

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಕೊಡಗಿನ ವಿವಿಧೆಡೆ ಹೊಸ ವಿದ್ಯುತ್ ಉಪಕೇಂದ್ರ ಸ್ಥಾಪಿಸುವುದರ ಮೂಲಕ ಕೊಡಗಿನಲ್ಲಿರುವ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲಾಗುವುದೆಂದು ಇಂಧನ ಇಲಾಖೆ ಅಪರ ಕಾರ್ಯದರ್ಶಿ ಹಾಗೂ ಮುಖ್ಯ ವಿದ್ಯುತ್ ಪರಿವೀಕ್ಷಣಾಧಿಕಾರಿ ತೀತಿರ ರೋಷನ್ ಅಪ್ಪಚ್ಚು ಹೇಳಿದರು.
ಕೊಡಗು ಪ್ರೆಸ್ ಕ್ಲಬ್ ವತಿಯಿಂದ ಭಾನುವಾರ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಕೊಡಗು ಪ್ರೆಸ್ ಕ್ಲಬ್ ೨೪ನೇ ವಾರ್ಷಿಕೋತ್ಸವ ಹಾಗೂ ಪ್ರೆಸ್ ಕ್ಲಬ್ ಡೇ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ವಿದ್ಯುಚ್ಛಕ್ತಿ ವಿಚಾರದಲ್ಲಿ ಕೊಡಗು ತುಂಬಾ ಹಿಂದೆ ಇದೆ. ೫ ತಾಲೂಕುಗಳಿರುವ ಜಿಲ್ಲೆಯಲ್ಲಿ ಅಷ್ಟು ವಿದ್ಯುತ್ ಲೋಡ್ ಇಲ್ಲ. ಹೀಗಿದ್ದರೂ, ಜನರು ವಿದ್ಯುತ್ ಸಮಸ್ಯೆ ಎದುರಿಸುತ್ತಿದ್ದಾರೆ. ಒಂದೇ ವಿದ್ಯುತ್ ಮಾರ್ಗ ಇರುವಲ್ಲಿ ಇಂತಹ ಸಮಸ್ಯೆ ಇದ್ದು, ಜಿಲ್ಲೆಯ ವಿವಿಧೆಡೆ ಉಪಕೇಂದ್ರ ಸ್ಥಾಪಿಸಲಾಗುತ್ತಿದೆ ಎಂದರು.
ಹುದಿಕೇರಿ, ಶ್ರೀಮಂಗಲ, ಬಾಳೆಲೆ, ಸಿದ್ದಾಪುರ, ಕಳತ್ಮಾಡು, ಭಾಗಮಂಡಲ, ಸಂಪಾಜೆ, ಮೂರ್ನಾಡು, ಹಾನಗಲ್, ಕೊಡ್ಲಿಪೇಟೆ, ಮಾದಾಪುರ, ಕೂಡಿಗೆ ಮತ್ತಿತರ ಭಾಗಗಳಲ್ಲಿ ಉಪಕೇಂದ್ರ ಸ್ಥಾಪನೆಯಾಗಲಿದೆ. ಈ ಕೆಲಸ ಪೂರ್ಣಗೊಂಡ ಮೇಲೆ ವಿದ್ಯುತ್ ಸಮಸ್ಯೆ ಬಗೆಹರಿಯಲಿದೆ ಎಂದು ಹೇಳಿದರು.
ದೇಶ ವಿದ್ಯುಚ್ಛಕ್ತಿ ಸ್ವಾವಲಂಬನೆಯಲ್ಲಿದೆ. ಪ್ರತಿ ಹಳ್ಳಿಗೂ ವಿದ್ಯುತ್ ಒದಗಿಸುವ ಪ್ರಯತ್ನ ಮಾಡಲಾಗುತ್ತಿದೆ. ೨೦೩೦ರ ವೇಳೆಗೆ ಎಲೆಕ್ಟ್ರಿಕ್ ವಾಹನ ಹೆಚ್ಚಾಗಲಿದೆ. ಇದರಿಂದ ಪೆಟ್ರೋಲ್, ಡಿಸೇಲ್ ವಾಹನಗಳ ಸಂಖ್ಯೆ ಕಡಿಮೆಯಾಗಿ ಇಂಧನ ಆಮದು ಕಡಿಮೆಯಾಗಲಿದೆ. ದೇಶದ ಆರ್ಥಿಕ ಚೇತರಿಕೆಗೂ ಇದು ಸಹಕಾರಿಯಾಗಲಿದೆ ಎಂದರು.
ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ ಅಧ್ಯಕ್ಷ ಉಳ್ಳಿಯಡ ಎಂ ಪೂವಯ್ಯ ಮಾತನಾಡಿ, ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವವನ್ನು ಹಬ್ಬದಂತೆ ಆಚರಿಸಲು ನಿರ್ಧರಿಸಲಾಗಿದೆ. ಬೆಳ್ಳಿ ಮಹೋತ್ಸವ ಅರ್ಥಪೂರ್ಣ, ಅನುಕರಣೀಯ, ಸ್ಮರಣೀಯವಾಗಿರ ಬೇಕೆಂದರು.
ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ ಮಾತನಾಡಿ, ಪತ್ರಕರ್ತರು ರಜಾ ದಿನಗಳಲ್ಲೂ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ. ಸಚಿವರು, ಸಂಸದರ ಕಾರ್ಯಕ್ರಮಗಳಿದ್ದಲ್ಲಿ ಕಡ್ಡಾಯವಾಗಿ ವರದಿ ಮಾಡಬೇಕಾಗುತ್ತದೆ. ಎಲ್ಲಾ ರಂಗದಲ್ಲೂ ಒಂದಲ್ಲ ಒಂದು ರೀತಿಯ ಸಮಸ್ಯೆಗಳಿದ್ದು, ತಾಳ್ಮೆಯಿಂದ ಮುನ್ನಡೆದರೆ ಸಮಸ್ಯೆ ಬಗೆಹರಿಸಲು ಸಾಧ್ಯವೆಂದರು.
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷೆ ಬಿ.ಆರ್. ಸವಿತಾ ರೈ ಮಾತನಾಡಿ, ಪತ್ರಕರ್ತರಿಗೆ ವಿವಿಧ ಕಾರ್ಯಕ್ರಮ ಆಯೋಜಿಸುವುದರೊಂದಿಗೆ ಕುಟುಂಬ ಸದಸ್ಯರಿಗೂ ಕಾರ್ಯಕ್ರಮ ಆಯೋಜಿಸಿರುವುದು ಉತ್ತಮ ಬೆಳವಣಿಗೆ. ಸದಸ್ಯರ ಮಕ್ಕಳ ಪ್ರತಿಭೆ ಅನಾವರಣಕ್ಕೂ ವೇದಿಕೆ ಕಲ್ಪಿಸಲಾಗಿದೆ. ಪ್ರೆಸ್ ಕ್ಲಬ್ ನೂತನ ಕಾರ್ಯಕ್ರಮ ಆಯೋಜಿಸುತ್ತಿದ್ದು, ಬೆಳ್ಳಿ ಮಹೋತ್ಸವ ವಿಜೃಂಭಣೆಯಿಂದ ಆಚರಿಸುವಂತಾಗಬೇಕೆಂದರು.
ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ಸಂಚಾಲಕ ಕೆ.ಕೆ. ರೆಜಿತ್‌ಕುಮಾರ್ ಗುಹ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮೃದ್ಧಿ ವಾಸು ಪ್ರಾರ್ಥಿಸಿದರು. ನವೀನ್ ಡಿಸೋಜ ಸ್ವಾಗತಿಸಿದರು. ಸುನಿಲ್ ಪೊನ್ನೇಟಿ ನಿರೂಪಿಸಿದರು. ಎಂ.ಎನ್. ಚಂದ್ರಮೋಹನ್ ಅತಿಥಿ ಪರಿಚಯ ಮಾಡಿದರು. ಬೊಳ್ಳಜೀರ ಬಿ. ಅಯ್ಯಪ್ಪ ವಂದಿಸಿದರು. ಸಾಧಕ ಪತ್ರಕರ್ತರು ಹಾಗೂ ಶೇ.೮೫ ಕ್ಕಿಂತ ಹೆಚ್ಚಿನ ಅಂಕ ಪಡೆದ ಕ್ಲಬ್ ಸದಸ್ಯರ ಮಕ್ಕಳನ್ನು ಸನ್ಮಾನಿಸಲಾಯಿತು.