

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಕೊಡಗಿನ ಕೆಲವು ಮುಖ್ಯರಸ್ತೆಗಳನ್ನು ಹೊರತು ಪಡಿಸಿದ್ದಂತೆ ಬಹುತೇಕ ರಸ್ತೆಗಳು ಗುಂಡಿಬಿದ್ದಿದೆ. ಹೊಂಡಮಯ ರಸ್ತೆಯಲ್ಲಿ ಸಂಚರಿಸಲು ಸಾಧ್ಯವಾಗದೇ ಸವಾರರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ರಸ್ತೆ ವಿಚಾರಕ್ಕೆ ಸಂಬಂಧಿಸಿದ್ದಂತೆ ಮಾಧ್ಯಮ- ಸಾಮಾಜಿಕ ಜಾಲತಾಣಗಳಲ್ಲಿ ಗಂಭೀರ ಚರ್ಚೆ ಪ್ರಾರಂಭವಾಗಿದೆ.
ಧಾರಾಕಾರವಾಗಿ ಸುರಿಯುವ ಮಳೆ, ಕಳಪೆ ಗುಣಮಟ್ಟದ ಕಾಮಗಾರಿ ಹಾಗೂ ನಿರ್ವಹಣೆ ಬಗ್ಗೆ ಆಸಕ್ತಿ ವಹಿಸದರಿಂದ ಬಹುತೇಕ ರಸ್ತೆಗಳು ದುಸ್ಥಿತಿಗೆ ತಲುಪಿದೆ. ಕಿಲೋಮೀಟರ್ ಹಾಗೂ ವಾಹನದ ವೇಗದ ಆಧಾರದಲ್ಲಿ ನಿಗದಿತ ಸ್ಥಳಕ್ಕೆ ನಿಗದಿತ ಸಮಯದಲ್ಲಿ ತಲುಪಲು ಸಾಧ್ಯ ವಾಗುತ್ತಿಲ್ಲ.
ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ರಸ್ತೆ ದುಸ್ಥಿತಿ ರಾಜಕೀಯ ಪರ- ವಿರುದ್ಧದ ಚರ್ಚೆಗೂ ವೇದಿಕೆಯಾಗಿದೆ. ತಕ್ಷಣ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳದಿದ್ದಲ್ಲಿ ಪ್ರತಿಭಟನೆ ಕೈಗೆತ್ತಿಕೊಳ್ಳುವ ಎಚ್ಚರಿಕೆಯ ಸಂದೇಶಗಳು ಮಾಧ್ಯಮದ ಮೂಲಕ ನೀಡಲಾಗುತ್ತಿದೆ. ಚುನಾವಣೆ ಹಿನ್ನೆಲೆಯಲ್ಲಿ ರಸ್ತೆ ವಿಚಾರದ ಚರ್ಚೆಗೆ ಮಹತ್ವ ಬಂದಿದೆ.
ರಸ್ತೆ- ಸೇತುವೆ, ಕುಡಿಯುವ ನೀರು, ವಿದ್ಯುತ್… ಹೀಗೆ ಕೊಡಗಿನ ಜನ ಕನಿಷ್ಠ ಬೇಡಿಕೆ ಜನಪ್ರತಿನಿಧಿಗಳ ಮುಂದಿಡುತ್ತಾರೆ. ಕೊಡಗಿನಲ್ಲಿ ವಾಹನಗಳ ಸಂಖ್ಯೆ ಹೆಚ್ಚಿದೆ. ಮಾರುಕಟ್ಟೆಯಲ್ಲಿರುವ ಎಲ್ಲಾ ವಾಹನಗಳು ಕೊಡಗಿನ ಜನರ ಬಳಿ ಇದೆ. ದುಸ್ಥಿತಿಯಲ್ಲಿರುವ ರಸ್ತೆಯಲ್ಲಿ ವಾಹನ ಹಾನಿಗೀಡಾಗುತ್ತಿವೆ. ಲಕ್ಷಾಂತರ ರೂಪಾಯಿ ವೆಚ್ಚದ ಕಾರುಗಳನ್ನು ಕೆಟ್ಟ ರಸ್ತೆಯಲ್ಲಿ ಓಡಿಸಲು ಸಾಧ್ಯವಾಗುತ್ತಿಲ್ಲ ಎಂದು ಪರಿತಪಿಸು ತ್ತಿದ್ದಾರೆ.
ರಸ್ತೆ ಕಾಮಗಾರಿ ಮಳೆಯಿಂದ ಕೈಗೆತ್ತಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಜನಪ್ರತಿನಿಧಿಗಳು ಹಾಗೂ ಅವರ ಬೆಂಬಲಿಗರು ಹೇಳುತ್ತಿದ್ದಾರೆ. ಮಳೆ ಸಂಪೂರ್ಣ ನಿಂತ ತಕ್ಷಣ ಕಾಮಗಾರಿ ಪ್ರಾರಂಭಿಸುವಾಗುವ ಭರವಸೆ ನೀಡುತ್ತಿದ್ದಾರೆ. ಏತನ್ಮಧ್ಯೆ, ಕೆಲವು ಕಡೆಗಳಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿರುವುದು ವಿಶೇಷ. ಕೊಡಗಿನ ರಸ್ತೆ ದುಸ್ಥಿತಿಗೆ ಸಂಬಂಧಿಸಿದ್ದಂತೆ ಲೌಡ್ ಸ್ಪೀಕರ್‌ಗೆ ಅಭಿಪ್ರಾಯ ಸಂಗ್ರಹಿಸಲಾಗಿದೆ.
**
ರಸ್ತೆಯಲ್ಲಿ ತೇವಾಂಶ ಹೆಚ್ಚಿರುವುದರಿಂದ ತೊಂದರೆಯಾಗುತ್ತಿದೆ. ವಿರಾಜಪೇಟೆ ಕ್ಷೇತ್ರಕ್ಕೆ ೧೦೦ ಕೋಟಿ ರೂ. ಅನುದಾನವಿದ್ದು, ಎಲ್ಲ ರಸ್ತೆ ಅಭಿವೃದ್ಧಿ ಕಾಣಲಿದೆ. ಮಿಕ್ಸರ್ ಪ್ಲಾಂಟ್ ಪ್ರಾರಂಭ ಮಾಡಿಲ್ಲ. ಮಳೆಯಿಂದಾಗಿ ಮಿಕ್ಸರ್ ಖರೀದಿ ಮಾಡುತ್ತಾರೋ ಇಲ್ಲವೋ ಎಂಬ ಭಯವಿದೆ. ಪೊನ್ನಂಪೇಟೆ- ಕಾನೂರು ರಸ್ತೆ ಟೆಂಡರ್ ಪಡೆದು ೩ ವರ್ಷ ಕಳೆದರೂ ಕಾಮಗಾರಿ ಆರಂಭಿಸಿಲ್ಲ. ಗುತ್ತಿಗೆ ಹಿಂಪಡೆಯಲು ಗುತ್ತಿಗೆದಾರನ ಕಡೆಯವರೇ ಅಧಿಕಾರಿಗಳ ಜತೆ ವಾದ ಮಾಡಿ ರದ್ದತಿಗೂ ಅವಕಾಶ ಮಾಡಿಕೊಡುತ್ತಿಲ್ಲ. ಎಲ್ಲ ರಸ್ತೆಗಳು ಅಭಿವೃದ್ದಿ ಕಾಣಲಿದೆ. ಕೆ.ಜಿ. ಬೋಪಯ್ಯ, ಶಾಸಕರು, ವಿರಾಜಪೇಟೆ ಕ್ಷೇತ್ರ.
**
ಅಮ್ಮತ್ತಿ- ಗೋಣಿಕೊಪ್ಪ ರಸ್ತೆ ಮಧ್ಯ ಭಾಗದಲ್ಲಿ ರಸ್ತೆ ಕಾಮಗಾರಿ ಹಾಗೇ ಉಳಿದಿದೆ. ಸೇತುವೆ ಕೂಡ ಅಗಲೀಕರಣವಾಗಬೇಕಿದೆ. ನಿತ್ಯ ೮ ಶಾಲಾ ಬಸ್ ಪ್ರಯಾಣಿಸುತ್ತದೆ. ಕಷ್ಟದ ದಾರಿ. ಒಂಟಿಯಂಗಡಿ ಡಾಂಬರೀಕರಣ ಕಳಪೆಯಿಂದ ಒಂದು ತಿಂಗಳಲ್ಲೇ ಗುಂಡಿ ಬಿದ್ದಿದೆ. ಅಮ್ಮತ್ತಿ- ಸಿದ್ದಾಪುರ ರಸ್ತೆ ಕಾಮಗಾರಿ ಆರಂಭಿಸಿರುವುದು ಪ್ರಯೋಜನಕ್ಕೆ ಬರಲಿ. ಮುಕ್ಕಾಟೀರ ಬೋಪಣ್ಣ, ಕಾಫಿ ಬೆಳೆಗಾರ, ಅಮ್ಮತ್ತಿ.
**
ಗುಂಡಿ ಬಿದ್ದ ರಸ್ತೆಯಿಂದಾಗಿ ವಾಹನ ಸಂಚಾರ ನಿತ್ಯ ಸಮಸ್ಯೆಯಾಗಿದೆ. ಅಪಘಾತಗಳ ಕೂಡ ಹೆಚ್ಚಾಗುವ ಸಾಧ್ಯತೆ ಹೆಚ್ಚು. ಚುನಾವಣೆ ಸದ್ಯದಲ್ಲಿಯೇ ಬರುವುದರಿಂದ ರಸ್ತೆ ಅಭಿವೃದ್ಧಿ ಕಾಣುವ ನಿರೀಕ್ಷೆ ಇದೆ. ಶಾಸಕರು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಿದೆ. ಶಾಜಿ ಅಚ್ಚುತ್ತನ್, ಮುಖಂಡ, ಅರ‌್ವತೋಕ್ಲು.
**
ಕೊಡಗಿನ ರಸ್ತೆಗಳು ಗುಂಡಿ ಬಿದ್ದು ವಾಹನ ಸವಾರರಿಗೆ ಸವಾಲಾಗಿ ಪರಿಣಮಿಸಿದೆ. ಗುಂಡಿ ಬಿದ್ದ ರಸ್ತೆಯಲ್ಲಿ ತಿರುಗಾಡುವ ಸಂದರ್ಭ ಸರ್ಕಾರ ಹಾಗೂ ಶಾಸಕರಿಗೆ ಜನ ಶಾಪ ಹಾಕುತ್ತಿದ್ದಾರೆ. ಮೂಲಭೂತ ಸೌಲಭ್ಯ ಒದಗಿಸುವು ಸರ್ಕಾರ ಹಾಗೂ ಶಾಸಕರ ಆದ್ಯ ಕರ್ತವ್ಯ. ಶಾಸಕರನ್ನು ಬದಲಾವಣೆ ಮಾಡುವುದೇ ಇದಕ್ಕಿರುವ ಪರಿಹಾರ. ಬಿ.ಎಸ್. ಅನಂತ್‌ಕುಮಾರ್, ಉಪಾಧ್ಯಕ್ಷರು, ಕೊಡಗು ಜಿಲ್ಲಾ ಕಾಂಗ್ರೆಸ್.
**
ಸೋಮವಾರಪೇಟೆ- ತೋಳೂರುಶೆಟ್ಟಳ್ಳಿ- ಕೂತಿ ರಸ್ತೆ ಅಗಲೀಕರಣಕ್ಕೆ ಬೇಡಿಕೆಯಿಟ್ಟು ದಶಕಗಳೇ ಕಳೆದಿವೆ. ರಾಜ್ಯ ಹೆದ್ದಾರಿಯಾಗಿದೆ. ವಾಹನ ಸಂಚಾರಕ್ಕೆ ಸಮಸ್ಯೆ ಆಗಿದೆ. ಆದರಲ್ಲೂ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ದುಸ್ತರ. ಇನ್ನು ಹೋರಾಟದ ಮೂಲಕ ಬೇಡಿಕೆ ಈಡೇರಿಸಿ ಕೊಳ್ಳಬೇಕಾದ ಅನಿವಾರ್ಯತೆ ಒದಗಿದೆ. ಕೆ.ಎಂ. ದಿನೇಶ್, ಕೃಷಿಕರು, ಕೂತಿ.
**
ಕಾಗಡೀಕಟ್ಟೆ ಹಾರಳ್ಳಿ ರಸ್ತೆ ಗುಂಡಿಮಯವಾಗಿದೆ. ಗ್ರಾಮಕ್ಕೊಂದು ರಸ್ತೆ ಇಲ್ಲದಿದ್ದರೆ, ಬದುಕು ಸಾಗಿಸುವುದು ಹೇಗೆ. ಮಳೆಗಾಲದಲ್ಲಿ ಆಟೋಗಳು ಬರುವುದಿಲ್ಲ. ವಿದ್ಯಾರ್ಥಿಗಳು ಈ ರಸ್ತೆಯಲ್ಲಿ ನಡೆದಾಡಲು ಭಯ ಪಡುತ್ತಾರೆ. ಜನ ವಸತಿಯಿರುವ ಗ್ರಾಮಗಳಿಗೆ ರಸ್ತೆ ಮಾಡದಿರುವುದು ದುರಂತವೇ ಸರಿ. ನಾಗಮ್ಮ, ಕಾರ್ಮಿಕರು, ಕಾಗಡೀಕಟ್ಟೆ.
**
ಮಳೆ ನಿಲ್ಲಬೇಕು ರಸ್ತೆ ಕಾಮಗಾರಿ ಪ್ರಾರಂಭಿಸಲು ಎಂದು ಶಾಸಕರು ಹೇಳುತ್ತಿದ್ದಾರೆ. ಶಾಸಕರು ಆಯ್ಕೆಯಾದ್ದಲ್ಲಿಂದ ಇಲ್ಲಿಯವರೆಗೂ ಮಳೆ ಹೊಡೆಯುತ್ತಾ ಇದೆಯಾ. ಅರಪಟ್ಟು- ಕರಡ- ಪೊದವಾಡ ಸಂಪರ್ಕ ರಸ್ತೆಯನ್ನೊಮ್ಮೆ ನೋಡಬೇಕು. ರಸ್ತೆ ಕಾಮಗಾರಿ ಆಗದಿರುವುದನ್ನು ಸಮರ್ಥನೆ ಮಾಡುವವರು ಒಮ್ಮೆ ಕಡಂಗ- ಚೈಯ್ಯಂಡಾಣೆ ರಸ್ತೆ ನೋಡಬೇಕು. ನೆರಪಂಡ ಪ್ರತೀಕ್ ಪೊನ್ನಣ್ಣ, ಸಾಮಾಜಿಕ ಕಾರ್ಯಕರ್ತ, ಅರಪಟ್ಟು.