

ಹಿರಿಕರ ರವಿ ಸೋಮವಾರಪೇಟೆ
ಭತ್ತದ ಕಣಜವೆಂದೆ ಕರೆಸಿಕೊಳ್ಳುತ್ತಿದ್ದ ಸೋಮವಾರಪೇಟೆ ತಾಲೂಕಿನಲ್ಲಿ ಭತ್ತ ಕೃಷಿ ಭೂಮಿ ಕಾಫಿ, ಅಡಿಕೆ ತೋಟಗಳಾಗಿ ಪರಿವರ್ತನೆ ಯಾಗುತ್ತಿರುವ ಬಗ್ಗೆ ರೈತರು ಸರ್ಕಾರದ ಯೋಜನೆಗಳ ಕೊರತೆ ಹಾಗೂ ಅಕಾಲಿಕ ಮಳೆಯಿಂದ ಭತ್ತ ಕೃಷಿಯನ್ನು ಕೈ ಬಿಡುವ ಪರಿಸ್ಥಿತಿ ಒದಗಿದೆ ಎಂದು ಅಭಿಪ್ರಾಯಿಸಿದರು.
ಕನ್ನಡದ ನಂಬರ್ ೧ ದಿನಪತ್ರಿಕೆ ವಿಜಯವಾಣಿ ಮಂಗಳವಾರ ಆಯೋಜಿಸಿದ್ದ ಸಂವಾದದಲ್ಲಿ ತಮ್ಮ ಅನಿಸಿಕೆ ವ್ಯಕ್ತ ಪಡಿಸಿದರು. ಮುಂಗಾರು ವಿಳಂಬ, ಅಕಾಲಿಕ ಮಳೆ, ಉತ್ಪಾದನಾ ವೆಚ್ಚ ಹೆಚ್ಚಳ, ಕಾರ್ಮಿಕರ ಕೊರತೆ, ಬೆಲೆ ಇಲ್ಲದಿರುವುದು, ರೋಗಬಾಧೆ ಹಾಗೂ ಫಸಲು ನಷ್ಟದ ಭೀತಿ ಇವುಗಳಿಂದಲೂ ಬಹತೇಕ ಭತ್ತ ಬೆಳೆಗಾರರು ಗದ್ದೆಗಳನ್ನು ಸಮತಟ್ಟು ಮಾಡಿ ಕಾಫಿ, ಅಡಿಕೆ, ಬಾಳೆ ಕೃಷಿ ಮಾಡುವಂತ ಪರಿಸ್ಥಿತಿ ಒದಗಿದೆ ಎಂದು ಹೇಳಿದರು.
ಮಳೆಗಾಲದಲ್ಲಿ ವರ್ಷಂಪ್ರತಿ ಸುರಿಯುತ್ತಿರುವ ಧಾರಾಕಾರ ಮಳೆ, ಪ್ರಕೃತಿ ವಿಕೋಪದಿಂದ ತಾಲ್ಲೂಕಿನಲ್ಲಿ ಭತ್ತ ಕೃಷಿಗೆ ಬಹಳಷ್ಟು ಹಾನಿಯಾಗಿತ್ತು. ಭತ್ತದ ಗದ್ದೆಗಳ ಮೇಲೆ ಹೂಳು ತುಂಬಿ ಸಮತಟ್ಟು ಮಾಡಲು ಹಣ ಹೊಂದಿಸಲಾಗದೆ, ಗದ್ದೆ ಪಾಳುಬಿಟ್ಟು, ನಂತರ ಅನಿವಾರ್ಯವಾಗಿ ತೋಟಗಾರಿಕಾ ಬೆಳೆಯುವ ದುಸ್ಥಿತಿ ಒದಗಿದೆ.
ಸರ್ಕಾರದಿಂದ ಭತ್ತ ಬೆಳೆಗಾರರಿಗೆ ಅವಶ್ಯ ಸೌಲಭ್ಯಗಳು ಸಿಗದ ಹಿನ್ನಲೆಯಲ್ಲಿ ಭತ್ತ ಎಂದರೆ ರೈತರು ಭಯಪಡುವಂತಹ ದುಸ್ಥಿತಿ ಒದಗಿದೆ. ಭತ್ತ ಕೃಷಿಗೆ ಕೈ ಹಾಕಿದರೆ, ನಷ್ಟ ಗ್ಯಾರೆಂಟಿ ಎನ್ನುವಂತಾಗಿದೆ. ಹಲವು ದಶಕಗಳಿಂದ ಭತ್ತ ಕೃಷಿ ಮಾಡ್ಡಿದ್ದೇವೆ. ಭತ್ತ ಬೆಳೆದು ಸಾಲಗಾರರಾಗುವುದಕ್ಕಿಂತ, ಗದ್ದೆ ಮುಚ್ಚಿ ತೋಟಗಾರಿಕಾ ಬೆಳೆ ಬೆಳೆಯುವುದು ಒಳ್ಳೆಯದು ಎಂದು ಕೃಷಿಕರು ಅಭಿಪ್ರಾಯ ವ್ಯಕ್ತಪಡಿಸಿದರು.
ಸೋಮವಾರಪೇಟೆ ತಾಲೂಕಿನಲ್ಲಿ ಅತಿ ಹೆಚ್ಚು ಅರೇಬಿಕಾ ಕಾಫಿ ಬೆಳೆಯುತ್ತಿದ್ದು, ಉತ್ತಮ ಬೆಲೆಯೂ ಸಿಗುತ್ತಿದೆ. ಗದ್ದೆ ಭೂಮಿಯಲ್ಲಿ ಸುಧಾರಿತ ಕಾಫಿ ತಳಿಯಿಂದ ಉತ್ತಮ ಫಸಲು ಸಿಗುತ್ತಿರುವ ಕಾರಣದಿಂದ ಗದ್ದೆಯಲ್ಲಿ ಕಾಫಿ ಗಿಡ ಹಾಕಲಾಗುತ್ತಿದೆ ಎಂದು ಹೇಳಿದರು.
ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಮಳೆ ಬೀಳುತ್ತದೆ. ಅದರೂ ಅತಿ ಹೆಚ್ಚು ಭತ್ತ ಬೆಳೆಯಲಾಗುತ್ತಿದೆ.
ಮಳೆಗಾಲದಲ್ಲಿ ಗದ್ದೆಯಲ್ಲಿ ವಾರಗಟ್ಟಲೆ ನೀರು ಸಂಗ್ರಹವಾಗಿ ಸಸಿ ಕೊಳೆದು ಹೋಗುತ್ತದೆ. ಕೆಲ ವರ್ಷ ೨ನೇ ಬಾರಿ ನಾಟಿ ಮಾಡಲಾಗು ತ್ತದೆ. ಭತ್ತ ಹಣ್ಣಾದ ಸಂದರ್ಭ ಕಾಡುಹಂದಿಗಳು ದಾಳಿ ಮಾಡಿ ಪೈರನ್ನು ತಿನ್ನುತ್ತವೆ. ಗದ್ದೆಗಳ ಪಕ್ಕದಲ್ಲಿ ಮೀಸಲು ಅರಣ್ಯವಿದ್ದು
ಕಾಡುಕೋಣಗಳು, ಕಾಡನೆಗಳು ನುಗ್ಗಿದರೆ ಏನೂ ಉಳಿಯುವುದಿಲ್ಲ. ಬಡ ರೈತರಿಗೆ ಸೂಕ್ತ ಪರಿಹಾರವೂ ಸಿಗುತ್ತಿಲ್ಲ. ಊಟಕ್ಕಾಗಿ ಭತ್ತ ಬೆಳೆಯಲಾಗುತ್ತಿದೆ ಎಂದು ರೈತರು ಹೇಳಿದರು.
ಗ್ರಾಮೀಣ ಭಾಗದಲ್ಲಿ ಹಿಂದೆಲ್ಲಾ ಜಾನುವಾರು ಸಾಕಲಾಗುತ್ತಿತ್ತು. ಸಾವಯವ ಗೊಬ್ಬರ ಬಳಸಿ ಕೃಷಿ ಮಾಡಲಾಗುತ್ತಿದ್ದು, ಎತ್ತುಗಳಿಂದ ಮಣ್ಣನ್ನು ಹದ ಮಾಡಿ, ಮನೆಯವರು ನಾಟಿ ಮಾಡುತ್ತಿದ್ದರು. ಇದರಿಂದ ಉತ್ಪಾದನಾ ವೆಚ್ಚ ಕಡಿಮೆಯಾಗಿ, ಲಾಭದಾಯಕವಾಗಿತ್ತು. ಆದರೆ ಈಗ ಸಾವಯವ ಪದ್ಧತಿ ಬೀಡಲಾಗಿದೆ. ರಾಸಾಯನಿಕ ಗೊಬ್ಬರಗಳ ಬೆಲೆ ಗಗನಕ್ಕೇರಿದೆ. ಭತ್ತ ಕೃಷಿ ಸಾಧ್ಯವೇ ಇಲ್ಲ ಎನ್ನುವಂತಾಗಿದೆ ಎಂದು ಹೇಳಿದರು.
ಭತ್ತ ಕೃಷಿಗೆ ಸಹಾಯಧನ ಕೋರಿ ಕೃಷಿಕ ಸಮಾಜದಿಂದ ಕಳೆದ ಮೂರು ವರ್ಷಗಳ ಹಿಂದೆಯೇ ಕೃಷಿ ಮಂತ್ರಿಗಳಿಗೆ ಮನವಿ ಪತ್ರ ನೀಡ ಲಾಗಿತ್ತು. ಆದರೆ ಸರ್ಕಾರ ಸಹಾಯಧನ ಕೊಡದ ಹಿನ್ನೆಲೆಯಲ್ಲಿ ಭತ್ತ ಬೆಳೆಯುವುದನ್ನೇ ಕೈಬಿಡಲಾಗಿದೆ. ಗದ್ದೆಗಳು ಕಾಫಿ ತೋಟ ಗಳಾಗಿವೆ. ಉಳಿದ ಗದ್ದೆ ಭೂಮಿ ಉಳಿಯಬೇಕಾದರೆ ಸರ್ಕಾರ ಸೂಕ್ತ ನಿರ್ಧಾರ ತೆಗದುಕೊಳ್ಳಬೇಕು ಎಂದು ರೈತರು ಹೇಳಿದರು.
**
ಕಾಫಿ ತೋಟ ಮಾಡುವ ನೆಪದಲ್ಲಿ ಗದ್ದೆಗಳಿಗೆ ನೀರು ಬರುವ ಕೊಲ್ಲಿ, ತೊರೆ ಮುಚ್ಚಲಾಗಿದೆ. ಗದ್ದೆಗಳಿಗೆ ನೀರಿನ ಮೂಲಗಳು ಮುಚ್ಚಿರು ವ ಕಾರಣ ಭತ್ತದ ಗದ್ದೆಗಳು ಉಪಯೋಗಕ್ಕೆ ಬರುತ್ತಿಲ್ಲ. ಬಹುತೇಕ ರೈತರು ಮಳೆಯನ್ನೇ ನಂಬಿ ಕೃಷಿ ಮಾಡಬೇಕು. ನಿಗದಿತ ಸಮಯ ದಲ್ಲಿ ಮಳೆ ಬೀಳದ ಪರಿಣಾಮ ಕೃಷಿಗೆ ಸಮಸ್ಯೆಯಾಗಿದೆ. ಕಾರ್ಮಿಕರ ಸಮಸ್ಯೆಯಿದೆ. ಅಕಾಲಿಕ ಮಳೆಯಿಂದ ಇಳುವರಿ ಕಡಿಮೆ ಯಾಗಿದೆ. ಕೆ.ಪಿ. ದಿನೇಶ್, ಭತ್ತ ಬೆಳೆಗಾರ, ಹೊಸತೋಟ.
**
ಕಾರ್ಮಿಕರ ಕೊರತೆ, ಅಕಾಲಿಕ ಮಳೆ, ನಷ್ಟದ ಭೀತಿ, ವಾಣಿಜ್ಯ ಬೆಳೆಗಳತ್ತ ವ್ಯಾಮೋಹದಿಂದ ಭತ್ತ ಕೃಷಿಗೆ ಹಿನ್ನೆಡೆಯಾಗಿದೆ. ಕೇರಳ ರಾಜ್ಯ ಮಾದರಿಯಲ್ಲಿ ಅತೀ ಹೆಚ್ಚು ಮಳೆಬೀಳುವ ಮಲೆನಾಡು ಭಾಗದ ಭತ್ತ ಕೃಷಿಕರಿಗೆ ಪ್ರೋತ್ಸಾಹಧನ ಕೊಡುವ ಮೂಲಕ ಭತ್ತ ಕೃಷಿ ಮಾಡಲು ಪ್ರೋತ್ಸಾಹ ನೀಡಬೇಕು. ಈ ಬಜೆಟ್‌ನಲ್ಲೇ ಪ್ರೋತ್ಸಾಹಧನ ಘೋಷಣೆ ಮಾಡಬೇಕು. ಎಸ್.ಪಿ. ಪೊನ್ನಪ್ಪ, ಅಧ್ಯಕ್ಷರು, ತಾಲೂಕು ಕೃಷಿಕ ಸಮಾಜ.
**
ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಮಳೆ ಬೀಳುತ್ತದೆ. ಭತ್ತ ಮುಖ್ಯ ಬೆಳೆಯಾಗಿದೆ. ಅಕಾಲಿಕ ಮಳೆಯಿಂದ ಹೆಚ್ಚಿನ ಪ್ರಮಾಣದಲ್ಲಿ ನಷ್ಟ ಅನುಭವಿಸಿದರು. ಭತ್ತ ಕೃಷಿ ಇಲ್ಲಿಯವರಗೆ ಬಿಟ್ಟಿಲ್ಲ. ದಾಖಲಾತಿ ಸಮಸ್ಯೆಯಿಂದ ಅನೇಕ ಜನರಿಗೆ ಬೆಳೆ ಹಾನಿ ಪರಿಹಾರ ಸಿಗುತ್ತಿಲ್ಲ. ಕಾಡುಪ್ರಾಣಿ ತಿಂದು ಉಳಿಸಿದ ಫಸಲನ್ನು ಪಡೆದುಕೊಳ್ಳುವ ದುಸ್ಥಿತಿ ಇದೆ. ಇನ್ನಾದರೂ ಸರ್ಕಾರ ಭತ್ತ ಕೃಷಿಕರಿಗೆ ಪ್ರೋತ್ಸಾಹಧನ ನೀಡಬೇಕು. ಗೀಜಿಗಂಡ ಲೋಕೇಶ್, ಕೃಷಿಕರು, ಸೂರ್ಲಬ್ಬಿ.
**
ಆಹಾರ ಬೆಳೆ ಬೆಳೆಯದಿದ್ದರೆ, ಆಹಾರಕ್ಕಾಗಿ ಪರದಾಡುವ ಪರಿಸ್ಥಿತಿ ಒದಗಲಿದೆ. ಗದ್ದೆ ಪರಿವರ್ತನೆ ಮಾಡುತ್ತ ಹೋದರೆ, ಭತ್ತದ ಉತ್ಪಾದನೆ ಕುಸಿಯುತ್ತಿದೆ. ಈ ಅರಿವು ಸರ್ಕಾರಕ್ಕೆ ಇಲ್ಲ. ಭತ್ತ ಕೃಷಿಗೆ ಉತ್ತೇಜನ ನೀಡಬೇಕು. ಉತ್ಪಾದನಾ ವೆಚ್ಚ ಕಡಿಮೆ ಮಾಡ ಬೇಕಾದರೆ ಯಂತ್ರಗಳ ಮೊರೆ ಹೋಗಬೇಕಾಗಿದೆ. ಸಹಾಯಧನದಲ್ಲಿ ಯಂತ್ರ ಒದಗಿಸಬೇಕು. ೧ ಎಕರೆ ಗದ್ದೆನಾಟಿ ಮಾಡಲು ೨೦ ಸಾವಿರ ರೂ.ಪ್ರೋತ್ಸಾಹಧನ ನೀಡಬೇಕು. ಲಿಂಗೇರಿ ರಾಜೇಶ್, ಜಿಲ್ಲಾಧ್ಯಕ್ಷರು, ರೈತ ಹೋರಾಟ ಸಮಿತಿ.