

ಮಡಿಕೇರಿ:
ಕೊಡಗಿನ ಅರಣ್ಯ ಪ್ರದೇಶವನ್ನು ಕೇರಳಿಗರು ಕಸದ ತೊಟ್ಟಿ ಎಂದು ಪರಿಗಣಿಸಿದಂತಿದೆ. ಜಿಲ್ಲೆಯ ಗಡಿಭಾಗದಲ್ಲಿ ಅರಣ್ಯಗಳ ಮೂಲಕ ಹಾದುಹೋಗುವ ರಸ್ತೆಗಳ ಬದಿಯಲ್ಲಿ ಅಪಾಯಕಾರಿ ತ್ಯಾಜ್ಯ ಸುರಿಯುವ ಚಾಳಿ ಮತ್ತೆ ಮುಂದುವರಿದಿದೆ. ಅರಣ್ಯ ಇಲಾಖೆ ಈ ಭಾಗದಲ್ಲಿ ಕಣ್ಗಾವಲು ಇರಿಸಿರುವುದಾಗಿ ಹೇಳುತ್ತಿದ್ದರೂ ಕಸದ ಸಮಸ್ಯೆ ಪುನರಾವರ್ತನೆ ಆಗುತ್ತಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.
ಅಮೂಲ್ಯ ಜೀವ ಸಂಕುಲ ಹೊಂದಿರುವ ಪಶ್ಚಿಮಘಟ್ಟಕ್ಕೆ ಬರೆ ಎಳೆದಂತೆ ಅರಣ್ಯದೊಳಗೆ ನಿರ್ಮಿಸಲಾಗಿರುವ ರಸ್ತೆಗಳ ಮೂಲಕ ಕೊಡಗಿನಿಂದ ಕೇರಳಕ್ಕೆ ಸಂಪರ್ಕ ಕಲ್ಪಿಸಲಾಗಿದೆ. ಈ ರಸ್ತೆಗಳಲ್ಲಿ ದಿನಂಪ್ರತಿ ಸಾವಿರಾರು ವಾಹನಗಳು ಜಿಲ್ಲೆಗೆ ಬಂದು ಹೋಗುವುದಲ್ಲದೆ ಮೈಸೂರು, ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ಊರುಗಳಿಗೂ ಕೊಡಗಿನ ರಸ್ತೆಗಳ ಮೂಲಕವೇ ಕೇರಳಿಗರು ಸಂಚಾರ ನಡೆಸುತ್ತಾರೆ. ಬಂಡೀಪುರ ಅರಣ್ಯದ ಮೂಲಕ ಹಾದುಹೋಗುವ ಹೆದ್ದಾರಿ ರಾತ್ರಿ ವೇಳೆ ಬಂದ್ ಮಾಡುವುದರಿಂದ ಈ ಸಂದರ್ಭದಲ್ಲೂ ಜಿಲ್ಲೆಯ ರಸ್ತೆಗಳಲ್ಲಿ ವಾಹನ ದಟ್ಟಣೆ ಇರುತ್ತದೆ. ತಮ್ಮ ಅನುಕೂಲಕ್ಕೆ ಜಿಲ್ಲೆಯ ರಸ್ತೆಗಳನ್ನು ಬಳಸಿಕೊಳ್ಳುವ ಕೇರಳಿಗರು ಇಲ್ಲಿನ ಅರಣ್ಯಗಳನ್ನು ಕೆಡಿಸುವುದಕ್ಕೂ ತಮ್ಮದೇ ಕೊಡುಗೆ ಕೊಡುತ್ತಿದ್ದಾರೆ.
ಕೊಡಗಿನಿಂದ ಕೇರಳ ಸಂಪರ್ಕಿಸುವ ಹೆದ್ದಾರಿ ಬದಿಯ ಅರಣ್ಯ ಕಸದ ತೊಟ್ಟಿಯಾಗಿ ಪರಿವರ್ತನೆ ಆಗಿದೆ. ಪಕ್ಕದ ರಾಜ್ಯದಿಂದ ಬರುವ ಪ್ರವಾಸಿಗರು, ಪ್ರಯಾಣಿಕರು ತಮ್ಮೊಂದಿಗೆ ಕಸವನ್ನೂ ತಂದು ಸುರಿದು ಮರಳುತ್ತಿದ್ದಾರೆ. ವೈದ್ಯಕೀಯ ತ್ಯಾಜ್ಯವನ್ನೂ ಇಲ್ಲಿ ಚೆಲ್ಲಲಾಗುತ್ತಿದೆ. ವಾಹನಗಳಲ್ಲಿ ಕೇರಳದ ತ್ಯಾಜ್ಯ ತಂದು ರಾಜ್ಯದ ಗಡಿಯಲ್ಲಿರುವ ಅರಣ್ಯದೊಳಗೆ ಸುರಿಯುವ ದಂಧೆ ಸ್ವಲ್ಪ ಸಮಯ ನಿಂತು ಹೋಗಿತ್ತು. ಆದರೆ ಅದೀಗ ಮತ್ತೆ ಶುರುವಾಗಿದೆ. ಆಸ್ಪತ್ರೆ ತ್ಯಾಜ್ಯ ಮಾತ್ರವಲ್ಲದೆ ಕೆಲವು ಪಟ್ಟಣಗಳಲ್ಲಿ ಸಂಗ್ರಹವಾಗುವ ಕಸವನ್ನು ವಿಲೇವಾರಿ ಮಾಡುವ ಜಾಗವನ್ನಾಗಿ ಕೇರಳದವರು ಕರ್ನಾಟಕದ ಮೀಸಲು ಅರಣ್ಯವನ್ನು ಬಳಸಿಕೊಳ್ಳುವುದು ಕಂಡುಬರುತ್ತಿರುತ್ತಿದೆ.
ಸ್ಯಾನಿಟರಿ ಪ್ಯಾಡ್‌ಗಳು, ಡೈಪರ್ಸ್, ಒಡೆದು ಚೂರಾದ ಮದ್ಯದ ಗಾಜಿನ ಬಾಟಲಿಗಳು, ಇಸ್ಪೀಟ್ ಕಾರ್ಡ್ಗಳು, ಪ್ಲಾಸ್ಟಿಕ್ ಬಾಟಲಿಗಳು, ಹಾಳಾದ ಹಾಸಿಗೆ, ದಿಂಬು.. ಮಾತ್ರವಲ್ಲದೆ ಅಪಾಯಕಾರಿ ಆಸ್ಪತ್ರೆ ತ್ಯಾಜ್ಯಗಳನ್ನು ಪ್ಲಾಸ್ಟಿಕ್ ಮೂಟೆಗಳಲ್ಲಿ ತುಂಬಿಸಿ ತಂದು ಅರಣ್ಯದೊಳಕ್ಕೆ ಎಸೆಯಲಾಗುತ್ತಿದೆ. ಬಹುತೇಕ ರಾತ್ರಿ ವೇಳೆಯೇ ಈ ಕೃತ್ಯ ನಡೆಸಲಾಗುತ್ತದೆ. ಈ ಭಾಗದಲ್ಲಿ ಹರಿಯುವ ತೊರೆಗಳಲ್ಲೂ ತ್ಯಾಜ್ಯಗಳು ಕಂಡುಬರುತ್ತಿರುವುದು ಆತಂಕಕಾರಿಯಾಗಿದೆ. ಕೊಡಗಿನಿಂದ ಕೇರಳವನ್ನು ಸಂಪರ್ಕಿಸುವ ರಸ್ತೆಗಳಲ್ಲಿ ಒಂದಾದ ವಿರಾಜಪೇಟೆ-ಮಾಕುಟ್ಟ ಮಾರ್ಗದಲ್ಲಿ ಈ ಸಮಸ್ಯೆ ಹೆಚ್ಚಾಗಿದೆ.
ಪಕ್ಕದ ರಾಜ್ಯದಿಂದ ಕೊಡಗಿಗೆ ಪ್ರವಾಸ ಬರುವವರು ಕೂಡ ಕನಿಷ್ಠ ಪರಿಸರ ಪ್ರಜ್ಞೆಯನ್ನೂ ತೋರಿಸುತ್ತಿಲ್ಲ. ಅರಣ್ಯ ಇರುವುದೇ ತ್ಯಾಜ್ಯ ಎಸೆಯುವುದಕ್ಕೆ ಎನ್ನುವಂತೆ ವರ್ತಿಸುತ್ತಿದ್ದು, ಅರಣ್ಯದೊಳಗಿನ ರಸ್ತೆ ಮತ್ತು ರಸ್ತೆ ಬದಿಯ ಚರಂಡಿಯಲ್ಲಿ ಉದ್ದಕ್ಕೂ ಅಲ್ಲಲ್ಲಿ ಕಸ ಎಸೆದಿರುವುದು ಕಂಡು ಬರುತ್ತಿದೆ. ಮನುಷ್ಯರು ಬಳಸಿದ ಬರಿ ಕೈಯಲ್ಲಿ ಮುಟ್ಟಲು ಸಾಧ್ಯವಾಗದ ತ್ಯಾಜ್ಯಗಳನ್ನು ಹೀಗೆ ಎಲ್ಲೆಂದರಲ್ಲಿ ಅರಣ್ಯದಂಚಿನ ರಸ್ತೆ ಬದಿಯಲ್ಲಿ ಎಸೆಯುವುದು ಎಷ್ಟು ಸರಿ ಎನ್ನುವುದು ಪರಿಸರ ಪ್ರಿಯರ ಪ್ರಶ್ನೆ.
ಮಾನವ ಬಳಸಿ ಬಿಸಾಡಿದ ಪದಾರ್ಥಗಳಿಂದ ಅಮೂಲ್ಯವಾದ ವನ್ಯಪ್ರಾಣಿಗಳ ಆರೋಗ್ಯ ಮತ್ತು ಜೀವಕ್ಕೆ ಹಾನಿ ಉಂಟಾಗುವ ಸಾಧ್ಯತೆ ಇರುತ್ತದೆ. ವನ್ಯ ಪ್ರಾಣಿಗಳಿಗೆ ಸೋಂಕು ತಗಲಿ ಹರಡಿದರೆ ಇದಕ್ಕೆ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ವನ್ಯಪ್ರಾಣಿಗಳು ನಾಶವಾದರೆ ಕಾಡುಗಳು ಉಳಿಯುವುದಿಲ್ಲ. ಕೊಡಗಿನ ಶ್ರೀಮಂತ ಪ್ರಾಕೃತಿಕ ಸೌಂದರ್ಯವೂ ಹಾಳಾಗುತ್ತದೆ. ವಿನಾಶದ ಅಂಚಿನಲ್ಲಿರುವ ಅಪರೂಪದ ವನ್ಯ ಜೀವಿಗಳ ಜೀವಕ್ಕೆ ಹಾನಿಯಾದರೆ ಹೊಣೆ ಯಾರು ಎನ್ನುವ ಪ್ರಶ್ನೆಯೂ ಹುಟ್ಟಿಕೊಂಡಿದೆ.
ಈ ಮಾರ್ಗದಲ್ಲಿ ಮಂಗಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತದೆ. ವನ್ಯ ಪ್ರಾಣಿಗಳಿಗೆ ಆಹಾರ ತಿನ್ನಿಸಬಾರದು ಎಂದು ನಾಮಫಲಕ ಅಳವಡಿಸಿದ್ದರೂ ಪ್ರವಾಸಿಗರು ತಾವು ತಂದಿರುವ ಆಹಾರ ಪದಾರ್ಥಗಳನ್ನು ಮಂಗಗಳಿಗೆ ಕೊಡುವುದು ಇಲ್ಲಿ ಸಾಮಾನ್ಯ. ಇದನ್ನೇ ರೂಢಿಸಿಕೊಂಡಿರುವ ಮಂಗಗಳು ಮನುಷ್ಯರು ಎಸೆದು ಹೋದ ಅಪಾಯಕಾರಿ ತ್ಯಾಜ್ಯಕ್ಕೂ ಬಾಯಿ ಹಾಕುತ್ತಿವೆ. ಇದರಿಂದ ಒಂದು ವೇಳೆ ಸೋಂಕು ಹರಡುವ ಸಾಧ್ಯತೆಯೂ ಇಲ್ಲದ್ದಿಲ್ಲ. ಮನುಷ್ಯರು ಎಸೆದ ತ್ಯಾಜ್ಯವನ್ನು ಮಂಗಗಳು ಎಳೆದಾಡುವ ವೀಡಿಯೋಗಳೂ ಅಲ್ಲಲ್ಲಿ ಹರಿದಾಡುತ್ತಿದೆ. ಇತ್ತೀಚೆಗೆ ಜಿಂಕೆಯೊAದು ಮೃತಪಟ್ಟಾಗ ಅದರ ಮರಣೋತ್ತರ ಪರೀಕ್ಷೆ ವೇಳೆ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ಕಂಡುಬAದಿತ್ತು.
ಅರಣ್ಯದೊಳಗೆ ಹೋಗುವ ರಸ್ತೆ ಬದಿಯಲ್ಲಿ ವಾಹನಗಳನ್ನು ನಿಲ್ಲಿಸಬಾರದು ಎನ್ನುವ ನಿಯಮ ಇದ್ದರೂ ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರು ತಲೆ ಕೆಡಿಸಿಕೊಳ್ಳುವುದಿಲ್ಲ. ವಾಹನಗಳನ್ನು ನಿಲ್ಲಿಸುವುದು ಮಾತ್ರವಲ್ಲದೆ ಆಹಾರ ತಯಾರಿಸುವುದು, ತಾವು ತಂದ ಆಹಾರ ಸೇವಿಸುವುದು, ಫೋಟೋಗ್ರಫಿ, ಮೂತ್ರ ವಿಸರ್ಜನೆ ಮತ್ತಿತರ ಚಟುವಟಕೆಗಳೂ ಸಾಮಾನ್ಯವಾಗಿದೆ. ಇಂತಹ ಕೃತ್ಯಗಳಿಂದ ಮನುಷ್ಯನಿಗೆ ಮಾತ್ರ ಅಪಾಯವಲ್ಲ, ವನ್ಯಜೀವಿಗಳಿಗೂ ತೊಂದರೆ ಎದುರಾಗುವ ಸಾಧ್ಯತೆ ಇರುತ್ತದೆ.
ಕೊಡಗಿನಲ್ಲಿ ವನ್ಯಜೀವಿಧಾಮ ಅರಣ್ಯಗಳ ಮೂಲಕ ಹಾದುಹೋಗುವ ರಸ್ತೆಗಳಲ್ಲಿ ಸಂಚರಿಸುವವರು ಅರಣ್ಯ ಇಲಾಖೆಗೆ ಹಣ ಕೊಟ್ಟು ಪ್ರಯಾಣಿಸಬೇಕು. ಅಂತಾರಾಜ್ಯ ವಾಹನಗಳಿಗೆ ಮಾತ್ರ ಇಲ್ಲಿ ಶುಲ್ಕ ವಿಧಿಸಲಾಗುವುದು ಎಂದು ಆರಂಭದಲ್ಲಿ ಅಧಿಕಾರಿಗಳು ಹೇಳಿದ್ದರು. ಆದರೆ ನಂತರದ ದಿನಗಳಲ್ಲಿ ಸ್ಥಳೀಯರ ವಾಹನಗಳಿಂದಲೂ ಹಣ ಪಡೆದುಕೊಳ್ಳಲಾಗುತ್ತಿದೆ. ಈ ಮೊತ್ತವನ್ನು ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆ ಉದ್ದೇಶಕ್ಕೆ ಬಳಸಿಕೊಳ್ಳಲಾಗುತ್ತಿದ್ದು, ಇದು ಪರಸರ ಉಳಿವಿಗೆ ಪ್ರಯಾಣಿಕರ ಚಿಕ್ಕ ಕೊಡುಗೆಯಾಗಲಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿಕೊಂಡಿದ್ದರು. ಜಿಲ್ಲೆಯ ಆನೆಚೌಕೂರು, ಮಾಲ್ದಾರೆ, ಕುಟ್ಟ, ನಾಗರಹೊಳೆ, ಬೇಗೂರು, ಕಾರ್ಮಾಡು, ಮಾಕುಟ್ಟ, ತಲಕಾವೇರಿ ವನ್ಯಧಾಮದ ಭಾಗಮಂಡಲ, ಕರಿಕೆ ಸೇರಿದಂತೆ ವನ್ಯಧಾಮ ಮೂಲಕ ಹಾದುಹೋಗುವ ಪ್ರಯಾಣಿಕರು ಅರಣ್ಯ ಇಲಾಖೆ ನಿಗದಿ ಮಾಡಿರುವ ಶುಲ್ಕ ಪಾವತಿಸಿ ಮುಂದಕ್ಕೆ ಪ್ರಯಾಣಿಸಬೇಕು. ಕೇರಳದ ವಾಹನಗಳಲ್ಲಿ ವೈದ್ಯಕೀಯ ತ್ಯಾಜ್ಯ, ಪ್ಲಾಸ್ಟಿಕ್ ವಸ್ತುಗಳು ಮತ್ತು ಇತರೆ ವಸ್ತುಗಳನ್ನು ಅರಣ್ಯ ಪ್ರದೇಶಗಳಲ್ಲಿ ಹಾಕಿ, ಇದನ್ನು ವನ್ಯಪ್ರಾಣಿಗಳು ಸೇವಿಸಿ ಸಾವನ್ನಪ್ಪಿರುವ ಘಟನೆಗಳು ವರದಿಯಾದ ಹಿನ್ನೆಲೆ ಇದಕ್ಕೆ ಕಡಿವಾಣ ಹಾಕುವ ಪ್ರಮುಖ ಉದ್ದೇಶದಿಂದ ಜಿಲ್ಲೆಯೊಳಗೆ ಬರುವ ಅಂತಾರಾಜ್ಯ ವಾಹನಗಳನ್ನು ತಪಾಸಣೆ ಮಾಡಿ ನಿರ್ವಹಣಾ ಶುಲ್ಕ ವಿಧಿಸಲಾಗುತ್ತಿದೆ ಎಂದು ಇಲಾಖೆ ಅಧಿಕಾರಿಗಳು ಹೇಳಿಕೊಂಡಿದ್ದರು.
ಅರಣ್ಯಪ್ರದೇಶದಲ್ಲಿ ಕಸ ಎಸೆಯುತ್ತಿರುವ ವಿದ್ಯಮಾನ ನಮ್ಮ ಗಮನಕ್ಕೆ ಬಂದಿದೆ. ಇಂಥವರಿಗೆ ಸಾಕಷ್ಟು ತಿಳುವಳಿಕೆ ನೀಡಲಾಗಿದೆ. ಇಲ್ಲಿ ಸಂಚರಿಸುವ ವಾಹನಗಳಿಂದ ಕೂರ್ಗ್ ಫೌಂಡೇಷನ್ ಹೆಸರಿನಲ್ಲಿ ಸಂಗ್ರಹಿಸುತ್ತಿರುವ ಹಣ ಬಳಸಿ ಈ ಭಾಗದಲ್ಲಿ ಸೌರಶಕ್ತಿ ಚಾಲಿತ ಸಿಸಿಟಿವಿ ಅಳವಡಿಸಲಾಗುವುದು. ನಮ್ಮ ಸಿಬ್ಬಂದಿ ಗಸ್ತು ಹೆಚ್ಚಿಸಲಾಗುವುದು. ಸದ್ಯದಲ್ಲೆ ಮಾಕುಟ್ಟದಲ್ಲಿ ಅಧಿಕಾರಿಗಳ ಸಭೆ ನಡೆಸಿ ಅಗತ್ಯ ಸೂಚನೆಗಳನ್ನು ನೀಡಲಾಗುವುದು. ಒಂದು ವೇಳೆ ಕಸ ಎಸೆದು ಸಿಕ್ಕಿಬಿದ್ದವರಿಗೆ ಲಭ್ಯವಿರುವ ಕಾನೂನುಗಳ ಅಡಿಯಲ್ಲಿ ಗರಿಷ್ಠ ಶಿಕ್ಷೆ ಕೊಡಿಸಲಾಗುವುದು. ಇಲ್ಲಿ ಕಸ ಎಸೆಯುವವರು ಕೂಡ ತಮ್ಮ ಜವಾಬ್ದಾರಿ ತಿಳಿದುಕೊಂಡು ವರ್ತಿಸಬೇಕು.
ಎನ್.ಎಚ್. ಜಗನ್ನಾಥ್, ಡಿಸಿಎಫ್, ವಿರಾಜಪೇಟೆ ಅರಣ್ಯ ವಿಭಾಗ