ಮಳೆಗೆ ಕಂಗಾಲದ ಕಾಫಿ ಬೆಳೆಗಾರರು

25mdkj1 - Copy
Published on

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ

ಅನಿರೀಕ್ಷಿತವಾಗಿ ಜನವರಿ ಕೊನೆ ವಾರದಲ್ಲಿ ಅಬ್ಬರಿಸಿದ ಮಳೆಯಿಂದ ಕಾಫಿ ಬೆಳೆಗಾರರು ಕಂಗಾಲಾಗಿದ್ದಾರೆ. ರೋಬಸ್ಟಾ, ಅರೇಬಿಕಾ ಕಾಫಿ ಬೆಳೆಗಾರರು ನಷ್ಟಕ್ಕೆ ತುತ್ತಾಗಿದ್ದಾರೆ. ಹಾಲಿ ವರ್ಷದ ಫಸಲು ಹಾಗೂ ಮುಂದಿನ ವರ್ಷದ ಫಸಲಿನ ಮೇಲೂ ಮಂಗಳವಾರ ಸುರಿದ ಮಳೆ ಹಾನಿವುಂಟು ಮಾಡಿದೆ.

ಕೊಡಗಿನ ಬಹುತೇಕ ಕಡೆಗಳಲ್ಲಿ ಮಂಗಳವಾರ ಧಾರಾಕಾರವಾಗಿ ಮಳೆ ಸುರಿದಿದೆ. ಏಕಾಏಕೀ ಸುರಿದ ಮಳೆಯಿಂದ ಕಣದಲ್ಲಿ ಒಣಗಲು ಹಾಕಿದ್ದ ಕಾಫಿ ಫಸಲು ನೀರಿನಲ್ಲಿ ಕೊಚ್ಚಿ ಹೋಗಿದೆ. ಮಳೆ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಕಾಫಿಯನ್ನು ಸುರಕ್ಷಿತವಾಗಿ ತಡೆಯಲು ಬಹುತೇಕ ಬೆಳೆಗಾರರಿಗೆ ಸಾಧ್ಯವಾಗಲಿಲ್ಲ.

ಮಂಗಳವಾರ ಸಂಜೆ ಮಳೆ ಸುರಿಯುವ ಸೂಚನೆ ಹವಾಮಾನ ವರದಿಯಲ್ಲಿತ್ತು. ಹವಾಮಾನ ವರದಿ ಮೇಲೆ ವಿಶ್ವಾಸ ಇರುವ ಬೆಳೆಗಾರರು ಕಣದಲ್ಲಿ ಒಣಗಲು ಹಾಕಿದ್ದ ಕಾಫಿ ಫಸಲು ಸುರಕ್ಷಿತವಾಗಿ ಕಾಪಾಡಲು ಅಗತ್ಯ ಕ್ರಮ ತೆಗೆದುಕೊಂಡಿದ್ದರು. ಆದರೆ, ಹವಾಮಾನ ವರದಿ ಬಗ್ಗೆ ಮಾಹಿತಿ ಇಲ್ಲದವರು ಹಾಗೂ ನಂಬಿಕೆ ಇಲ್ಲದವರು ಮಳೆ ಮುನ್ಸೂಚನೆ ನಿರ್ಲಕ್ಷಿಸಿದ್ದರು.

ಫೆಬ್ರವರಿ ೧೫ ರ ಬಳಿಕ ಮಳೆ ಸುರಿದ್ದಲ್ಲಿ ಬೆಳೆಗಾರರಿಗೆ ಬಂಪರ್ ಫಸಲು ಸಿಗಲಿದೆ. ಆದರೆ, ಈ ವರ್ಷ ಜನವರಿ ತಿಂಗಳಲ್ಲಿ ಬಹುತೇಕ ಕಡೆಗಳಲ್ಲಿ ಮೊದಲ ಮಳೆಯಾಗಿದೆ. ಇನ್ನೂ ಕೂಡ ಹೂ ಅರಳಲು ಸಿದ್ಧವಾಗಿಲ್ಲದರಿಂದ ಅಕಾಲಿಕ ಮಳೆ ಬೆಳೆಗಾರರಿಗೆ ಅಪಾರ ನಷ್ಟ ತಂದೊಡ್ಡಲಿದೆ.

ಈಗ ಸುರಿದಿರುವ ಮಳೆಗೆ ಅರಳುವ ಹೂವಿನ ಪೈಕಿ ಬಹುತೇಕ ಕಾಳು ಕಟ್ಟುವುದಿಲ್ಲ. ಕಾಳು ಕಟ್ಟಿದ್ದರೂ ಕೂಡ ಮುಂದೆ ಸುರಿಯುವ ಮಳೆಗೆ ಉದುರಿ ಹೋಗಲಿದೆ. ಜನವರಿಯಲ್ಲಿ ಅರಳಿದ ಹೂ ಮತ್ತು ಮಾರ್ಚ್‌ನಲ್ಲಿ ಅರಳಿದ ಹೂವಿನಿಂದ ಎರಡು ರೀತಿಯ ಫಸಲು ಬರುವುದು ಕೂಡ ಬೆಳೆಗಾರರ ಸಂಕಷ್ಟಕ್ಕೆ ಕಾರಣವಾಗಲಿದೆ.

ಕಾಫಿ ಬೆಳೆಗಾರರು ಕಳೆದ ಹಲವು ವರ್ಷದಿಂದ ಒಂದಲ್ಲ ಒಂದು ರೀತಿಯಲ್ಲಿ ತೊಂದರೆಗೆ ಸಿಲುಕುತ್ತಿದ್ದಾರೆ. ಮಂಗಳವಾರ ಸುರಿದ ಅನಿರೀಕ್ಷಿತ ಮಳೆ ಅಪಾರ ಪ್ರಮಾಣದಲ್ಲಿ ನಷ್ಟವುಂಟು ಮಾಡಿದೆ. ಬೆಳೆಗಾರರನ್ನು, ಕಾಫಿ ಉದ್ದಿಮೆಯನ್ನು ದೇವರೇ ಕಾಪಾಡಬೇಕೆಂದು ಭಾರತೀಯ ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷ ಡಾ.ಸಣ್ಣುವಂಡ ಕಾವೇರಪ್ಪ ಹೇಳುತ್ತಾರೆ.

ಕೊಚ್ಚಿ ಹೋದ ಕಾಫಿ
ಅರೇಬಿಕಾ ಹಾಗೂ ರೋಬಸ್ಟಾ ಕಾಫಿ ಫಸಲು ಕೊಯ್ಲು ಮಾಡಿದ್ದ ಬೆಳೆಗಾರರು ಕಣದಲ್ಲಿ ಒಣಗಲು ಹಾಕಿದ್ದರು. ಕೆಲವು ಬೆಳೆಗಾರರು ಭತ್ತ ಬೆಳೆಯುವ ಗದ್ದೆಯನ್ನು ತಾತ್ಕಾಲಿಕ ಕಣವಾಗಿ ಪರಿವರ್ತಿಸಿದ್ದರು. ದಿಢೀರ್ ಸುರಿದ ಮಳೆಯಿಂದಾಗಿ ಒಣಗಲು ಹಾಕಿದ್ದ ಕಾಫಿ ಫಸಲು ನೀರಿನೊಂದಿಗೆ ಕೊಚ್ಚಿಕೊಂಡು ಹೋಗಿದೆ.

ಕೆವಿಕೆ ಮಾರ್ಗದರ್ಶನ
ಮಂಗಳವಾರ ಸುರಿದ ಮಳೆಯಿಂದ ಬೆಳೆಗಾರರು ಆತಂಕಕ್ಕೀಡಾಗಿದ್ದಾರೆ. ಈ ಸಂದರ್ಭದಲ್ಲಿ ಗೋಣಿಕೊಪ್ಪದಲ್ಲಿರುವ ಕೃಷಿ ವಿಜ್ಞಾನ ಕೇಂದ್ರ ಬೆಳೆಗಾರರಿಗೆ ಅಗತ್ಯ ಮಾರ್ಗದರ್ಶನ ನೀಡುವ ಕರಪತ್ರ ಹೊರಡಿಸಿದೆ. ಹೂ ಅರಳಿದ ೬ ರಿಂದ ೮ ಗಂಟೆ ಅವಧಿಯಲ್ಲಿ ಪರಾಗಸ್ಪರ್ಶ ನಡೆಯುತ್ತದೆ. ಫೆಬ್ರವರಿ ೨ನೇ ವಾರದಲ್ಲಿ ೨೫ ರಿಂದ ೪೪ ಮೀ.ಮೀ. ಬ್ಯಾಕಿಂಗ್ ಕೊಡಬೇಕಾಗುತ್ತದೆ. ಹೂ ಅರಳಿದ ೧೫ ರಿಂದ ೨೫ ದಿನದೊಳಗೆ ಬ್ಯಾಕಿಂಗ್ ಕೊಡಬೇಕೆಂದು ಸಲಹೆ ನೀಡಿದೆ.

**
ಅರೇಬಿಕಾ ಕಾಫಿ ಬಹುತೇಕ ಕೊಯ್ಲು ಆಗಿದ್ದು, ಕಣದಲ್ಲಿ ಒಣಗಲು ಹಾಕಲಾಗಿತ್ತು. ದಿಢೀರ್ ಸುರಿದ ಮಳೆಯಿಂದ ಕಣದಲ್ಲಿದ್ದ ಕಾಫಿ ಕೊಚ್ಚಿ ಹೋಗಿದ್ದು, ಬೆಳೆಗಾರರಿಗೆ ಅಪಾರ ನಷ್ಟವುಂಟು ಮಾಡಿದೆ. ಅರೇಬಿಕಾ ಹೂ ಅರಳಲು ಮಾರ್ಚ್‌ನಲ್ಲಿ ಮಳೆ ಬೇಕಾಗಿತ್ತು. ಅವಧಿಗಿಂತ ಮೊದಲು ಮಳೆ ಸುರಿದಿರುವುದರಿಂದ ಮುಂದಿನ ಫಸಲಿಗೂ ಹಾನಿವುಂಟಾಗಿದೆ. ಕೆ.ಆರ್. ಪ್ರಸಿನ್ ಗೌಡ, ಬೆಳೆಗಾರರು, ತಾಕೇರಿ.

**
ರೋಬಸ್ಟಾ ಫಸಲು ಕೊಯ್ಲು ನಡೆಯುತ್ತಿರುವ ಸಂದರ್ಭದಲ್ಲಿ ಮಳೆಯ ಅಬ್ಬರಿಸಿರುವುದರಿಂದ ದೊಡ್ಡ ಪ್ರಮಾಣದಲ್ಲಿ ನಷ್ಟವುಂಟಾ ಗಿದೆ. ಕಣದಲ್ಲಿ ಒಣಗಲು ಹಾಕಿದ್ದ ಕಾಫಿ ನೀರಿನೊಂದಿಗೆ ಕೊಚ್ಚಿ ಹೋಗಿದೆ. ಇದರೊಂದಿಗೆ ನೀರು ಸೇರಿ ಗುಣಮಟ್ಟ ಹಾಳಾಗುವಂತಾ ಗಿದೆ. ತೂಕದಲ್ಲಿಯೂ ನಷ್ಟವುಂಟಾಗಲಿದೆ. ಕುಪ್ಪಂಡ ದತ್ತಾತ್ರಿ, ಬೆಳೆಗಾರರು, ಕೈಕೇರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net