ಕೊಡಗು ವಿವಿಗೆ ಇಲ್ಲ ನಿರೀಕ್ಷಿತ ಅನುದಾನ

Kodagu University has no expected grant
Published on

ಮಡಿಕೇರಿ:

ಸ್ಥಳೀಯವಾಗಿಯೇ ಸ್ವತಂತ್ರ ವಿಶ್ವವಿದ್ಯಾಲಯದಿಂದ ಉನ್ನತ ಶಿಕ್ಷಣ ಪಡೆಯುವ ಜಿಲ್ಲೆಯ ಜನತೆಯ ಕನಸಿಗೆ ಪೂರಕವಾಗಿ ಆರಂಭವಾಗಿರುವ ಕೊಡಗು ವಿಶ್ವವಿದ್ಯಾಲಯ ನಿರೀಕ್ಷಿತ ಅನುದಾನದ ಕೊರತೆಯಿಂದ ನಲುಗುತ್ತಿದೆ. ಕಳೆದ 2 ವರ್ಷಗಳಿಂದ ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳಲ್ಲಿ ಎನ್‌ಎಸ್‌ಎಸ್ ಸೇರಿದಂತೆ ಬಹುತೇಕ ಪಠ್ಯೇತರ ಚಟುವಟಿಕೆಗಳು ಸ್ಥಗಿತವಾಗಿರುವ ಆರೋಪ ಕೇಳಿಬರುತ್ತಿದೆ. ವಿಶ್ವವಿದ್ಯಾಲಯದಲ್ಲಿ ಕ್ರೀಡಾ ತಂಡ ಇಲ್ಲದಿರುವ ಬಗ್ಗೆಯೂ ಪೋಷಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ತಿದುಪಡಿ ವಿಧೇಯಕ 2022ಕ್ಕೆ 2022ರ ಅ.10ರಂದು ರಾಜ್ಯಪಾಲರ ಸಹಿ ನಂತರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದ ನೂತನ ವಿಶ್ವವಿದ್ಯಾಲಯಗಳ ಪೈಕಿ ಕೊಡಗು ವಿಶ್ವವಿದ್ಯಾಲಯ ಕೂಡ ಒಂದು. ಕುಶಾಲನಗರ ತಾಲೂಕು ಚಿಕ್ಕ ಅಳುವಾರದಲ್ಲಿ ಈ ಹಿಂದೆ ಇದ್ದ ಮಂಗಳೂರು ವಿವಿ ಜ್ಞಾನ ಕಾವೇರಿ ಕ್ಯಾಂಪಸ್‌ನಲ್ಲಿ ಕೊಡಗು ವಿಶ್ವವಿದ್ಯಾಲಯ ಕಾರ್ಯಾಚರಣೆ ನಡೆಸುತ್ತಿದೆ. ಈ ಕ್ಯಾಂಪಸ್‌ನಲ್ಲಿ ವಿಜ್ಞಾನ ಸಂಕೀರ್ಣ, ಮಾನವಿಕ ಸಂಕೀರ್ಣ, ಪುರುಷ ಮತ್ತು ಮಹಿಳೆಯರ ವಸತಿ ನಿಲಯಗಳು ಹಾಗೂ ವಸತಿಗೃಹ ಕಟ್ಟಡಗಳಿದ್ದು, ಪೂರ್ಣ ಪ್ರಮಾಣದ ವಿಶ್ವವಿದ್ಯಾಲಯ ಮಾದರಿಯಲ್ಲಿ ಇಲ್ಲಿ ಚಟುವಟಿಕೆಗಳು ನಡೆಯುತ್ತಿದೆ.

ಕಳೆದ ವರ್ಷದ ಆ. 23ರಿಂದ ಪ್ರವೇಶಾತಿ ಪ್ರಕ್ರಿಯೆ ಆರಂಭವಾಗುವ ಮೂಲಕ 2023-24ನೇ ಸಾಲಿನಿಂದ ಇಲ್ಲಿ ಸ್ನಾತಕೋತ್ತರ ಪದವಿಗಳು ಶುರುವಾಗಿದೆ. ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ವಿಶ್ವವಿದ್ಯಾಲಯದ ನೇರ ನಿಗಾದಲ್ಲಿ ಕಾರ್ಯಾಚರಿಸುತ್ತಿದ್ದರೆ, 6 ಸರ್ಕಾರಿ ಕಾಲೇಜುಗಳು, 13 ಖಾಸಗಿ ಕಾಲೇಜುಗಳು ಹಾಗೂ 2 ಬಿಎಡ್ ಕಾಲೇಜುಗಳು ಈ ವಿಶ್ವ ವಿದ್ಯಾಲಯದ ವ್ಯಾಪ್ತಿಗೆ ಬರುತ್ತದೆ. ವಿಶ್ವವಿದ್ಯಾಲಯ ಕ್ಯಾಂಪಸ್ ಮತ್ತು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನಲ್ಲಿ ಸ್ನಾತಕೋತ್ತರ ತರಗತಿಗಳು ನಡೆಯುತ್ತಿವೆ. ಸಂಶೋಧನಾ ವಿದ್ಯಾರ್ಥಿಗಳೂ ಇದ್ದಾರೆ.

ಮಂಗಳೂರು ವಿಶ್ವವಿದ್ಯಾಲಯ ಅಧೀನದಲ್ಲಿ ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರವನ್ನು 2014ರ ಜನವರಿಯಲ್ಲಿ ಚಿಕ್ಕ ಅಳುವಾರದಲ್ಲಿ ಆರಂಭಿಸಲಾಗಿತ್ತು. ಕೊಡಗು ಮಾತ್ರವಲ್ಲದೆ ದಕ್ಷಿಣ ಕನ್ನಡ, ಮೈಸೂರು, ಹಾಸನ ಸೇರಿದಂತೆ ರಾಜ್ಯದ ಇತರ ಜಿಲ್ಲೆಗಳಿಂದ ಹಾಗೂ ಪಕ್ಕದ ರಾಜ್ಯಗಳಿಂದಲೂ ವಿದ್ಯಾರ್ಥಿಗಳಿಗೂ ಇಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಕೊಡಗು ವಿಶ್ವವಿದ್ಯಾಲಯ ಅಸ್ತಿತ್ವಕ್ಕೆ ಬಂದ ನಂತರ ಜ್ಞಾನಕಾವೇರಿ ಕ್ಯಾಂಪಸ್ ಮಾತ್ರವಲ್ಲದೆ ಕೊಡಗು ವಿಶ್ವವಿದ್ಯಾಲಯದಲ್ಲಿ ಸಂಯೋಜನೆಗೊಳಗೊAಡ ಘಟಕ ಕಾಲೇಜು, ಖಾಸಗಿ ಅನುದಾನಿತ ಹಾಗೂ ಅನುದಾನೇತರ ಮಹಾವಿದ್ಯಾಲಯಗಳಲ್ಲೂ ಸ್ನಾತಕೋತ್ತರ ಪದವಿಗಳಿಗೆ ಅವಕಾಶ ಕಲ್ಪಿಸಲಾಗಿದೆ.

ಜೀವರಸಾಯನ ಶಾಸ್ತç ಮತ್ತು ಸೂಕ್ಷ್ಮಾಣು ಜೀವ ವಿಜ್ಞಾನ ವಿಭಾಗಗಳಲ್ಲಿ ಸಂಶೋಧನಾ ಚಟುವಟಿಕೆಗಳು ನಡೆಯುತ್ತಿದೆ. ಅಂತರಾರಾಷ್ಟಿçÃಯ ಸಂಶೋಧನಾ ವಿದ್ಯಾರ್ಥಿಗಳು ಕೂಡ ಇಲ್ಲಿ ವ್ಯಾಸಂಗ ಮಾಡಿದ್ದಾರೆ. ಹಲವಾರು ಸಂಶೋಧನಾ ವಿದ್ಯಾರ್ಥಿಗಳು ತಮ್ಮ ಪಿಎಚ್‌ಡಿ ಮಹಾಪ್ರಬಂಧಗಳನ್ನು ಸಲ್ಲಿಸಿ ಡಾಕ್ಟರೇಟ್ ಪದವಿಯನ್ನೂ ಪಡೆದಿದ್ದಾರೆ. ಹಾಗೆಯೇ ವಿವಿಧ ವಿಭಾಗದ ಪ್ರಾಧ್ಯಾಪಕರುಗಳು ಯುಜಿಸಿ ಮತ್ತು ಇನ್ನಿತರ ಸಂಸ್ಥೆಗಳಿAದ ಅನುದಾನ ಪಡೆದುಕೊಂಡು ಸಂಶೋಧನೆಗಳನ್ನು ನಡೆಸುತ್ತಿದ್ದಾರೆ.

ಹೊಸದೊಂದು ಸಂಸ್ಥೆ ಆರಂಭವಾದಾಗ ಇರುವ 'ಸ್ಟಾರ್ಟಿಂಗ್ ಟ್ರಬಲ್' ಕೊಡಗು ವಿಶ್ವವಿದ್ಯಾಲಯವನ್ನೂ ಕಾಡುತ್ತಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರಂಭಿಸಲಾದ ಈ ವಿಶ್ವವಿದ್ಯಾಲಯವನ್ನು ಕಾಂಗ್ರೆಸ್ ಸರ್ಕಾರ ಮಲತಾಯಿ ಧೋರಣೆಯಿಂದ ನೋಡುತ್ತಿದೆ ಎನ್ನುವ ಆರೋಪಗಳು ಕೇಳಿಬರುತ್ತಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ವಿಶ್ವವಿದ್ಯಾಲಯಕ್ಕೆ ನಿಗದಿತ ಅನುದಾನಗಳೇ ಬರುತ್ತಿಲ್ಲ. ಅನುದಾನದ ಕೊರತೆಯಿಂದ ಶೈಕ್ಷಣಿಕ ಚಟುವಟಿಕೆ ಮಾತ್ರವಲ್ಲದೆ ಪಠ್ಯೇತರ ಚಟುವಟಿಕೆಗಳಿಗೂ ಅಡ್ಡಿಯಾಗಿದೆ.
ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಬೆಳೆಸುವುದರ ಜತೆಗೆ ಗ್ರಾಮೀಣ ಬದುಕಿನ ಅರಿವು ಮೂಡಿಸುವಲ್ಲಿ ರಾಷ್ಟಿçÃಯ ಸೇವಾ ಯೋಜನೆ ಪ್ರಮುಖ ಪಾತ್ರ ವಹಿಸುತ್ತದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಬಹುತೇಕ ಕಾಲೇಜುಗಳಲ್ಲಿ ಎನ್‌ಎಸ್‌ಎಸ್ ಘಟಕಗಳಿವೆ. ಕೆಲವು ಕಾಲೇಜುಗಳಲ್ಲಿ 2 ಘಟಕಗಳೂ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿವೆ. ಕೊಡಗಿನಲ್ಲಿ ಇಂಥ ಒಟ್ಟು 18 ಎನ್‌ಎಸ್‌ಎಸ್ ಘಟಕಗಳಿವೆ. ಒಂದೊAದು ಘಟಕದಲ್ಲಿ 100 ವಿದ್ಯಾರ್ಥಿಗಳು ಇರುತ್ತಾರೆ. ಆದರೆ ಕಳೆದ 2 ವರ್ಷಗಳಿಂದ ಹೆಚ್ಚಿನ ಎನ್‌ಎಸ್‌ಎಸ್ ಘಟಕಗಳು ನಿಷ್ಕಿçಯವಾಗಿವೆ.

ಕೊಡಗು ವಿಶ್ವವಿದ್ಯಾಲಯದಿಂದ ಅನುದಾನಗಳು ಬಾರದ ಕಾರಣ ಎನ್‌ಎಸ್‌ಎಸ್ ಚಟುವಟಿಕೆ ನಡೆಸಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಕಾಲೇಜುಗಳ ಎನ್‌ಎಸ್‌ಎಸ್ ಅಧಿಕಾರಿಗಳು. ಆರ್ಥಿಕವಾಗಿ ಸದೃಢವಾಗಿರುವ ಕೆಲ ಎನ್‌ಎಸ್‌ಎಸ್ ಅಧಿಕಾರಿಗಳು ಸ್ವಯಂ ಆಸಕ್ತಿಯಿಂದ ತಮ್ಮ ಸಂಸ್ಥೆಗಳಲ್ಲಿ ಎನ್‌ಎಸ್‌ಎಸ್‌ನ ಚಟುವಟಿಕೆಗಳನ್ನು ಮುಂದುವರಿಸಿದ್ದಾರೆ. ಆದರೆ ಇದು ಎಲ್ಲರಿಂದಲೂ ಸಾಧ್ಯವಾಗುತ್ತಿಲ್ಲ. ಮತ್ತೊಂದು ಕಡೆ ಎನ್‌ಎಸ್‌ಎಸ್‌ನ ವಾರ್ಷಿಕ ವಿಶೇಷ ಶಿಬಿರಗಳೂ ಹೆಚ್ಚಿನ ಕಾಲೇಜುಗಳಲ್ಲಿ ಕಳೆದ 2 ವರ್ಷಗಳಿಂದ ನಡೆದಿಲ್ಲ. ಇದರಿಂದ ವಿದ್ಯಾರ್ಥಿಗಳ ಮೂಲಕ ನಡೆಸಲಾಗುತ್ತಿದ್ದ ಸಾಮಾಜಿಕ ಚಟುವಟಿಕೆಗಳಿಗೆ ತೊಡಕುಂಟಾಗಿದೆ. ಇದೇ ಪರಿಸ್ಥಿತಿ ಇನ್ನು ಒಂದು ವರ್ಷ ಮುಂದುವರಿದರೆ ಕಳೆದ ವರ್ಷ ಮೊದಲ ಸೆಮಿಸ್ಟರ್‌ಗೆ ಪ್ರವೇಶ ಪಡೆದುಕೊಂಡ ವಿದ್ಯಾರ್ಥಿಗಳು ಎನ್‌ಎಸ್‌ಎಸ್‌ನ ಅನುಭವದಿಂದ ವಂಚಿತರಾಗಲಿದ್ದಾರೆ.

ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಕ್ರೀಡಾ ಚಟುವಟಿಕೆಗಳು ನಡೆಯುತ್ತಿಲ್ಲ ಎನ್ನುವ ಆರೋಪಗಳು ಕೂಡ ಇದೆ. ವಿಶ್ವವಿದ್ಯಾಲಯ ಮಟ್ಟದಲ್ಲಿ ಕ್ರೀಡಾ ತಂಡಗಳು ಇರುವುದು ಸಾಮಾನ್ಯ ಆದರೆ ಕ್ರೀಡೆಗೆ ಹೆಸರು ಮಾಡಿರುವ ಕೊಡಗಿನಲ್ಲಿ ಇರುವ ವಿಶ್ವವಿದ್ಯಾಲಯದಲ್ಲಿ ಕ್ರೀಡಾ ತಂಡಗಳೇ ಇಲ್ಲ. ಮುಖ್ಯವಾಗಿ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಾಕಿ ಪಟುಗಳು ಇದ್ದಾರೆ. ಆದರೆ ಕ್ರೀಡಾ ತಂಡವೇ ಇಲ್ಲದ ಕಾರಣ ವಿಶ್ವವಿದ್ಯಾಲಯ ಮಟ್ಟದಲ್ಲಿ ಆಡುವ ಅರ್ಹತೆ ಇರುವ ಕ್ರೀಡಾಟುಗಳು ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಪೋಷಕರು ದೂರಿಕೊಂಡಿದ್ದಾರೆ.

ಕೊಡಗು ವಿಶ್ವವಿದ್ಯಾಲಯದ ಚುಕ್ಕಾಣಿ ಹಿಡಿದಿರುವ ದೂರದೃಷ್ಟಿಯ ಉತ್ಸಾಹಿ ಕುಲಪತಿ ಪ್ರೊ. ಅಶೋಕ ಎಸ್. ಆಲೂರ ನೇತೃತ್ವದ ತಂಡ ಕೊರತೆಗಳ ನಡುವೆಯೂ ವಿಶ್ವವಿದ್ಯಾಲಯಕ್ಕೆ ಒಂದು ಉತ್ತಮ ರೂಪ ಕೊಡುವ ಪ್ರಯತ್ನ ನಡೆಸುತ್ತಿದ್ದಾರೆ. ವಿಶ್ವವಿದ್ಯಾಲಯ ಈಗಾಗಲೇ ಶೈಕ್ಷಣಿಕವಾಗಿ ಸಾಕಷ್ಟು ಸಾಧನೆಗಳನ್ನು ಮಾಡಿದೆ. ಅತಿಶೀಘ್ರ ಫಲಿತಾಂಶ ಕೊಡುವುದರಲ್ಲಿ ಕೊಡಗು ವಿಶ್ವವಿದ್ಯಾಲಯ ಮುಂಚೂಣಿಯಲ್ಲಿದೆ. ಆಧುನಿಕ ಜಗತ್ತಿಗೆ ಅವಶ್ಯವಾಗಿರುವ ಕೌಶಲ್ಯಗಳನ್ನು ಕಲಿಸುವ ಹೊಸ ಹೊಸ ಕೋರ್ಸ್ಗಳ ಪರಿಚಯವೂ ಇಲ್ಲಿ ಆಗುತ್ತಿದೆ. ಇಲ್ಲಿ ಓದಿದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಜಗತ್ತಿನಲ್ಲಿ ಹಿಂದೆ ಬೀಳಬಾರದು ಎನ್ನುವ ಕಾರಣಕ್ಕೆ ಬೇರೆ ಬೇರೆ ಸಂಸ್ಥೆಗಳ ಜತೆ ಒಡಂಬಡಿಕೆ ಮಾಡಿಕೊಂಡು ವಿಶೇಷ ಸವಲತ್ತುಗಳನ್ನೂ ಒದಗಿಸಲಾಗುತ್ತಿದೆ. ಇದರ ಜತೆಗೆ ಪಠ್ಯತೇರ ಚಟುಚವಟಿಕೆಗಳಿಗೂ ಆದ್ಯತೆ ಕೊಟ್ಟರೆ ಉತ್ತಮ ಎನ್ನುವುದು ಶಿಕ್ಷಣಾಸಕ್ತರ ಅಭಿಪ್ರಾಯ.

ಕೊಡಗು ವಿಶ್ವವಿದ್ಯಾಲಯದಲ್ಲಿ ಎನ್‌ಎಸ್‌ಎಸ್ ಸಂಪೂರ್ಣ ನಿರ್ಲಕ್ಷಿಸಲಾಗಿದೆ. ಎನ್‌ಎಸ್‌ಎಸ್ ಚಟುವಟಿಕೆಗಳಿಗೆ ಯಾವುದೇ ಅನುದಾನ ಬರುತ್ತಿಲ್ಲ. ಹಾಗಾಗಿ ಕಳೆದ 2 ವರ್ಷಗಳಿಂದ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರಗಳನ್ನು ನಡೆಸಲು ಸಾಧ್ಯವಾಗಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ಎನ್‌ಎಸ್‌ಎಸ್ ಸ್ಥಾಪನೆಯ ಮೂಲ ಉದ್ದೇಶಗಳಿಂದ ವಂಚಿತರಾಗುತ್ತಿದ್ದಾರೆ.
ಹೆಸರು ಹೇಳಲು ಇಚ್ಛಿಸದ ಎನ್‌ಎಸ್‌ಎಸ್ ಅಧಿಕಾರಿ

ಕೊಡಗು ವಿಶ್ವ ವಿದ್ಯಾಲಯದಲ್ಲಿ ಎಲ್ಲಾ ಚಟುವಟಿಕೆಗಳಿಗೂ ಸಮಾನ ಆದ್ಯತೆ ಕೊಡಲಾಗಿದೆ. ಆರ್ಥಿಕ ಸಂಕಷ್ಟದ ಮಧ್ಯೆಯೂ ಕ್ರೀಡಾ ಚಟುವಟಕೆಗಳನ್ನು ನಡೆಸಲಾಗಿದೆ. ಎನ್‌ಎಸ್‌ಎಸ್ ಚಟುವಟಿಕೆಗಳೂ ನಡೆಯುತ್ತಿವೆ. ಕೊಡಗು ವಿಶ್ವವಿದ್ಯಾಲಯವನ್ನು ಉನ್ನತ ಸ್ಥಾನಕ್ಕೆ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ಎಲ್ಲರೂ ಸೇರಿ ಸಂಘಟಿತರಾಗಿ ಕೆಲಸ ಮಾಡುತ್ತಿದ್ದೇವೆ.
ಪ್ರೊ. ಅಶೋಕ ಎಸ್. ಆಲೂರ, ಕುಲಪತಿ, ಕೊಡಗು ವಿಶ್ವವಿದ್ಯಾಲಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net