ಸಚಿವ ಸ್ಥಾನ ನೀಡಲು ಕೊಡಗು ಪಿಗ್ಮಿ ಸಂಗ್ರಹಗಾರರ ಸಂಘ ಒತ್ತಾಯ

M.D. NANAIAH
Published on

ಮಡಿಕೇರಿ: ಕೊಡಗು ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಮತ್ತು ಸರ್ಕಾರದ ಸಮರ್ಥ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸಲು ನೂತನ ಕಾಂಗ್ರೆಸ್ ಸರ್ಕಾರ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಕೊಡಗು ಜಿಲ್ಲಾ ಪಿಗ್ಮಿ ಸಂಗ್ರಹಗಾರರ ಸಂಘ ಒತ್ತಾಯಿಸಿದೆ.


ಪತ್ರಿಕಾ ಪ್ರಕಟಣೆ ನೀಡಿರುವ ಸಂಘದ ಜಿಲ್ಲಾಧ್ಯಕ್ಷ ಎಂ.ಡಿ.ನಾಣಯ್ಯರವರು, ಜಿಲ್ಲೆಯ ಮಡಿಕೇರಿ ಮತ್ತು ವಿರಾಜಪೇಟೆ ಕ್ಷೇತ್ರದಲ್ಲಿ ಅಭಿವೃದ್ಧಿಪರ ಚಿಂತನೆಯ ಉತ್ಸಾಹಿ ಶಾಸಕರು ಆಯ್ಕೆಯಾಗಿದ್ದಾರೆ, ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.


ಕೊಡಗಿನವರಿಗೆ ಸಚಿವ ಸ್ಥಾನ ನೀಡಬೇಕೆನ್ನುವ ಬೇಡಿಕೆ ದಶಕಗಳಿಂದ ಕೇಳಿ ಬಂದಿದ್ದು, ಜನರ ಮನವಿಗೆ ಈ ಸರ್ಕಾರ ಸ್ಪಂದಿಸಬೇಕು. ಖ್ಯಾತ ವಕೀಲರಾಗಿ ಹಲವು ಜಟಿಲ ಸಮಸ್ಯೆಗಳನ್ನು ಬಗೆ ಹರಿಸಿದ ಹೆಗ್ಗಳಿಕೆಯ ಪೊನ್ನಣ್ಣ ಅವರು ಕ್ಷೇತ್ರದ ಜನ ಸಾಮಾನ್ಯರ ಸಂಕಷ್ಟಗಳಿಗೆ ಚುನಾವಣೆಗೂ ಮೊದಲೇ ಸ್ಪಂದಿಸುತ್ತಾ ಬಂದಿದ್ದಾರೆ. ಇವರು ಸಚಿವರಾಗಿ ಆಯ್ಕೆಯಾದರೆ ಕೊಡಗು ಜಿಲ್ಲೆಗೆ ಮಾತ್ರವಲ್ಲದೆ ಇಡೀ ಕರ್ನಾಟಕ ರಾಜ್ಯಕ್ಕೆ ದೊಡ್ಡ ಕೊಡುಗೆ ನೀಡಿದಂತ್ತಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.


ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದಿದ್ದು, ಸಚಿವ ಸ್ಥಾನ ನೀಡಿದ್ದೇ ಆದಲ್ಲಿ ಅಭಿವೃದ್ಧಿ ಕಾರ್ಯದಲ್ಲಿ ಕೊಡಗು ಜಿಲ್ಲೆ ರಾಜ್ಯಕ್ಕೇ ಮಾದರಿಯಾಗಲಿದೆ. ಅಲ್ಲದೆ ಜಿಲ್ಲೆಯನ್ನು ಕಾಡುತ್ತಿರುವ ಮೂಲಭೂತ ಸೌಕರ್ಯದ ಕೊರತೆ, ವಸತಿ ರಹಿತರ ಸಂಕಷ್ಟ, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ವನ್ಯಜೀವಿಗಳ ಹಾವಳಿ ಸೇರಿದಂತೆ ಅನೇಕ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ ಎಂದು ನಾಣಯ್ಯ ಅಭಿಪ್ರಾಯಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net