

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಪುಟ್ಟ ಕೊಡಗು ಜಿಲ್ಲೆಯಲ್ಲಿ ನಿರೀಕ್ಷಿತ ಅಭಿವೃದ್ಧಿ ಕಾಮಗಾರಿ ನಡೆಯುತ್ತಿಲ್ಲ ಎಂಬ ಅತೃಪ್ತಿ ಜನ ವಲಯದಲ್ಲಿದೆ. ಕೈಗೆತ್ತಿಕೊಂಡಿರುವ ಅಭಿವೃದ್ಧಿ ಕಾಮಗಾರಿಗಳು ಕೂಡ ಸಕಾಲದಲ್ಲಿ ಪೂರ್ಣಗೊಳ್ಳುತ್ತಿಲ್ಲ ಎಂಬ ಆಕ್ರೋಶ ಮಡ್ಡುಗಟ್ಟಿದೆ. ಇಂದಿಗೂ ಹಲವಾರು ಪ್ರದೇಶಗಳಲ್ಲಿ
ಮೂಲಭೂತ ಸವಲತ್ತಿನ ಕೊರತೆ ಅನುಭವಿಸುತ್ತಿದ್ದಾರೆ.
೧೪ ವರ್ಷದ ಹಿಂದೆ ಮಡಿಕೇರಿಯಲ್ಲಿ ಕೈಗೆತ್ತಿಕೊಂಡಿರುವ ಸುವರ್ಣ ಸಮುಚ್ಛಯ ಭವನ, ೧೨ ವರ್ಷ ಹಿಂದೆ ಕುಶಾಲನಗರದಲ್ಲಿ ಕೈಗೆತ್ತಿ
ಕೊಂಡಿರುವ ಕಲಾ ಭವನ, ೧೦ ವರ್ಷ ಹಿಂದೆ ಮಡಿಕೇರಿ ಹೊರ ವಲಯದಲ್ಲಿ ನಿರ್ಮಾಣಗೊಳ್ಳುತ್ತಿರುವ ಕೊಡವ ಹೆರಿಟೇಜ್ ಸೆಂಟರ್, ಎಸ್.ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಘೋಷಿಸ ಕೂಟಿಯಾಲ ಸೇತುವೆಗೆ ಸಂಪರ್ಕ ರಸ್ತೆ… ಹೀಗೆ ಕೈಗೆತ್ತಿಕೊಂಡಿರುವ ಹಲವಾರು ಕಾಮಗಾರಿಗಳು ಮಂದಗತಿಯಲ್ಲಿ ಸಾಗುತ್ತಿದೆ.
ಕೊಡಗಿಗೆ ಘೋಷಣೆಯಾಗಿರುವ ಸೈನ್ಸ್ ಪಾರ್ಕ್‌ಗೆ ಸಂಬಂಧಿಸಿದ್ದಂತೆ ಜಾಗದ ವಿವಾದ ಇತ್ಯರ್ಥ ಪಡಿಸಲು ಸಾಧ್ಯವಾಗಿಲ್ಲ. ಕೊಡವ ಸಮಾಜಗಳ ಅಭಿವೃದ್ಧಿಗೆ ಮುಂಗಡ ಪತ್ರದಲ್ಲಿ ಘೋಷಣೆಯಾದ ೧೦ ಕೋಟಿ ರೂಪಾಯಿ ಹಾಗೂ ಕೊಡವ ಸಮಾಜಗಳ ಒಕ್ಕೂಟದ ಮೈದಾನ ನಿರ್ಮಾಣಕ್ಕೆ ಘೋಷಣೆಯಾದ ೫ ಕೋಟಿ ರೂ. ಹಣ ಇನ್ನೂ ಬಿಡುಗಡೆಯಾಗಿಲ್ಲ.
ಮುಖ್ಯಮಂತ್ರಿ ನಿರೀಕ್ಷೆಯಲ್ಲಿ ಕಾಮಗಾರಿ ಪೂರ್ಣಗೊಂಡಿರುವ ಗಾಂಧಿ ಭವನ ಉದ್ಘಾಟಿಸಲು ಸಾಧ್ಯವಾಗಿಲ್ಲ. ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿ ಸಮೀಪ ನಿರ್ಮಿಸಿರುವ ಮನೆಗಳ ಕಾಮಗಾರಿ ಪೂರ್ಣಗೊಂಡು ಹಲವು ತಿಂಗಳು ಕಳೆದಿದ್ದರೂ ಸಿಎಂ ಗಾಗಿ ಕಾಯುತ್ತಿದೆ.
ಹಲವು ತಿಂಗಳ ಹಿಂದೆ ಜನರಲ್ ಕೆ.ಎಸ್. ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದ ಅಭಿವೃದ್ಧಿಗೆ ಸಲ್ಲಿಸಿರುವ ಪ್ರಸ್ತಾವನೆಗೆ ಸರ್ಕಾರ ಇನ್ನೂ ಒಪ್ಪಿಗೆ ನೀಡಿಲ್ಲ. ಜಿಲ್ಲೆಯ ಬಹುತೇಕ ರಸ್ತೆಗಳು ದುಸ್ಥಿತಿಗೆ ತಲುಪಿದ್ದು, ವಾಹನ ಸಂಚಾರಕ್ಕೆ ಯೋಗ್ಯವಲ್ಲದ ಸ್ಥಿತಿಗೆ ತಲುಪಿದೆ. ಅಭಿವೃದ್ಧಿಗೆ ಹಣ ಇಲ್ಲದಿದ್ದಲ್ಲಿ ಕನಿಷ್ಠ ರಸ್ತೆ ಗುಂಡಿ ಮುಚ್ಚಿ ಎಂದು ಸವಾರರು ಗೊಣಗುತ್ತಿದ್ದಾರೆ.
ಕೊಡಗಿನಲ್ಲಿ ಕೈಗೆತ್ತಿಕೊಂಡಿರುವ ಅಭಿವೃದ್ಧಿ ಕಾಮಗಾರಿ ನನೆಗುದಿಗೆ ಬಿದ್ದಿರುವ ವಿಚಾರಕ್ಕೆ ಸಂಬಂಧಿಸಿದ್ದಂತೆ ಲೌಡ್ ಸ್ಪೀಕರ್‌ಗೆ ಅಭಿಪ್ರಾಯ ಸಂಗ್ರಹಿಸಲಾಗಿದೆ.
**
ನಮ್ಮ ಅಜ್ಜನ ಕಾಲದ ಕನಸು ಇನ್ನೂ ಈಡೇರಿಲ್ಲ. ಅಂದಿನ ಕಾಲದಲ್ಲಿ ಸುತ್ತಲಿನ ಗ್ರಾಮಸ್ಥರು ಕೂಟಿಯಾಲ ಸೇತುವೆ ಬಳಸಿಕೊಂಡು ನಡೆದು ಕೊಂಡು ತೆರಳುತ್ತಿದ್ದರು. ಸೇತುವೆ ಆಸೆ ಈಡೇರಿದರೆ ಎಲ್ಲ ಸಮಸ್ಯೆ ಪರಿಹಾರ ಕಾಣುವ ನಿರೀಕ್ಷೆ ಹಾಗೇ ಉಳಿದುಕೊಂಡಿದೆ. ಅರಣ್ಯ ಇಲಾಖೆ, ಜನಪ್ರತಿನಿಧಿಗಳು ಒಂದಾಗಿ ಸೇತುವೆ ಸಮಸ್ಯೆ ಈಡೇರಿಸಲಿ. ಬಿರುನಾಣಿ- ಬಿ.ಶೆಟ್ಟಿಗೇರಿ ಸುತ್ತಲಿನ ಜನರಿಗೆ ಪ್ರಯೋಜನವಾಗ ಲಿದೆ. ತೀತಿಮಾಡ ಸೋಮಣ್ಣ, ಕಾಫಿ ಬೆಳೆಗಾರರು, ಬಾಡಗ.
**
ಪ್ರಸ್ತುತ ಪೊನ್ನಂಪೇಟೆ ತಾಲೂಕು ಕೇಂದ್ರವಾಗಿದ್ದರೂ, ಹಳೆಯ ವಿರಾಜಪೇಟೆ ತಾಲೂಕು ಕೇಂದ್ರ ಸ್ಥಾನದಲ್ಲಿ ಹೆಚ್ಚು ಇಲಾಖೆಗಳನ್ನು ಸ್ಥಳೀಯ ರು ಅವಲಂಬಿಸಿದ್ದಾರೆ. ಬಿರುನಾಣಿ, ಬಾಡಗರಕೇರಿ, ಪೊರಾಡ್ ಸುತ್ತಲಿನ ಗ್ರಾಮಸ್ಥರು ಬಿ. ಶೆಟ್ಟಿಗೇರಿ ಮೂಲಕ ಕಡಿಮೆ ಅವಧಿ, ದೂರ ಇರುವುದರಿಂದ ಹೆಚ್ಚು ಪ್ರಯೋಜನವಾಗುತ್ತದೆ. ಇಲ್ಲಿನ ಗೊಂದಲ ಈಡೇರಿಸಲು ಪ್ರಯತ್ನ ಅವಶ್ಯ. ಅಜ್ಜಿಕುಟ್ಟೀರ ಭವ್ಯ ಬೋಪಣ್ಣ, ಗೃಹಿಣಿ, ಚಿಕ್ಕಮುಂಡೂರು.
**
ಹನ್ನೆರಡು ವರ್ಷದ ಹಿಂದೆ ಕುಶಾಲನಗರದಲ್ಲಿ ಕೈಗೆತ್ತಿಕೊಂಡಿರುವ ಕಲಾ ಭವನದ ಕಾಮಗಾರಿ ೧೨ ವರ್ಷ ಆದರೂ ಪೂರ್ಣಗೊಂಡಿಲ್ಲ. ಸರ್ಕಾರದ ಬಳಿ ಹಣ ಇದೆ. ಆದರೆ, ಕೆಲಸ ಮಾಡುವ ಆಸಕ್ತಿ ಇಲ್ಲ. ಶಾಸಕರು ಮುತುವರ್ಜಿ ವಹಿಸಬೇಕಾಗಿದೆ. ೨೦೧೦ ರಲ್ಲಿ ಟೆಂಡರ್ ಪ್ರಕ್ರಿಯೆ ನಡೆದಿದ್ದು, ೨೦೧೨ ರಲ್ಲಿ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ಬಾಕಿ ಕಾಮಗಾರಿಗೆ ಅಗತ್ಯ ಅನುದಾನ ಬಿಡುಗಡೆಯಾಗಿಲ್ಲ. ಎಂ.ಇ. ಮೊಹಿದ್ದೀನ್, ಸದಸ್ಯರು, ಕಲಾ ಭವನ ಮೇಲುಸ್ತುವಾರಿ ಸಮಿತಿ, ಕುಶಾಲನಗರ.
**
ಸುವರ್ಣ ಸಮುಚ್ಚಯ ಭವನ ಕಾಮಗಾರಿಗೆ ಅನುದಾನದ ಕೊರತೆ ಇಲ್ಲ. ೭ ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ.
ಲೋಕೋಪಯೋಗಿ ಇಲಾಖೆ ಉಸ್ತುವಾರಿಯಲ್ಲಿ ಕಾಮಗಾರಿ ನಡೆಯುತ್ತಿದ್ದು, ಗುತ್ತಿಗೆದಾರರು ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿ ಸಬೇಕಾಗಿದೆ. ಇನ್ನೆರಡು ತಿಂಗಳಿನಲ್ಲಿ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಚಿನ್ನಸ್ವಾಮಿ, ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ.
**
ಹತ್ತು ವರ್ಷ ಕಳೆದಿದ್ದರೂ ಕೊಡವ ಹೆರಿಟೇಜ್ ಸೆಂಟರ್ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಕಳೆದ ವರ್ಷ ವಿಧಾನ ಪರಿಷತ್ತಿನಲ್ಲಿ ಶಾಂತೆಯಂಡ ವೀಣಾ ಅಚ್ಚಯ್ಯ ಪ್ರಶ್ನಿಸಿದ್ದ ಸಂದರ್ಭ ಜೂನ್ ಒಳಗೆ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಿತ್ತು. ಆದರೆ, ಸರ್ಕಾರ ನೀಡಿದ ಭರವಸೆ ಈಡೇರಲಿಲ್ಲ. ಕೊಡವರು ಹಾಗೂ ಕೊಡಗಿನ ಬಗ್ಗೆ ಸರ್ಕಾರ ನಿರ್ಲಕ್ಷೃ ವಹಿಸುತ್ತಿದೆ. ಬೊಳ್ಳಜೀರ ಬಿ. ಅಯ್ಯಪ್ಪ, ಅಧ್ಯಕ್ಷರು, ಕೊಡವ ಮಕ್ಕಡ ಕೂಟ.
**
ಸುದೀರ್ಘ ಅವಧಿಯಿಂದ ಒಂದೇ ಪಕ್ಷದ ಜನಪ್ರತಿನಿಧಿಗಳು ಅಧಿಕಾರದಲ್ಲಿದ್ಧಾರೆ. ಇವರಲ್ಲಿನ ಮುತುವರ್ಜಿ ಕೊರತೆಯಿಂದ ಕೈಗೆತ್ತಿಕೊಂಡಿ
ರುವ ಅಭಿವೃದ್ಧಿ ಕಾಮಗಾರಿ ಸಕಾಲದಲ್ಲಿ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ಕಳೆದ ೫ ವರ್ಷದಲ್ಲಿ ಕೊಡಗಿನಲ್ಲಿ ಯಾವ ಕೆಲಸವೂ ಆಗಿಲ್ಲ. ಕೊಡಗಿನ ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿದ್ದಂತೆ ಸರ್ಕಾರ ನಿರ್ಲಕ್ಷೃ ವಹಿಸಿದೆ. ತೀತೀರ ಧರ್ಮಜ ಉತ್ತಪ್ಪ, ಜಿಲ್ಲಾಧ್ಯಕ್ಷರು, ಕಾಂಗ್ರೆಸ್.
**
ಸರ್ಕಾರದಿಂದ ಅಭಿವೃದ್ಧಿ ಕಾಮಗಾರಿಗೆ ಅನುದಾನ ಬಿಡುಗಡೆಯಾಗುತ್ತಿಲ್ಲ. ಗುತ್ತಿಗೆದಾರರು ಮಾಡಿರುವ ಕೆಲಸಕ್ಕೆ ಬಿಲ್ ಪಾವತಿ ಆಗದರಿಂದ ಹಲವು ಕಾಮಗಾರಿ ನನೆಗುದಿಗೆ ಬಿದ್ದಿದೆ. ಹಣಕಾಸಿನ ಕೊರತೆಯಿಂದಾಗಿ ದುಸ್ಥಿತಿಗೆ ತಲುಪಿರುವ ಕೊಡಗಿನ ರಸ್ತೆಗಳನ್ನು ಸರಿ ಪಡಿಸಲು ಸಾಧ್ಯವಾಗುತ್ತಿಲ್ಲ. ಕೆ.ಎಂ.ಬಿ. ಗಣೇಶ್, ಜಿಲ್ಲಾಧ್ಯಕ್ಷರು, ಜೆಡಿ(ಎಸ್).
**
ನನೆಗುದಿಗೆ ಬಿದ್ದಿರುವ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಗಮನ ಸೆಳೆದಿದ್ದು, ತಕ್ಷಣ ಕಾಮಗಾರಿ ಪೂರ್ಣಗೊಳಿಸಲು ಸಂಬಂಧಿಸಿದವರಿಗೆ ಸೂಚನೆ ನೀಡಿದ್ದಾರೆ. ಶೀಘ್ರದಲ್ಲೇ ಕಾಮಗಾರಿಗಳು ಪೂರ್ಣಗೊಳ್ಳಲಿದೆ. ರಸ್ತೆ ದುರಸ್ತಿಗೆ ಅನುದಾನ ಬಿಡುಗಡೆಯಾಗಿದ್ದು, ಶೀಘ್ರ ಕಾಮಗಾರಿ ಪ್ರಾರಂಭವಾಗಲಿದೆ. ಪಳೆಯಂಡ ರಾಬಿನ್ ದೇವಯ್ಯ, ಜಿಲ್ಲಾಧ್ಯಕ್ಷರು, ಬಿಜೆಪಿ.