭುಲಿಂಗಪ್ಪ, ಕರವೇ ರಾಜ್ಯ ಸಂಚಾಲಕಿ ದೀಪಾ ಪೂಜಾರಿ, ಕೆಪಿಸಿಸಿ ಕಾರ್ಯದರ್ಶಿ ಮಂಜುನಾಥ ಗುಂಡೂರಾವ್, ಕುಶಾಲನಗರ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಕುಟ್ಟಂಡ ಪ್ರಮೋದ್ ಮುತ್ತಪ್ಪ, ಉಪನ್ಯಾಸಕ ಡಾ.ಜಮೀರ್ ಅಹಮದ್, ಹೆಚ್.ಎನ್.ರಾಜಶೇಖರ್, ಸಮಿತಿ ಪ್ರಮುಖರಾದ ಟಿ.ಕೆ.ಪಾಂಡುರಂಗ, ಟಿ.ಬಿ.ಜಗದೀಶ್, ರೈತ ಮುಖಂಡರಾದ ಸಂಜೀವಯ್ಯ, ಮಹದೇವ್, ಅಳುವಾರ ಮೂರ್ತಿ, ರಮೇಶ್, ಕಿಶೋರ್, ಆದಂ, ಅರುಣ್ ಕೊತ್ನಳ್ಳಿ, ಕಬಡ್ಡಿ ಮಂಜು ಇತರರು ಇದ್ದರು.