

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಕೊಡಗು ಜಿಲ್ಲೆಯಲ್ಲಿ ೨೦೧೮ ರಲ್ಲಿ ದೊಡ್ಡ ಮಟ್ಟದಲ್ಲಿ ಪ್ರಕೃತಿ ವಿಕೋಪ ಸಂಭವಿಸಿತ್ತು. ೨೦೧೯ ರಲ್ಲಿಯೂ ವಿವಿಧೆಡೆಯಲ್ಲಿ ಭೂಕುಸಿತ, ಪ್ರವಾಹದಿಂದ ಜನತೆ ಸಂಕಷ್ಟಕ್ಕೆ ಸಿಲುಕಿದ್ದರು. ೨೦೧೮ ರ ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಸರ್ಕಾರದಿಂದ ಮನೆ ಕಟ್ಟಲಾಗಿದೆ. ಆದರೆ, ೨೦೧೯ರ ಸಂತ್ರಸ್ತರ ವಸತಿ ವ್ಯವಸ್ಥೆ ಬಗ್ಗೆ ನಿರ್ಲಕ್ಷೃ ವಹಿಸಲಾಗಿದೆ.
೨೦೧೯ ರಲ್ಲಿ ಧಾರಾಕಾರವಾಗಿ ಸುರಿದ ಮಳೆಯಿಂದ ಜೀವನದಿ ಕಾವೇರಿ ಅಪಾಯಕಾರಿ ಮಟ್ಟದಲ್ಲಿ ಉಕ್ಕಿ ಹರಿದಿದ್ದರಿಂದ ನದಿ ದಡದಲ್ಲಿ ಮನೆಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದವರು ಸಂಕಷ್ಟಕ್ಕೆ ಸಿಲುಕಿದರು. ನೆಲ್ಯಹುದಿಕೇರಿ, ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನದಿ ಬದಿಯಲ್ಲಿ ಬದುಕು ಸಾಗಿಸುತ್ತಿದ್ದವರು ಬೀದಿಗೆ ಬೀಳುವಂತಾಯಿತು.
ಪ್ರಕೃತಿ ವಿಕೋಪ ಸಂದರ್ಭ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಕಲ್ಪಿಸಲಾಗಿತ್ತು. ಸ್ವಂತ ಜಾಗ ಹೊಂದಿರುವವರಿಗೆ ಮನೆ ನಿರ್ಮಾಣಕ್ಕೆ ೫ ಲಕ್ಷ ರೂಪಾಯಿ ಮಂಜೂರು ಮಾಡಲಾಗಿತ್ತು. ಹಂತ- ಹಂತವಾಗಿ ಮನೆ ಕಟ್ಟಲು ಹಣ ಬಿಡುಗಡೆ ಮಾಡಲಾಗುತ್ತದೆ. ವಿವಿಧ ಕಾರಣದಿಂದ ಬಹುತೇಕ ಸಂತ್ರಸ್ತರಿಗೆ ಮನೆ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ.
ಏತನ್ಮಧ್ಯೆ, ನಿವೇಶನ ರಹಿತ ಸಂತಸ್ತರಿಗೆ ಮನೆ ನಿವೇಶನ ನೀಡಲು ಅರೆಕಾಡಿನಲ್ಲಿ ಸರ್ಕಾರಿ ಜಾಗ ಗುರುತಿಸಲಾಗಿದೆ. ಬೆಟ್ಟ ಪ್ರದೇಶ ಸಮತಟ್ಟು ಮಾಡಿ ನಿವೇಶನ ನೀಡುವ ಬಗ್ಗೆಯೂ ಮುತುವರ್ಜಿ ವಹಿಸಿಲ್ಲ. ಇದರೊಂದಿಗೆ ಇಲ್ಲಿಗೆ ತೆರಳಲು ರಸ್ತೆ ಸಂಪರ್ಕ ಇಲ್ಲದರಿಂದ ಸಂತ್ತಸ್ತರಿಗೆ ನಿವೇಶನ ನೀಡಲು ಸಾಧ್ಯವಾಗುತ್ತಿಲ್ಲ.
ಜಿಲ್ಲಾಡಳಿತ ಬಿ.ಶೆಟ್ಟಿಗೇರಿ ಗ್ರಾಮದಲ್ಲಿ ಗುರುತಿಸಿದ್ದ ಜಾಗ ದೂರ ಎಂಬ ಕಾರಣಕ್ಕಾಗಿ ಸಂತ್ರಸ್ತರು ಅಲ್ಲಿಗೆ ತೆರಳಲು ಹಿಂದೇಟು ಹಾಕಿದರು. ಹತ್ತಿರದ ಜಾಗದಲ್ಲಿ ನಿವೇಶನ ಒದಗಿಸುವಂತೆ ಸ್ಥಳೀಯ ಮುಖಂಡರ ನೇತೃತ್ವದಲ್ಲಿ ಹೋರಾಟ ನಡೆದಿತ್ತು. ವಿವಿಧ ಸಂಘ- ಸಂಸ್ಥೆಗಳು, ದಾನಿಗಳು ಆರ್ಥಿಕ ನೆರವು ಒದಗಿಸುವುದರ ಮೂಲಕ ಸಂತ್ರಸ್ತರಿಗೆ ಮನೆ ಕಟ್ಟಿಕೊಟ್ಟಿದ್ದಾರೆ.
ಸಿದ್ದಾಪುರ, ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ೨೦೧೯ ರಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರ ಮನೆ ವಿಚಾರಕ್ಕೆ ಸಂಬಂಧಿಸಿ ದ್ದಂತೆ ಲೌಡ್ ಸ್ಪೀಕರ್‌ಗೆ ಅಭಿಪ್ರಾಯ ಸಂಗ್ರಹಿಸಲಾಗಿದೆ.
**
೨೦೧೯ ರಲ್ಲಿ ನೆರೆ ಸಂತ್ರಸ್ತರಾದವರಿಗೆ ಇದುವರೆಗೂ ಸರಿಯಾಗಿ ಪರಿಹಾರ ಸಿಕ್ಕಿಲ್ಲ. ಕೆಲವು ಸಂಘ- ಸಂಸ್ಥೆಗಳು ಹಲವರಿಗೆ ಪುನರ್ವಸತಿ ವ್ಯವಸ್ಥೆ ಕಲ್ಪಿಸಿದೆ. ಸರ್ಕಾರದಿಂದ ಪುನರ್ವಸತಿಗಾಗಿ ಜಾಗ ಗುರುತಿಸಿದ್ದು ಬಿಟ್ಟರೆ ಇದುವರೆಗೂ ಯಾವುದೇ ಪುನರ್ವಸತಿ ಕಾರ್ಯ ಆಗಿರುವುದಿಲ್ಲ, ಸಂತ್ರಸ್ತರ ಸಮಸ್ಯೆ ಪರಿಹಾರಕ್ಕೆ ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಎಂ.ಕೆ. ಅಶ್ರಫ್, ಪ್ರಮುಖರು, ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿ.
**
ನದಿ ದಡದ ನಿವಾಸಿಗಳು ಮನೆ ಕಳೆದುಕೊಂಡು ಗುಡಿಸಲಿನಲ್ಲಯೇ ದಿನ ದೂಡುವಂತಾಗಿದೆ. ಸಿದ್ದಾಪುರ ಭಾಗದಲ್ಲಿ ಸರ್ಕಾರಿ ಜಾಗ ಒತ್ತುವರಿಯಾಗಿದ್ದು, ಈ ಬಗ್ಗೆ ಕಂದಾಯ ಇಲಾಖೆಗೆ ದಾಖಲೆ ನೀಡಿದ್ದೆವು. ಆದರೆ, ಸಂತ್ರಸ್ತರಿಗೆ ನಿವೇಶನ ಕಲ್ಪಿಸುವಲ್ಲಿ ಸರ್ಕಾರ ಹಾಗೂ ಜಿಲ್ಲಾಡಳಿತ ವಿಫಲವಾಗಿದೆ. ಕೆ.ಕೆ. ರೆಜಿತ್‌ಕುಮಾರ್, ಸಂತ್ರಸ್ತರ ಹೋರಾಟ ಸಮಿತಿ ಸಂಚಾಲಕ, ಸಿದ್ದಾಪುರ.
**
ನೆಲ್ಯಹುದಿಕೇರಿ ಭಾಗದಲ್ಲಿ ೪೦೦ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿವೆ. ೨೦೦ಕ್ಕೂ ಅಧಿಕ ಮನೆಗಳು ನೆಲಸಮವಾಗಿವೆ. ೨೦ ಫಲಾನುಭವಿ ಗಳಿಗೆ ಮನೆ ನಿರ್ಮಾಣಕ್ಕೆ ೨ನೇ ಹಂತದ ಬಿಲ್ ಪಾವತಿಯಾಗಿಲ್ಲ. ಮನೆ ಕಳೆದುಕೊಂಡವರ ಪಟ್ಟಿಯಿಂದ ೫ ಫಲಾನುಭವಿಗಳ ಹೆಸರನ್ನೇ ಕೈ ಬಿಡಲಾಗಿದೆ. ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯವೇ ಇದಕ್ಕೆ ಕಾರಣ. ಸರ್ಕಾರ ಕೂಡಾ ಆಸಕ್ತಿ ತೋರುತ್ತಿಲ್ಲ. ಎ.ಕೆ. ಹಕೀಂ, ನೆಲ್ಯಹುದಿಕೇರಿ ಗ್ರಾಪಂ ಅಧ್ಯಕ್ಷ.
**
ಜಿಲ್ಲಾಡಳಿತದಿಂದ ಅರೆಕಾಡು ಗ್ರಾಮದಲ್ಲಿ ಜಾಗ ಗುರುತಿಸಲಾಗಿದೆ. ಅಲ್ಲಿಗೆ ತೆರಳಲು ಬೇಕಾದ ರಸ್ತೆಯೇ ಇಲ್ಲ. ಕಾಟಾಚಾರಕ್ಕೆ ವಸತಿ ನೀಡಿ ಕೈ ತೊಳೆದುಕೊಂಡ ಜಿಲ್ಲಾಡಳಿತ ನಿರಾಶ್ರಿತರನ್ನು ಕಡೆಗಣಿಸಿದೆ. ಇದರ ವಿರುದ್ಧ ಹಲವು ಹೋರಾಟ ನಡೆದಿದೆಯಾದರೂ ಪ್ರಯೋಜನ ವಾಗಿಲ್ಲ. ಕೂಡಲೇ ಸರ್ಕಾರ ಮಟ್ಟದಲ್ಲಿ ಚರ್ಚಿಸಿ ರಸ್ತೆ ನಿರ್ಮಾಣ ಮಾಡಿ, ನಿರಾಶ್ರಿತರ ನಿವೇಶನಕ್ಕೆ ತೆರಳಲು ಅವಕಾಶ ಕಲ್ಪಿಸಬೇಕು.
ಮುಹಮ್ಮದ್ ಮಣಿ, ಕಾರ್ಯದರ್ಶಿ, ಸಹಾಯ ಚಾರಿಟಬಲ್ ಟ್ರಸ್ಟ್, ನೆಲ್ಯಹುದಿಕೇರಿ.
**
ಗುಹ್ಯ ಮತ್ತು ಕರಡಿಗೋಡು ನಿರಾಶ್ರಿತರಿಗೆ ಟಿ.ಶೆಟ್ಟಿಗೇರಿಯಲ್ಲಿ ಜಾಗ ಗುರುತಿಸಲಾಗಿತ್ತು. ಅಲ್ಲಿ ಪ್ರಾಣಿಗಳಿಗೂ ಕೂಡ ವಾಸಕ್ಕೆ ಯೋಗ್ಯ ವಿರಲಿಲ್ಲ. ಅದಾದ ಬಳಿಕ ಬಸವನಹಳ್ಳಿಯಲ್ಲಿ ಜಾಗ ಒದಗಿಸುವ ಭರವಸೆ ನೀಡಿ ಕಾಲ ಕಳೆಯುತ್ತಿರುವ ಜಿಲ್ಲಾಡಳಿತ ಈಗ ಅದರ ಗೋಜಿ ಗೇ ಹೋಗಲಿಲ್ಲ. ಗ್ರಾಮಾಡಳಿತ ಮತ್ತು ಶಾಸಕರಿಗೆ ನಿರಾಶ್ರಿತರ ಕುರಿತು ಕಿಂಚಿತ್ತೂ ಕಾಳಜಿ ಇಲ್ಲ. ಎಂ.ಎ. ಯಮುನ, ಅಧ್ಯಕ್ಷೆ, ನಿರಾಶ್ರಿತರ ಹೋರಾಟ ಸಮಿತಿ. ಸಿದ್ದಾಪುರ.
**
ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ೧೧ ಎಕರೆ ಜಾಗ ನಿವೇಶನಕ್ಕಾಗಿ ಮೀಸಲಿಡಲು ಗ್ರಾಮ ಪಂಚಾಯಿತಿಯಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಡತ ಸರ್ಕಾರದ ಹಂತದಲ್ಲಿದೆ. ಸರ್ಕಾರದಿಂದ ಕಡತ ವಿಲೇವಾರಿಯಾಗಿ ಜಿಲ್ಲಾಧಿಕಾರಿ ಹೆಸರಿಗೆ ಬಂದ ಬಳಿಕ ನಿರಾಶ್ರಿತರಿಗೆ ಮನೆ ನಿವೇಶನ ಹಂಚಲಾಗುವುದು. ಮನಮೋಹನ್, ಪಿಡಿಒ, ಸಿದ್ದಾಪುರ ಗ್ರಾಮ ಪಂಚಾಯಿತಿ.
**
ನಮಗೆ ಸರ್ಕಾರದಿಂದ ಯಾವುದೇ ಪರಿಹಾರ ದೊರೆಯಲಿಲ್ಲ. ಪ್ಲಾಸ್ಟಿಕ್ ಹೊದಿಕೆಯಲ್ಲಿಯೇ ವಾಸವಾಗಿದ್ದೇವೆ. ಮನೆ ಬಾಡಿಗೆ ಕೊಡುತ್ತೇವೆ ಎಂದು ನೀಡಿದ್ದ ಭರವಸೆಯಂತೆ ಮನೆ ಬಾಡಿಗೆ ನೀಡುತ್ತಿಲ್ಲ. ಒಟ್ಟಿನಲ್ಲಿ ನಿರಾಶ್ರಿರ ಬದುಕು ಬೀದಿ ಪಾಲಾಗಿದೆ. ಪ್ರವೀಣ್ ಪುಟ್ಟಾಣಿ, ನಿರಾಶ್ರಿತರು, ಗುಹ್ಯ.
**
ದಾಖಲೆಗಳಿಲ್ಲದ ಮನೆಗಳಿಗೆ ಪರಿಹಾರ ನೀಡುವುದಿರಲಿ, ದಾಖಲೆ ಇರುವ ಜಾಗದಲ್ಲಿದ್ದ ಮನೆಗಳಿಗೂ ಪರಿಹಾರ ಒದಗಿಸಲಿಲ್ಲ. ಸಿದ್ದಾಪುರ ದಲ್ಲಿ ಕೆಲವರು ನಿರಾಶ್ರಿತರ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ. ನಿರಾಶ್ರಿತರ ಪರ ಪ್ರತಿಭಟಿಸುವವರನ್ನೂ ಬೆದರಿಸುವ ಕೆಲಸಗಳೂ ನಡೆದಿದೆ. ಸರ್ಕಾರ ಹಾಗೂ ಜನಪ್ರತಿನಿಧಿಗಳಿಗೆ ನಿರಾಶ್ರಿತರ ಸಮಸ್ಯೆ ಬಗೆಹರಿಸುವ ಆಸಕ್ತಿ ಇಲ್ಲ. ಎ.ಎಸ್. ಮುಸ್ತಫ, ಸಾಮಾಜಿಕ ಕಾರ್ಯಕರ್ತ. ಸಿದ್ದಾಪುರ.