ಜನವರಿ ೭ ರಂದು ಜಿಲ್ಲಾಮಟ್ಟದ ಚಿತ್ರಕಲಾ ಸ್ಪರ್ಧೆ

28mdkd3 - Copy
Published on

ವಿಜಯವಾಣಿ ಸುದ್ದಿಜಾಲ ಮಡಿಕೇರಿ

ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಉದ್ಘಾಟನಾ ಕಾರ್ಯಕ್ರಮ ಪ್ರಯುಕ್ತ ಜನವರಿ ೭ ರಂದು ಗೋಣಿಕೊಪ್ಪ ಕಾಲ್ಸ್ ವಿದ್ಯಾಸಂಸ್ಥೆಯಲ್ಲಿ ಜಿಲ್ಲಾಮಟ್ಟದ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿದೆ.

ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕಾಲ್ಸ್ ವಿದ್ಯಾಸಂಸ್ಥೆ ಸಹಯೋಗದಲ್ಲಿ ೫ ವಿಭಾಗದಲ್ಲಿ ಸ್ಪರ್ಧೆ ಏರ್ಪಡಿಸ ಲಾಗಿದೆ ಎಂದು ಬೆಳ್ಳಿಹಬ್ಬ ಆಚರಣಾ ಸಮಿತಿ ಪ್ರಧಾನ ಕಾರ್ಯದರ್ಶಿ ರೆಜಿತ್ ಕುಮಾರ್ ಗುಹ್ಯ ಹಾಗೂ ಸಾಂಸ್ಕೃತಿಕ ಸಮಿತಿ ಸಂಚಾಲಕ ಐಮಂಡ ಗೋಪಾಲ್ ಸೋಮಯ್ಯ ಜಂಟಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪೂರ್ವ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ (೫ ರಿಂದ ೭) ಚಿತ್ರಕಲಾ ಸ್ಪರ್ಧೆಗೆ ಪ್ರಕೃತಿ ಎಂಬ ವಿಷಯ ನೀಡಲಾಗಿದೆ. ಪೂರ್ವ ಪ್ರಾಥಮಿಕ ಸ್ಪರ್ಧಿಗಳಿಗೆ ೧ ಗಂಟೆ ಸಮಯ ನಿಗದಿ ಪಡಿಸಲಾಗಿದೆ. ಎ೪ ಸೈಜ್‌ನ ಡ್ರಾಯಿಂಗ್ ಶೀಟ್ ನೀಡಲಾಗುತ್ತದೆ. ಉಳಿದ ಭಾಗದವರಿಗೆ ಎ೩ ಸೈಜ್ ನ ಡ್ರಾಯಿಂಗ್ ಶೀಟ್ ನೀಡಲಾಗುತ್ತದೆ.

ಪ್ರೌಢಶಾಲಾ ವಿದ್ಯಾರ್ಥಿಗಳಿಗೆ (೮ ರಿಂದ ೧೦) ವನ್ಯಜೀವಿ ಎಂಬ ವಿಷಯ ನೀಡಲಾಗಿದೆ. ಪಿಯುಸಿ ಮತ್ತು ಪದವಿ ವಿದ್ಯಾರ್ಥಿಗಳು ಕಾವೇರಿ ನದಿಯ ಐತಿಹ್ಯ ವಿಷಯದ ಮೇಲೆ ಚಿತ್ರ ಬಿಡಿಸಬೇಕಾಗುತ್ತದೆ. ಸಾರ್ವಜನಿಕರಿಗೂ ಚಿತ್ರಕಲಾ ಸ್ಪರ್ಧೆ ಇದ್ದು, ಕೊಡಗಿನ ಐತಿಹಾಸಿಕ ಸ್ಥಳಗಳು ವಿಷಯದ ಮೇಲೆ ಚಿತ್ರ ಬಿಡಸಬೇಕಾಗುತ್ತದೆ.

ಕೊಡಗು ಪ್ರೆಸ್ ಕ್ಲಬ್ ಸದಸ್ಯರಿಗೆ ಪ್ರತ್ಯೇಕ ಸ್ಪರ್ಧೆ ಇದ್ದು, ಪತ್ರಕರ್ತ ಎಂಬ ವಿಷಯದ ಮೇಲೆ ಚಿತ್ರ ಬಿಡಿಸಬೇಕಾಗುತ್ತದೆ. ಪೂರ್ವ ಪ್ರಾಥಮಿಕ ವಿಭಾಗದ ಮಕ್ಕಳು ಚಿತ್ರಕಲೆಗೆ ಕ್ರೆಯಾನ್ಸ್, ಪೇಸ್ಟಲ್ಸ್, ಜಲ ವರ್ಣ ಮಾಧ್ಯಮಗಳನ್ನು ಬಳಸಬಹುದಾಗಿದೆ. ಉಳಿದ ವಿಭಾಗದ ಸ್ಪರ್ಧಿಗಳು ವಾಟರ್ ಕಲರ್, ಅಕ್ರಿಲಿಕ್, ಪೋಸ್ಟರ್ ಮಾಧ್ಯಮಗಳನ್ನು ಬಳಸಬಹುದಾಗಿದೆ.

ಪ್ರತಿ ವಿಭಾಗದಲ್ಲಿ ೩ ಸಾವಿರ ರೂಪಾಯಿ ಪ್ರಥಮ, ೨ ಸಾವಿರ ರೂಪಾಯಿ ದ್ವಿತೀಯ, ೧ ಸಾವಿರ ರೂಪಾಯಿ ತೃತೀಯ ಬಹುಮಾನ ಮತ್ತು ಹಲವು ಸಮಾಧಾನಕರ ಬಹುಮಾನ ನೀಡಲಾಗುತ್ತದೆ.

ಒಂದು ವಿದ್ಯಾಸಂಸ್ಥೆಯಿಂದ ನಾಲ್ವರು ವಿದ್ಯಾರ್ಥಿಗಳು ಪಾಲ್ಗೊಳಬಹುದು. ಒಬ್ಬ ಸ್ಪರ್ಧಿ ಒಂದು ವಿಭಾಗದಲ್ಲಿ ಮಾತ್ರ ಸ್ಪರ್ಧಿಸಬಹುದು. ಸ್ಪರ್ಧೆಗೆ ೧.೩೦ ಗಂಟೆ ಸಮಯಾವಕಾಶ ನೀಡಲಾಗುತ್ತದೆ. ಹೆಸರು ನೋಂದಾವಣೆಗೆ ಜನವರಿ ೩ ಕೊನೆ ದಿನವಾಗಿದ್ದು, ತದನಂತರ ಬರುವ ಹೆಸರುಗಳನ್ನು ಪರಿಗಣಿಸಲಾಗುವುದಿಲ್ಲ. ಸ್ಥಳದಲ್ಲೇ ಹೆಸರು ನೋಂದಾವಣೆಗೆ ಯಾವುದೇ ಕಾರಣಕ್ಕೂ ಅವಕಾಶವಿಲ್ಲ.

ಜ.೭ ರಂದು ಗೋಣಿಕೊಪ್ಪ ಕಾಲ್ಸ್ ಶಾಲೆಯಲ್ಲಿ ಬೆಳಗ್ಗೆ ೯.೩೦ ಗಂಟೆಗೆ ಸ್ಪರ್ಧೆ ಆರಂಭವಾಗುತ್ತದೆ. ಸ್ಪರ್ಧಿಗಳು ೯ ಗಂಟೆಗೆ ಸ್ಥಳದಲ್ಲಿ ಹಾಜರಿರಬೇಕು. ಸ್ಪರ್ಧಿಗಳಿಗೆ ಡ್ರಾಯಿಂಗ್ ಶೀಟ್ ಮಾತ್ರ ಸ್ಥಳದಲ್ಲಿ ನೀಡಲಾಗುತ್ತದೆ. ಉಳಿದ ವಸ್ತುಗಳನ್ನು ಸ್ಪರ್ಧಿಗಳೇ ತರಬೇಕು.
ಚಿತ್ರಕಲೆಯಲ್ಲಿ ಸ್ಕೆಚ್ ಪೆನ್, ಬಾಲ್ ಪೆನ್, ಕಲರ್ ಪೆನ್ಸಿಲ್, ಮಾರ್ಕರ್ ಬಳಸಲು ಅವಕಾಶವಿಲ್ಲ. ಅದೇ ದಿನ ಮಧ್ಯಾಹ್ನ ಸ್ಪರ್ಧೆಯ ತೀರ್ಪುಗಾರಿಕೆ ಮತ್ತು ಬಹುಮಾನ ವಿತರಣೆಯಾಗುತ್ತದೆ.

ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ (+೯೧೯೯೪೫೬೩೫೫೦೨) ಅವರಿಗೆ ವಾಟ್ಸಾಪ್ ಮಾಡುವ ಮೂಲಕ ಹೆಸರು ನೋಂದಾಯಿಸಿಕೊಳ್ಳಬಹುದು. ಸ್ಪರ್ಧಿಗಳಿಗೆ ಪ್ರವೇಶ ಶುಲ್ಕ ಇರುವುದಿಲ್ಲ. ಪ್ರತಿಯೊಬ್ಬ ಸ್ಪರ್ಧಿ ಗಳಿಗೂ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net