

ಮಡಿಕೇರಿ: ದಕ್ಷಿಣ ಕೊಡಗಿನಲ್ಲಿ ಹುಲಿ ದಾಳಿ ಮುಂದುವರಿದಿದ್ದು, ಸೋಮವಾರ 3ನೇ ಬಲಿ ತೆಗೆದುಕೊಂಡಿದೆ. ಪೊನ್ನಂಪೇಟೆ ತಾಲೂಕು ವ್ಯಾಪ್ತಿಯ ಬೆಳ್ಳೂರು ಗ್ರಾಮದ ಚೆಕ್ಕೇರ ಸುಬ್ಬಯ್ಯ ಅವರ ಕಾಫಿ ತೋಟದಲ್ಲಿ ಹುಲಿ ದಾಳಿಗೆ 8 ವರ್ಷದ ಬಾಲಕ ರಾಮಸ್ವಾಮಿ ಬಲಿಯಾಗಿದ್ದಾನೆ. ಬಾಲಕನೊಂದಿಗೆ ಇದ್ದ ಅಜ್ಜ ಕೆಂಚಪ್ಪ (50) ಗಂಭೀರ ಸ್ವರೂಪದಲ್ಲಿ ಗಾಯಗೊಂಡಿದ್ದು, ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮೈಸೂರು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.
ಕಾಫಿ ತೋಟದಲ್ಲಿ ನೀರು ಹಾಯಿಸಲಾಗುತ್ತಿದ್ದು, ಅಜ್ಜನೊಂದಿಗೆ ತೋಟಕ್ಕೆ ತೆರಳಿದ್ದ ಮೊಮ್ಮಗ ಹುಲಿ ದಾಳಿಗೆ ಬಲಿಯಾಗಿದ್ದಾನೆ. ಮೈಸೂರು ಜಿಲ್ಲಾ ವ್ಯಾಪ್ತಿಯ ನಂಜನಗೂಡು ನಿವಾಸಿ ಮಾದೇಶ ಪುತ್ರ. ಹುಲಿ ದಾಳಿಯಿಂದ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಭಯಭೀತರಾಗಿದ್ದಾರೆ. ಜೀವ ಕೈಯಲ್ಲಿ ಹಿಡಿದುಕೊಂಡು ತೋಟದಲ್ಲಿ ಕೆಲಸ ಮಾಡುವಂತಾಗಿದೆ.
ದಕ್ಷಿಣ ಕೊಡಗಿನಲ್ಲಿ ಹುಲಿ ದಾಳಿಗೆ 3ನೇ ಬಲಿ ಆಗುತ್ತಿದ್ದಂತೆ ಸಾರ್ವಜನಿಕ ಪ್ರಮುಖರು ಆಕ್ರೋಶಿತರಾಗಿದ್ದಾರೆ. ಕರ್ನಾಟಕ- ಕೇರಳ ರಾಜ್ಯ ಸಂಪರ್ಕದ ರಸ್ತೆ ತಡೆ ಮಾಡುವುದರ ಮೂಲಕ ಆಕ್ರೋಶ ವ್ಯಕ್ತ ಪಡಿಸಿದರು. ತಕ್ಷಣ ಹುಲಿ ಕೊಂದು ನಮ್ಮ ಮುಂದೆ ಹಾಜರು ಪಡಿಸಬೇಕು. ಇಲ್ಲದಿದ್ದಲ್ಲಿ ಹುಲಿ ಕೊಲ್ಲಲು ಸಾರ್ವಜನಿಕರು ಅವಕಾಶ ನೀಡಬೇಕೆಂದು ಪಟ್ಟುಹಿಡಿದರು.
ಹುಲಿ ದಾಳಿಯಿಂದ 3ನೇ ಬಲಿಯಾಗುತ್ತಿದ್ದಂತೆ, ಸಾರ್ವಜನಿಕರು ಗಲಭೆ ಸೃಷ್ಟಿಸುವ ಆತಂಕದಲ್ಲಿ ಸೋಮವಾರ, ಮಂಗಳವಾರ ಹುದಿಕೇರಿ ಹೋಬಳಿ ವ್ಯಾಪ್ತಿಯ ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ಸಂಬಂಧ ತಹಸೀಲ್ದಾರ್ ಯೋಗಾನಂದ್ ಆದೇಶ ಹೊರಡಿಸಿದ್ದಾರೆ. ನಿಷೇಧಾಜ್ಞೆ ಆದೇಶ ಹೊರಡಿಸಿ, ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ಆಗಮಿಸಿದ್ದ ತಹಸೀಲ್ದಾರ್ ಸಾರ್ವಜನಿಕ ಪ್ರಮುಖರಿಂದ ತೀವ್ರ ಪ್ರತಿರೋಧ ಎದುರಿಸಬೇಕಾಯಿತು.
ದಕ್ಷಿಣ ಕೊಡಗಿನ ಜನ ಜೀವ ಭಯದಿಂದ ದಿನ ಕಳೆಯುತ್ತಿದ್ದಾರೆ. ಅರಣ್ಯ ಇಲಾಖೆ ಹುಲಿ ಸೆರೆಹಿಡಿಯುವ ನಾಟಕ ಆಡುತ್ತಿದೆ. ನಿಷೇಧಾಜ್ಞೆ ಮೂಲಕ ಹೆದರಿಸಿ, ಬೆದರಿಸಿ ಏನೂ ಪ್ರಯೋಜನವಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಹುಲಿ ಸೆರೆ ಹಿಡಿಯಲು ಅನುಮತಿ ನೀಡಲಾಗಿದೆ. ಸಾರ್ವಜನಿಕರು ತಾಳ್ಮೆಯಿಂದ ಸಹಕರಿಸಬೇಕೆಂದು ತಹಸೀಲ್ದಾರ್ ಮನವಿ ಮಾಡಿದರು.
ಮಾನವ ಪ್ರಾಣ ಹಾನಿಗೆ ಕಾರಣವಾಗಿರುವ ಹುಲಿ ಸೆರೆಹಿಡಿಯಲು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರು ಸೋಮವಾರ ಲಿಖಿತ ಆದೇಶ ಹೊರಡಿಸಿದರು. ಹುಲಿ ಸೆರೆಹಿಡಿಯಲು ಸಾಧ್ಯವಾಗದ ಅನಿವಾರ್ಯ ಪರಿಸ್ಥಿತಿ ಇದ್ದಲ್ಲಿ ಅಂತಿಮ ಪ್ರಕ್ರಿಯೆಯಾಗಿ ಗುಂಡಿಕ್ಕಲು ಅನುಮತಿ ನೀಡಲಾಗಿದೆ.