ಸ್ವರಕ್ಷಣಾ ಮತ್ತು ಮೂಲಭೂತ ಕಿಕ್‌ಬಾಕ್ಸಿಂಗ್ ತರಬೇತಿ

kodagu vv
Published on

ಕುಶಾಲನಗರ:

ಅಂತಾರಾಷ್ಟ್ರೀಯ ಮಹಿಳಾ ವಾರದ ಅಂಗವಾಗಿ ಕರ್ನಾಟಕ ಕಿಕ್‌ಬಾಕ್ಸಿಂಗ್ ಲೀಗ್, ಇಂಡಿಯಾ ಕಿಕ್‌ಬಾಕ್ಸಿಂಗ್ ಫೆಡರೇಷನ್ ಮಾರ್ಗದರ್ಶನದಲ್ಲಿ, ಮಹಿಳೆಯರಿಗೆ ಸ್ವರಕ್ಷಣಾ ಮತ್ತು ಮೂಲಭೂತ ಕಿಕ್‌ಬಾಕ್ಸಿಂಗ್ ತರಬೇತಿ ಕಾರ್ಯಕ್ರಮವನ್ನು ಕೊಡಗು ವಿಶ್ವವಿದ್ಯಾಲಯದಲ್ಲಿ ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮ ಕ್ರೀಡಾ ಪ್ರಾಧಿಕಾರ ಮತ್ತು ಫಿಟ್ ಇಂಡಿಯಾ ಮೂವ್‌ಮೆಂಟ್ ಮಾರ್ಗದರ್ಶನದಲ್ಲಿ ಫಿಟ್ ಇಂಡಿಯಾ ಅಂತಾರಾಷ್ಟ್ರೀಯ ಮಹಿಳಾ ವಾರ ಕಾರ್ಯಕ್ರಮದ ಅಂಗವಾಗಿ ನಡೆಸಲಾಯಿತು.

ಕಾರ್ಯಕ್ರಮವನ್ನು ಕೊಡಗು ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಅಶೋಕ್ ಎಸ್. ಆಲೂರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಕಿಕ್‌ಬಾಕ್ಸಿಂಗ್ ಲೀಗ್ ಅಧ್ಯಕ್ಷ ಎಸ್. ಮಹದೇವೇಗೌಡ, ಮೌಲ್ಯಮಾಪನ ವಿಭಾಗದ ಎಂ. ಸುರೇಶ್ ಪಾಲ್ಗೊಂಡಿದ್ದರು.

ಇAಡಿಯಾ ಕಿಕ್‌ಬಾಕ್ಸಿಂಗ್ ಫೆಡರೇಷನ್ ರಾಷ್ಟ್ರೀಯ ಕೋಚ್ ಮತ್ತು ಐಸಿಸಿ ಸಮಿತಿಯ ಸದಸ್ಯೆ ಜಿ.ಎಂ. ರಕ್ಷಿತಾ ಗೌಡ ಮುಖ್ಯ ತರಬೇತುದಾರರಾಗಿದ್ದು, ಭಾಗವಹಿಸಿದ ಮಹಿಳೆಯರಿಗೆ ಸ್ವರಕ್ಷಣಾ ತಂತ್ರಗಳು ಹಾಗೂ ಕಿಕ್‌ಬಾಕ್ಸಿಂಗ್‌ನ ಮೂಲಭೂತ ತಂತ್ರಗಳನ್ನು ಪ್ರಾಯೋಗಿಕವಾಗಿ ತರಬೇತಿ ನೀಡಿದರು.

ಈ ಕಾರ್ಯಕ್ರಮಕ್ಕೆ 130 ವಿದ್ಯಾರ್ಥಿಗಳು ಸ್ಪಂದನೆ ನೀಡಿದ್ದು, ತರಬೇತಿ ಪಡೆದುಕೊಂಡರು. ಮಹಿಳೆಯರಿಗೆ ಆತ್ಮರಕ್ಷಣೆ ಹಾಗೂ ಶಾರೀರಿಕ ಕ್ಷಮತೆ ಕಲ್ಪಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿತ್ತು.

ಈ ಸಂದರ್ಭದಲ್ಲಿ ಉಪಕುಲಪತಿ ಪ್ರೊ. ಅಶೋಕ್ ಎಸ್. ಆಲೂರು ಮಾತನಾಡಿ, ಮಹಿಳಾ ಸುರಕ್ಷತೆಗಾಗಿ ಸ್ವರಕ್ಷಣಾ ತರಬೇತಿ ಅತ್ಯಗತ್ಯ ಎಂದರು. ಕರ್ನಾಟಕ ಕಿಕ್‌ಬಾಕ್ಸಿಂಗ್ ಲೀಗ್ ಅಧ್ಯಕ್ಷ ಎಸ್. ಮಹದೇವೇಗೌಡ ಮಾತನಾಡಿ ಮಹಿಳೆಯರಲ್ಲಿ ಸ್ವರಕ್ಷಣಾ ಜಾಗೃತಿ ಹೆಚ್ಚಿಸುವ ಉದ್ದೇಶದಿಂದ ಈ ತರಬೇತಿ ಶಿಬಿರ ಆಯೋಜನೆ ಮಾಡಿರುವುದಾಗಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net