ಉತ್ತಮ ಫಲಿತಾಂಶದತ್ತ ಚಿತ್ತ ಹರಿಸಿ

16mdkj3 - Copy
Published on

ವಿಜಯವಾಣಿ ಸುದ್ದಿಜಾಲ ಮಡಿಕೇರಿ

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ನಿತ್ಯದ ಚಟುವಟಿಕೆ ಹಾಗೂ ಪರೀಕ್ಷಾ ತಯಾರಿ ಸಂಬಂಧ ಪ್ರತ್ಯೇಕ ವೇಳಾಪಟ್ಟಿ ಮಾಡಿಕೊಂಡು ಉತ್ತಮ ಫಲಿತಾಂಶ ಗಳಿಸುವತ್ತ ಕಾರ್ಯಪ್ರವೃತ್ತರಾಗಬೇಕೆಂದು ವ್ಯಕ್ತಿತ್ವ ವಿಕಸನ ಮಾರ್ಗದರ್ಶಕ ಅಂತಾರಾಷ್ಟ್ರೀಯ ಅಥ್ಲೀಟ್ ತೀತಮಾಡ ಅರ್ಜುನ್ ದೇವಯ್ಯ ಕರೆ ನೀಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಕೊಡಗು ವಿಕಸನ ಸಂತ ಜೋಸೆಫರ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ಆಯೋ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪರೀಕ್ಷೆ ಸಿದ್ಧತೆ ಮಾರ್ಗದರ್ಶನ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದರು.

ವಿದ್ಯಾರ್ಥಿಗಳ ಕಲಿಕೆಯಲ್ಲಿ ಶಿಕ್ಷಕರ ಪಾತ್ರದ ಜತೆಗೆ ಪಾಲಕರ ಪಾತ್ರ ಬಹಳ ಮುಖ್ಯವಾಗುತ್ತದೆ. ಪಾಲಕರು ಮಕ್ಕಳೊಂದಿಗೆ ಆಪ್ತವಾಗಿದ್ದಷ್ಟು ಮಕ್ಕಳು ಮಾನಸಿಕವಾಗಿ ಬಲವಾಗುತ್ತಾರೆ. ಮನೆಯಲ್ಲಿ ಒಳ್ಳೆಯ ವಾತಾವರಣ ಇದ್ದಾಗ ಮಕ್ಕಳ ಕಲಿಕೆಯ ಆಸಕ್ತಿ ಹೆಚ್ಚುತ್ತದೆ ಎಂದರು.

ಶಾಲೆಯಲ್ಲಿ ಶಿಕ್ಷಕರು ಹೇಳಿಕೊಟ್ಟ ಪಾಠದಲ್ಲಿ ಗೊಂದಲ ಇದ್ದಾಗ ಆ ಬಗ್ಗೆ ಶಿಕ್ಷಕರ ಬಳಿ ಹೇಳಿ ಬಗೆಹರಿಸಿಕೊಳ್ಳಬೇಕು. ಶಿಕ್ಷಕರು, ಮಕ್ಕಳು ಪ್ರಶ್ನೆ ಮಾಡಿದಾಗ ಆಪ್ತವಾಗಿ ಅದಕ್ಕೆ ಪರಿಹಾರ ನೀಡಬೇಕು. ಶಿಕ್ಷಕರು ಸಹನೆಯಿಂದ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಕಲಿಕೆಗೆ ನೆರವಾಗಬೇಕೆಂದು ಸಲಹೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಕೊಡಗು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆಕಾಶ್ ಮಾತನಾಡಿ, ಪಠ್ಯದ ಪ್ರತಿಯೊಂದು ವಿಚಾರವನ್ನೂ ಆಸಕ್ತಿಯಿಟ್ಟು ಓದಬೇಕು. ಪರೀಕ್ಷೆಗೆ ಕೆಲವೇ ದಿನ ಬಾಕಿಯಿದ್ದು, ಶ್ರದ್ಧೆಯಿಂದ ಅಭ್ಯಸಿಸಿದರೆ ಉತ್ತಮ ಅಂಕ ಗಳಿಸಲು ಸಾಧ್ಯವಿದೆ. ನಾನು ಉತ್ತಮ ಸಾಧನೆ ಮಾಡುತ್ತೇನೆಂಬ ಬಗ್ಗೆ ಪ್ರತಿಯೊಬ್ಬರೂ ಆತ್ಮವಿಶ್ವಾಸ ರೂಢಿಸಿಕೊಳ್ಳಬೇಕೆಂದರು.
ಕೊಡಗು ವಿಕಸನ ಸಂಸ್ಥೆ ಮೂಲಕ ಉಚಿತವಾಗಿ ಮಾರ್ಗದರ್ಶನ ಕಾರ್ಯಕ್ರಮ ನಡೆಸಿಕೊಟ್ಟ ತೀತಮಾಡ ಅರ್ಜುನ್ ದೇವಯ್ಯ ಅವರನ್ನು ಶಾಲಾ ಶಿಕ್ಷಣ ಮತ್ತು ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಸನ್ಮಾನಿಸಲಾಯಿತು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರಂಗಧಾಮಯ್ಯ, ಕೊಡಗು ವಿಕಸನ ಸಂಸ್ಥಾಪಕ ಚೈಯ್ಯಂಡ ಸತ್ಯ ಗಣಪತಿ, ಬಿಆರ್‌ಸಿ ನಳಿನಿ, ಶಾಲಾ ಮುಖ್ಯಶಿಕ್ಷಕಿ ರೋಜಾ, ಕೊಡಗು ವಿಕಸನ ಪವನ್ ಕೆಂಚೆಟ್ಟಿ ಮುಂತಾದವರಿದ್ದರು.

ಮಡಿಕೇರಿಯ ಸಂತ ಮೈಕಲರ ವಿದ್ಯಾಸಂಸ್ಥೆ, ಸಂತ ಜೋಸೇಫರ ವಿದ್ಯಾಸಂಸ್ಥೆ, ಕಡಗದಾಳು ಪ್ರೌಢಶಾಲೆ, ಮಕ್ಕಂದೂರು ಪ್ರೌಢಶಾಲೆ, ಗಾಳಿಬೀಡು ಪ್ರೌಢಶಾಲೆ, ಬ್ಲಾಸಂ ಶಾಲೆ, ಮಡಿಕೇರಿ ಪ್ರೌಢಶಾಲೆ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಸ್ವರೂಪ ಸ್ವಾಗತಿಸಿದರು. ಕಿಶೋರ್ ರೈ ಕತ್ತಲೆಕಾಡು ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net