

ಮಡಿಕೇರಿ:
ದೊಡ್ಡ ನಿರೀಕ್ಷೆಯೊಂದಿಗೆ ಆರಂಭವಾದ ಕೊಡಗು ವಿಶ್ವವಿದ್ಯಾಲಯ ರಾಜಕೀಯ ಮೇಲಾಟ, ಪ್ರತಿಷ್ಠೆಗಳಿಂದಾಗಿ ಹಾದಿ ತಪ್ಪುತ್ತಿರುವಂತೆ ಕಂಡು ಬರುತ್ತಿದೆ. ಅತ್ತ ಮಂಗಳೂರು ವಿಶ್ವವಿದ್ಯಾಲಯ ಇತ್ತ ನೂತನ ಕೊಡಗು ವಿಶ್ವವಿದ್ಯಾಲಯದ ನಡುವಿನ ಸಮರ್ಪಕ ಸಂವಹನ ಕೊರತೆಯಿಂದ ಜಿಲ್ಲೆಯ ವಿದ್ಯಾರ್ಥಿಗಳು, ಕಾಲೇಜುಗಳು ಹಾಗೂ ಸಿಬ್ಬಂದಿ ತ್ರಿಶಂಕು ಸ್ಥಿತಿಗೆ ತಲುಪಿದ್ದಾರೆ. ಸರ್ಕಾರದಿಂದಲೂ ಅನುದಾನ ಬಾರದ ಹಿನ್ನೆಲೆಯಲ್ಲಿ ಅಭಿವೃದ್ಧಿ ಚಟುವಟಿಕೆಗಳು ಸ್ಥಗಿತವಾಗಿವೆ.
ಕರ್ನಾಟಕ ವಿಶ್ವವಿದ್ಯಾಲಯಗಳ ಕಾಯ್ದೆ ೨೦೦೦ಕ್ಕೆ ತಿದ್ದುಪಡಿ ನಂತರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದ ನೂತನ ವಿಶ್ವವಿದ್ಯಾಲಯಗಳ ಪೈಕಿ ಕೊಡಗು ವಿಶ್ವವಿದ್ಯಾಲಯ ಕೂಡ ಒಂದು. ಕುಶಾಲನಗರ ತಾಲೂಕು ಚಿಕ್ಕ ಅಳುವಾರದಲ್ಲಿ ಇರುವ ಮಂಗಳೂರು ವಿವಿ ಜ್ಞಾನ ಕಾವೇರಿ ಕ್ಯಾಂಪಸ್‌ನಲ್ಲಿ ಕೊಡಗು ವಿಶ್ವವಿದ್ಯಾಲಯ ಕಾರ್ಯಾಚರಣೆ ನಡೆಸುತ್ತಿದೆ. ವಿಜ್ಞಾನ ಸಂಕೀರ್ಣ, ಮಾನವಿಕ ಸಂಕೀರ್ಣ, ಪುರು? ಮತ್ತು ಮಹಿಳೆಯರ ವಸತಿ ನಿಲಯಗಳು ಹಾಗೂ ವಸತಿಗೃಹ ಕಟ್ಟಡಗಳನ್ನು ಒಳಗೊಂಡ ಕ್ಯಾಂಪಸ್‌ನಲ್ಲಿ ಚಟುವಟಿಕೆ ಆರಂಭಿಸಿದ ನೂತನ ವಿಶ್ವ ವಿದ್ಯಾಲಯಕ್ಕೆ ರಾಜಕೀಯ ನಾಯಕರ ಪ್ರತಿಷ್ಠೆ ಮುಳುವಾಗುವ ಆತಂಕ ಕಾಣಿಸಿಕೊಂಡಿದೆ.
’ಕಾಲೇಜುಗಳ ಮೇಲ್ವಿಚಾರಣೆಯನ್ನು ಸುಧಾರಿಸಲು ರಾಜ್ಯದ ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶಗಳಲ್ಲಿ ವಿನೂತನ ಮಾದರಿಯ ೭ ವಿಶ್ವವಿದ್ಯಾಲಯಗಳನ್ನು ಚಾಮರಾಜನಗರ, ಬೀದರ್, ಹಾವೇರಿ, ಹಾಸನ, ಕೊಡಗು, ಕೊಪ್ಪಳ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಸ್ಥಾಪಿಸಲಾಗುವುದು. ಈ ವಿಶ್ವವಿದ್ಯಾಲಯಗಳು ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳಿಗಿಂತ ಭಿನ್ನವಾಗಿ ತಂತ್ರಜ್ಞಾನದ ಗರಿಷ್ಠ ಬಳಕೆಯೊಂದಿಗೆ ಹೆಚ್ಚುವರಿ ಮಾನವ ಸಂಪನ್ಮೂಲ ಉಪಯೋಗಿಸದೇ ಕಾರ್ಯನಿರ್ವಹಿಸಲಿದೆ. ಸ್ನಾತಕೋತ್ತರ ಕೇಂದ್ರಗಳಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ಬಳಸುವ ಈ ವಿಶ್ವವಿದ್ಯಾಲಯಗಳು ವಾರ್ಷಿಕ ತಲಾ ೨ ಕೋಟಿ ರೂ.ಗಳ ಆವರ್ತಕ ವೆಚ್ಚ ಬಳಸಿ ಕಾರ್ಯನಿರ್ವಹಿಸಲಿವೆ,’ ಎಂದು ೨೦೨೨-೨೩ನೇ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಇದರಂತೆ ಕೊಡಗಿನಲ್ಲೂ ಆರಂಭವಾದ ವಿಶ್ವವಿದ್ಯಾಲಯ ಈಗ ಬೇರೆಯದ್ದೇ ಕಾರಣಕ್ಕೆ ಸುದ್ದಿ ಮಾಡುತ್ತಿದೆ.
ಮಡಿಕೇರಿಯಲ್ಲಿರುವ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಮತ್ತು ಚಿಕ್ಕ ಅಳುವಾರದಲ್ಲಿರುವ ಕ್ಯಾಂಪಸ್ ನೇರವಾಗಿ ಕೊಡಗು ವಿಶ್ವವಿದ್ಯಾಲಯದ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಕೊಡಗು ವಿಶ್ವವಿದ್ಯಾಲಯ ಅಧಿಕೃತವಾಗಿ ತನ್ನ ಚಟುವಟಿಕೆಗಳನ್ನು ಆರಂಭಿಸುತ್ತಿದ್ದಂತೆಯೇ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜನ್ನು ಮಂಗಳೂರು ವಿವಿ ಹಂತ ಹಂತವಾಗಿ ದೂರ ತಳ್ಳುತ್ತಾ ಬರುತ್ತಿದೆ. ಮೂಲಭೂತ ಸೌಕರ್ಯಗಳ ವ್ಯವಸ್ಥೆ ಕಲ್ಪಿಸಲು ಎರಡೂ ವಿವಿಗಳು ಮನಸ್ಸು ಮಾಡುತ್ತಿಲ್ಲ. ಉಪನ್ಯಾಸಕರು ಮತ್ತು ಸಿಬ್ಬಂದಿ ಪರಿಸ್ಥಿತಿಯೂ ಸಂಕಷ್ಟದಲ್ಲಿದೆ. ಈಗಾಗಲೇ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆಯನ್ನೂ ನಡೆಸಿದ್ದಾರೆ.
ಕೊಡಗು ವಿವಿ ಮೂಲಗಳ ಪ್ರಕಾರ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನಲ್ಲಿ ಈಗ ಪ್ರಥಮ ವರ್ಷದ ಪದವಿ ತರಗತಿಗಳಿಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳ ಜವಾಬ್ದಾರಿ ಮಾತ್ರ ಕೊಡಗು ವಿವಿಗೆ ಸೇರಿದೆ. ದ್ವಿತೀಯ ಮತ್ತು ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳ ಯೋಗಕ್ಷೇಮ ಮಂಗಳೂರು ವಿವಿಗೆ ಸೇರಿದ್ದು, ಅವರ ಎಲ್ಲಾ ಬೇಕು, ಬೇಡಿಕೆಗಳು ಮಂಗಳೂರು ವಿವಿ ವ್ಯಾಪ್ತಿಗೆ ಬರುತ್ತದೆ. ಇವರಿಗೆ ಪಾಠ ಪ್ರವಚನ ನಿಭಾಯಿಸುವ ಹೊಣೆಗಾರಿಕೆಯನ್ನು ಇಲ್ಲಿರುವ ಕಾಯಂ ಉಪನ್ಯಾಸಕರಿಗೆ ಕೊಡಲಾಗಿದೆ. ಇವರಿಗೆ ಪದವಿ ಪ್ರಮಾಣ ಪತ್ರವೂ ಮಂಗಳೂರು ವಿವಿಯಿಂದಲೇ ಬರುತ್ತದೆ.
ಸ್ನಾತಕೋತ್ತರ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಜವಾಬ್ದಾರಿಯೂ ಮಂಗಳೂರು ವಿವಿಗೆ ಪಾಲಿಗೆ ಹೋಗುತ್ತದೆ. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನಲ್ಲಿ ಈಗ ಯಾವುದೇ ಖರ್ಚು ಬಂದರೂ ಅದರಲ್ಲಿ ೩ರಲ್ಲಿ೨ ಭಾಗ ಮಂಗಳೂರು ವಿವಿಯೇ ಭರಿಸಬೇಕಾಗುತ್ತದೆ. ೧ ಭಾಗ ಮಾತ್ರ ಕೊಡಗು ವಿವಿ ಭರಿಸಲಿದೆ. ಮುಂದಿನ ವರ್ಷ ೩ರಲ್ಲಿ ೨ ಭಾಗ ಕೊಡಗು ವಿವಿ ಮತ್ತು ೧ ಭಾಗ ಮಂಗಳೂರು ವಿವಿಗೆ ಹೋಗುತ್ತದೆ. ಮೂರನೇ ವರ್ಷದಿಂದ ಎಲ್ಲಾ ಜವಾಬ್ದಾರಿಗಳೂ ಕೊಡಗು ವಿವಿ ಹೊತ್ತುಕೊಳ್ಳಲಿದೆ.
ಮತ್ತೊಂದು ಕಡೆ ಮಂಗಳೂರು ವಿವಿಯಿಂದ ನೇಮಕರಾದ ಬೋಧಕೇತರ ಸಿಬ್ಬಂದಿಯನ್ನು ಹೆಚ್ಚುವರಿ ನೆಪದಲ್ಲಿ ಕೆಲಸದಿಂದ ತೆಗೆಯಲಾಗುತ್ತಿದೆ. ಮಡಿಕೇರಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದವರು ಈಗ ತಮ್ಮ ಕೆಲಸ ಕಳೆದುಕೊಂಡಿದ್ದಾರೆ. ಚಿಕ್ಕ ಅಳುವಾರ ಕ್ಯಾಂಪಸ್‌ನಲ್ಲೂ ೪೩ ಸಿಬ್ಬಂದಿ ಪೈಕಿ ೨೦ ಸಿಬ್ಬಂದಿಯನ್ನು ಮನೆಗೆ ಕಳುಹಿಸಲಾಗಿದೆ. ೧೮ ಸಿಬ್ಬಂದಿಯನ್ನು ಮರು ನೇಮಕ ಮಾಡಿಕೊಳ್ಳಲಾಗಿದ್ದು, ಈ ಸಂದರ್ಭ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎನ್ನುವ ಆರೋಪಗಳು ಕೇಳಿಬರುತ್ತಿದೆ.
ಕಳೆದ ೧೦ ವರ್ಷಗಳಿಂದ ಚಿಕ್ಕಳುವಾರ ಸ್ನಾತಕೋತ್ತರ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದವರು ಸೇರಿದಂತೆ ಆಯಾಯ ಹುದ್ದೆಗಳಿಗೆ ಎಲ್ಲಾ ರೀತಿಯ ಅರ್ಹತೆ ಹೊಂದಿರುವವರನ್ನು ಏಕಾಏಕಿ ಕೆಲಸದಿಂದ ತೆಗೆದಿರುವುದಕ್ಕೆ ಕೆಲಸ ಕಳೆದುಕೊಂಡಿರುವ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ದು, ನ್ಯಾಯಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಬೇರೆ ಕೆಲಸಕ್ಕೆ ಸೇರಲು ವಯಸ್ಸು ಮೀರಿದ್ದು, ಕೊಡಗು ವಿವಿಯಲ್ಲೇ ಕೆಲಸ ಮುಂದುವರಿಸುವಂತೆ ಸಿಬ್ಬಂದಿ ಮನವಿ ಮಾಡಿಕೊಂಡಿದ್ದರೂ ಸಂಬಂಧಿಸಿದವರಿಂದ ಸೂಕ್ತ ಸ್ಪಂದನೆ ಸಿಕ್ಕಿಲ್ಲ.
ನಾವುಗಳು ಶ್ರಮವಹಿಸಿ ತಂದಿರುವ ಕೊಡಗು ವಿಶ್ವವಿದ್ಯಾಲಯವನ್ನು ಉಳಿಸಿಕೊಳ್ಳುವ ಕೆಲಸ ಜಿಲ್ಲೆಯ ಇಬ್ಬರು ಶಾಸಕರು ಮಾಡಬೇಕಾಗುತ್ತದೆ. ಕೊಡಗಿನಲ್ಲಿ ಈ ವಿಶ್ವವಿದ್ಯಾಲಯ ಹೊರತುಪಡಿಸಿದರೆ ಬೇರೆ ಯಾವುದೇ ಸ್ವತಂತ್ರ ವಿಶ್ವವಿದ್ಯಾಲಯಗಳೂ ಇಲ್ಲ. ಸುಮಾರು ೬೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯವೂ ಈ ವಿಶ್ವವಿದ್ಯಾಲಯದಲ್ಲಿ ಅಡಗಿದೆ. ಚಿಕ್ಕ ಜಿಲ್ಲೆಯಾದ ಕೊಡಗಿನ ವಿದ್ಯಾರ್ಥಿಗಳು ಇಷ್ಟರ ತನಕ ಸ್ನಾತಕೋತ್ತರ ವಿದ್ಯಾಭ್ಯಾಸದಿಂದ ವಂಚಿತರಾಗುತ್ತಿದ್ದರು. ಈ ದೃಷ್ಟಿಯಿಂದ ಇಲ್ಲಿ ವಿಶ್ವವಿದ್ಯಾಲಯ ಪ್ರಾರಂಭಿಸುವ ಕೆಲಸ ಮಾಡಿದ್ದೇವೆ. ಇದನ್ನು ಉಳಿಸಿಕೊಳ್ಳದಿದ್ದರೆ ಉಗ್ರ ಹೋರಾಟ ಮಾಡಲಾಗುವುದು.
ಎಂ.ಪಿ. ಅಪ್ಪಚ್ಚು ರಂಜನ್, ಮಾಜಿ ಸಚಿವ
೨೦೨೨-೨೩ನೇ ಸಾಲಿನ ಆಯವ್ಯಯ ಘೋಷಣೆಯನ್ವಯ ಹೆಚ್ಚುವರಿ ಮಾನವ ಸಂಪನ್ಮೂಲ ಉಪಯೋಗಿಸದೆ ಕಾರ್ಯ ನಿರ್ವಹಿಸಲಿರುವ ಸ್ನಾತಕೋತ್ತರ ಕೇಂದ್ರಗಳಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ಬಳಸುವ ಪ್ರಸ್ತಾಪಿತ ನೂತನ ವಿವಿಗಳಿಗೆ ಹಂಚಿಕೆಯಾದ ವಾರ್ಷಿಕ ೨ ಕೋಟಿ ರೂ. ಆವರ್ತಕ ವೆಚ್ಚದಲ್ಲಿ ಸರ್ಕಾರದ ಆದೇಶದಂತೆ ರಾಜ್ಯದಲ್ಲಿ ನೂತನವಾಗಿ ಸೃಜಿಸಲಾದ ನೂತನ ವಿವಿಗಳಿಗೆ ವೇತನ ಪಾವತಿಗಾಗಿ ತಲಾ ೧ ಕೋಟಿ ರೂ.ಗಳಂತೆ ೭ ಕೋಟಿ ರೂ.ಗಳನ್ನು ಪುನರ್ವಿನಿಯೋಗದ ಮೂಲಕ ಬಿಡುಗಡೆಗೊಳಿಸಿ ಆದೇಶಿಸಲಾಗಿದೆ. ನೂತನ ವಿವಿಗಳಿಗೆ ಮಾತೃ ವಿವಿಗಳಿಂದ ವರ್ಗಾವಣೆ ಮಾಡಿರುವ ಬೋಧಕ-ಬೋಧಕೇತರ ಹುದ್ದೆಗಳ ವಿಷಯದಲ್ಲಿ ನೂತನ ವಿವಿಗಳಿಗೆ ಪ್ರಸ್ತಾಪಿತ ಬೋಧಕ-ಬೋಧಕೇತರ ಸೇವಾ ಭದ್ರತೆಗೆ ಸಂಬಂಧಿಸಿದಂತೆ ನಿರ್ದೇಶನ ನೀಡಲು ಕ್ರಮ ವಹಿಸಲಾಗಿದೆ.
ಡಾ. ಎಂ. ಸಿ. ಸುಧಾಕರ್, ಉನ್ನತ ಶಿಕ್ಷಣ ಸಚಿವ
ಹೊಸದಾಗಿ ಆರಂಭವಾದ ೭ ವಿಶ್ವವಿದ್ಯಾಲಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಇಲ್ಲದ ತೊಂದರೆ ಇಲ್ಲಿ ನೀಡಲಾಗುತ್ತಿದೆ. ಉದ್ಯೋಗ ಮಾಡುತ್ತಿರುವವರನ್ನು ಕೈಬಿಟ್ಟು ಹೊಸಬರನ್ನು ನೇಮಿಸಿಕೊಳ್ಳಲಾಗುತ್ತಿದೆ. ಇದಕ್ಕೂ ಮೊದಲು ಕುಲಸಚಿವರು ಮತ್ತು ನಿರ್ದೇಶಕರು ನಮ್ಮ ಪರಿಸ್ಥಿತಿ ಕೂಡ ಯೋಚಿಸಬೇಕಾಗಿದೆ.
ಟಿ.ಎಚ್. ಸವಿತಾ ರಾಣಿ, ಕೆಲಸ ಕಳೆದುಕೊಂಡ ಸಿಬ್ಬಂದಿ, ಕೊಡಗು ವಿಶ್ವವಿದ್ಯಾಲಯ
ಬಹುತೇಕ ಎಲ್ಲ ವಿಶ್ವವಿದ್ಯಾಲಯಗಳಲ್ಲೂ ಅಗತ್ಯಕ್ಕಿಂತ ಹೆಚ್ಚಿನ ಸಿಬ್ಬಂದಿ ನೇಮಿಸಿಕೊಳ್ಳಲಾಗಿತ್ತು. ಈಗ ಸರ್ಕಾರದಿಂದ ಹೆಚ್ಚುವರಿ ಸಿಬ್ಬಂದಿ ತೆಗೆಯಲು ಆದೇಶ ಬಂದಿದೆ. ಹಾಗಾಗಿ ಅಂಥ ಸಿಬ್ಬಂದಿತೆಗೆಯಲಾಗಿದೆ.
ಡಾ. ಸೀನಪ್ಪ, ರಿಜಿಸ್ಟ್ರಾರ್, ಕೊಡಗು ವಿಶ್ವವಿದ್ಯಾಲಯ