

ಮಡಿಕೇರಿ:
’ಆರಿದ್ರಾ ಮಳೆ ಆರದೇ ಹುಯ್ಯುತ್ತೇ…’ ಎನ್ನುವ ಗ್ರಾಮೀಣರ ಮಾತು ಉಳಿಸಿಕೊಳ್ಳಲು ಎನ್ನುವಂತೆ ಆರಿದ್ರಾ ಕೊನೆಯ ಪಾದ ಕಳೆದ ಎರಡು ದಿನಗಳಿಂದ ಚುರುಕಾಗಿದೆ. ಆದರೂ ಹಿಂದಿನ ವರ್ಷಕ್ಕೆ ಹೋಲಿಸಿದರೆ ಕೊಡಗಿನಲ್ಲಿ ಸುರಿದಿರುವ ಮಳೆಯ ಪ್ರಮಾಣ ತೀರಾ ಕಡಿಮೆ. ರಾಜ್ಯದ ಜೀವನದಿ ಕಾವೇರಿಯಲ್ಲಿ ನೀರಿನ ಹರಿವಿಕೆ ಪ್ರಮಾಣ ಸ್ವಲ್ಪ ಚೇತರಿಸಿಕೊಂಡಿದೆ. ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳಲ್ಲಿ ಒಂದಾಗಿರುವ ಹಾರಂಗಿ ಅಣೆಕಟ್ಟೆಗೆ ಈಗಷ್ಟೇ ಒಳಹರಿವಿನ ಪ್ರಮಾಣ ನಿಧಾನಕ್ಕೆ ಚೇತರಿಸಿಕೊಳ್ಳುತ್ತಿದ್ದರೂ, ಸದ್ಯದ ಸ್ಥಿತಿಯಲ್ಲಿ ರೈತರ ಆತಂಕ ಮಾತ್ರ ಕಡಿಮೆ ಆಗಿಲ್ಲ.
ಮಳೆ ನಕ್ಷತ್ರದ ಪ್ರಕಾರ ಬುಧವಾರಕ್ಕೆ ಆರಿದ್ರಾ ಮುಗಿದು ಗುರುವಾರದಿಂದ (ಜು.೬) ಪುನರ್ವಸು ಮಳೆ ಶುರುವಾಗುತ್ತದೆ. ರೈತರ ನಂಬಿಕೆಯಂತೆ ಸಾಮಾನ್ಯವಾಗಿ ರೋಹಿಣಿಯಿಂದ ವಿಶಾಖ ನಕ್ಷತ್ರದ ತನಕವೂ ಉತ್ತಮ ಮಳೆ ಆಗಬೇಕು. ಆದರೆ ರೋಹಿಣಿ ಮತ್ತು ಮೃಗಶಿರ ನಕ್ಷತ್ರಗಳಲ್ಲಿ ನಿರೀಕ್ಷಿತ ಮಳೆ ಸುರಿದಿರಲಿಲ್ಲ. ತನ್ನ ಅವಧಿಯಲ್ಲಿ ಬಹುತೇಕ ಶಾಂತವಾಗಿಯೇ ಇದ್ದ ಆರಿದ್ರಾ ತನ್ನ ಕೊನೆಯ ಪಾದದಲ್ಲಿ ಕಳೆದ ಮೂರು ದಿನಗಳಿಂದ ಸ್ವಲ್ಪ ಚುರುಕಾಗಿದೆ. ಈ ಮೂಲಕ ಜುಲೈ ಮೊದಲ ವಾರದಲ್ಲಿ ಕೊಡಗಿನಲ್ಲಿ ಮುಂಗಾರಿನ ಅನುಭವ ಆಗುತ್ತಿದೆ.
ಹವಾಮಾನ ಇಲಾಖೆ ಮೂಲಗಳ ಪ್ರಕಾರ ಮೋಡಗಳ ವರ್ತನೆಯಲ್ಲಿ ಆಗಾಗ್ಗೆ ಸಾಕಷ್ಟು ಬದಲಾವಣೆಗಳು ಆಗುತ್ತಿದ್ದು, ಮಳೆಯ ಪ್ರಮಾಣ ಹೀಗೆಯೇ ಮುಂದುವರಿಯುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ. ಇನ್ನು ೩, ೪ ದಿನಗಳ ಕಾಲ ಈ ಪರಿಸ್ಥಿತಿ ಇದ್ದರೂ ೫ನೇ ದಿನದ ನಂತರ ಮಳೆ ಕಡಿಮೆ ಆಗಬಹುದು. ಕರಾವಳಿ ಕಡೆಗೆ ಮೋಡಗಳು ಕೇಂದ್ರೀಕೃತವಾಗುತ್ತಿದ್ದು, ಆ ಭಾಗದಲ್ಲಿ ಹೆಚ್ಚಿನ ಮಳೆ ಬರಲಿದೆ ಎನ್ನುತ್ತಾರೆ ಹವಾಮಾನ ತಜ್ಞರು. ಕೊಡಗಿನಲ್ಲೂ ಮಳೆ ವ್ಯಾಪಕವಾಗಿ ಸುರಿಯುತ್ತಿಲ್ಲ. ಕೆಲವೊಂದು ಪ್ರದೇಶಗಳನ್ನು ಕೇಂದ್ರೀಕರಿಸಿ ಮಳೆ ಆಗುತ್ತಿದ್ದು, ಸೋಮವಾರಪೇಟೆ, ಕುಶಾಲನಗರ, ಪೊನ್ನಂಪೇಟೆ ತಾಲೂಕುಗಳು ಮಳೆಯ ಅಭಾವ ಎದುರಿಸುತ್ತಿದೆ. ಒಟ್ಟಾರೆಯಾಗಿ ಕೊಡಗಿನಲ್ಲಿ ವಾಡಿಕೆಗಿಂತ ಶೇ. ೬೫ರಷ್ಟು ಕಡಿಮೆ ಮಳೆ ಆಗಿರುವ ಬಗ್ಗೆ ಗೋಣಿಕೊಪ್ಪದ ಜಿಲ್ಲಾ ಕೃಷಿ ಹವಾಮಾನ ಘಟಕದದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಾಮಾನ್ಯವಾಗಿ ಜುಲೈ ತಿಂಗಳಿನಲ್ಲಿ ನದಿ, ತೊರೆ, ಹಳ್ಳ, ಕೊಳ್ಳಗಳು ಮೈತುಂಬಿಕೊಳ್ಳಬೇಕಿತ್ತು. ಜಲಮೂಲಗಳು ಜೀವ ಪಡೆದುಕೊಂಡು ಭತ್ತ ಸೇರಿದಂತೆ ಕೃಷಿ ಚುಟವಟಿಕೆಗಳಿಗೆ ವೇಗ ಸಿಗಬೇಕಿತ್ತು. ಆದರೆ ಈ ಬಾರಿ ಅಂತಹ ಯಾವುದೇ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಕಾವೇರಿ ನದಿಯ ಉಗಮಸ್ಥಾನ ತಲಕಾವೇರಿ, ಜಿಲ್ಲೆಯಲ್ಲಿ ಹೆಚ್ಚು ಮಳೆ ಬೀಳುವ ಭಾಗಮಂಡಲ, ತಡಿಯಂಡಮೋಳ್ ವ್ಯಾಪ್ತಿಯ ನಾಪೋಕ್ಲು, ಕಕ್ಕಬ್ಬೆ ಮತ್ತಿತರ ಭಾಗಗಳಲ್ಲಿ ಸ್ವಲ್ಪ ಜೋರಾಗಿ ಮಳೆ ಆಗುತ್ತಿರುವುದು ಹೊರತುಪಡಿಸಿದರೆ ಕೊಡಗಿನ ಇತರ ಕಡೆಗಳಲ್ಲಿ ಈ ಬಗೆಯ ಯಾವುದೇ ವಾತಾವರಣ ಇಲ್ಲ. ಹಾರಂಗಿ ಜಲಾನಯನ ಪ್ರದೇಶದಲ್ಲೂ ವಾಡಿಕೆಯಂತೆ ಮಳೆ ಬರುತ್ತಿಲ್ಲ. ಇದಕ್ಕೆ ಅಣೆಕಟ್ಟೆಗೆ ಹರಿದುಬರುತ್ತಿರುವ ಹಿನ್ನೀರಿನ ಪ್ರಮಾಣ ಸಾಕ್ಷಿಯಾಗಿದೆ.
ಕೊಡಗಿನಲ್ಲಿ ಕಳೆದ ೨೪ ಗಂಟೆಗಳ ಅವಧಿಯಲ್ಲಿ ಸರಾಸರಿ ೩೬.೪೩ ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ ೬೫.೮೩ ಮಿ.ಮೀ. ಮಳೆ ಬಂದಿತ್ತು. ಜನವರಿಯಿಂದ ಇಲ್ಲಿಯವರೆಗೆ ೩೯೩.೩೨ ಮಿ.ಮೀ., ಮಳೆಯಾಗಿದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ ೯೫೬.೮೩ ಮಿ.ಮೀ. ಮಳೆಯಾಗಿತ್ತು. ಮಡಿಕೇರಿ ತಾಲೂಕಿನಲ್ಲಿ ಈತನಕ ೬೧೭.೮೯ ಮಿ.ಮೀ. ಮಳೆಯಾಗಿದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ ೧೪೧೨.೫೯ ಮಿ.ಮೀ. ಮಳೆಯಾಗಿತ್ತು. ವಿರಾಜಪೇಟೆ ತಾಲೂಕಿನಲ್ಲಿ ಈತನಕ ೨೭೯.೪೯ ಮಿ.ಮೀ. ಮಳೆಯಾಗಿದ್ದು, ಕಲೆದ ವರ್ಷ ೭೭೮.೫೯ ಮಿ.ಮೀ. ಮಳೆಯಾಗಿತ್ತು. ಸೋಮವಾರಪೇಟೆ ತಾಲೂಕಿನಲ್ಲಿ ಇಲ್ಲಿಯವರೆಗೆ ೨೮೨.೫೯ ಮಿ.ಮೀ. ಮಳೆ ಬಂದಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ ೬೭೯.೩೧ ಮಿ.ಮೀ. ಮಳೆಯಾಗಿತ್ತು. ಹೋಬಳಿವಾರು ಭಾಗಮಂಡಲದಲ್ಲಿ ಅತ್ಯಧಿಕ ೭೮.೨೦ ಮಿಮೀ ಮಳೆಯಾಗಿದ್ದರೆ, ಕುಶಾಲನಗರದಲ್ಲಿ ಅತ್ಯಂತ ಕಡಿಮೆ ೭.೬೦ ಮಿ.ಮೀ. ಮಳೆ ದಾಖಲಾಗಿದೆ.
ಕೊಡಗಿನ ಹಾರಂಗಿ ಜಲಾಶಯ ತುಂಬಿದ ನಂತರ ಹೆಚ್ಚುವರಿ ನೀರನ್ನು ಕಾವೇರಿ ನದಿಗೆ ಹರಿಸಲಾಗುತ್ತದೆ. ಹಾಗಾಗಿ ಮಂಡ್ಯದ ಕೆಆರ್‌ಎಸ್ ಭರ್ತಿ ಆಗುವಲ್ಲಿ ಮತ್ತು ಬೆಂಗಳೂರಿಗೆ ಕುಡಿಯುವ ನೀರು ಪೂರೈಸುವಲ್ಲಿ ಹಾರಂಗಿಯೂ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಜಲಾಶಯದ ನೀರಿನ ಮಟ್ಟದ ಜುಲೈ ತಿಂಗಳಿನಲ್ಲೂ ಆತಂಕಕಾರಿಯಾಗಿಯೇ ಮುಂದುವರಿದಿದೆ. ಬುಧವಾರದ (ಜು.೫) ಮಾಹಿತಿ ಪ್ರಕಾರ ೨೮೫೯ ಅಡಿ ಎತ್ತರದ ಅಣೆಕಟ್ಟೆಯಲ್ಲಿ ಪ್ರಸ್ತುತ ೨೮೨೩.೯೯ ಅಡಿ ಮಾತ್ರ ನೀರಿದೆ. ಕಳೆದ ವರ್ಷ ಇದೇ ದಿನ ೨೮೫೪.೩೭ ಅಡಿಗಳಷ್ಟು ನೀರಿದ್ದು, ಭರ್ತಿ ಆಗಲು ೫ ಅಡಿಗಳಷ್ಟೇ ಬಾಕಿ ಇತ್ತು.
ಕಳೆದ ವರ್ಷ ಇದೇ ದಿನ ಜಲಾಶಯಕ್ಕೆ ೯,೪೯೭ ಕ್ಯುಸೆಕ್‌ಗಳಷ್ಟು ನೀರು ಹರಿದು ಬರುತ್ತಿತ್ತು. ಆದರೆ ಈ ಬಾರಿ ಜಲಾನಯನ ಪ್ರದೇಶದಲ್ಲಿ ವಾಡಿಕೆಯ ಮಳೆಯಾಗದ ಕಾರಣ ಈಗ ಕೇವಲ ೧೫೧೮ ಕ್ಯುಸೆಕ್ ನೀರು ಮಾತ್ರ ಜಲಾಶಯಕ್ಕೆ ಬರುತ್ತಿದೆ. ಕಳೆದ ವರ್ಷ ೧೨,೮೮೬ ಕ್ಯುಸೆಕ್ ನೀರು ನದಿಗೆ ಬಿಡಲಾಗುತ್ತಿತ್ತು. ಈಗ ಕೇವಲ ೫೦ ಕ್ಯುಸೆಕ್ ನೀರು ಹೊರಹೋಗುತ್ತಿದೆ. ೮.೫ ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಈಗ ೨.೨೮೦ ಟಿಎಂಸಿ ಮಾತ್ರ ಬಳಕೆಯೋಗ್ಯ ನೀರಿನ ಸಂಗ್ರಹ ಇದೆ. ಕಳೆದ ವರ್ಷ ೬.೧೮೨ ಟಿಎಂಸಿ ನೀರು ಇತ್ತು.
ಮಳೆಯ ಪ್ರಮಾಣ ಇನ್ನಷ್ಟು ಚುರುಕಾದರೆ ಮಾತ್ರ ಕಾವೇರಿ, ಲಕ್ಷ್ಮಣ ತೀರ್ಥ ಸೇರಿದಂತೆ ಪ್ರಮುಖ ನದಿಗಳಲ್ಲಿ ಪರಿಸ್ಥಿತಿ ಸುಧಾರಿಸಬಹುದು. ಹಳ್ಳ, ಕೊಳ್ಳ, ತೊರೆಗಳು ಭರ್ತಿ ಆಗಬೇಕಾದರೆ ಮುಂಗಾರು ತನ್ನ ಸಾಮಾನ್ಯ ವರಸೆಯನ್ನು ತೋರಿಸಲೇಬೇಕಾಗುತ್ತದೆ. ಇಲ್ಲದಿದ್ದರೆ ಕೃಷಿ ಬದುಕು ದುಸ್ತರ ಆಗಬಹುದು ಎನ್ನುವ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.
ಹವಾಮಾನ ಮುನ್ಸೂಚನೆ ಪ್ರಕಾರ ಇನ್ನೂ ೩,೪ ದಿನ ಈ ರೀತಿ ಮಳೆ ಇರಬಹುದು ಎಂದು ಹೇಳಲಾಗುತ್ತಿದ್ದರೂ ಗುರುವಾರದಿಂದ ಸ್ವಲ್ಪ ಕಡಿಮೆ ಆಗಬಹುದು. ೫ ದಿನಗಳ ನಂತರ ಇನ್ನೂ ಕಡಿಮೆ ಆಗುವ ಸಾಧ್ಯತೆ ಇದೆ. ನಿರೀಕ್ಷಿತ ಪ್ರಮಾಣದಲ್ಲಿ ಮೋಡಗಳು ಮಲೆನಾಡು ಕಡೆಗೆ ಬರಲಿಲ್ಲ. ಹಾಗಾಗಿ ಮಳೆಯ ಪ್ರಮಾಣದಲ್ಲಿ ವ್ಯತ್ಯಾಸ ಆಗುತ್ತಿದೆ. ಆದರೆ ಕರಾವಳಿ ಭಾಗದಲ್ಲಿ ಹೆಚ್ಚಿನ ಮಳೆ ಸುರಿಯುವ ಎಲ್ಲಾ ಸಾಧ್ಯತೆಗಳು ಇದೆ.
ಎಸ್.ಕೆ. ಚಂಗಪ್ಪ, ಹವಾಮಾನ ಪರಿವೀಕ್ಷಕ, ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪಲು