

ಮಡಿಕೇರಿ:
ವರ್ಷದಿಂದ ವರ್ಷಕ್ಕೆ ಕೊಡಗಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಏರುಗತಿಯಲ್ಲಿದೆ. ಪ್ರಾಕೃತಿಕ ವಿಕೋಪ, ಕೊರೊನಾ ಕಾರಣದಿಂದ ಜಿಲ್ಲೆಯ ಪ್ರವಾಸೋದ್ಯಮ ಸ್ವಲ್ಪ ಹಿನ್ನಡೆ ಅನುಭವಿಸಿದರೂ ಇದೀಗ ಚೇತರಿಸಿಕೊಳ್ಳುತ್ತಿದೆ. ಭಾರತೀಯರು ಮಾತ್ರವಲ್ಲದೆ ವಿದೇಶಿ ಪ್ರವಾಸಿಗರೂ ಮಡಿಕೇರಿ ಭೇಟಿ ಬಗ್ಗೆ ಆಸಕ್ತಿ ತೋರಿಸುತ್ತಿದ್ದಾರೆ. ಭಾರತದಲ್ಲಿ ಭೇಟಿ ನೀಡಬಹುದಾದ ಪ್ರವಾಸಿತಾಣಗಳ ಬಗ್ಗೆ ವಿದೇಶಿಗರು ಹುಡುಕಾಟ ನಡೆಸಿದ ಟಾಪ್ 10 ಪಟ್ಟಿಯಲ್ಲಿ ಮಂಜಿನ ನಗರಿಯೂ ಸ್ಥಾನ ಪಡೆದುಕೊಂಡಿರುವುದು ಇದಕ್ಕೆ ಸಾಕ್ಷಿಯಾಗಿದೆ.
ಪ್ರವಾಸಕ್ಕೆ ಸೂಕ್ತ ಸ್ಥಳ ಯಾವುದು ಎನ್ನುವುರ ಬಗ್ಗೆ ಗೂಗಲ್‌ನಲ್ಲಿ ಭಾರತೀಯರು ಹುಡುಕಾಡಿದ ಟಾಪ್ ಟೆನ್ ಸ್ಥಳಗಳ ಪೈಕಿ ಕಳೆದ ವರ್ಷ ಕೊಡಗು 7ನೇ ಸ್ಥಾನ ಪಡೆದುಕೊಂಡಿತ್ತು.
ಇದೀಗ ಖಾಸಗಿ ಪ್ರವಾಸೋದ್ಯಮ ಆಯೋಜಕ ಸಂಸ್ಥೆಯೊAದು ಬಿಡುಗಡೆ ಮಾಡಿರುವ ಭಾರತದಲ್ಲಿ ಭೇಟಿ ನೀಡಬಹುದಾದ ಪ್ರವಾಸಿತಾಣಗಳ ಬಗ್ಗೆ ವಿದೇಶಿಗರು ಹುಡುಕಾಟ ನಡೆಸಿದ ಟಾಪ್ 10 ಪಟ್ಟಿಯಲ್ಲಿ ಮಡಿಕೇರಿ 10ನೇ ಸ್ಥಾನ ಪಡೆದುಕೊಂಡಿದೆ. ಇದು ಜಿಲ್ಲೆಯ ಪ್ರವಾಸೋದ್ಯಮಗಳಿಗೆ ಮತ್ತಷ್ಟು ಹುರುಪು ನೀಡಿದೆ.
ಭಾರತದ ಸ್ಕಾಟ್‌ಲ್ಯಾಂಡ್ ಎನ್ನುವ ಅನ್ವರ್ಥಕ ಹೆಸರು ಕೊಡಗಿಗಿದೆ. ದಕ್ಷಿಣದ ಕಾಶ್ಮೀರ ಎಂದು ಕೂಡ ಬಣ್ಣಿಸಲಾಗುತ್ತದೆ. ಪಶ್ಚಿಮಘಟ್ಟದ ಸೆರಗಿನಲ್ಲಿ ಮಲೆನಾಡಿನ ಮಡಿಲಲ್ಲಿರುವ ಇರುವ ಕೊಡಗು ತನ್ನ ಅತ್ಯದ್ಭುತ ಪ್ರಾಕೃತಿಕ ಸೌಂದರ್ಯದಿAದಲಾಗಿ ದೇಶ, ವಿದೇಶಗಳ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಕರಾವಳಿ ಪ್ರವಾಸೋದ್ಯಮ ಉತ್ತುಂಗದಲ್ಲಿದ್ದ ಸಮಯದಲ್ಲಿ 2004ರಲ್ಲಿ ದೇಶದ ಕರಾವಳಿಗೆ ಸುನಾಮಿ ಅಪ್ಪಳಿಸಿದ ನಂತರ ಪ್ರವಾಸಿಗರ ಆದ್ಯತೆಯ ಕ್ಷೇತ್ರ ಬದಲಾಯಿತು. ಪಶ್ಚಿಮಘಟ್ಟದ ಗಿರಿ ಶ್ರೇಣಿಗಳ ಕಡೆಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಲಾರಂಭಿಸಿತು. ಹೀಗೆ ಕಳೆದ 2 ದಶಕಗಳಿಂದ ಈಚೆಗೆ ಕೊಡಗಿನಲ್ಲಿ ವಾಣಿಜ್ಯಿಕವಾಗಿ ಶುರುವಾದ ಪ್ರವಾಸೋದ್ಯಮ ಈಗ ಏರು ಹಾದಿಯಲ್ಲಿದೆ.
2018ರ ನಂತರ ಸತತ ಮೂರು ವರ್ಷಗಳ ಕಾಲ ಜಿಲ್ಲೆಯನ್ನು ಕಾಡಿದ್ದ ಪ್ರಾಕೃತಿಕ ವಿಕೋಪ, ಅತಿವೃಷ್ಠಿ ಹಾಗೂ ನಂತರ ಜಗತ್ತಿಗೆ ಕಂಟಕವಾಗಿದ್ದ ಕೊರೊನಾ ಕೊಡಗಿನ ಪ್ರವಾಸೋದ್ಯಮವನ್ನು ಸ್ವಲ್ಪ ಹಿಂದಕ್ಕೆ ತೆಗೆದುಕೊಂಡು ಹೋಗಿತ್ತು. ಆದರೆ ನಂತರದ ದಿನಗಳಲ್ಲಿ ನಿಧಾನಕ್ಕೆ ಚೇತರಿಸಿಕೊಂಡ ಜಿಲ್ಲೆ ಈಗ ಮತ್ತೆ ಸಹಜ ಸ್ಥಿತಿಗೆ ಬಂದಿದೆ. ಕಳೆದ 3 ವರ್ಷದಿಂದ ಈಚೆಗೆ ಪ್ರವಾಸಿಗ ಸಂಖ್ಯೆ ಮೊದಲಿನಂತೆ ಹೆಚ್ಚಳವಾಗಿದೆ.
ಪ್ರವಾಸಿ ಚಟುವಟಿಕೆಗಳೂ ಇಲ್ಲಿ ಬಿರುಸುಗೊಂಡಿದ್ದು, ಪ್ರವಾಸಿತಾಣಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಕೆಲಸ ಆಗುತ್ತಿದೆ. ಮಾರ್ಚ್ನಿಂದ ಮೇ ತನಕದ ಪ್ರವಾಸಿ ಸೀಸನ್, ಜೂನ್‌ನಿಂದ ಆಗಸ್ಟ್ ತನಕ ಮಳೆಗಾಲದ ಪ್ರವಾಸೋದ್ಯಮ, ಅಕ್ಟೋಬರ್‌ನಲ್ಲಿ ದಸರಾ ರಜೆ, ಡಿಸೆಂಬರ್ ಮತ್ತು ಜನವರಿಯಲ್ಲಿ ವರ್ಷಾಂತ್ಯ ಮತ್ತು ಹೊಸ ವರ್ಷಾರಂಭದ ಸಂಭ್ರಮ.. ಹೀಗೆ ಒಂದಿಲ್ಲೊAದು ಕಾರಣಕ್ಕೆ ಕೊಡಗನಲ್ಲಿ ಪ್ರವಾಸಿಗರ ಕಲರವ ಇದ್ದೇ ಇರುತ್ತದೆ.
ಇದೀಗ ಖಾಸಗಿ ಸಂಸ್ಥೆ ಬಿಡುಗಡೆ ಮಾಡಿರುವ ವಿದೇಶಿಯರು ಹೆಚ್ಚು ಹುಡುಕಾಡಿದ ಟಾಪ್ 10 ಪಟ್ಟಿಯಲ್ಲಿ ಮಡಿಕೇರಿಯೂ ಸ್ಥಾನಪಡೆದುಕೊಂಡಿರುವುದರಿAದ ಇನ್ನು ಮುಂದೆ ವಿದೇಶಿ ಪ್ರವಾಸಿಗರ ಭೇಟಿ ಹೆಚ್ಚಾಗುವುದನ್ನು ನಿರೀಕ್ಷಿಸಬಹುದಾಗಿದೆ. ಈ ಪಟ್ಟಿಯಲ್ಲಿ ದೆಹಲಿ ಮೊದಲ ಸ್ಥಾನದಲ್ಲಿದ್ದರೆ, ನಂತರದ ಸ್ಥಾನಗಳನ್ನು ಕ್ರಮವಾಗಿ ಮುಂಬೈ, ಬೆಂಗಳೂರು, ಜೈಪುರ, ಚೆನ್ನೆöÊ, ಹಂಪಿ, ಲೇಹ್, ಪಾಟ್ನಿಟಾಪ್, ಪಹಲ್‌ಗಾಂವ್ ಹಾಗೂ 10ನೇ ಸ್ಥಾನದಲ್ಲಿ ಮಡಿಕೇರಿ ಇದೆ.
ಜಿಲ್ಲೆಯ ಪ್ರಾಕೃತಿಕ ಸೊಬಗಿನ ಆಕರ್ಷಣೆ, ಮೋಡಿ ಮಾಡುವ ಪರಿಸರ ಪ್ರವಾಸಿಗರನ್ನು ಹೆಚ್ಚು ಹೆಚ್ಚು ಸೆಳೆಯಲು ಕಾರಣವಾಗಿದೆ. ದೇಶದ ಪ್ರಮುಖ ಗಿರಿಧಾಮಗಳ ಪಟ್ಟಿಯಲ್ಲೂ ಕೊಡಗು ಸ್ಥಾನ ಪಡೆದುಕೊಂಡಿದೆ. ಇಲ್ಲಿಯ ಕಾಫಿ ತೋಟ, ಜಲಪಾತಗಳು, ಹಸಿರು ತುಂಬಿದ ದಟ್ಟ ಕಾಡು, ವನ್ಯಜೀವಿ ತಾಣಗಳಿಗೆ ಜಿಲ್ಲೆ ಹೆಸರಾಗಿದೆ. ಇಲ್ಲಿಯ ವಾತಾವರಣ ಶಾಂತಿ ಮತ್ತು ತಾಜಾತನವನ್ನು ಪ್ರವಾಸಿಗರಲ್ಲಿ ತುಂಬುತ್ತದೆ ಎನ್ನುವ ನಂಬಿಕೆಯೂ ಇದೆ. ಟ್ರಕ್ಕಿಂಗ್, ರ‍್ಯಾಫ್ಟಿಂಗ್, ಕ್ಯಾಂಪಿAಗ್‌ನAತಹ ಸಾಹಸ ಕ್ರೀಡೆಗಳನ್ನೂ ಆನಂದಿಸಬಹುದು. ಮಡಿಕೇರಿ ಕೋಟೆ, ಅಬ್ಬಿಫಾಲ್ಸ್, ರಾಜಾ ಸೀಟ್, ನಾಗರಹೊಳೆ ರಾಷ್ಟಿçÃಯ ಉದ್ಯಾನ, ದುಬಾರೆ ಮತ್ತು ಹಾರಂಗಿ ಸಾಕಾನೆ ಶಿಬಿರ ಪ್ರಮುಖ ಆಕರ್ಷಣೆಗಳಾಗಿದೆ. ಅಕ್ಟೋಬರ್‌ನಿಂದ ಮಾರ್ಚ್ ತನಕದ ಅವಧಿ ಜಿಲ್ಲೆಗೆ ಭೇಟಿ ನೀಡಲು ಅತ್ಯುತ್ತಮವಾಗಿರುತ್ತದೆ. ಪ್ರವಾಸೋದ್ಯಮ ಇಲಾಖೆಯೂ ಪ್ರವಾಸಿಗರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ರೂಪಿಸಿದ್ದು, ಇದು ಕೂಡ ಪ್ರವಾಸಿಗರನ್ನು ಸೆಳೆಯಲು ಸಹಕಾರಿ ಆಗಲಿದೆ.
ಜಿಲ್ಲೆಯಲ್ಲಿ ಪ್ರವಾಸೋದ್ಯಮದ ಬೆಳವಣಿಗೆ ಕೊಡಗಿನ ಆರ್ಥಿಕತೆಯ ದೃಷ್ಟಿಯಿಂದ ಸ್ವಾಗತಿಸುವವರ ಮಧ್ಯೆ ಪ್ರವಾಸೋದ್ಯಮದಿಂದ ಜಿಲ್ಲೆಯ ಪರಿಸರಕ್ಕೆ ಹಾನಿ ಆಗುತ್ತಿದೆ ಎನ್ನುವ ಆರೋಪಗಳಿವೆ. ರೆಸಾರ್ಟ್, ಹೋಮ್‌ಸ್ಟೇ ನಿರ್ಮಾಣಕ್ಕೋಸ್ಕರ ಇಲ್ಲಿಯ ಬೆಟ್ಟ, ಗುಡ್ಡಗಳಿಗೆ ಕನ್ನ ಹಾಕಲಾಗುತ್ತಿದೆ. ನದಿ ಮಾಲಿನ್ಯ ಹೆಚ್ಚಳಕ್ಕೂ ಪ್ರವಾಸೋದ್ಯಮ ಕಾರಣವಾಗಿದೆ ಎನ್ನಲಾಗುತ್ತಿದೆ. ಹಾಗಾಗಿ ಸುಸ್ಥಿರ ಪ್ರವಾಸೋದ್ಯಮದ ಕಡೆಗೆ ಚಿಂತನೆ ಹರಿಸುವಂತೆ ಒತ್ತಾಯ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಕೆಲವು ಆಸಕ್ತರು ಕೃಷಿ ಪ್ರವಾಸೋದ್ಯಮ, ಪ್ಲಾಂಟೇಷನ್ ಟೂರ್‌ನಂತ ಪರಿಸರಕ್ಕೆ ಪೂರಕ ಚಟುವಟಿಕೆಗಳ ಕಡೆಗೆ ಇತ್ತೀಚಿನ ದಿನಗಳಲ್ಲಿ ಆದ್ಯತೆ ಕೊಡುತ್ತಿದ್ದಾರೆ.
ಮತ್ತೊಂದು ಕಡೆ ಜಿಲ್ಲೆಯಲ್ಲಿ ಮಡಿಕೇರಿ ಕೇಂದ್ರಿಕÊತ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ಸಿಗುತ್ತಿರುವುದರಿಂದ ಜಿಲ್ಲಾ ಕೇಂದ್ರದ ಮೇಲೆ ಅನಗತ್ಯ ಒತ್ತಡ ಬೀಳುತ್ತಿದೆ. ಕೊಡಗಿನ ಇತರ ಭಾಗಗಳಲ್ಲೂ ಅತ್ಯುತ್ತಮ ಪ್ರೇP್ಷÀಣೀಯ ತಾಣಗಳಿದ್ದು, ಇವುಗಳ ಬಗ್ಗೆಯೂ ಪ್ರಚಾರ ಕೊಡಬೇಕಿದೆ. ಇದರಿಂದ ಪ್ರವಾಸೋದ್ಯಮದ ಬೆಳವಣಿಗೆಯಲ್ಲಿ ಸಮತೋಲನ ಸಾಧಿಸಿದಂತಾಗುತ್ತದೆ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಹೊರ ಜಿಲ್ಲೆ, ರಾಜ್ಯ ಹಾಗೂ ವಿದೇಶದಿಂದ ಆಗಮಿಸುವ ಪ್ರವಾಸಿಗರು ಸಹಜವಾಗಿ ನೇರವಾಗಿ ಮಡಿಕೇರಿಗೆ ಭೇಟಿ ಕೊಡುತ್ತಾರೆ. ತಂಗಲು ಇಲ್ಲಿಯೇ ವ್ಯವಸ್ಥೆ ಮಾಡಿಕೊಂಡು ಸುತ್ತಮುತ್ತಲಿನ ಹತ್ತಿರದ ಪ್ರವಾಸಿತಾಣಗಳಿಗೆ ತೆರಳುತ್ತಾರೆ. ಹಾಗಾಗಿಯೇ ವಾರಾಂತ್ಯ ಮತ್ತು ಇತರ ರಜಾ ದಿನಗಳಲ್ಲಿ ಮಡಿಕೇರಿ ಬ್ಯುಸಿ ಆಗಿಬಿಡುತ್ತದೆ. ಪ್ರೇP್ಷÀಣೀಯ ಸ್ಥಳಗಳು ಭರ್ತಿ ಆಗಿ ಅನಗತ್ಯ ಒತ್ತಡಕ್ಕೆ ಕಾರಣವಾಗುತ್ತದೆ. ಆದರೆ ಜಿಲ್ಲೆಯ ಇತರ ಪ್ರವಾಸಿ ಕೇಂದ್ರಗಳಲ್ಲಿ ಈ ಮಟ್ಟಿಗೆ ಪ್ರವಾಸಿಗರು ಇರುವುದಿಲ್ಲ.
ಕೊಡಗು ಜಿಲ್ಲೆಯ ಕಲೆ, ಪರಂಪರೆ ಸಾಂಪ್ರಾದಾಯಗಳ ಜೊತೆ ಇಲ್ಲಿನ ಅತಿಥ್ಯಕ್ಕೆ ಪ್ರವಾಸಿಗರು ಹೆಚ್ಚು ಆಕರ್ಷಿತಾರಾಗುತ್ತಾರೆ. ಪ್ರವಾಸೋದ್ಯಮ ಇಲಾಖೆಯ ಅನುದಾನದಿಂದ ಕೊಡಗು ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಿಗೆ ರೂ.28.13 ಕೋಟಿ ರೂ. ಅನುದಾನದಲ್ಲಿ ವಿವಿಧ ಕಾಮಗಾರಿ ಹಾಗೂ ಮೂಲಭೂತ ಸೌಕರ್ಯ ನಿರ್ಮಿಸಲಾಗಿದೆ. ಜಿಲ್ಲೆಯ ಹಾರಂಗಿ ಜಲಾಶಯದ ಹಿನ್ನೀರಿನಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಜಲಕ್ರೀಡೆಗಳನ್ನು ಮತ್ತು ಜಲಸಾಹಸ ಪ್ರವಾಸೋದ್ಯಮವನ್ನು ನಡೆಸಲು ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ ವತಿಯಿಂದ ಪರವಾನಿಗೆ ನೀಡಿ ಪ್ರವಾಸಿಗರಿಗೆ ಮುಕ್ತ ಮಾಡಲಾಗಿದೆ.
ಅನಿತಾ ಭಾಸ್ಕರ್, ಉಪನಿರ್ದೇಶಕಿ, ಪ್ರವಾಸೋದ್ಯಮ ಇಲಾಖೆ, ಕೊಡಗು
ವಿದೇಶಿಯರು ಹೆಚ್ಚು ಹುಡುಕಾಡಿದ ಟಾಪ್ 10 ಪಟ್ಟಿಯಲ್ಲಿ ಮಡಿಕೇರಿಯೂ ಸ್ಥಾನ ಪಡೆದುಕೊಂಡಿರುವುದು ಖುಷಿಯ ವಿಚಾರ. ಆದರೆ ಅವರನ್ನು ಇಲ್ಲಿಗೆ ಭೇಟಿ ನೀಡುವಂಥ ಆಕರ್ಷಣೆಗಳನ್ನೂ ಸೃಷ್ಟಿಸುವ ಕೆಲಸ ಆಗಬೇಕಿದೆ. ಮುಖ್ಯವಾಗಿ ಪ್ರವಾಸಿ ತಾಣಗಳಲ್ಲಿ ಮೂಲಭೂತ ಸೌಕರ್ಯಗಳು ಮತ್ತಷ್ಟು ಉನ್ನತ ಮಟ್ಟಕ್ಕೆ ಏರಬೇಕು. ಒಮ್ಮೆ ಇಲ್ಲಿಗೆ ಬಂದವರು ತಮ್ಮ ದೇಶಕ್ಕೆ ತೆರಳಿ ಇಲ್ಲಗೆ ಇನ್ನಷ್ಟು ಜನರನ್ನು ಬರುವಂತೆ ಮಾಡುವಂತಿರಬೇಕು. ಮುಖ್ಯವಾಗಿ ಆತಿಥ್ಯ ಅವರಿಗೆ ಇಷ್ಟವಾಗಬೇಕು.
ಸಿ.ಎಲ್. ವಿಶ್ವ, ಮಾಜಿ ಅಧ್ಯಕ್ಷ, ರ‍್ಯಾಫ್ಟಿಂಗ್ ಅಸೋಸಿಯೇಷನ್, ದುಬಾರೆ