

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನದ ಮೇಲೆ ಹಲವರು ಕಣ್ಣಿಟ್ಟಿದ್ದಾರೆ. ಬಿಜೆಪಿ ಕ್ಷೇತ್ರ ಉಳಿಸಿಕೊಳ್ಳಲು, ಕಾಂಗ್ರೆಸ್ ಮರಳಿ ತನ್ನದಾಗಿಸಿಕೊಳ್ಳುವ ಹಂಬಲದಲ್ಲಿದೆ. ಹೊಸ ಮುಖಕ್ಕೆ ಅವಕಾಶ ನೀಡುವ ನಿರೀಕ್ಷೆಯಲ್ಲಿ ಬಿಜೆಪಿಯಲ್ಲಿ ಹಲವರು ಪ್ರಬಲ ಆಕಾಂಕ್ಷಿ ಗಳಾಗಿದ್ದಾರೆ. ಹಿರಿತನ ಹಾಗೂ ಗೆಲ್ಲುವ ಲೆಕ್ಕಚಾರ ಮುಂದಿಟ್ಟುಕೊಂಡು ಮತ್ತೊಮ್ಮೆ ಸ್ಪರ್ಧಿಸಲು ಹ್ಯಾಟ್ರಿಕ್ ಸಾಧಕ ಹಾಲಿ ಶಾಸಕರಿ ದ್ದಾರೆ.
ಕ್ಷೇತ್ರ ಪುನರ್ ವಿಂಗಡಣೆ ಬಳಿಕ ನಡೆದ ಮೂರು ಚುನಾವಣೆಯಲ್ಲಿಯೂ ಬಿಜೆಪಿಯ ಕೆ.ಜಿ. ಬೋಪಯ್ಯ ಗೆಲುವು ಸಾಧಿಸಿದ್ದಾರೆ. ಮೂರು ಚುನಾವಣೆಯಲ್ಲಿಯೂ ಎರಡನೇ ಸ್ಥಾನ ಪಡೆದವರು ಬದಲಾಗಿದ್ದಾರೆ. ಶಾಂತೆಯಂಡ ವೀಣಾ ಅಚ್ಚಯ್ಯ, ಚೆಪ್ಪುಡಿರ ಅರುಣ್ ಮಾಚಯ್ಯ, ಬಿದ್ದಾಟಂಡ ಟಿ. ಪ್ರದೀಪ್ ಸೋಲು ಕಂಡಿದ್ದಾರೆ.
ಬೋಪಯ್ಯ ಸ್ಪರ್ಧಿಸಲು ಮತ್ತೊಂದು ಅವಕಾಶ ಪಡೆದ್ದಲ್ಲಿ ಸತತ ೪ನೇ ಗೆಲುವು ದಾಖಲಿಸುವ ಮೂಲಕ ಹೊಸ ದಾಖಲೆ ಹರೆಯುವ ಉತ್ಸಾಹದಲ್ಲಿದ್ದಾರೆ. ತೇಲಪಂಡ ಶಿವಕುಮಾರ್ ನಾಣಯ್ಯ, ಪಳೆಯಂಡ ರಾಬಿನ್ ದೇವಯ್ಯ, ಶಾಂತೆಯಂಡ ರವಿ ಕುಶಾಲಪ್ಪ, ಪಟ್ಟಡ ರೀನಾ ಪ್ರಕಾಶ್, ಅಪ್ಪಚಟ್ಟೋಳಂಡ ಮನು ಮುತ್ತಪ್ಪ, ನೆಲ್ಲೀರ ಚಲನ್‌ಕುಮಾರ್ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಕಾಂಗ್ರೆಸ್ ಟಿಕೆಟ್‌ಗೆ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ, ಶಾಂತೆಯಂಡ ವೀಣಾ ಅಚ್ಚಯ್ಯ ನಡುವೆ ಅಂತಿಮ ಪ್ರಯತ್ನ ಸಾಗಿದೆ. ಜೆಡಿಎಸ್ ಅಲ್ಪಸಂಖ್ಯಾತ ಅಥವಾ ಕೊಡವ ಅಭ್ಯರ್ಥಿ ನಿಲ್ಲಿಸುವ ಲೆಕ್ಕಚಾರದಲ್ಲಿದೆ.
ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪೊನ್ನಂಪೇಟೆ, ವಿರಾಜಪೇಟೆ ತಾಲೂಕಿನ ಪೂರ್ಣ ಹಾಗೂ ಮಡಿಕೇರಿ ತಾಲೂಕಿನ ಭಾಗಶಃ ಪ್ರದೇಶವಿದೆ. ೨೦೦೮ ರಲ್ಲಿನ ಕ್ಷೇತ್ರ ಪುನರ್ ವಿಂಗಡಣೆ ವೇಳೆ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದ ಕ್ಷೇತ್ರ ಸಾಮಾನ್ಯವಾಗಿ ಮಾರ್ಪಟ್ಟಿತ್ತು.
೧೯೫೭ ರಿಂದ ೨೦೧೮ ರವರೆಗೆ ೧೪ ಬಾರಿ ಚುನಾವಣೆ ನಡೆದಿದೆ. ಈ ಪೈಕಿ ೮ ಬಾರಿ ಕಾಂಗ್ರೆಸ್, ೪ ಬಾರಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿ ದ್ದಾರೆ. ಒಮ್ಮೆ ಭಾರತೀಯ ಜನಸಂಘ ಇಲ್ಲಿ ಗೆಲುವು ದಾಖಲಿಸಿತ್ತು. ೧೯೫೭ ರಿಂದ ೨೦೦೮ ರವರೆಗೆ ಮಂಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿತ್ತು. ಕ್ಷೇತ್ರ ಪುನರ್ ವಿಂಗಡಣೆ ಬಳಿಕ (೨೦೦೮ ರಿಂದ) ಮೈಸೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿದೆ.
ಹ್ಯಾಟ್ರಿಕ್ ಗೆಲುವು
ಜಿ.ಕೆ. ಸುಬ್ಬಯ್ಯ, ಕೆ.ಜಿ. ಬೋಪಯ್ಯ ಹ್ಯಾಟ್ರಿಕ್ (ಸತತ ಮೂರು ಗೆಲುವು) ಜಯ ಸಾಧಿಸಿದ್ದಾರೆ. ಸುಮಾ ವಸಂತ್ ಮೂರು ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಇವರು ಸತತ ಎರಡು (೧೯೮೫, ೧೯೮೯) ಬಾರಿ ಗೆಲುವು ಸಾಧಿಸಿದ್ದರು. ಎಚ್.ಡಿ. ಬಸವರಾಜು ಎರಡು ಬಾರಿ ಕ್ಷೇತ್ರದ ಶಾಸಕರಾಗಿದ್ದರು.
ಉನ್ನತ ಹುದ್ದೆ
ಸಿ.ಎಂ. ಪೂಣಚ್ಚ ಪ್ರತ್ಯೇಕ ಕೊಡಗು ರಾಜ್ಯದ ಮುಖ್ಯಮಂತ್ರಿಯಾಗಿ ಆಳ್ವಿಕೆ ನಡೆಸಿದ್ದರು. ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದ ಕೆ.ಜಿ. ಬೋಪಯ್ಯ ವಿಧಾನಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಅಲಂಕರಿಸಿದ್ದರು. ಪ್ರಸ್ತುತ ಸರ್ಕಾರಿ ಜಮೀನು ರಕ್ಷಣಾ ಸಮಿತಿ ಅಧ್ಯಕ್ಷರಾಗಿದ್ದಾರೆ. ಸುಮಾ ವಸಂತ್ ಸಚಿವೆಯಾಗಿ, ಕೊಡಗಿನ ಉಸ್ತುವಾರಿ ಸಚಿವ ಸ್ಥಾನದ ಜವಾಬ್ದಾರಿ ನಿರ್ವಹಿಸಿದ್ದರು.
೨೦೧೮ ರ ಫಲಿತಾಂಶ
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಜಿ. ಬೋಪಯ್ಯ ಚಲಾಯಿತ ಮತದ ಪೈಕಿ ಶೇ.೪೯.೪ (೭೭,೯೪೪) ಮತ ಪಡೆಯುವುದರ ಮೂಲಕ ವಿರಾಜಪೇಟೆ ಕ್ಷೇತ್ರದಲ್ಲಿ ಭರ್ಜರಿ ಗೆಲುವು ದಾಖಲಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ಚೆಪ್ಪುಡಿರ ಅರುಣ್ ಮಾಚಯ್ಯ ಶೇ.೪೦.೯೫ (೬೪,೫೯೧) ಮತ ಪಡೆದಿದ್ದರು. ಒಟ್ಟು ೨,೧೭,೪೫೭ ಮತದಾರರ ಪೈಕಿ ೧,೫೭,೭೭೨ ಮತ ಚಲಾವಣೆಯಾಗಿ ತ್ತು. ಬೋಪಯ್ಯ ೧೩,೩೫೩ ಮತಗಳ ಅಂತರದಿಂದ ಗೆಲುವು ಸಾಧಿಸಿದರು.
ಜೆಡಿಎಸ್ ಅಭ್ಯರ್ಥಿ ಮೇರಿಯಂಡ ಸಂಕೇತ್ ಪೂವಯ್ಯ ಶೇ.೭.೧೧ (೧೧,೨೨೪), ಮಾಜಿ ಶಾಸಕ ಎಚ್.ಡಿ. ಬಸವರಾಜು ಎಐಎಂಇಪಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಶೇ.೦.೬೪ (೧,೦೧೫) ಮತ ಪಡೆದಿದ್ದರು. ಶೇ.೧.೧ (೧,೭೩೩) ನೋಟಾ ಮತವಾಗಿತ್ತು. ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಂ.ಕೆ. ನಂಜಪ್ಪ ಶೇ.೦.೪೨ (೬೬೬), ಎಚ್.ಡಿ. ದೊಡ್ಡಯ್ಯ ಶೇ.೦.೩೮ (೫೯೯) ಮತ ಪಡೆದಿದ್ದರು.
೨೦೧೩ ರಲ್ಲಿ ಅಲ್ಪಮತದ ಸೋಲು
೨೦೧೩ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿದ್ದಾಟಂಡ ಟಿ. ಪ್ರದೀಪ್, ಹಾಲಿ ಶಾಸಕ ಕೆ.ಜಿ. ಬೋಪಯ್ಯ ಎದುರು ಅಲ್ಪಮತಗಳ (೩,೪೧೪) ಅಂತರದಿಂದ ಸೋಲು ಅನುಭವಿಸಿದ್ದರು. ಒಟ್ಟು ೨,೦೧,೨೭೭ ಮತಗಳ ಪೈಕಿ ೧,೪೨,೩೭೭ ಮತ ಚಲಾವಣೆಯಾಗಿತ್ತು. ಈ ಪೈಕಿ ಕೆ.ಜಿ. ಬೋಪಯ್ಯ ೬೭,೨೫೦ ಹಾಗೂ ಬಿ.ಟಿ. ಪ್ರದೀಪ್ ೬೩,೮೩೬ ಮತ ಪಡೆದಿದ್ದರು. ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಮಾಜಿ ಶಾಸಕ ದಂಬೆಕೋಡಿ ಎಸ್ ಮಾದಪ್ಪ ೫,೮೮೦ ಮತ ಪಡೆದಿದ್ದರು.
೨೦೦೮ ರಲ್ಲಿ ಮತ ವಿಭಜನೆ
ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದ ವಿರಾಜಪೇಟೆ ಕ್ಷೇತ್ರ ಪುನರ್ ವಿಂಗಡಣೆಗೊಂಡು ೨೦೦೮ ರಲ್ಲಿ ಸಾಮಾನ್ಯ ಕ್ಷೇತ್ರವಾಯಿತು. ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಜಿ. ಬೋಪಯ್ಯ ೧೫,೦೭೩ ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಕಾಂಗ್ರೆಸ್ ಅಭ್ಯರ್ಥಿ ಶಾಂತೆಯಂಡ ವೀಣಾ ಅಚ್ಚಯ್ಯ ಹಾಗೂ ಜೆಡಿಎಸ್ ಅಭ್ಯರ್ಥಿ ಸಿ.ಎಸ್. ಅರುಣ್ ಮಾಚಯ್ಯ ನಡುವೆ ಮತ ವಿಜಭನೆ ಆಗಿದ್ದು ಬಿಜೆಪಿ ಗೆ ವರದಾನವಾಯಿತು. ಕೆ.ಜಿ. ಬೋಪಯ್ಯ ೪೮,೬೦೫, ವೀಣಾ ಅಚ್ಚಯ್ಯ ೩೩,೫೩೨, ಅರುಣ್ ಮಾಚಯ್ಯ ೨೯,೯೨೦ ಮತ ಪಡೆದಿ ದ್ದರು.
ಕ್ಷೇತ್ರದ ಶಾಸಕರು
೨೦೧೮- ಕೆ.ಜಿ. ಬೋಪಯ್ಯ (ಬಿಜೆಪಿ)
೨೦೧೩- ಕೆ.ಜಿ. ಬೋಪಯ್ಯ (ಬಿಜೆಪಿ)
೨೦೦೮- ಕೆ.ಜಿ. ಬೋಪಯ್ಯ (ಬಿಜೆಪಿ)
೨೦೦೪- ಎಚ್.ಡಿ. ಬಸವರಾಜು (ಬಿಜೆಪಿ)
೧೯೯೯- ಸುಮಾ ವಸಂತ್ (ಕಾಂಗ್ರೆಸ್)
೧೯೯೪- ಎಚ್.ಡಿ. ಬಸವರಾಜು (ಬಿಜೆಪಿ)
೧೯೮೯- ಸುಮಾ ವಸಂತ್ (ಕಾಂಗ್ರೆಸ್)
೧೯೮೫- ಸುಮಾ ವಸಂತ್ (ಕಾಂಗ್ರೆಸ್)
೧೯೮೩- ಜಿ.ಕೆ. ಸುಬ್ಬಯ್ಯ (ಕಾಂಗ್ರೆಸ್)
೧೯೭೮- ಜಿ.ಕೆ. ಸುಬ್ಬಯ್ಯ (ಕಾಂಗ್ರೆಸ್)
೧೯೭೨- ಜಿ.ಕೆ. ಸುಬ್ಬಯ್ಯ (ಕಾಂಗ್ರೆಸ್)
೧೯೬೭- ಎನ್. ಲೋಕಯ್ಯ ನಾಯಕ್ (ಜನಸಂಘ)
೧೯೬೨- ಎ.ಪಿ. ಅಪ್ಪಣ್ಣ (ಕಾಂಗ್ರೆಸ್)
೧೯೫೭- ಸಿ.ಎಂ. ಪೂಣಚ್ಚ (ಕಾಂಗ್ರೆಸ್)