

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಕೊಡಗು ಜಿಲ್ಲೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಅಗತ್ಯ ಸಹಕಾರ ನೀಡುವಂತೆ ಕೋರಿ ಸಂಸದ ಪ್ರತಾಪ್ ಸಿಂಹ ಅವರಿಗೆ ಕೊಡಗು ರಕ್ಷಣಾ ವೇದಿಕೆ ನಿಯೋಗ ಮನವಿ ಸಲ್ಲಿಸಿದೆ.
ಕೊರವೇ ಅಧ್ಯಕ್ಷ ಅಚ್ಚಂಡಿರ ಪವನ್ ಪೆಮ್ಮಯ್ಯ ನೇತೃತ್ವದಲ್ಲಿ ಬುಧವಾರ ಮೈಸೂರಿನಲ್ಲಿ ಸಂಸದರನ್ನು ಭೇಟಿಯಾದ ನಿಯೋಗ ಹಲವು ಅಭಿವೃದ್ಧಿ ಕಾರ್ಯ ಕುರಿತು ಚರ್ಚಿಸಿತು.
ಕೊಡಗು ಮತ್ತು ಮೈಸೂರು ಕ್ಷೇತ್ರದ ಸಂಸದರಾಗಿರುವ ತಮ್ಮಿಂದ ಕೊಡಗಿನ ಜನ ಅನೇಕ ಅಭಿವೃದ್ಧಿ ಕಾರ್ಯ ಬಯಸುತ್ತಿದ್ದಾರೆ. ಮೈಸೂರು ಕ್ಷೇತ್ರ ತಮ್ಮ ನೇತೃತ್ವದಲ್ಲಿ ಅಭಿವೃದ್ಧಿ ಹೊಂದುತ್ತಿರುವುದು ಶ್ಲಾಘನೀಯ. ಪ್ರಮುಖವಾಗಿ ದಶಪಥ ರಸ್ತೆ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ ಮತ್ತು ಪ್ರವಾಸೋದ್ಯಮಕ್ಕೆ ಪೂರಕವಾದ ಯೋಜನೆಗಳ ಬಗ್ಗೆ ಆಸಕ್ತಿ ತೋರುತ್ತಿದ್ದೀರಿ. ಇದೇ ಮಾದರಿಯಲ್ಲಿ ಕೊಡಗು ಜಿಲ್ಲೆಯ ಅಭಿವೃದ್ಧಿಗೂ ಕೈಜೋಡಿಸಬೇಕೆಂದು ಪವನ್ ಪೆಮ್ಮಯ್ಯ ಮನವಿ ಮಾಡಿದರು.
ಕೊಡಗಿನ ಜನರ ಹಲವು ವರ್ಷಗಳ ಬೇಡಿಕೆಯಾದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಆದ್ಯತೆ ನೀಡಬೇಕು. ಹುಲಿ ಮತ್ತು ಕಾಡಾನೆ ದಾಳಿ ಮಿತಿ ಮೀರಿದ್ದು, ಕೇಂದ್ರ ಸರ್ಕಾರದ ಬಳಿ ವ್ಯವಹರಿಸಿ ಶಾಶ್ವತ ಪರಿಹಾರ ಘೋಷಿಸಬೇಕು. ಕೊಡಗಿನ ಎಲ್ಲಾ ರಸ್ತೆಗಳು ಹದಗೆಟ್ಟಿದ್ದು, ಸರ್ವಋತು ರಸ್ತೆ ನಿರ್ಮಾಣಕ್ಕೆ ಯೋಜನೆ ರೂಪಿಸಬೇಕು.
ಕೊಡಗಿನ ಪ್ರವಾಸೋದ್ಯಮ ಕ್ಷೇತ್ರ ಯುವ ಸಮೂಹಕ್ಕೆ ಉದ್ಯೋಗ ಸೃಷ್ಟಿಸುತ್ತಿದೆ. ಆದರೆ ಜಿಲ್ಲೆಯ ಪ್ರವಾಸಿತಾಣಗಳು ಯಾವುದೇ ಅಭಿವೃದ್ಧಿ ಕಾಣುತ್ತಿಲ್ಲ. ಪ್ರಚಾರದಲ್ಲಷ್ಟೇ ಪ್ರವಾಸಿ ತಾಣಗಳನ್ನು ಕೊಂಡಾಡಲಾಗುತ್ತಿದೆ. ಜಿಲ್ಲೆಗೆ ಬರುವ ಪ್ರವಾಸಿಗರಿಗೆ ವಾಹನ ನಿಲುಗಡೆ ವ್ಯವಸ್ಥೆ ಸೇರಿ ದಂತೆ ಮೂಲಭೂತ ಸೌಲಭ್ಯ ಕಲ್ಪಿಸಿಲ್ಲ. ಆದ್ದರಿಂದ ಹೈಟೆಕ್ ಮಾದರಿಯಲ್ಲಿ ಮೂಲಭೂತ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಲಾಯಿತು.
ಕೊಡಗಿನ ಮೂಲಕ ಹಾದು ಹೋಗುವ ಹೆದ್ದಾರಿಗಳಲ್ಲಿ ಅಪಘಾತಗಳು ಹೆಚ್ಚಾಗುತ್ತಿದ್ದು, ರಸ್ತೆ ಬದಿಯ ಕಾಡು ಕಡಿದು ನಿರ್ವಹಣೆ ಮಾಡಲು ಸಂಬಂಧಪಟ್ಟ ಇಲಾಖೆಗೆ ಸೂಕ್ತ ನಿರ್ದೇಶನ ನೀಡಬೇಕು. ಮಡಿಕೇರಿ ಮತ್ತು ಕುಶಾಲನಗರದಲ್ಲಿ ಕಾರ್ಯನಿರ್ವಸುತ್ತಿದ್ದ ರೈಲ್ವೆ ಟಿಕೆಟ್ ಸೆಂಟರ್ ಅನ್ನು ೨ ವರ್ಷಗಳಿಂದ ಮುಚ್ಚಲಾಗಿದೆ. ಇದರಿಂದ ಜಿಲ್ಲೆಯ ಜನ ಹಾಗೂ ಹೊರ ಭಾಗದ ಕಾರ್ಮಿಕ ವರ್ಗಕ್ಕೆ ಕಷ್ಟವಾಗಿದೆ. ರೈಲು ಮಾರ್ಗವಿಲ್ಲದ ಕೊಡಗಿಗೆ ಟಿಕೆಟ್ ಸೆಂಟರ್ ಕೂಡ ಇಲ್ಲದಾಗಿದ್ದು, ಈ ಬಗ್ಗೆ ತಾವು ಗಮನ ಹರಿಸಬೇಕೆಂದರು.
ಅತಿವೃಷ್ಟಿಯಿಂದಾಗಿ ಜಿಲ್ಲೆಯ ಬೆಳೆಗಾರರು ಅಪಾರ ನಷ್ಟ ಅನುಭವಿಸಿದ್ದಾರೆ. ನಷ್ಟದ ಕುರಿತು ಚರ್ಚಿಸಲು ಮತ್ತು ವನ್ಯಜೀಗಳ ದಾಳಿ ಬಗ್ಗೆ ಅಭಿಪ್ರಾಯ ಸಂಗ್ರಹಿಸಲು ತಮ್ಮ ಅಧ್ಯಕ್ಷತೆಯಲ್ಲಿ ಕೊಡಗಿನಲ್ಲಿ ಬೆಳೆಗಾರರ ಸಭೆ ನಡೆಸಬೇಕೆಂದು ಸಂಸದರಲ್ಲಿ ಮನ ಮಾಡಿದರು.
ಭಾಗಮಂಡಲದ ಮೇಲ್ಸೇತುವೆ ಕಾಮಗಾರಿ, ಚೆಂಬು ಪಂಚಾಯಿತಿ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯಿಂದ ಗ್ರಾಮಸ್ಥರಿಗೆ ಆಗುತ್ತಿರುವ ತೊಂದರೆ, ಹಾರಂಗಿ ಸೇತುವೆ ಎತ್ತರ ಹೆಚ್ಚಿಸುವುದು ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಚರ್ಚಿಸಿದ್ದು, ಸಂಸದರು ಸೂಕ್ತ ಸ್ಪಂದನೆ ನೀಡಿ ದ್ದಾರೆಂದು ಪವನ್ ಪೆಮ್ಮಯ್ಯ ತಿಳಿಸಿದರು.
ನಿಯೋಗದಲ್ಲಿ ಉದ್ಯಮಿಗಳಾದ ಪಂದ್ಯಂಡ ಅನಿಲ್ ಕಾರ್ಯಪ್ಪ, ಜಮ್ಮಡ ಗಣೇಶ್ ಅಯ್ಯಣ್ಣ, ಕಾಯಪಂಡ ವಿಷ್ಣು ನಾಚಪ್ಪ ಮತ್ತಿತರರು ಇದ್ದರು.