ಮಾರ್ಚ್ ಅಂತ್ಯದೊಳಗೆ ಅನುದಾನ ಬಳಸಿ

14mdkf8 - Copy
Published on

ವಿಜಯವಾಣಿ ಸುದ್ದಿಜಾಲ ಮಡಿಕೇರಿ

ವಿವಿಧ ಇಲಾಖೆಗಳಲ್ಲಿ ಬಳಕೆಯಾಗದೆ ಉಳಿದಿರುವ ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಕೆ ಮಾಡಿ ಸಂಪೂರ್ಣ ಪ್ರಗತಿ ಸಾಧಿಸು ವಂತೆ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಎಸ್.ಆಕಾಶ್ ಸೂಚಿಸಿದ್ದಾರೆ.

ವಿರಾಜಪೇಟೆ ತಾಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ಮಂಗಳವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಲಜೀವನ್ ಮಿಷನ್, ಸ್ವಚ್ಚ ಭಾರತ್ ಮಿಷನ್ ಹಾಗೂ ಇತರ ಇಲಾಖೆಗಳ ಕಾಮಗಾರಿಗಳು ಪ್ರಗತಿಯಲ್ಲಿದೆ. ಮಾರ್ಚ್ ತಿಂಗಳ ಅಂತ್ಯದೊಳಗೆ ಪೂರ್ಣಗೊಳಿಸಿ ಎಂದು ವಿವಿಧ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.

ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚು ಒತ್ತು ನೀಡಬೇಕು. ತಾಲೂಕಿನಲ್ಲಿ ಬಿಟ್ಟು ಹೋದ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ವಿವಿಧ ಇಲಾಖೆಗಳಲ್ಲಿ ದೊರೆಯುವಂತಹ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿಬೇಕು. ಆ ಮೂಲಕ ವಿವಿಧ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಮಾಡುವಂತೆ ನಿರ್ದೇಶನ ನೀಡಿದರು.

ಜಿಲ್ಲೆಯ ೧೦೩ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸುವ್ಯವಸ್ಥಿತವಾದ ಡಿಜಿಟಲ್ ಗ್ರಂಥಾಲಯಗಳಿವೆ. ವಿರಾಜಪೇಟೆ ತಾಲೂಕಿನಲ್ಲಿ ೨೫,೨೧೬ ಶಾಲಾ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಅದರಲ್ಲಿ ೬,೨೨೨ ಮಕ್ಕಳು ಮಾತ್ರ ಡಿಜಿಟಲ್ ಗ್ರಂಥಾಲಯದಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಸಹ ಡಿಜಿಟಲ್ ಗ್ರಂಥಾಲಯದಲ್ಲಿ ನೋಂದಣಿಯಾಗು ವಂತೆ ಕ್ರಮ ವಹಿಸಿ ಗ್ರಂಥಾಲಯಗಳ ಬಳಕೆ ಹೆಚ್ಚಾದಂತೆ ವಿದ್ಯಾರ್ಥಿಗಳ ಓದಿನ ಮಟ್ಟವು ಹೆಚ್ಚಾಗಲಿದೆ ಎಂದು ತಿಳಿಸಿದರು.

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಶಾಲಾ ಅಭಿವೃದ್ಧಿ ಕಾಮಗಾರಿಗಳಾದ ಆಟದ ಮೈದಾನ ಅಭಿವೃದ್ಧಿ, ಶೌಚಾಲಯ, ಶಾಲಾ ತಡೆಗೋಡೆ, ಉದ್ಯಾನ ಮತ್ತಿತರ ಕಾಮಗಾರಿ ತೆಗೆದುಕೊಳ್ಳುವಂತೆ ನರೇಗಾ ತಾಂತ್ರಿಕ ಸಿಬ್ಬಂದಿಗೆ ಸಲಹೆ ನೀಡಿದರು.

ಈಗಾಗಲೇ ಗ್ರಾಮೀಣ ಭಾಗದಲ್ಲಿ ಜಲಮೂಲ ಸಂರಕ್ಷಣೆಗಾಗಿ ನರೇಗಾ ಯೋಜನೆಯಡಿ ಜಲ ಸಂಜೀವಿನಿ ಕಾರ್ಯಕ್ರಮ ಹಮ್ಮಿಗೊಂಡಿದೆ. ಸಮಗ್ರ ಕೆರೆ ಅಭಿವೃದ್ಧಿ, ಅಮೃತ್ ಸರೋವರ ಕಾಮಗಾರಿಗಳು ಆಗಸ್ಟ್ ತಿಂಗಳ ಒಳಗಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಉಪ ಕಾರ್ಯದರ್ಶಿ ಧನರಾಜ್, ಮುಖ್ಯಯೋಜನಾಧಿಕಾರಿ ರಾಜ್‌ಗೋಪಾಲ್, ಮುಖ್ಯಲೆಕ್ಕಾಧಿಕಾರಿ ಝೀವಲ್ ಖಾನ್, ಯೋಜನಾ ನಿರ್ದೇಶಕ ಜಗದೀಶ್, ತಾಪಂ ಇಒ ಕೆ.ಸಿ. ಅಪ್ಪಣ್ಣ ಮತ್ತಿತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net