

ಮಡಿಕೇರಿ:
ಅಮೇರಿಕಾದಲ್ಲಿ ನೆಲಸಿರುವ ಪ್ರಭಾವತಿ ಫರ್ನಾಂಡೀಸ್ ಎಂಬವರು ಮಡಿಕೇರಿಯ ಕೊಡಗು ವಿದ್ಯಾಲಯಕ್ಕೆ ಕೊಡುಗೆಯಾಗಿ ನೀಡಿದ 16 ಲಕ್ಷ ರೂ. ಅನುದಾನದಲ್ಲಿ ರೂಪುಗೊಂಡ ಚಿಣ್ಣರಿಗಾಗಿನ ಒಳಾಂಗಣ ಕ್ರೀಡಾವನವನ್ನು ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ನಿರ್ದೇಶಕ ಅನಿಲ್ ಹೆಚ್.ಟಿ. ಉದ್ಘಾಟಿಸಿದರು. ಪ್ರಭಾವತಿ ಫರ್ನಾಂಡೀಸ್ ಕೊಡುಗೆಯಾಗಿ ನೀಡಿದ 16 ಲಕ್ಷ ರೂ. ಬಳಸಿಕೊಂಡು ವೈವಿಧ್ಯಮಯ ಒಳಾಂಗಣ ಕ್ರೀಡಾ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಕೊಡಗು ವಿದ್ಯಾಲಯದ ನಿರ್ದೇಶಕ ಸಿ.ಎಸ್. ಗುರುದತ್ ಮಾಹಿತಿ ನೀಡಿದರು,
ಕ್ರೀಡಾವನ ಉದ್ಘಾಟಿಸಿದ ರೋಟರಿ ಮಿಸ್ಟಿ ಹಿಲ್ಸ್ ನಿರ್ದೇಶಕ ಅನಿಲ್ ಹೆಚ್.ಟಿ. ಮಾತನಾಡಿ, ಒಂದು ಸಂಸ್ಥೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾಗ ಮಾತ್ರ ಅಂಥ ಸಂಸ್ಥೆಗೆ ದಾನಿಗಳು ಕೂಡ ಆರ್ಥಿಕ ನೆರವಿನ ಮೂಲಕ ಮತ್ತಷ್ಟು ಸೌಲಭ್ಯಗಳಿಗೆ ಕಾರಣರಾಗುತ್ತಾರೆ. ನಾಲ್ಕೂವರೆ ದಶಕಗಳ ಅರ್ಥಪೂರ್ಣ ಸೈಕ್ಷಣಿಕ ಸಾಧನೆ ಹೊಂದಿರುವ ಕೊಡಗು ವಿದ್ಯಾಲಯ ಇಂಥ ಅನೇಕ ದಾನಿಗಳ ಮೂಲಕ ಸಾಕಷ್ಟು ಉನ್ನತ ಸೌಲಭ್ಯಗಳನ್ನು ತನ್ನ ವಿದ್ಯಾರ್ಥಿಗಳಿಗೆ ಕಲ್ಪಿಸುತ್ತಿರುವುದು ಶ್ಲಾಘನೀಯ.
ಮನೆಯಲ್ಲಿರುವ ಪೋಷಕರು, ಹಿರಿಯರು, ಒಡಹುಟ್ಟಿದವರೂ ಸೇರಿದಂತೆ ಕುಟುಂಬ ಸದಸ್ಯರೊಂದಿಗೆ ಚಿಣ್ಣರು ಹೆಚ್ಚಿನ ಸಮಯ ಕಳೆಯಬೇಕು, ಹಿಂದಿನ ಕಾಲದಲ್ಲಿ ಹಿರಿಯರು ಹೇಳುತ್ತಿದ್ದ ನೀತಿಕಥೆಗಳೇ ಮಕ್ಕಳ ಪಾಲಿಗೆ ವೇದವಾಕ್ಯದಂತಿತ್ತು. ಆದರೆ ಮೊಬೈಲ್ ಗುಂಗಿನಲ್ಲಿ ಮುಳುಗಿರುವ ಇಂದಿನ ಪುಟಾಣಿಗಳಿಗೆ ಮೊಬೈಲ್ ಎಂಬುದೇ ಪ್ರಪಂಚದAತಾಗಿದೆ, ಇಂತಾದರೆ ಯಾರ ನಿಯಂತ್ರಣಕ್ಕೂ ಸಿಕ್ಕದ ಮಕ್ಕಳು ಸಂಸ್ಕಾರ ಮರೆತು ತಂತ್ರಜ್ಞಾನ ಲೋಕದಲ್ಲಿ ವಿಹರಿಸುತ್ತಾ ಸಮಾಜದಲ್ಲಿ ಹಾದಿ ತಪ್ಪುವ ಅಪಾಯ ಇದೆ ಎಂದರು.
ಕಾರ್ಯಕ್ರಮದಲ್ಲಿ ಕೊಡಗು ವಿದ್ಯಾಲಯದ ಆಡಳಿತ ಮಂಡಳಿ ಸಲಹೆಗಾರ ಕೊಕ್ಕಲೇರ ಕುಮಾರ್ ಸುಬ್ಬಯ್ಯ, ಜಿಲ್ಲಾ ಹೊಟೇಲ್ ರೆಸಾರ್ಟ್ ಅಸೋಸಿಯೇಷನ್ ಅಧ್ಯಕ್ಷ ಕುಂಡ್ಯೋಳAಡ ದಿನೇಶ್ ಕಾರ್ಯಪ್ಪ, ಪ್ರಾಂಶುಪಾಲರಾದ ಕೆ.ಎಸ್. ಸುಮಿತ್ರಾ, ಆಡಳಿತಾಧಿಕಾರಿ ಪಿ. ರವಿ, ಎ. ನೀಲಮ್ಮ ಕಾರ್ಯಪ್ಪ, ಪುಣ್ಯ ಗುರುದತ್ ಇದ್ದರು.