ತಲಕಾವೇರಿ ಕ್ಷೇತ್ರಕ್ಕೆ ಕೊಡವರ ಬೃಹತ್ ಮೆರವಣಿಗೆ

IMG-20221017-WA0143
Published on

ವಿಜಯವಾಣಿ ಸುದ್ದಿಜಾಲ ತಲಕಾವೇರಿ
ಭಾಗಮಂಡಲದ ಭಗಂಡೇಶ್ವರ ದೇವ ಸನ್ನಿಧಿಯಿಂದ ತಲಕಾವೇರಿ ಕ್ಷೇತ್ರದವರೆಗೂ ದೊಡ್ಡ ಸಂಖ್ಯೆಯಲ್ಲಿ ಕೊಡವರ ಪಾದಯಾತ್ರೆ ಮೂಲಕ ತೆರಳಿದರು. ಬಾರಿ ಪೋಕನ ಕಾವೇರಿಕ್ (ಕಾವೇರಿಗೆ ಹೋಗುವ ಬನ್ನಿ) ಎಂಬ ಸಂದೇಶ ವ್ಯಾಪಕವಾಗಿ ಹರಿದಾಡಿತ್ತು. ವಿವಿಧೆಡೆಯಿಂದ ಮಾಡಲಾಗಿದ್ದ ವಿಶೇಷ ಬಸ್ಸಿನಲ್ಲಿ, ಖಾಸಗಿ ವಾಹನಗಳಲ್ಲಿ ಭಕ್ತರು ಭಾಗಮಂಡಲಕ್ಕೆ ಆಗಮಿಸಿದರು. ಸಹಸ್ರಾರಾರು ಸಂಖ್ಯೆಯಲ್ಲಿದ್ದ ಕೊಡವರು ೮ ಕಿಲೋಮೀಟರ್ ಪಾದಯಾತ್ರೆಯಲ್ಲಿ ತೆರಳಿದರು.

ತಳಿಯ ತಕ್ಕಿ ಬೊಳಚ ಹಿಡಿದವರು ಮೆರವಣಿಗೆ ಮುಂಭಾಗದಲ್ಲಿ ಸಾಗಿದರು. ವಿವಿಧೆಡೆಯಿಂದ ಆಗಮಿಸಿದ ದುಡಿಕೊಟ್ಟ್ ಪಾಟ್ ತಂಡದ ವರು ಮೆರವಣಿಗೆಗೆ ವಿಶೇಷ ಮೆರಗು ನೀಡಿದರು. ಕೊಡವ- ಕೊಡವತಿಯರು ಸಾಂಪ್ರದಾಯಿಕ ಉಡುಗೆ- ತೊಡುಗೆಯಲ್ಲಿ ಗಮನ ಸೆಳೆದರು.

ತಿಂಗಕೊರ್ ಮೊಟ್ಟ್ ಕಾರ್ಯಕ್ರಮದಡಿ ಪ್ರತಿ ತಿಂಗಳು ೧೭ ರಂದು ತಲಕಾವೇರಿ- ಭಗಂಡೇಶ್ವರ ಕ್ಷೇತ್ರಕ್ಕೆ ಕೊಡವರು ಭೇಟಿ ನೀಡುತ್ತಿದ್ದಾರೆ. ಕಳೆದ ೨೧ ತಿಂಗಳಿನಿಂದ ಈ ಕಾರ್ಯಕ್ರಮದಡಿ ಹೆಚ್ಚಿನ ಸಂಖ್ಯೆಯಲ್ಲಿ ಕೊಡವರು ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾರೆ. ಬಾಳೆಲೆ, ಶ್ರೀಮಂಗಲ, ಹುದಿಕೇರಿ, ಕಾನೂರು, ಮೈತಾಡಿ, ಬಿ.ಶೆಟ್ಟಿಗೇರಿಯಿಂದ ಬಸ್ಸಿನ ವ್ಯವಸ್ಥೆ ಮಾಡಲಾಗಿತ್ತು.

ಮಡಿಕೇರಿ, ಪೊನ್ನಂಪೇಟೆ, ಅಮ್ಮತ್ತಿ ಕೊಡವ ಸಮಾಜದಿಂದಲ್ಲೂ ವಿಶೇಷ ಬಸ್ಸಿನ ವ್ಯವಸ್ಥೆ ಮಾಡಲಾಗಿತ್ತು. ಬೆಂಗಳೂರು ಕೊಡವ ಸಮಾಜ ದಿಂದ ೪, ಕೊಡವಾಮೆ ಸಂಘಟನೆಯಿಂದ ೧ ವಿಶೇಷ ಬಸ್ಸಿನ ವ್ಯವಸ್ಥೆ ಮಾಡಲಾಗಿತ್ತು. ಖಾಸಗಿ ವಾಹನಗಳಲ್ಲಿಯೂ ಬೆಂಗಳೂರು, ಮೈಸೂರಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಕೊಡವರು ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದರು.

ಅಖಿಲ ಕೊಡವ ಸಮಾಜ ಯೂತ್ ವಿಂಗ್ ಹಾಗೂ ಕೊಡವ ರೈಡರ್ರ್ಸ್‌ ಕ್ಲಬ್ ವತಿಯಿಂದ ೨ ವಿಶೇಷ ಬಸ್ಸಿನ ವ್ಯವಸ್ಥೆ ಮಾಡಲಾಗಿತ್ತು. ಅಮ್ಮ ಕೊಡವ ಸಮಾಜದಿಂದಲೂ ೧ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿತ್ತು.

೨೧ ತಿಂಗಳು ತಿಂಗಕೊರ್ ಮೊಟ್ಟ್ ಕಾರ್ಯಕ್ರಮದಡಿ ಕೊಡವ ಭಕ್ತರು ತಲಕಾವೇರಿ- ಭಗಂಡೇಶ್ವರ ಕ್ಷೇತ್ರಕ್ಕೆ ತೆರಳುತ್ತಿದ್ದೇವೆ. ಕೊಡವರು ಒಂದಾಗಿ ತೀರ್ಥೋದ್ಭವ ವೇಳೆ ಪಾದಯಾತ್ರೆ ಮೂಲಕ ತೆರಳಿದ್ದೇವೆಂದು ತಿಂಗಕೊರ್ ಮೊಟ್ಟ್ ಕಾರ್ಯಕ್ರಮದ ನೇತೃತ್ತ ಹೊತ್ತಿರುವ ಮಲ್ಲಪ್ಪನೆರ ವಿನು ಹೇಳಿದರು.

೪೦ ಕ್ಕೂ ಹೆಚ್ಚು ಸಂಘಟನೆಗಳು ಬಾರಿ ಪೋಕನ ಕಾವೇರಿಕ್ ಅಭಿಯಾನ ನಡೆಸಿದ್ದು, ಸಹಸ್ರಾರಾರು ಸಂಖ್ಯೆಯಲ್ಲಿ ಕೊಡವರು ಪಾದಯಾತ್ರೆ ಯಲ್ಲಿ ಪಾಲ್ಗೊಂಡಿದ್ದೇವೆ. ೨೦೧೭ ರಲ್ಲಿ ಭಾಗಮಂಡಲದಿಂದ ತಲಕಾವೇರಿ ಕ್ಷೇತ್ರಕ್ಕೆ ಪಾದಯಾತ್ರೆಯಲ್ಲಿ ತೆರಳುವ ಕಾರ್ಯಕ್ರಮ ಪ್ರಾರಂಭ ವಾಯಿತು. ಈ ವರ್ಷ ೫ನೇ ವರ್ಷದ ಪಾದಯಾತ್ರೆ ಎಂದು ಪಾದಯಾತ್ರೆ ಪ್ರಾರಂಭಿಸಲು ಕಾರಣಕರ್ತರಲ್ಲಿ ಒಬ್ಬರಾದ ಬೆಂಗಳೂರಿನ ಕೊಡವ ಸಮಾಜ ಯೂತ್ ಕೌನ್ಸಿಲ್ ಅಧ್ಯಕ್ಷ ಚೋಕಂಡ ಸೂರಜ್ ಸೋಮಯ್ಯ ವಿಜಯವಾಣಿಗೆ ಮಾಹಿತಿ ನೀಡಿದ್ದಾರೆ.

ವಾಹನ ಜಾಥಾ
ವಿವಿಧ ಕೊಡವ ಸಮಾಜಗಳ ನೇತೃತ್ವದಲ್ಲಿ ಭಾಗಮಂಡಲದಿಂದ ತಲಕಾವೇರಿ ಕ್ಷೇತ್ರದವರೆಗೆ ಮೆರವಣಿಗೆಯಲ್ಲಿ ಸಾಗಲು ಭಾಗಮಂಡಲಕ್ಕೆ ಕೊಡವರು ವಾಹನ ಜಾಥಾ ಮೂಲಕ ಆಗಮಿಸಿದರು. ಇರ್ಪು ಶ್ರೀ ರಾಮೇಶ್ವರ ದೇವಾಲಯದಲ್ಲಿ ಸೋಮವಾರ ಮುಂಜಾನೆ ಪೂಜೆ ಸಲ್ಲಿಸುವುದರ ಮೂಲಕ ವಾಹನ ಜಾಥಕ್ಕೆ ಚಾಲನೆ ನೀಡಲಾಯಿತು.

ಶ್ರೀಮಂಗಲ, ಹುದಿಕೇರಿ, ಪೊನ್ನಂಪೇಟೆ, ಗೋಣಿಕೊಪ್ಪ, ವಿರಾಜಪೇಟೆ, ಮೂರ್ನಾಡು, ಮಡಿಕೇರಿ, ಕುಶಾಲನಗರ, ನಾಪೋಕ್ಲು ಕೊಡವ ಸಮಾಜದ ಮೂಲಕ ವಾಹನ ಜಾಥಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net