

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಭಾರತ್ ಜೋಡೋ ಯಾತ್ರೆ ನಡೆಸುತ್ತಿರುವ ರಾಹುಲ್ ಗಾಂಧಿ ಮೂರು ದಿನದ ವಿಶ್ರಾಂತಿಗೆ ಕೊಡಗಿಗೆ ಆಗಮಿಸುತ್ತಿದ್ದಾರೆ.
ಆಯಧ ಪೂಜೆ ಹಾಗೂ ವಿಜಯದಶಮಿ ಹಿನ್ನೆಲೆಯಲ್ಲಿ ಭಾರತ್ ಜೋಡೋ ಯಾತ್ರೆಗೆ ಅ.೪ ಮತ್ತು ೫ ರಂದು ವಿರಾಮ ಘೋಷಿಸಲಾಗಿದೆ. ಅ.೩ ರಂದು ಮೈಸೂರಿನಲ್ಲಿ ಯಾತ್ರೆಯಲ್ಲಿ ಸೋನಿಯಾ ಗಾಂಧಿ ಪಾಲ್ಗೊಳ್ಳುತ್ತಿದ್ದಾರೆ. ಭಾನುವಾರದ ಪಾದಯಾತ್ರೆ ಪೂರ್ಣ ಗೊಂಡ ಬಳಿಕ ತಮ್ಮ ಪುತ್ರನೊಂದಿಗೆ ಕೊಡಗಿಗೆ ಆಗಮಿಸಲಿದ್ದಾರೆ.
ಮಡಿಕೇರಿ ಹೊರ ವಲಯದ ಮೇಕೇರಿ ಗ್ರಾಮದಲ್ಲಿರುವ ಮಾಜಿ ಸಚಿವ ಟಿ. ಜಾನ್‌ಗೆ ಸೇರಿದ ಕೂರ್ಗ್ ವೈಲ್ಡರ್ನೆಸ್ ರೆಸಾರ್ಟ್ ಅಂಡ್ ಸ್ಪಾದಲ್ಲಿ ಕಾಂಗ್ರೆಸ್ ವರಿಷ್ಠ ನಾಯಕರು ವಾಸ್ತವ್ಯ ಹೂಡಲಿದ್ದಾರೆ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯನ್ನು ಕೊಡಗಿನಲ್ಲಿ ಯಾರಿಗೂ ಭೇಟಿ ನೀಡಲು ಅವಕಾಶ ನೀಡುವುದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಕೊಡಗಿಗೆ ಆಗಮಿಸುವ ವೇಳೆ ವರಿಷ್ಠ ನಾಯಕರನ್ನು ಸ್ವಾಗತಿಸಲು ಕಾಂಗ್ರೆಸ್ಸಿನ ೬ ಹಿರಿಯ ಮುಖಂಡರಿಗೆ ಮಾತ್ರ ಅವಕಾಶ ನೀಡ ಲಾಗುತ್ತದೆ. ರೆಸಾರ್ಟ್‌ನಲ್ಲಿ ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಹಿರಿಯ ಮುಖಂಡರೊಬ್ಬರು ವಿಜಯವಾಣಿಗೆ ಮಾಹಿತಿ ನೀಡಿದ್ದಾರೆ.
ಮಡಿಕೇರಿಯಿಂದ ೫ ಕಿಲೋಮೀಟರ್ ದೂರದಲ್ಲಿರುವ ಮೇಕೇರಿ ಗ್ರಾಮದ ಗಿರಿಕಂದರಗಳ ಸೊಬಗಿನ ನಡುವೆ ಪ್ರತಿಷ್ಠಿತ ರೆಸಾರ್ಟ್ ಇದೆ. ಹಚ್ಚಹಸಿರಿನ ಸೊಬಗು ಹಾಗೂ ಐಷಾರಾಮಿ ವಿಶಾಲ ಕೋಣೆಗಳು ಇಲ್ಲಿನ ವಿಶೇಷತೆ. ಒಂದು ದಿನಕ್ಕೆ ೩೭,೧೭೦ ರೂಪಾಯಿ ವಿಧಿಸಲಾಗುತ್ತದೆ.
ಹೆಲಿಕಾಪ್ಟರ್ ನಲ್ಲಿ ಆಗಮನ
ಮೈಸೂರಿನಿಂದ ಹೆಲಿಕಾಪ್ಟರ್ ನಲ್ಲಿ ಮಡಿಕೇರಿ ಹೊರ ವಲಯದ ಗಾಲ್ಫ್ ಮೈದಾನದಲ್ಲಿರುವ ಹೆಲಿಪ್ಯಾಡ್‌ಗೆ ಆಗಮಿಸಲಿದ್ದಾರೆ. ಹವಾಮಾನ ವೈಪರೀತ್ಯ ಇದ್ದಲ್ಲಿ ಪರ್ಯಾಯ ವ್ಯವಸ್ಥೆ ಬಗ್ಗೆ ಚಿಂತಿಸಲಾಗುತ್ತದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ವಿಜಯವಾಣಿಗೆ ತಿಳಿಸಿದ್ದಾರೆ.
**