

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಕೊಡಗು ಜಿಲ್ಲೆ ೨೦೨೨ ರಲ್ಲಿ ಹಲವು ರಾಜಕೀಯ ವಿದ್ಯಮಾನಗಳಿಗೆ ಸಾಕ್ಷಿಯಾಯಿತು. ಕೊಡಗಿನಲ್ಲಿ ನಡೆದ ಘಟನೆಗಳು ರಾಜ್ಯ- ರಾಷ್ಟ್ರಮಟ್ಟ ದಲ್ಲಿ ಸುದ್ದಿಯಾಯಿತು. ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೊಡಗಿಗೆ ಪ್ರಕೃತಿ ವಿಕೋಪ ಪೀಡಿತ ಪ್ರದೇಶಕ್ಕೆ ಭೇಟಿ ನೀಡಲು ಆಗಮಿಸಿದ್ದ ವೇಳೆ ವಿವಿಧೆಡೆಯಲ್ಲಿ ಪ್ರತಿಭಟನೆ ನಡೆದಿತ್ತು.
ಮಡಿಕೇರಿ, ಗುಡ್ಡೆಹೊಸೂರಿನಲ್ಲಿ ಸಿದ್ದರಾಮಯ್ಯ ತೆರಳುತ್ತಿದ್ದ ಕಾರಿನ ಮೇಲೆ ಮೊಟ್ಟೆ ಎಸೆತವೂ ನಡೆಯಿತು. ತಿತಿಮತಿಯಲ್ಲಿ ವೀರ ಸಾರ್ವಕರ್ ಫೋಟೋ ಕಾರಿನೊಳಗೆ ಹಾಕಲಾಗಿತ್ತು. ಕೊಡಗಿನ ವಿವಿಧೆಡೆಯಲ್ಲಿ ಬಿಜೆಪಿಯಿಂದ ಪ್ರತಿಭಟನೆ ಬಿಸಿ ಎದುರಿಸಿತ್ತು. ಇದು ಬಿಜೆಪಿ- ಕಾಂಗ್ರೆಸ್ ನಡುವೆ ರಾಜಕೀಯ ಮೇಲಾಟಕ್ಕೆ ಕಾರಣವಾಯಿತು.
ಮಡಿಕೇರಿಯಲ್ಲಿರುವ ಜನರಲ್ ಕೆ.ಎಸ್. ತಿಮ್ಮಯ್ಯ ವೃತ್ತದಲ್ಲಿ ಬಿಜೆಪಿ- ಕಾಂಗ್ರೆಸ್ಸಿಗರ ನಡುವೆ ಸಂಘರ್ಷಕಾರಿ ವಾತಾವರಣ ನಿರ್ಮಾಣವಾಗಿತ್ತು. ಅಹಿತಕರ ಘಟನೆ ನಡೆಯದ್ದಂತೆ ತಡೆಯುವಲ್ಲಿ ಪೊಲೀಸರು ಸಫಲರಾದರು. ಪ್ರತಿಪಕ್ಷ ನಾಯಕ ತೆರಳುತ್ತಿದ್ದ ವಾಹನಕ್ಕೆ ಮೊಟ್ಟೆ ಎಸೆತ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ರಾಜ್ಯಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದರೊಂದಿಗೆ ಕಾಂಗ್ರೆಸ್ ಮಡಿಕೇರಿ ಚಲೋಗೆ ಕರೆ ನೀಡಿತ್ತು. ಇದೇ ಸಂದರ್ಭದಲ್ಲಿ ಬಿಜೆಪಿಯಿಂದ ಮಡಿಕೇರಿಯ ಗಾಂಧಿ ಮೈದಾನದಲ್ಲಿ ಬೃಹತ್ ಸಮಾವೇಶ ಸಮಾವೇಶ ನಡೆದಿತ್ತು.
ಬಿಜೆಪಿ- ಕಾಂಗ್ರೆಸ್ ನಡುವೆ ರಾಜಕೀಯ ನೆಲೆಗಟ್ಟಿನಲ್ಲಿ ಸಂಘರ್ಷ ಏರ್ಪಡುವ ಆತಂಕ ಎದುರಾಗಿದ್ದ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕರೆ ನೀಡಿದ್ದ ಮಡಿಕೇರಿ ಚಲೋ ಹಾಗೂ ಬಿಜೆಪಿ ಆಯೋಜಿಸಿದ್ದ ಸಮಾವೇಶ ರದ್ದುಗೊಂಡಿತ್ತು.
ಎಸ್ಪಿ ವರ್ಗಾವಣೆ…!
ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೊಡಗಿಗೆ ಭೇಟಿ ನೀಡಿದ್ದ ಸಂದರ್ಭ ಅವರ ಕಾರಿ ಮೇಲೆ ಬಿಜೆಪಿಯವರು ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಕ್ಯಾಪ್ಟನ್ ಎಂ.ಎ. ಅಯ್ಯಪ್ಪ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಸ್ವತಃ ಸಿದ್ದರಾಮಯ್ಯ ಎಸ್ಪಿ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದರು. ಮಡಿಕೇರಿಯಲ್ಲಿ ಮೊಟ್ಟೆ ಎಸೆತ ಪ್ರಕರಣ ನಡೆದ ಬಳಿಕವೂ ಕೊಡಗು ಪೊಲೀಸ ರು ಎಚ್ಚೆತ್ತುಕೊಳ್ಳಲಿಲ್ಲ. ಕುಶಾಲನಗರಕ್ಕೆ ತೆರಳುತ್ತಿದ್ದ ವೇಳೆ ಗುಡ್ಡೆಹೊಸೂರಿನಲ್ಲಿಯೂ ಕಾರಿನ ಮೇಲೆ ಮೊಟ್ಟೆ ಎಸೆಯಲಾಗಿತ್ತು. ಇದು ಪೊಲೀಸ್ ಆಡಳಿತ ವೈಫಲ್ಯ ಎತ್ತಿ ತೋರಿಸುತ್ತದೆ ಎಂಬ ಆಕ್ರೋಶ ವ್ಯಕ್ತವಾಯಿತು.
ಕೊಡಗು ಎಸ್ಪಿ ವರ್ಗಾವಣೆಗೆ ಕಾಂಗ್ರೆಸ್ ಪ್ರಯುತ್ನಿಸುತ್ತಿದ್ದ ಎಂಬ ಆರೋಪ ಬಿಜೆಪಿ ಪಾಳೆಯದಿಂದ ವ್ಯಕ್ತವಾಯಿತು. ಕೊಡವ ಸಮುದಾಯಕ್ಕೆ ಸೇರಿದ ಅಧಿಕಾರಿ ವಿರುದ್ಧ ಕಾಂಗ್ರೆಸ್ ಇದೆ ಎಂದು ಬಿಜೆಪಿ ಪ್ರಚಾರ ನಡೆಸಿತ್ತು. ಎಸ್ಪಿ ಪರ- ವಿರುದ್ಧ ಚರ್ಚೆ ನಡೆಯಿತು. ಅಂತಿಮವಾಗಿ ಎಸ್ಪಿ ಕೊಡಗಿನಲ್ಲಿಯೇ ಮುಂದುವರಿದಿದ್ದಾರೆ.
ಗರಿಗೇರಿದ ರಾಜಕೀಯ
೨೦೨೩ ರಲ್ಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಮುನ್ನ ವರ್ಷ ೨೦೨೨ ರಲ್ಲಿ ರಾಜಕೀಯ ಗರಿಗೆದರಿತ್ತು. ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಆಕಾಂಕ್ಷಿಗಳು ಪಕ್ಷ ಸಂಘಟನೆ ಹಾಗೂ ಮತದಾರರನ್ನು ಸೆಳೆಯುವ ಕಾರ್ಯ ಚಟುವಟಿಕೆಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಹೈಕೋರ್ಟ್ ಹಿರಿಯ ವಕೀಲ ಎ.ಎಸ್. ಪೊನ್ನಣ್ಣ, ಕಾಂಗ್ರೆಸ್ ಯುವ ಮುಖಂಡ ಡಾ.ಮಂಥರ್ ಗೌಡ, ಸಮಾಜ ಸೇವಕ ಹರಪಳ್ಳಿ ರವೀಂದ್ರ, ಬಿಜೆಪಿ ಯುವ ಮುಖಂಡ ತೇಲಪಂಡ ಶಿವಕುಮಾರ್ ನಾಣಯ್ಯ, ಜೆಡಿಎಸ್ ಮುಖಂಡ ನಾಪಂಡ ಎಂ. ಮುತ್ತಪ್ಪ ಹೆಚ್ಚು ಕ್ರಿಯಾಶೀಲರಾಗಿ ಕ್ಷೇತ್ರದಲ್ಲಿ ಕಾಣಿಸಿಕೊಂಡರು.
ಕ್ರೀಡಾ ಚಟುವಟಿಕೆ, ಹಬ್ಬಹರಿದಿನ, ಆರೋಗ್ಯ, ಶಿಕ್ಷಣ ಸೇರಿದ್ದಂತೆ ವಿವಿಧ ಚಟುವಟಿಕೆಗಳಿಗೆ ಆರ್ಥಿಕ ನೆರವು ನೀಡುತ್ತಾ ಬಂದಿದ್ದಾರೆ. ಸಭೆ, ಸಮಾರಂಭ, ಸಮಾವೇಶ ಆಯೋಜಿಸುವ ಮೂಲಕ ಛಾಪು ಮೂಡಿಸುವ ಕೆಲಸ ಮಾಡಿದ್ದಾರೆ. ವಿವಿಧೆಡೆಗಳಿಗೆ ಭೇಟಿ, ಮನೆಗಳಿಗೆ ಭೇಟಿ ನೀಡುವ ಮೂಲಕ ಬಹುತೇಕ ಸಮಯ ರಾಜಕೀಯದಲ್ಲಿ ಕಳೆದಿದ್ದಾರೆ.
ಹಾಲಿ ಶಾಸಕರು ಕ್ಷೇತ್ರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ, ಉದ್ಘಾಟನೆ ಸೇರಿದ್ದಂತೆ ಜನಮನ ಸೆಳೆಯುವ ಕಾರ್ಯ ದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ೨ ಲಕ್ಷ ರೂಪಾಯಿ ಪಾವತಿಸಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ. ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ೭ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ೩ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಬಂಡಾಯಕ್ಕೆ ಆಸ್ಪದವಾಗದಂತೆ ಅಭ್ಯರ್ಥಿ ಆಯ್ಕೆಗೆ ಕಾಂಗ್ರೆಸ್ ವರಿಷ್ಠರು ಕಸರತ್ತು ನಡೆಸಿದ್ದಾರೆ.
ಡಾ.ಸುಬ್ರಮಣ್ಯಸ್ವಾಮಿ ಭೇಟಿ
ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ಆಯೋಜಿಸಿದ್ದ ಕೊಡವ ನ್ಯಾಷನಲ್ ಡೇ ಕಾರ್ಯಕ್ರಮದಲ್ಲಿ ಮಾಜಿ ಕೇಂದ್ರ ಕಾನೂನು ಸಚಿವ ಡಾ.ಸುಬ್ರಮಣ್ಯ ಸ್ವಾಮಿ ಭೇಟಿ ನೀಡುವುದರ ಮೂಲಕ ಗಮನ ಸೆಳೆದರು. ಸುಪ್ರೀಂಕೋರ್ಟ್‌ನಲ್ಲಿ ದಾವೆ ಹೂಡುವುದರ ಮೂಲಕ ಕೊಡವ ಲ್ಯಾಂಡ್ ಬೇಡಿಕೆಯನ್ನು ಒಂದು ವರ್ಷದೊಳಗೆ ಈಡೇರಿಸುವ ಭರವಸೆ ನೀಡುವುದರ ಮೂಲಕ ಸಿಎನ್‌ಸಿ ಬೆಂಬಲಿಗರು ಪುಳಕಿತ ಗೊಳ್ಳುವಂತೆ ಮಾಡಿದರು.
ರಾಜ್ಯಸಭೆ ಸದಸ್ಯರಾಗಿದ್ದ ಡಾ.ಸುಬ್ರಮಣ್ಯಸ್ವಾಮಿ ತಮ್ಮ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ೨.೫೦ ಕೋಟಿ ರೂಪಾಯಿ ಅನುದಾನ ವನ್ನು ಕೊಡಗಿನ ಅಭಿವೃದ್ಧಿಗೆ ನೀಡಿರುವುದು ವಿಶೇಷ. ಸಿಎನ್‌ಸಿ ಆಧ್ಯಕ್ಷ ನಂದಿನೆರವಂಡ ಯು. ನಾಚಪ್ಪ ಕೊಡವ ಉಸ್ತುವಾರಿಯಲ್ಲಿ ಅವರು ಹೇಳಿದ ಸ್ಥಳಕ್ಕೆ ಅನುದಾನ ಹಂಚಿಕೆ ಮಾಡಲಾಗಿದೆ.
ಕೋವಿ ಹಕ್ಕಿನ ಚರ್ಚೆ
ಕೂರ್ಗ್ ಬೈ ರೇಸ್‌ನಡಿ ಕೊಡವರು ಹಾಗೂ ಜಮ್ಮಾಹಿಡುವಳಿದಾರರು ಹೊಂದಿರುವ ಬಂದೂಕು ಪರವಾನಗಿ ವಿನಾಯಿತಿಗೆ ಸಂಬಂಧಿಸಿ ದ್ದಂತೆ ೨೦೨೨ ರಲ್ಲಿಯೂ ಚರ್ಚೆ ಮುಂದುವರಿಯಿತ್ತು. ಸುಪ್ರೀಂಕೋರ್ಟ್‌ನಲ್ಲಿ ಕ್ಯಾಪ್ಟನ್ ಯಾಲದಾಳು ಚೇತನ್ ಮೇಲ್ಮನವಿ ಸಲ್ಲಿಸುವುದರ ಮೂಲಕ ಕೋವಿ ವಿಶೇಷ ಹಕ್ಕಿನ ಕುರಿತು ಪ್ರಶ್ನಿಸಿದ್ದಾರೆ. ಈ ಬಗ್ಗೆ ಜನವಲಯದಲ್ಲಿ ಚರ್ಚೆ ನಡೆಯಿತು.
ಕೋವಿ ಪರವಾನಗಿದಾರರು ಎರಡಕ್ಕಿಂತ ಹೆಚ್ಚು ಬಂದೂಕು ಹೊಂದಿದ್ದಲ್ಲಿ ಅದನ್ನು ಠೇವಣಿ ಮಾಡುವಂತೆ ಕೇಂದ್ರ ಗೃಹ ಸಚಿವಾಲಯ ಸುತ್ತೋಲೆ ಹೊರಡಿಸಿತ್ತು. ಈ ಸುತ್ತೋಲೆಯಡಿ ಕ್ರಮ ತೆಗೆದುಕೊಳ್ಳುವ ಸಂದರ್ಭ ಕೊಡಗು ಜಿಲ್ಲಾಡಳಿತ ಬಂದೂಕು ಪರವಾನವಿ ವಿನಾಯಿತಿದಾರರನ್ನು ಸೇರಿಸಿದ್ದು ವಿವಾದಕ್ಕೆ ಕಾರಣವಾಯಿತು. ವಿಜಯವಾಣಿಯಲ್ಲಿ ಗಮನ ಸೆಳೆಯುವ ವರದಿ ಪ್ರಕಟಗೊಂಡ ಬಳಿಕ ಕೊಡಗು ಜಿಲ್ಲಾಡಳಿತ ತಾನು ಮಾಡಿರುವ ತಪ್ಪು ಒಪ್ಪಿಕೊಂಡು ಹೊಸ ತಿದ್ದುಪಡಿ ಆದೇಶ ಹೊರಡಿಸಿತ್ತು.
ಕೋವಿ ಹಕ್ಕು ಶಾಶ್ವತವಾಗಿ ಮುಂದುವರಿಸಲು ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ಅಧ್ಯಕ್ಷ ನಂದಿನೆರವಂಡ ಯು. ನಾಚಪ್ಪ ಕೊಡವ ನೇತೃತ್ವದಲ್ಲಿ ಹಲವು ಕಾರ್ಯಕ್ರಮ ಜಿಲ್ಲೆಯ ವಿವಿಧೆಡೆಯಲ್ಲಿ ಆಯೋಜಿಸಲಾಗಿತ್ತು. ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡುವು ದರ ಮೂಲಕ ಸಂಬಂಧಿಸಿದವರಿಗೆ ಗಮನ ಸೆಳೆಯುವ ಮನವಿ ಪತ್ರ ಜಿಲ್ಲಾಡಳಿತ ಮೂಲಕ ಕಳುಹಿಸಲಾಗಿದೆ.
ಕುಲ್ಲೇಟಿರ ಕಪ್‌ಗೆ ೪೦ ಲಕ್ಷ
ಕೊಡವ ಕುಟುಂಬ ತಂಡಗಳ ನಡುವಿನ ಕೌಟುಂಬಿಕ ಹಾಕಿ ಉತ್ಸವ ಕುಲ್ಲೇಟಿರ ಕಪ್‌ಗೆ ೪೦ ಲಕ್ಷ ರೂಪಾಯಿ ಅನುದಾನ ರಾಜ್ಯ ಸರ್ಕಾರ ದಿಂದ ಬಿಡುಗಡೆಯಾಗಿದೆ. ಈ ಅನುದಾನ ಬಿಡುಗಡೆ ಮಾಡಿಸುವಲ್ಲಿ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯ ತೇಲಪಂಡ ಶಿವಕುಮಾರ್ ನಾಣಯ್ಯ ಪ್ರಮುಖ ಪಾತ್ರ ವಹಿಸಿದ್ದರು. ಅನುದಾನ ಬಿಡುಗಡೆ ಸಾಧ್ಯವೇ ಇಲ್ಲ ಎನ್ನುವ ಸಂದರ್ಭದಲ್ಲಿ ತಮ್ಮ ರಾಜಕೀಯ ಪ್ರಭಾವ ಬಳಸಿ ಅನುದಾನ ಬಿಡುಗಡೆ ಮಾಡಿಸಿದರು. ಆ ಮೂಲಕ ಕೊಡವರ ಗಮನ ಸೆಳೆಯುವಲ್ಲಿ ಶಿವಕುಮಾರ್ ನಾಣಯ್ಯ ಸಫಲರಾದರು.
ಅದ್ದೂರಿ ದಸರಾ
ಪ್ರಕೃತಿ ವಿಕೋಪ, ಕೋವಿಡ್ ಹಿನ್ನೆಲೆಯಲ್ಲಿ ನಾಲ್ಕು ವರ್ಷದಿಂದ ಜನೋತ್ಸವ ಮಡಿಕೇರಿ ದಸರಾ ಕಳೆಗುಂದಿತ್ತು. ಆದರೆ, ೨೦೨೨ ರಲ್ಲಿ ಜನೋತ್ಸವದ ಗತವೈಭವ ಮರಳಿತು. ಮಡಿಕೇರಿ ಹಾಗೂ ಗೋಣಿಕೊಪ್ಪದಲ್ಲಿ ನವರಾತ್ರಿ ಉತ್ಸವ ವಿಜೃಂಭಣೆಯಿಂದ ನಡೆಯಿತು. ವೈವಿಧ್ಯಮ ಕಾರ್ಯಕ್ರಮಗಳೊಂದಿಗೆ ವಿಜಯದಶಮಿಯಂದು ರಾತ್ರಿ ದಶಮಂಟಪ ಶೋಭಾಯಾತ್ರೆ ಅದ್ದೂರಿಯಾಗಿ ನಡೆಯಿತು. ಸಾಂಸ್ಕೃತಿ, ಕ್ರೀಡೆ, ಕವಿಗೋಷ್ಠಿ ಸೇರಿದ್ದಂತೆ ವಿವಿಧ ಕಾರ್ಯಕ್ರಮಗಳು ದಸರಾ ಉತ್ಸವ ರಂಗೇರುವಂತೆ ಮಾಡಿತು.
ಸಿಎಂ ಭೇಟಿ
ಪ್ರಕೃತಿ ವಿಕೋಪದಿಂದ ಹಾನಿಗೀಡಾದ ಸ್ಥಳಗಳ ಪರಿಶೀಲಿಸಲು ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಕೊಡಗು ಜಿಲ್ಲೆಗೆ ಭೇಟಿ ಮಾಡಿ ದರು. ಕುಶಾಲನಗರ- ಮಡಿಕೇರಿ- ಸಂಪಾಜೆ ಮಾರ್ಗದ ಮೂಲಕ ದಕ್ಷಿಣ ಕನ್ನಡ ಜಿಲ್ಲೆಗೆ ತೆರಳಿದರು. ಜಿಲ್ಲೆಯ ಗ್ರಾಮೀಣ ಪ್ರದೇಶಕ್ಕೆ ಭೇಟಿ ನೀಡಲಿಲ್ಲ ಎಂಬ ಟೀಕೆ ವ್ಯಕ್ತವಾಗಿತ್ತು.
ಮಡಿಕೇರಿ ತಡೆಗೋಡೆ
ಜಿಲ್ಲಾಡಳಿತ ಭವನ ಎದುರು ೭ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ತಡೆಗೋಡೆಯಲ್ಲಿ ಕುಸಿತ ಕಾಣಿಸಿದ್ದು ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಯಿತು. ಜರ್ಮನಿ ತಂತ್ರಜ್ಞಾನ ಬಳಸಿ ತಡೆಗೋಡೆ ನಿರ್ಮಿಸಲಾಗಿದೆ ಎಂದು ಪ್ರಚಾರ ಮಾಡಲಾಗಿತ್ತು. ಆದರೆ, ಧಾರಾಕಾರವಾಗಿ ಮಳೆ ಸುರಿಯುತ್ತಿದ್ದಂತೆ ತಡೆಗೋಡೆ ಕುಸಿಯಲಾರಂಭಿಸಿತು. ಕಳಪೆ ಕಾಮಗಾರಿ ನಡೆದಿದೆ ಎಂದು ಪ್ರತಿಪಕ್ಷಗಳು, ಸಂಘ- ಸಂಸ್ಥೆಗಳು ಆಡಳಿತಾರೂಢರ ಮೇಲೆ ಆರೋಪ ಮಾಡಿದರು. ವರ್ಷಾಂತ್ಯಕ್ಕೆ ತಡೆಗೋಡೆ ತೆರವುಗೊಳಿಸುವ ಕಾರ್ಯಕ್ಕೆ ಜಿಲ್ಲಾಡಳಿತ ಕೈಹಾಕಿದೆ.
ಗಮನ ಸೆಳೆದ ಮಾಧವಿ
ಸುಳ್ಯದ ದಿವ್ಯಾಶ್ರೀ ನಾಯಕ್ ಹಾಗೂ ಕೊಡಗಿನ ಮಾಚಂಗಡ ಬೋಪಣ್ಣ ಅಭಿನಯಿಸಿದ ಮಾಧವಿ ನಾಟಕ ಮಡಿಕೇರಿ, ವಿರಾಜಪೇಟೆಯಲ್ಲಿ ಪ್ರದರ್ಶನ ಕಂಡಿತ್ತು. ಇಬ್ಬರು ಕಲಾವಿದರು ಅದ್ಭುತ ನಟನೆ ಮೂಲಕ ಪ್ರೇಕ್ಷಕರ ಮನ ಸೆಳೆಯುವಲ್ಲಿ ಸಫಲರಾದರು. ಹಲವು ವರ್ಷಗಳ ಬಳಿಕ ಕೊಡಗಿನಲ್ಲಿ ಪ್ರದರ್ಶನಗೊಂಡ ನಾಟಕ ಪ್ರೇಕ್ಷಕರ ಮನಮುಟ್ಟಿತ್ತು.